ಮನಗಳಿಗೆ ಹಿತ ನೀಡುತಲಿ
ಮುದ ತರುವುದೀ ಬಾನುಲಿ
ಜ್ಞಾನ ಸುದ್ದಿ ರಂಜನೆಗಳಲಿ
ಎಲ್ಲರಿಗೂ ಪ್ರಿಯ ಆಕಾಶವಾಣಿ

ಮೊನ್ನೆ ಸೆಪ್ಟೆಂಬರ್ 2ನೆಯ ತಾರೀಖಿನಂದು ಕನಸೊಂದು ನನಸಾದ ದಿನ. ಮಹಿಳಾ ರಂಗ ಕಾರ್ಯಕ್ರಮಕ್ಕೆ ಸಂದರ್ಶನ ನೀಡಲು ಮೈಸೂರು ಆಕಾಶವಾಣಿಗೆ ಭೇಟಿ ಕೊಟ್ಟ ಸಮಯ. ಆಕಾಶ ವಾಣಿಯೊಂದಿಗೆ ಜೀವನ ವಿಡೀ ಅನುಬಂಧ ಬೆಳೆಸಿಕೊಂಡು ಬಂದಿರುವ ನನಗಂತೂ ಮೈ ಪುಳಕ ತಂದ,ಬಹುಅಪೇಕ್ಷಿತ, ಬಹುದಿನದ ನಿರೀಕ್ಷೆ ನಿಜವಾಗಿ ಹೇಳಲಾಗದ ಷ್ಟು ಸಂತೋಷ. ಆ ಸಂದರ್ಶನ ಮೊದಲು ಮೈಸೂರು ಆಕಾಶ ವಾಣಿಯಲ್ಲಿ ನಂತರ ವನಿತಾವಿಹಾರ ಕಾರ್ಯ ಕ್ರಮದಲ್ಲಿ ರಾಜ್ಯಾದ್ಯಂತ ಎಲ್ಲಾ ಬಾನುಲಿ ಕೇಂದ್ರಗಳ ಲ್ಲೂ ಪ್ರಸಾರವಾದಾಗಲಂತೂ ಅಸದಳವಾದ ಸಂಭ್ರಮ. ಬರೀ ಕೇಂದ್ರವನ್ನು ನೋಡಿ ಕಣ್ತುಂಬಿ ಬರಬೇಕೆಂದಿದ್ದವಳಿಗೆ ಆಹ್ವಾ ನ ಪಡೆದು ಸಂದರ್ಶನ ಕೊಟ್ಟು ಸಂಭಾವನೆಯ ನ್ನ ಸ್ವೀಕರಿಸಿದಾಗ ಎರಡೆರಡು “ಲಡ್ಡು” ಬಂದು ಬಾಯಿಗೆ ಬಿದ್ದಂತಾಯಿತು.

