ನಮ್ಮ ಹೆತ್ತು ಹೊತ್ತು ತಂದವಳು
ಅಮೃತವ ಉಣ ಬಡಿಸಿದವಳು
ಮಮತೆಯ ಸುರಿಮಳೆಗೈದವಳು
ಮಕ್ಕಳ ಹರಸುತಲೇ ನಿಂದವಳು

ಹೆಣ್ಣೆಂದರೆ ಒಲವು
ಹೆಣ್ಣೆಂದರೆ ಬಲವು
ಹೆಣ್ಣೆಂದರೆ ಛಲವು
ಹೆಣ್ಣೆಂದರೆ ಚೆಲುವು

ಅಮ್ಮನಾಗಿ ಉಸಿರಿಟ್ಟವಳು
ಮಡದಿ ಆಗಿ ಜೊತೆಯಾದಳು
ಮಗಳಾಗಿ ನಗು ನಲಿವಾದಳು
ಹೆಣ್ಣೆ ಜೀವಕೆ ನೆರಳಾದವಳು

ಹೆಣ್ಣೆಂದರೆ ಮುಗ್ಧತೆಯ ಎಳೆ
ಹೆಣ್ಣೆಂದರೆ ವಿಶಾಲತೆಯ ಇಳೆ
ಹೆಣ್ಣೆಂದರೆ ಸಂಸಾರದ ನೆಲೆ
ಹೆಣ್ಣೆಂದರೆ ಸಂಚಲಿತ ಹೊಳೆ

ಹೆಣ್ಣಿಗೆ ಸಿಕ್ಕರೆ ಅಕ್ಕರೆಯ ಸ್ವೀಕೃತಿ
ಹೆಣ್ಣು ಜೀವಭಾವಗಳ ಪ್ರಕೃತಿ
ಪ್ರತಿಕ್ಷಣ ಪರಿಶ್ರಮದ ಪಾಲಕಿ
ಹೆಣ್ಣು ಈ ಜಗದ ಜೀವಸಾಧಕಿ

ಹೆಣ್ಣು ಸುಭಾಷಿಣಿ
ಹೆಣ್ಣು ಸುಹಾಸಿನಿ
ಹೆಣ್ಣು ವಾತ್ಸಲ್ಯದಾಯಿನಿ
ಹೆಣ್ಣು ಅಮೃತವಾರ್ಷಿಣಿ

ಹೆಣ್ಣು ತಾಯಿ ಭಾರತಿ
ಹೆಣ್ಣು ದೀಪದ ಆರತಿ
ಹೆಣ್ಣು ನಮ್ಮ ಜಗನ್ಮಾತೆ
ಹೆಣ್ಣು ದೈವದ ವರದಾತೆ

ಹೆಣ್ಣೆಂದರೆ ತ್ಯಾಗಮಯಿ
ಹೆಣ್ಣೆಂದರೆ ಕರುಣಾಮಯಿ
ಹೆಣ್ಣೆಂದರೆ ಸೀತೆ, ಸಾವಿತ್ರಿ
ಹೆಣ್ಣೆಂದರೆ ಕ್ಷಮಯಾಧರಿತ್ರಿ

✍️ಕಾವ್ಯಸುತ
(ಷಣ್ಮುಖಂ ವಿವೇಕಾನಂದಬಾಬು)