ಹೋಗಿರೆಲ್ಲಿ ನೀವು ಅಂಬಿಕಾತನಯದತ್ತ/

ವರುಷ ವರುಷ ಬರುವ ಯುಗಾದಿಯಲ್ಲಿ
ಹೊಂಗೆ ಹೂವ ಟೊಂಗಲಲ್ಲಿ
ಭ್ರಂಗದ ಸಂಗೀತದಲ್ಲಿ ಇದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ನೀವು ಅಂಬಿಕಾತನಯದತ್ತ*

ಮರನಲ್ಲ ನಾನು, ಅಮರ
ಆದೆ ಸುಮ ನಲ್ಲ ಭ್ರಮರ
ಎನ್ನ ಪಾಡೆನಗಿರಲಿ ಹಾಡನಷ್ಟೇ ನೀಡುವೆನು ನಿನ್ನೆದೆಯು ಕರಗಿದರೆ ಸವಿಯುಣಿಸು ಎಂದಿರಲ್ಲ
ಇದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ಮೂಡಲ ಮನೆಯ ಕದ ತೆರೆದ ಬೆಳಕಿನಲ್ಲಿ
ಎಲೆಗಳ ಮೇಲಿನ ಅಮ್ರತ ಬಿಂದುವಿನಲ್ಲಿ
ನಾಡನ್ನು ಗಂಧವ೯ಸೀಮೆಯಾಗಿಸಿದ ಹಕ್ಕಿಗಳ ಹಾಡಿನಲ್ಲಿ
ಇದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ತಿಂಗಳೂರಿನ ನೀರಹೀರಿ ಬೆಳ್ಳಿ ಮನೆಯನು ಸೀಳಿ
ಮಂಗಳಲೋಕದ ಆಂಗಳವನ್ನು ಮಾನವಮುಟ್ಟಿದ ಘಳಿಗೆಯಲ್ಲಿ
ನೀವಿದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ಹಸಿರು ಹಚ್ಚಿದ ಹೊನ್ನ ಚಿಕ್ಕಿಯ ಪಾತರಗಿತ್ತಿಯ ಪಕ್ಕಗಳಲ್ಲಿ
ನೀವಿದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ಇದ್ದದ್ದು ಮರೆಯೋಣ
ಇಲ್ಲದ್ದು ತೆರೆಯೋಣ
ನಾನಲ್ಲ ನೀನಲ್ಲ ಕುಣಿಯೋಣ ಬಾರಾ ಎನ್ನುವ ಆಗ್ರಹದಲ್ಲಿ ನೀವಿದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ಶಕುನದ ಹಕ್ಕಿಗೆ ಶುಭ ನುಡಿಯಲು ಹೇಳುವಲ್ಲಿ
ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ ಎನುವ ಪ್ರೇಮಿಗಳ ಹಾಡಿನಲ್ಲಿ
ನೀವಿದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ಆತ ಕೊಟ್ಟ ಒಡವೆ ವಸ್ತು ನನಗೆ ಅವಗೆ ಗೊತ್ತು
ನನಗೆ ಅವನ ತೋಳಬಂದಿ
ಒಲವೆ ನಮ್ಮ ಆಸ್ತಿ ಎಂಬ ಒಲವಿನ ಬದುಕಿನಲ್ಲಿ ನೀವಿದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ಕೋಲುಸಖೀ ಚಂದ್ರಮುಖಿ
ಎನುವ ನಾದಲೀಲೆಯಲ್ಲಿ
ಮಲ್ಲಾಡದ ಗಿಣಿಯೆ ಅಲ್ಲಾಡದ ಯಾಕ ಕುಂತಿ
ಎನುವ ಗಿಳಿವಿಂಡಿನಲ್ಲಿ ನೀವಿದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ರಾಗರತಿ, ಕುರುಡು ಕಾಂಚಾಣ, ಅನಂತಪ್ರಣಯ
ಭಾವಗೀತೆ, ತಾಯಿ ಕೂಸು
ದೀಪ,ನೀ ಹೀಂಗ ನೋಡಬ್ಯಾಡ ಎಂದೆಲ್ಲ ಬರೆದ ನೂರಾರು ಹಾಡುಗಳಲ್ಲಿ ನೀವಿದ್ದೀರಲ್ಲ
ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ಧಾರವಾಡದ ಸಾಧನಕೇರಿಯ ವರಕವಿ ನೀವು
ಸಾಧನೆಯ ಶಿಖರದಲ್ಲಿ ವಾಗ್ದೇವಿಯ ಮುಕುಟದಲ್ಲಿ
ಕರುನಾಡಿಗರ ಮನಗಳಲ್ಲಿ
ಕನ್ನಡ ಸಾಹಿತ್ಯ ಗಂಗೆಯಲ್ಲಿ ಇದ್ದೀರಲ್ಲ ಕರುನಾಡಿನ್ಯಾಗ
ಹೋಗಿರೆಲ್ಲಿ ಅಂಬಿಕಾತನಯದತ್ತ*

ಶ್ರೀಮತಿ ರೇಖಾ ನಾಡಿಗೇರ,
ಹುಬ್ಬಳ್ಳಿ