ರೇಡಿಯೋ ಆಕಾಶವಾಣಿ ಸ್ಕೂಲು ಪಾಠ ಆಟ ಊಟಗಳಂತೆ ಬಾಲ್ಯದ ನೆನಪುಗಳ ಜೊತೆ ಅದೆಷ್ಟು ಬೆಸೆದುಕೊಂಡಿದೆ ಎಂದರೆ ರೇಡಿಯೋ ಇರದ ಬಾಲ್ಯದ ನೆನಪುಗಳೇ ಇಲ್ಲ ಅನ್ನಿಸುವಷ್ಟು. ಮೊದಲು ಎದ್ದ ಅಮ್ಮ ರೇಡಿಯೋ ಹಾಕಿದಾಗ ಪ್ರಸಾರ ಶುರುವಾಗಲು ಸ್ವಲ್ಪ ಸಮಯ ಬಾಕಿ ಇದ್ದು ಒಂದು ತರಹ ವಿಶಿಷ್ಟ ಸದ್ದು.ನಂತರ ಇದು ಮೈಸೂರು ಆಕಾಶವಾಣಿ ತರಂಗಾಂತರ…. ಎಂದು ಉದ್ಘೋಷಕರು ಘೋಷಿಸಿದಾಗ ನಮ್ಮ ನ್ನು ಏಳಿಸಲು ಶುರು. ವಂದೇ ಮಾತರಂ ಮುಗಿದು ನಂದನದ ಭಕ್ತಿ ಗೀತೆಗಳು ಅದರಲ್ಲೂ ಶನಿವಾರ ವೆಂಕಟೇಶ್ವರ ಸುಪ್ರಭಾತ ನಂತರ ಎಂಎಸ್ ಸುಬ್ಬುಲಕ್ಷ್ಮಿ ಅವರು ಹಾಡಿದ ರಂಗ ಪುರವಿಹಾರ ಭಾವ ಯಾಮಿ ರಘುರಾಮಂ ಕೀರ್ತನೆಗಳು ದಿನದ ಸುಪ್ರಭಾತಕ್ಕೆ ಸ್ಫೂರ್ತಿ ನೀಡುತ್ತಾ ಕಳೆ ಒದಗಿ ಸುತ್ತಿದ್ದವು. ನಂತರ ರೈತರಿ ಗೆ ಸಲಹೆ. ಸಂಸ್ಕೃತ ವಾರ್ತೆಯನ್ನಂತೂ ಕೂತೇ ಕೇಳಬೇಕು. ಹೈಸ್ಕೂಲಿನಲ್ಲಿ ಸಂಸ್ಕೃತ ಮೊದಲ ಭಾಷೆ ತೆಗೆದುಕೊಂಡ ಮೇಲಿಂದ ಚೆನ್ನಾಗಿ ಅರ್ಥ ವಾಗ ತೊಡಗಿತು.ಬಲದೇವಾ ನಂದ ಸಾಗರಃ ಅಂತ ಒಬ್ಬರು ಓದುತ್ತಿದ್ದ ನೆನಪು.ಪ್ರದೇಶ ಸಮಾ ಚಾರವನ್ನು ಎಂ.ರಂಗರಾವ್, ನಾಗಮಣಿ ಎಸ್ ರಾವ್, ಮುಂತಾದವರು ಓದುತ್ತಿದ್ದರು. ಶುಕ್ರವಾರ ದ ಗಾಂಧಿಸ್ಮೃತಿ, ಮೀರಾಭಜನ್ ಕೇಳುವ ಅವಕಾಶ ಕಲ್ಪಿಸುತ್ತಿತ್ತು. “ವೈಷ್ಣವ ಜನತೋ ತೇನೇ ಕಹಿಯೆ” ಅಂತೂ ಬಾಯಿ ಪಾಠವಾ ಗಿತ್ತು.೭.೩೫ರ ಕನ್ನಡವಾರ್ತೆ ಸುದ್ದಿಗೆ ತುಂಬಾ ಉತ್ತಮ ಮಾರ್ಗವಾಗಿತ್ತು. ಏಳು ಮುಕ್ಕಾಲ ರಿಂದ ಎಂಟರವರೆಗೆ ಕನ್ನಡ ಚಿತ್ರಗೀತೆ. ನಾವು ಕಾತರದಿಂದ ಕಾಯುತ್ತಿದ್ದ ಕಾಲ. ಮೊದ ಮೊದಲು 3 ಹಾಡು ಕೆಲವುಸಲ ನಾಲ್ಕನೆಯ ದು ಅರ್ದಂಬರ್ಧವೂ ಬರುತ್ತಿತ್ತು. ಬರುಬರುತ್ತಾ ವಾಣಿಜ್ಯ ಪ್ರಕಟಣೆಗಳು ಆರಂಭವಾಗಿ 2 ಹಾಡಿಗೆ ನಿಲ್ಲಿಸುತ್ತಿದ್ದರು. ಟೇಪ್ ರೆಕಾರ್ಡರ್ ಇನ್ನೂ ಚಾಲ್ತಿಗೆ ಬರದಿದ್ದ ಆ ಕಾಲದಲ್ಲಿ ಸಿನಿಮಾ ಹಾಡು ಭಕ್ತಿಗೀತೆ ಜಾನ ಪದ ಗೀತೆಗಳನ್ನು ಕೇಳಲು, ಕಲಿಯಲು ಹಾಗೂ ಬರೆದಿಟ್ಟುಕೊಳ್ಳಲು ರೇಡಿ ಯೋ ಒಂದೇ ನಮಗೆ ಆಪದ್ಬಾಂಧವ.

ಕಾರ್ಡುಗಳನ್ನು ಬರೆದು ನಮ್ಮ ಮೆಚ್ಚಿನ ಹಾಡನ್ನು ಪ್ರಸಾರ ಮಾಡಲು ಕೋರಿಕೊಂಡು ಆ ಪಟ್ಟಿಯ ಲ್ಲಿ ನಮ್ಮ ಹೆಸರು ಕೇಳಿಸಿದಾಗ ಹಿಗ್ಗುತ್ತಿದ್ದೆವು. ಬಹಳ ದಿನಗಳ ಮೇಲೆ ನನ್ನ ಹೆಸರು ಈಗ ರೇಡಿ ಯೋದಲ್ಲಿ ಬಂದಾಗ ಮತ್ತೆ ಅದೇ ಹಳೆಯ ನೆನಪುಗಳಲ್ಲಿ ತೇಲಿಹೋದೆ. ಸಿನಿಮಾ ಹಾಡುಗ ಳಿಗೆ ಚೂರು ಪಾರು ಹಿಂದೆ ಕಥೆ ಸಂದರ್ಭಗಳನ್ನು ಸೇರಿಸಿ ಬರೀ ಹಾಡುಗಳ “ನಂದನ” ಅಂತ ಒಂದು ಕಾರ್ಯಕ್ರಮ ಬರುತ್ತಿತ್ತು, ಒಂದೆರಡು ಆ ರೀತಿಯ ಸ್ಕ್ರಿಪ್ಟ್ ಸಹ ಬರೆದಿದ್ದೆ. ಹೇಗೆ ಕಳಿಸು ವುದು ತಿಳಿಯದೆ ಸುಮ್ಮನಾಗಿಬಿಟ್ಟಿದ್ದೆ. ಅದೇಕೊ ಬರೆದದ್ದನ್ನೆಲ್ಲ ಮುಚ್ಚಿಟ್ಟುಕೊಳ್ಳುವ ಬುದ್ದಿ ಆಗ. ಅದನ್ನು ಸೇರಿಸಿ ಈಗ ಜಗಜ್ಜಾಹೀರು ಮಾಡ್ತಿ ದೀನಿ ಬಿಡಿ.

