ಹಚ್ಚಿ ಬಿಡಿ ನಿಮ್ನೊಳಗಿನ ದಳ್ಳುರಿಯ
ಬೆಂದು ಹೋಗಲಿ ಏಳೆ ಹೃದಯಗಳು
ಯಾಕಾದರೂ ಹೊರಗೆಡುವಿರೋ
ಒಡಲಿನಾಳದ ಅಹಿಷ್ಣುತೆಯ ಮನಸು

ಪ್ರಾಂಜಲ ಮನಸ್ಸಿಗೆ ವಿಷ ಬೆರೆಸಿಟ್ಟು
ಹಾಲಿನಲ್ಲಿ ಹಾಲಾಹಲವೆಬ್ಬಿಸಿದ್ದು
ಐಕ್ಯತೆಯ ಕೊಂಡಿಗೆ ಬಿದ್ದ ಕೊಡಲಿ ಪೆಟ್ಟು
ಸಾಮರಸ್ಯದ ಗೂಡಿಗೆ ಬೆಂಕಿ ಇಟ್ಟು

ಎಷ್ಟೊಂದು ಹುನ್ನಾರ ಈ ಬದುಕಿಗೆ
ಮೂರಡಿ ಮಲಗುವ ಶಾಶ್ವತ ನೆಲೆಗೊತ್ತಿಲ್ಲ
ಹಿಂದಿನವರು,ಇಂದಿನವರು ಬಿತ್ತಿದ್ದಕ್ಕೆ
ಅಸಮಾನತೆಯ ವಿರುದ್ಧಯಾರು ಸೋತಿಲ್ಲ

ಉಳ್ಳವರ ಎಂಜಲಾಸೆಗೆ ಬಿದ್ದವರು
ಕ್ಷಣಿಕ ಸುಖಕಾಗಿ ನೆಲಕಚ್ಚಿದವರು
ಸ್ವಾರ್ಥದ ಬೆನ್ನ ಹತ್ತಿ ಮಣ್ತಿಂದವರು
ಇಂದಿಗೂ,ಎಂದಿಗೂ ಚಿರಸ್ಥಾಯಿಯರು

ವಿದ್ಯೆಯ ಮಹತ್ವ ಪಡೆದವಗೆ ಗೊತ್ತು
ಮೌಡ್ಯಗಳ ಬೆನ್ನ ಹತ್ತಿದವನಿಗೇನು ಗೊತ್ತು?
ಕೂಪಮಂಡುಕನಂತೆ ಜೀವಿಸುತ್ತಲೇ
ಸಾಗರವ ತೂಗುವ ಕನಸಿಗೇನು ಗೊತ್ತು

ಬಲಿಯಾಗದಿರಿ ಭಾವಿ ಭವಿಷ್ಯದ ಕೂಸುಗಳೇ
ಸ್ವಂತಿಕೆಯ ಮಾರಿ,ಹರಕೆ ಕುರಿಯಾಗದಿರಿ
ಮುಖವಾಡಗಳ ಹಿಂದಿನ ನೈಜ ಚಹರೆ
ಕಳಚುವ ತನಕ ತಾಳ್ಮೆಯ ಕಾಪಾಡಿರಿ

ಭಾವೈಕ್ಯತೆಯ ಗಾಳಿಗೆ ತೂರದಿರಿ ನೀವು
ಇಷ್ಟುಕಾಲ ಕಾಪಿಟ್ಟ ಸ್ನೇಹ ಬಲಿಕೊಡದಿರಿ
ಬಾಳಿ ಬದುಕುವ ವನ ಕುಸುಮಗಳು ನೀವು
ಇನ್ನಾರದೋ ಷಡ್ಯಂತರಕೆ ಆಹುತಿಯಾಗದಿರಿ.

✍️ಶ್ರೀಮತಿ.ಶಿವಲೀಲಾ ಹುಣಸಗಿ
ಕವಯತ್ರಿ,ಯಲ್ಲಾಪುರ.