ನಾಲ್ಕಗುಳು ಅನ್ನ ಮೂರಗುಳು ಆಸೆಯನಲ್ಲದೆ ಬದುಕು ಏನನ್ನು ಕೇಳಿತು
ಗುಟುಕು ಪ್ರೀತಿಯನಲ್ಲದೆ ಬದುಕು ಏನನ್ನು ಕೇಳಿತು.

ಇತಿಹಾಸ ಪುರಾಣಗಳಾಚೆಯಿಂದಲೂ ಕೇಳಿಸುತ್ತಿದೆ
ನೋವ ಆಕ್ರಂದನವೊಂದು
ಸಾಂತ್ವನದ ಬೆರಳ ಹಿತಸ್ಪರ್ಶವನಲ್ಲದೆ ಬದುಕು ಏನನ್ನು ಕೇಳಿತು.

ನೆಲವೆಂಬುದು ಹುಲ್ಲುಗರಿಕೆ ಹೂವು-ಬೀಜ ಮಳೆ-ಮೊಳಕೆಗಳದೇ ಬೆರಗು
ಮೊಳೆವ ಚಿಗುರುವ ನಿರಂತರ ಹಂಬಲವನಲ್ಲದೆ ಬದುಕು ಏನನ್ನು ಕೇಳಿತು

ದೇವರ ಸಾವಿರ ನಾಮಗಳು ಮೊಳಗುತ್ತಿದ್ದರೂ ಲೋಕದಲ್ಲಿ
ಜತೆಯಾಗಿ ಸಾಗುವ ಸ್ನೇಹ-ಒಲವನಲ್ಲದೆ ಬದುಕು ಏನನ್ನು ಕೇಳಿತು

ಮುಚ್ಚಿದ ರೆಪ್ಪೆಗಳು ಬಿಚ್ಚುವ ಮುನ್ನ ಮಿಸುಕಾಡಿದರೇನು ಕೋಟಿ ಹತಿಯಾರಗಳು
ಕೊಲುವ ಹತಿಯಾರಗಳ ಗೆಲುವ ಜೀವಗಳನಲ್ಲದೆ ಬದುಕು ಏನನ್ನು ಕೇಳಿತು

ಪ್ರತಿ ಬೆಳಗಿಗು ಬೊಗಸೆ ಚಾಚಿದರೆ ನಿರಾಸೆಯ ಮರಳುಗಾಡೊಂದು ತೇಲುವುದು
ಮರಳುಗಾಡಿನಲೂ ನಿನ್ನ ಆನಂದವನಲ್ಲದೆ ಬದುಕು ಏನನ್ನು ಕೇಳಿತು!

✍️ಗಣೇಶ ಹೊಸ್ಮನೆ 
ಜಾನ್ಮನೆ, ಶಿರಸಿ