ಬೆಳಿಗ್ಗೆ 9ಗಂಟೆಗೆ ಹಿಂದಿ ಇಂಗ್ಲಿಷ್ ಅಥವಾ ಸಂಸ್ಕೃತ ಪಾಠಗಳು ಇರುತ್ತಿದ್ದವು ಪ್ರಾರಂಭ ಅಷ್ಟೆ ಕೇಳಿ ಶಾಲೆಗೆ ಹೊರಟು ಬಿಡುತ್ತಿದ್ದೆವು. ರಜೆಯ ದಿನಗಳಲ್ಲಿ ಮಧ್ಯಾಹ್ನದ ಇಂಗ್ಲಿಷ್ ವಾರ್ತೆಯ ನಂತರದ ಚಿತ್ರಗೀತೆ, 1 ಗಂಟೆಯ ಭಾವಗೀತೆ, ಹನ್ನೆರಡು ಮೂವತ್ತರ ವನಿತಾ ವಿಹಾರ ಸದಾಕಾಲ ಆನ್ ಪಾಪ! ಬಿಡುವೇ ಇರು ತ್ತಿರಲ್ಲಿಲ್ಲ.ಮಧ್ಯೆ ಮಧ್ಯೆ ಹೀಟ್ ಅಗಬಾರ ದೆಂದು ಒಂದೈದು ನಿಮಿಷ ಆರಿಸುತ್ತಿದ್ದೆ ವೇನೋ. ಸಂಜೆ ಕಾರ್ಮಿಕರ ಕಾರ್ಯಕ್ರಮ, ಕೃಷಿ ರಂಗದಲ್ಲಿ ಪ್ರಸಾರ ಮಾಡುತ್ತಿದ್ದ ಒಂದು ಭಕ್ತಿಗೀತೆ ಅಥವಾ ಜಾನಪದ ಗೀತೆ ಅದನ್ನು ಸಹ ಕೇಳುತ್ತಿದ್ದೆವು. ಶಾಸ್ತ್ರೀಯ ಸಂಗೀತ ನಾಟಕಗಳು ಎಲ್ಲವೂ ಪ್ರಿಯ. ಅದೇಕೋ ಹಿಂದೂಸ್ತಾನಿ ಸಂಗೀತ ಕೇಳ ಲು ಇಷ್ಟವಾಗು ತ್ತಿರಲಿಲ್ಲ. ರಾತ್ರಿ ಮಲಗುವಾಗ ಅಣ್ಣಾ ಹಾಕಿರು ತ್ತಿದ್ದ ರೇಡಿಯೋ ಸಿಲೋನ್ ನ ಹಳೆಯ ಹಿಂದಿ ಹಾಡುಗಳು ನಿದ್ರೆ ಬರುವವರೆ ಗೂ ಒಳ್ಳೆ ಲಾಲಿ ಹಾಡುತ್ತಿದ್ದವು. ಈಗಲೂ ಮಲಗಿದಾಗ ದೂರದಲ್ಲೆಲ್ಲೋ ಹಿಂದಿ ಹಾಡು ಕೇಳಿದರೆ ಮನ ಟಕ್ಕಂಥ ಅಂದಿನ ದಿನಗ ಳಿಗೆ ಜಾರಿಕೊಂಡು ಬಿಡುತ್ತದೆ.

