ಮುಖ ಅರವಿಂದ ಬಾಡಿತು ಅಪ್ಪುಗೆ ಸಡಿಲವಾದ ನಂತರ
ಕಣ್ಣ ಕೊಳ ಬತ್ತಿತು ಒಲವ ಸಲೆಯು ದೂರವಾದ ನಂತರ

ಬೇಲಿ ಮೇಲಿನ ಒಂಟಿ ಸುಮ ಎಲ್ಲರೂ ಮುಡಿಯ ಬಯಸಿದರು
ಪರಿಚಿತರು ಮುಖ ತಿರುಗಿದರು ಅವನ ಸಂಗವಾದ ನಂತರ

ಸಂಶೋಧನೆಯಲಿ ಎಲ್ಲವು ಜಡವಾಗಿ ತೋರಿತು ಹೃದಯಕೆ
ಧ್ಯಾನಿಸುತಾ ಲೋಕ ಮರೆತೆ ಜಡ ಚೇತನವಾದ ನಂತರ

ಇರುಳಲಿ ಮಾಯೆಯ ತಿಂಗಳ ಬೆಳಕನು ಹೊದ್ದು ಮಲಗಿದೆ ಜಗ
ಮೋಹದ ಹಣತೆ ಹಚ್ಚದಿರು ಮನವೆ ಉದಯವಾದ ನಂತರ

ಬಿರುಗಾಳಿಗೆ ಲತೆ ನೆಲಕಚ್ಚಿ ನರಳುತಿದೆ ಆಸರೆಗಾಗಿ
ಬಳ್ಳಿ ಹಸಿರಾಯಿತು ಹಂದರ ಆಧಾರವಾದ ನಂತರ

ಅಲೆಮಾರಿ ಜಂಗಮನಾಗಿ ಹಾಡುತ್ತಿದೆ ಆನಂದದಲಿ
ಕಲ್ಲು ಮಣ್ಣಿಗೆ ಆಸೆ ಪಟ್ಟೆನು ಕುಟುಂಬವಾದ ನಂತರ

ಬದುಕಲಿ ಅನುರಾಗದ “ಪ್ರಭೆ” ಯಾಗಲು ಹವಣಿಸಿದೆ ಸದಾ
ನಿರಾಕಾರನು ಸಿಂಗರಿಸಿ ಕೊಂಡ ರೂಪವಾದ ನಂತರ

ಶ್ರೀಮತಿ.ಪ್ರಭಾವತಿ ಎಸ್ ದೇಸಾಯಿ
ವಿಜಯಪುರ