ಯಾವ ಜಾತಿಯಲ್ಲಿ ಹುಟ್ಟಬೇಕು
ಯಾವ ದೇಶದಲ್ಲಿ ಹುಟ್ಟಬೇಕು
ಯಾವ ನಮ್ಮ ಹಡೆದಪ್ಪ ಬರೆದ?

ಇಲ್ಲಿ ನೋಡಿದರೆ ಜಾತಿಯ ದಳ್ಳುರಿ
ಅಲ್ಲಿ ನೋಡಿದರೆ ಯುದ್ಧದ ಕಾರ್ಮೋಡ
ಮತ್ತೊಂದು ಕಡೆ ಕರಿ-ಬಿಳಿ ಕಾಳಗ
ಮಗದೊಂದು ಕಡೆ ಆಳುವವ ಊಳುವವನ ಕದನ.

ಒಂದು ದೇಶದಲ್ಲಿ ನೀ ಬಹುಸಂಖ್ಯಾತ
ಇನ್ನೊಂದೆಡೆ ಅಲ್ಪಸಂಖ್ಯಾತ
ಒಂದು ಕಡೆ ನೀ ಸ್ವದೇಶಿ
ಇನ್ನೊಂದು ಕಡೆ ಪರದೇಶಿ!

ಸರಹದ್ದು ಮೀರಿ ಹಾರುವ ಹಕ್ಕಿಗೆಲ್ಲಿಯ ಮಿತಿ?
ಮೇರೆ ಮೀರಿ ಹರಿಯುವ ಸಿಂಧುವಿನ ಗತಿ…!
ಕಲಿಯಲಿಲ್ಲ ನಾವು ನದಿಬೆಟ್ಟಗಳಿಂದಲೂ
ಅರಿಯಲಿಲ್ಲ ಪಶುಪಕ್ಷಿಗಳಿಂದಲೂ

ಅವನ ಜೀವ ಉಳಿಸಿದ ಆ ಬಾಟಲಿಯಲ್ಲಿದ್ದ ರಕ್ತ
ಯಾವ ಜಾತಿಯವನದು? ಯಾವ ಧರ್ಮದವನದು?
ಅಕ್ಷರಶ: ಹುಡುಕಿದೆ…
ನನ್ನಂಥ ಮೂರ್ಖ ಮತ್ತಾರಿಲ್ಲ ;
ಅದರ ಮೇಲೆ ಬರೆದಿತ್ತು- ಬಿ. ಪೊಸಿಟಿವ್
ಮತ್ತೆ ಬಣ್ಣ ಕೇವಲ ಕೆಂಪು!

ಉಮೇಶ ಮುನವಳ್ಳಿ