ಭಾನುವಾರಗಳಲ್ಲಿ ಬೆಳಗ್ಗೆ ನವಸುಮ ಅಂತ ತಿಂಗಳಿಗೊಂದು ಹೊಸ ಹಾಡು ಬರ್ತಿತ್ತು. ಮಕ್ಕಳಿಗೆ ಬೇರೆ ಬೇರೆ ಭಾಷೆಯ ಹಾಡು ಹೇಳಿ ಕೊಡುತ್ತಿದ್ದರು. ಕಾರ್ಯಕ್ರಮದ ಹೆಸರು ಮರೆತು ಹೋಗಿದೆ. ತಮಿಳಿನ “ಕೂಡಿ ವಿಳೆ ಯಾಡು ಪಾಪ” ಹಾಡು ಕಲಿತದ್ದು ಆಗಲೇ. ಪಕ್ಷಿನೋಟ ವಾರದ ಕಾರ್ಯಕ್ರಮಗಳ ಪರಿ ಚಯ ಕೇಳಿ, ಕೇಳಲೇಬೇಕಾದ ಕಾರ್ಯಕ್ರಮ ಗಳ ಪಟ್ಟಿಯನ್ನ ಮಾಡ್ಕೊತಿದ್ದೆವು. ಬಾಲಜಗತ್ ಕಾರ್ಯಕ್ರಮಕ್ಕೆ ಕಾತರದಿಂದ ಕಾಯುತ್ತಿದ್ದನ್ನು ನೆನೆಸಿಕೊಂಡರೆ ಎಷ್ಟು ಚಿಕ್ಕ ವಿಷಯಗಳಲ್ಲೂ ಸಂಭ್ರಮ ಕಾಣುತ್ತಿ ದ್ದೇವಲ್ಲ ಆಗ ಅನ್ನಿಸುತ್ತೆ. ಮಧ್ಯಾಹ್ನದ ಹೊತ್ತು ಚಲನಚಿತ್ರ ಧ್ವನಿವಾಹಿನಿ ಸೌಂಡ್ ಟ್ರ್ಯಾಕ್ ಆಗ ಊಟ ಮುಗಿಸಿ ರೇಡಿಯೋ ಇಟ್ಟ ಷೆಲ್ಫಿನ ಮುಂದೆ ಯೇ ಪಟ್ಟಾಂಗ. ಕೇಳಿದ್ದೆವ, ಕೇಳಿದ ರೂ ಬೇಸರವಿಲ್ಲ.ವರ್ಷದ ಕೊನೆಯಲ್ಲಿ ಅವಲೋಕ ನದಂಥ ಕೆಲವು ಕಾರ್ಯಕ್ರಮ ಗಳ ಝಲಕ್. ಮತ್ತೆ ಮುಂದಿನ ವರ್ಷದ ಮುಖ್ಯ ಕಾರ್ಯಕ್ರಮ ಗಳ ವಿವರ ಹೇಳುತ್ತಿ ದ್ದರು. ಪ್ರತಿಯೊಂದರಲ್ಲೂ ಆಸಕ್ತಿ,ಈಗ ಜಾಹೀರಾತು ಅಂದರೆ ಮೂಗು ಮುರಿಯು ತ್ತೇವಲ್ಲ ಆಗ ಆಕಾಶವಾಣಿಯ ಜಾಹೀರಾತು ಗಳೆಲ್ಲ ಬಾಯಿಪಾಠವಾಗಿ ಬಿಟ್ಟಿದ್ದವು. ಅದೂ ಒಂಥರಾ ಆಕರ್ಷಣೆ.

ಸಮಯ ಪರಿಪಾಲನೆಯಲ್ಲಿ ಆಕಾಶವಾಣಿ ಯನ್ನು ಬಿಟ್ಟರಿಲ್ಲ.ಅಲರಾಂ ಗಡಿಯಾರವಿರಲಿ ಕೀ ಕೊಡುವ ಗೋಡೆಗಡಿಯಾರ,ಕೈಗಡಿಯಾರ ವಿರಲಿ ಆಗೆಲ್ಲ ರೇಡಿಯೋ ಕಾರ್ಯಕ್ರಮದ ಆಧಾರದ ಮೇಲೆಯೇ ಗಂಟೆ ಸರಿಯಾಗಿ ಸೆಟ್ ಮಾಡ್ತಿದ್ದುದು. ದಾರಿಯಲ್ಲಿ ನಡೆಯುವಾಗ ಯಾವುದೋ ಅಂಗಡಿಯಿಂದಲೋ ಯಾರ ಮನೆಯಿಂದಲೋ ರೇಡಿಯೋ ಕಾರ್ಯಕ್ರಮ ಕೇಳಿ ಬಂದರೆ ಆ ಕಾರ್ಯಕ್ರಮ ಬರ್ತಿದೆ, ಸಮ ಯ ಎಷ್ಟಾಗಿದೆ ಅಂತ ಅನ್ಕೊಳ್ತಿದ್ದುದು. ಒಂದು ರೀತಿಯ ಆಡಿಯೊ ಗಡಿಯಾರ ಆಗ ನಮಗೆ ರೇಡಿಯೋ.
ಕೆಲವೊಮ್ಮೆ ಗಣ್ಯರು ಸತ್ತು ರಾಷ್ಟ್ರೀಯ ಶೋಕ ಆಚರಿಸಿದರೆ ಯಾವುದೇ ಮನರಂಜನೆಯ ಕಾರ್ಯಕ್ರಮವಿಲ್ಲದೆ ನಮಗೂ ಸಾಂಸ್ಕೃತಿಕ ಉಪವಾಸ. ಸಖತ್ ಬೇಜಾರಾಗ್ತಿತ್ತು.

ಆಕಾಶವಾಣಿ ಎಂಬ ಹೆಸರು ಕೊಟ್ಟು ಭಾರತದ ಪ್ರಪ್ರಥಮ ಖಾಸಗಿ ರೇಡಿಯೋ ವಾಹಿನಿ ಆರಂಭ ವಾದದ್ದು ಮೈಸೂರಿನಲ್ಲಿಯೇ. ಮನಃಶಾಸ್ತ್ರದ ಪ್ರೊಫೆಸರ್ ಎಂ.ವಿ.ಗೋಪಾಲ ಸ್ವಾಮಿಯವರ ಕೆ.ಆರ್.ಎಸ್. ರಸ್ತೆಯ ವಿಠಲ ವಿಹಾರ ಮನೆಯ ಲ್ಲಿಯೇ ಎಂದ ಮೇಲೆ ನಮ್ಮ ಆಕಾಶವಾಣಿಯ ನ್ನು ಪ್ರೀತಿಸದೇ ಇರಲು ಸಾಧ್ಯವೇ?

