ಹೃದಯಗಳ ಮಿಡಿತವು ಹುಟ್ಟಿಸಲಿ ಪ್ರೇಮರಾಗ/
ಕಂಗಳ ಹಣತೆಗಳು ಬೆಳಗಿಸಲಿ ಪ್ರೇಮರಾಗ//

ನೊಂದ ಜೀವ ಶರಣಾಗಿದೆ ಮಧುಶಾಲೆಗೆ ನಿತ್ಯ/
ಸಾಕಿ ಮಧು ಬಟ್ಟಲು ದೊರಕಿಸಲಿ ಪ್ರೇಮರಾಗ//

ತೋಟದಲ್ಲಿ ಮೊಗ್ಗು ಬಿರಿದು ಬಳಕುತಿದೆ ನಗುತಾ/
ಒಲಿದ ಸುಮ ಕಂಪಲಿ ತೇಲಿಸಲಿ ಪ್ರೇಮರಾಗ//

ನದಿಯ ತಟದಲಿ ರಾಧೆಯು ಕಾಯುತಿಹಳು ಮೋಹನ/
ಬಿದಿರ ಕೊಳಲಲಿ ಉಸಿರು ನುಡಿಸಲಿ ಪ್ರೇಮರಾಗ//

ವಿರಹದ ಕಂಬನಿಯು ಹರಿಯುತಿದೆ ಸಾಗರವಾಗಿ/
ನೆನಪಿನ ಮಧುರ ಕ್ಷಣ ಚಿಮ್ಮಿಸಲಿ ಪ್ರೇಮರಾಗ//

ಬಯಸಿದೆ ಮನವು ಅನುರಾಗದ ಕಾಣಿಕೆ ಇರುಳಲಿ/
ಕೆನ್ನೆಗೆ ತುಟಿ ಉಂಗುರ ಮೂಡಿಸಲಿ ಪ್ರೇಮರಾಗ//

ಜೀವನದಲಿ ಕರಾಳ ದಿನಗಳು ತುಂಬಿವೆ ಸದಾ/
“ಪ್ರಭೆ”ಯ ಎದೆ ಗೂಡಲಿ ಉದಯಿಸಲಿ ಪ್ರೇಮರಾಗ//

✍️ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ
ವಿವೇಕ ನಗರ, ವಿಜಯಪುರ