ನಿತ್ಯವೂ ಮುಂಜಾನೆ
ಅಲಾರಂ ಕೂಗುತ್ತೇ
ಮಲಗಲು ಬಿಡದೇ
ಮತ್ತೇ ಮತ್ತೇ ಚೀರುತ್ತೇ
ಕಿವಿಹಿಂಡಿ ಕುಕ್ಕರಿಸುವವರೆಗೆ
ಆದರೂ ಇದೆಲ್ಲಾ ಹೇಳಿದಾಗ ಮಾತ್ರ
ಒಮ್ಮೊಮ್ಮೆ ಅದೂ ಗಪಚುಪ್ ಮಲಗಿಬಿಡುತ್ತೆ ಸಂಕಟಕ್ಕೋ ,ಬೇಸರಕ್ಕೋ
ಕೋಪಕ್ಕೋ, ತಾಪಕ್ಕೋ ,
ನಾನು ಹೇಳದೇ ಬಿಟ್ಟಿದ್ದಕ್ಕೋ !

ನಿತ್ಯ ಮುಂಜಾನೆಯಲಿ
ನನ್ನವ್ವನ ಜೋರಾದ ಕರೆ ಕೇಳುತ್ತೇ
ಸೀದಾ ಬಂದು ತಟ್ಟುತ್ತೇ
ತಮಟೆಯಂತೆ ಕಿವಿಯೊಳಗೆ
ಅದೂ ಅಲಾರಮ್ಗಿಂತಲೂ ಮಿಗಿಲು
ಹೇಳದಿದ್ದರೂ ಎಚ್ಚರಿಸಿ ಎಬ್ಬಿಸುವ
ಅವ್ವನ ಪ್ರೀತಿಗೆ ಅದು ಸಮನಾದೀತೆ?

ಥಂಡಿಗೆ ಎರಡೆರಡು ಕೌದಿ ಹೊದ್ದು
ಗೂಡುಗಾಲು ಹಚ್ಚಿ ಮಲಗಿದರೂ
ಎಂಥ ಗೊರಕೆಯಲ್ಲೂ
ಎಚ್ಚರವಾಗದಿರಲಾರೆನು
ಆ ಕೂಗಿಗೆ ಅಮ್ಮನ ಪ್ರೀತಿಗೆ

ಎಷ್ಟೂ ಸುಸ್ತಾದರೂ
ಅವ್ವ ಮಲಗಿದ್ದು
ಎಬ್ಬಿಸಲು ಮರೆತಿದ್ದು
ನಾನೆಂದಿಗೂ ಕಾಣೆ
ಒಮ್ಮೊಮ್ಮೆ ಅನಿಸುತ್ತೇ
ಅವ್ವ ನಿದ್ದೆಯೇ ಇಲ್ಲದ
ಥೇಟ್ ಅಲಾರಂ ಗಡಿಯಾರದಂತೆ !

✍🏻 ಶಿವಾನಂದ ಉಳ್ಳಿಗೇರಿ