ನನಗೆ ತಿಳಿವು ಬಂದಾಗ ನಮ್ಮ ಮನೆಯಲ್ಲಿದ್ದು ದು ಕಂಪ್ಯೂಟರ್ ಸೈಝಿನ ಆದರೆ ಆಯತಾ ಕಾರದ ರೇಡಿಯೋ ಮರ್ಫಿಕಂಪೆನಿಯದು. ಅದಕ್ಕೆ ಗೋಡೆಗೆ ಮೊಳೆ ಹೊಡೆದು ಇಟ್ಟ ಮಣೆ ಯ ಸ್ಟಾಂಡ್.ಮೊದಮೊದಲು ಏರಿಯಲ್ ಅಂತ ಜೇಡರ ಬಲೆಯ ಹಗ್ಗದಂತಿ ದ್ದುದನ್ನು ಕಟ್ಟುತ್ತಿದ್ದ ನೆನಪು. ಅಲ್ಲದೆ ಪೋಸ್ಟಾಫೀಸಿಗೆ ಹೋಗಿ ಪ್ರತಿ ವರ್ಷ ಲೈಸೆನ್ಸ್ ನವೀಕರಣ ಮಾಡ ಬೇಕಿತ್ತಂತೆ. ದಪ್ಪದಪ್ಪಗೆ ಬಿರುಡೆ. ಎರಡೂ ತಿರುಗಿಸುತ್ತಿದ್ದರೆ ನಿಲಯ ಗಳು ಕ್ಯಾಚ್ ಆಗು ತ್ತಿತ್ತು. ಮಧ್ಯೆ ಬೇರೆಯದನಿ ಕೇಳದಂತೆ ಸ್ಪುಟ ವಾಗಿ ಕೇಳಿಸು ವಂತೆ ಅಜೆಸ್ಟ್ ಮಾಡುವುದೂ ಒಂದು ಕಲೆ. ಸ್ವಲ್ಪಮಟ್ಟಿಗೆ ಪರಿಣತಿ ಇತ್ತು ನನಗೆ. ಅಲ್ಲದೆ ರೇಡಿಯೋಗಿದ್ದ ಏರಿಯಲ್ ಎತ್ತಿಹಿಡಿದು ಬೇರೆ ಬೇರೆ ದಿಕ್ಕಿಗೆ ತಿರುಗಿಸಿ ದುರ್ಲಭವಾಗಿದ್ದ ಧಾರವಾಡ ನಿಲಯ ಹಾಕಿ ಚಿತ್ರಗೀತೆ ಕೇಳ್ತಿದ್ದೆ. ಆಗ ಅಕ್ಕಪಕ್ಕದ ಮನೆಯವರು ನನ್ನ ಕರೆಸಿ ಸ್ಟೇಶನ್ ಸರಿ ಮಾಡಿಸಿಕೊಳ್ತಿದ್ದರು. ಆಮೇಲೆ ನಮ್ಮ ಮನೆಗೆ ಬಂದದ್ದು ಕರಿಬಣ್ಣದ ಪುಸ್ತಕದ ಸೈಜಿನ ಟ್ರಾನ್ಸಿಸ್ಟರ್ ಅದು ಫಿಲಿಪ್ಸ್ ಕಂಪನಿಯ ದು ಅಂತ ನೆನಪು.ಅದನ್ನು ತಂದಾಗ ಅಣ್ಣಾ ಕರೆಂಟು ಇರದಿ ದ್ದರೂ ಇದರಲ್ಲಿ ಕೇಳಬಹುದು ಅಂತ ಹೇಳಿದ್ದು ಕೇಳಿ ಖುಷಿಯಾಗಿತ್ತು.ನಂತರ ದಲ್ಲಿ ಪ್ಯಾಕೇಟ್ ಟ್ರಾನ್ಸಿಸ್ಟರ್. ಹೆಸರೇ ಹೇಳು ವಂತೆ ಜೋಬಿನಲ್ಲಿ ಹಿಡಿಸುವಷ್ಟು ಪುಟ್ಟದು. ಕಾಲೇಜಿಗೆ ಬರುವಷ್ಟ ರಲ್ಲಿ ಟೂ ಇನ್ ಒನ್ ಟೇಪ್ರೆಕಾರ್ಡರು ಗಳು ಬಂದಿದ್ದರೂ ನನಗಂತೂ ಓದಲಿಕ್ಕೆ ಜೊತೆ ರೇಡಿಯೋ ಹಾಕಲೇ ಬೇಕಿತ್ತು. ಬೇರೆಯವರಿಗೆ ಡಿಸ್ಟರ್ಬ್ ಆದರೆ ನನಗೆ ಓದಲಿಕ್ಕೆ ರೇಡಿಯೋನೇ ಸ್ಪೂರ್ತಿ.

ರೇಡಿಯೋ ಮತ್ತು ಕ್ರಿಕೆಟ್ ಬಿಡಿಸಲಾರದ ನಂಟು ರೀ…. ಅಪಾರ ಕ್ರಿಕೆಟ್ ಹುಚ್ಚಿನ ನಮ್ಮಪ್ಪ 5 ದಿನಗಳ ಮ್ಯಾಚ್ ಗಳ ಪ್ರಿಯ. ವಂಶಪಾರಂಪ ರ್ಯ ಈ ಕ್ರಿಕೆಟ್ ಹುಚ್ಚು ನಮ್ಮ ರಕ್ತದಲ್ಲಿಯೂ ಹರಿಯುತ್ತಿದೆ. ಆಗ ಸರ್ಫ್ ಕಂಪನಿಯ ಪ್ಯಾಕೆಟ್ ನಲ್ಲಿ ಕ್ರಿಕೆಟ್ ನ ಜಾಗಗಳ ಬಗ್ಗೆ ವಿವರಣೆ ಇರುವ ಫೋಟೋ ಇತ್ತು. ಅದನ್ನು ನೋಡಿ ಸಿಲ್ಲಿಪಾಯಿಂಟ್, ಕವರ ವಿಕೆಟ್ ಬೌಂಡರಿ ಅವುಗಳ ಬಗ್ಗೆ ಎಲ್ಲ ಕಲಿತದ್ದು. ಪ್ರಾಯೋಗಿಕ ಅನುಭವ ಇಲ್ಲ ಬಿಡಿ. ನಂತರ ಈ ಕ್ರಿಕೆಟ್ ಹುಚ್ಚು ಒನ್ ಡೇಗೂ ತಿರುಗಿತ್ತು.ಟ್ವೆಂಟಿ-ಟ್ವೆಂಟಿ ಆರಂಭ ವಾದಾಗ ಅಯ್ಯೋ ಬೇಗ ಮುಗಿಯುತ್ತೆ ನೋಡಿ ದ ಹಾಗೆ ಆಗಲ್ಲ ಅಂತ ಬೇಜಾರು ಮಾಡಿಕೊಳ್ಳು ತ್ತಿದ್ದರು ನಮ್ಮಪ್ಪ.5ದಿನದ ಮ್ಯಾಚ್ ಟೀ ಸಮಯ ದಲ್ಲಿ ಹಳೆ ಹಿಂದಿ ಹಾಡು ಆಗಲೂ ಆರಿಸುತ್ತಿರ ಲಿಲ್ಲ. ಲಂಚ್ ಸಮಯದ ಆರಿಸಿ ಮತ್ತೆ ರೇಡಿ ಯೋ ಕಿವಿ ಹಿಂಡುವುದು. ಮ್ಯಾಚ್ ಬರುವಾಗ ಕರೆಂಟ್ ಹೋದರೆ ಟ್ರಾನ್ಸಿಸ್ಟರ್ ಆನ್. ಅದರ ಬ್ಯಾಟರಿ ನೋಡಿಕೊಂಡು ಸದಾ ಸುಸ್ಥಿತಿಯಲ್ಲಿ ಡುತ್ತಿದ್ದರು ಪ್ಯಾಕೆಟ್ ಟ್ರಾನ್ಸಿಸ್ಟರ್ ಅಂತೂ ಕ್ರಿಕೆಟ್ ಸಮಯದಲ್ಲಿ ಅಣ್ಣನ ಜೇಬಲ್ಲೇ.

ಹೀಗೆ ಒಂದು ಬಾರಿ ಅಣ್ಣ ಬೆಂಗಳೂರಿಗೆ ಹೋಗಿ ದ್ರಾ… ಇಲ್ಲಿ ಇನ್ನೂ ಒಂದು ತಮಾಷೆ ವಿಷಯ ಹೇಳ್ತೀನಿ. ದೊಡ್ಡ ರೇಡಿಯೊಗೆ ದೊಡ್ಡಣ್ಣ, ಟ್ರಾನ್ಸಿಸ್ಟರ್ಗೆ ಪುಟಾಣಿ, ಪ್ಯಾಕೆಟ್ ಟ್ರಾನ್ಸಿಸ್ಟರ್ ಗೆ ಚಿಂಟು ಇವು ನಾವಿಟ್ಟಿದ್ದ ಹೆಸರುಗಳು. ಅಣ್ಣಾ ಚಿಂಟುನ ಮರೆತು ಬಿಟ್ಟುಹೋಗಿದ್ದರು. ಮೊದಲ ಪಿಯುಸಿ ಆಗ ನಾನು ಕಪಿಲ್ ದೇವ್ ಫ್ಯಾನ್. ಐದನೇ ದಿನದ ಮ್ಯಾಚಿನ ಕಡೆ ಯ ದಿನ ಇಂಗ್ಲೆಂಡ್ ವಿರುದ್ಧ ಅಂತ ನೆನಪು. ಅಮ್ಮ ಕಾಲೇಜಿಗೆ ತಗಂಡು ಹೋಗ್ತೀನಿ ಅಂತ ಒಪ್ಪಿಸಿ ಬ್ಯಾಗ್ ನಲ್ಲಿಟ್ಟು ಹೊರಟೆ. 1ಪೀರಿಯಡ್ ಲೆಕ್ಚರರ್ ಹೋಗಿ ಮತ್ತೊಬ್ಬರು ಬರುವ ಸಮಯ ದಲ್ಲಿ ಹಾಕಿ ಸ್ಕೋರ್ ಕೇಳಿಕೊಳ್ಳೋದು. ಅವತ್ತು ಹುಡುಗರೂ ಸಹ ಮಾತನಾಡಿಸಿ ಸ್ಕೋರ್ ಕೇಳ್ತಿದ್ರು. ಈ ಗಲಾಟೆಯಲ್ಲಿ ನಮ್ಮ ಎಕನಾಮಿಕ್ಸ್ ಲೆಕ್ಚರರ್ ಬಂದಿದ್ದೇ ಗೊತ್ತಾಗ ಲಿಲ್ಲ. ಆಮೇಲೆ ಆಫ್ ಮಾಡಿದೆ.”ಯಾರು ಟ್ರಾನ್ ಸಿಸ್ಟರ್ ಹಾಕಿ ದ್ದು”ಅಂತ ಕೇಳಿದರು. ಕ್ಲಾಸಿಡೀ ಗಪ್ ಚಿಪ್. ಎಂದೂ ಹೀಗೆ ಎದ್ದು ನಿಲ್ಲದ ನಾನು ಅಳು ತಡೆ ಯುತ್ತಾ ಎದ್ದುನಿಂತೆ. “ಎಷ್ಟಾಗಿತ್ತು ಸ್ಕೋರು? ಯಾರು ಬ್ಯಾಟಿಂಗೂ” ಅಂತ ಕೇಳೋದೇ… ನನಗಿಂತ ಮುಂಚೆ ಹತ್ತಾರು ಸ್ವರಗಳು ಉತ್ತರಿಸಿ ದ್ದವು. “ಬದುಕಿದೆಯಾ ಬಡ ಜೀವವೇ” ಅಂತ ಕುಕ್ಕರಿಸಿದೆ. ಮೂವತ್ತೈದು ವರ್ಷದ ನಂತರ ಸುಮಾರು ಜನ ಪತ್ತೆಯಾಗಿ ಪಿಯುಸಿ ಸಹಪಾಠಿ ಗಳು ವಾಟ್ಸ್ ಆ್ಯಪ್ ಗುಂಪು ಮಾಡಿಕೊಂಡಿ ದ್ದೇವೆ. ಕೆಲವರು ಆ ಘಟನೆ ನೆನಪಿಸಿದರು.

ಅಲ್ಲದೆ ಆಗೆಲ್ಲ ದೊಡ್ಡ ದೊಡ್ಡ ಪಾರ್ಕ್ ಗಳಲ್ಲಿ ರೇಡಿಯೋವನ್ನು ಇಟ್ಟು ಅದನ್ನು ಧ್ವನಿವರ್ಧಕ ಗಳಿಗೆ ಸೇರಿಸಿರುತ್ತಿದ್ದರು.ಇಡೀ ಪಾರ್ಕು ರೇಡಿಯೋ ಕಾರ್ಯಕ್ರಮ ಕೇಳುತ್ತಿತ್ತು. ವಾರ್ತೆ ಬರುವಾಗ ನಾವು ಮಕ್ಕಳು ಜೋರಾಗಿ ಗಲಾಟೆ ಮಾಡುತ್ತಿ ದ್ದರೆ ಅಲ್ಲಿ ಕುಳಿತು ಕೇಳುತ್ತಿದ್ದ ತಾತಂದಿರು ರೇಗು ತ್ತಿದ್ದುದು ಇನ್ನೂ ನೆನಪಿನಲ್ಲಿ ಉಳಿದಿವೆ.

ಮೊನ್ನೆ ರೇಡಿಯೋ ಸಂದರ್ಶನದಲ್ಲಿ ಈ ವಿಷಯ ಪ್ರಸ್ತಾಪವಾಯಿತಾ? ಸಂದರ್ಶಕಿ ಲಸಿತಾ ಮೇಡಂ ಈಗ ರೇಡಿಯೋ ಆಲಿಸುವಿಕೆ ಏಕೆ ಕಡಿಮೆಯಾ ಗ್ತಿದೆ ಅಂಥ ಕಷ್ಟದ ಪ್ರಶ್ನೆ ಹಾಕಿದ್ರು. ಆಗ ಏನೋ ಹೇಳ್ಬಿಟ್ಟು ಬಚಾವಾದೆ. ಆದರೆ ನಮಗೆ ಆಗಿದ್ದ ಮನರಂಜನೆಗಳು ಓದು ಮತ್ತು ರೇಡಿಯೋ. ಓದದವರಿಗೂ ಸುಲಭವಾಗಿ ಜ್ಞಾನ ಸಂತಸ ಹಂಚ್ತಾ ಇದ್ದಿದ್ದು ರೇಡಿಯೋ ಒಂದು ರೀತಿಯಲ್ಲಿ ದೈನಂದಿನ ಕೆಲಸ ಕಾರ್ಯ ಮಾಡ್ತಾನೆ ಕೇಳಬ ಹುದು. ದೂರದರ್ಶನ ಓದುಗಳ ಹಾಗೆ ಪೂರ್ತಿ ಅದಕ್ಕೆ ಸಮಯ ಕೊಟ್ಟು ಓಲೈಸಬೇಕಿಲ್ಲ ನನ್ನಂಥವರು ಪಾಠ ಓದುತ್ತಾ ಲೆಕ್ಕ ಮಾಡುತ್ತಾ ರೇಡಿಯೋ ಕೇಳ್ತೀವಿ. ಹಾಗಾಗಿಯೇ ಇದು ತುಂಬಾ ಉಪಯುಕ್ತ ಮಾಧ್ಯಮ.ಸುದ್ದಿ ಸಮಾ ಚಾರ ವಿಷಯ ಸಂಗ್ರಹಣೆಗಾಗಲ ಅಥವಾ ಭರಪೂರ ಮನರಂಜನೆಗಾಗಲಿ ಈಗ ಸಹಸ್ರಾರು ದಾರಿಗಳು. “ಪುರಾಣ ಮಿತ್ಯೇವ ನ ಸಾಧು ಸರ್ವಂ” ಎಂಬುದು ಈಗಿನವರ ತಾರಕಮಂತ್ರ. ಹೀಗಾಗಿ ಸ್ವಲ್ಪ ತನ್ನ ಜನಪ್ರಿಯ ತೆಯ ಮಾನ ದಂಡದಲ್ಲಿ ಕೆಳಗಿಳಿದರೂ ರೇಡಿಯೋ ಅಪ್ಪುವ ಒಪ್ಪುವ ಬಳಗವೂ ಅಷ್ಟೇ ದೊಡ್ಡದಿದೆ ಎಂಬುವ ದು ಸತ್ಯ. ಎಪ್ಪತ್ತರ ದಶಕಗಳಲ್ಲಿನ ಏಕೈಕ ಮನರಂಜನೆ ಯಾಗಿ ಅನಭಿಷಿಕ್ತ ಸಾಮ್ರಾಟನಾಗಿ ಮೆರೆದದ್ದು ರೇಡಿಯೋ. ಸಮಕಾಲೀನತೆಗೆ ಸ್ಪಂದಿಸಿ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಆಕಾಶವಾಣಿ ಎಂದೂ ಅಪ್ರಸ್ತುತ ವಾಗಲು ಸಾಧ್ಯವೇ ಇಲ್ಲ. ಈಗ ಒಂಚೂರು ಗ್ರಹಣ ಕವಿದಿದ್ದರೂ ನಂತರ ಮತ್ತಷ್ಟು ಹೊಳಪಾಗಿ ಪ್ರಜ್ವಲಿಸುವುದಂತೂ ಖಂಡಿತಾ.

ಈಗಲೂ ಬೆಳಿಗ್ಗೆ ಸಂಜೆ ವಾಯುವಿಹಾರ ಹೋಗು ವವರು ಪುಟ್ಟ ಟ್ರಾನ್ಸಿಸ್ಟರ್ ಅಥವಾ ಮೊಬೈಲಲ್ಲಿ ರೇಡಿಯೋ ಆ್ಯಪ್ ಹಿಡಿದು ಕೇಳುತ್ತಾ ಹೋಗು ವುದು ಆಕಾಶವಾಣಿ ಕಾರ್ಯಕ್ರಮಗಳನ್ನೇ. ಅದ ಕ್ಕೆ ನಾನೂ ಹೊರತಲ್ಲ. ಅಲ್ಲದೆ ಅಡಿಗೆ ಮನೆಯ ಲ್ಲಿ ಸದಾ ರೇಡಿಯೋ ಇದ್ದರೆ ನನಗೆ ಅಡಿಗೆ ಮಾಡಲು ಸ್ಫೂರ್ತಿ.ಹೀಗಿದೆ ನನ್ನ-ರೇಡಿಯೋದ ಅಳಿಸದ ಅನುಬಂಧ, ಬಿಡಿಸದ ಬಂಧ.

ಮೊನ್ನೆ ಮೊನ್ನೆಯವರೆಗೂ ಅಮ್ಮನ ಮನೆಯ ಅಟ್ಟದಮೇಲೆ ಸೇರಿದ್ದ ದೊಡ್ಡಣ್ಣ ಪುಟಾಣಿ ಚಿಂಟುಗಳನ್ನು ಹಳೆಯ ಸಾಮಾನುಗಳ ವ್ಯಾಪಾರಿಗೆ ಹಾಕುವಾಗ ನಿಜಕ್ಕೂ ಕಣ್ಣುಗಳು ತುಂಬಿಕೊಂಡಿದ್ದವು.

✍️ಸುಜಾತಾ ರವೀಶ್, ಮೈಸೂರು.