ಇಷ್ಟದಿಂದ ಮೊರೆಯಿಟ್ಟಿರುವೆನು ಬಣ್ಣದ ಚಿಟ್ಟೆಗಳನು ಹಾರಲು ಬಿಡು ಸಖಿ
ಪ್ರೇಮದಿ ಪ್ರಾರ್ಥಿಸುತಿರುವೆನು ಬಣ್ಣದ ಚಿಟ್ಟೆಗಳನು ಹಾರಲು ಬಿಡು ಸಖಿ

ಮರುಭೂಮಿ ಸಂತನಿಗೆ ಬಯಲೇ ಬಟ್ಟೆಯಾಗಿದೆ ಏಕಾಂತಕೆ ಕೊಯ್ಲು
ವೈರಾಗ್ಯಗುಳ್ಳೆಯೊಡೆದಿರುವೆನು ಬಣ್ಣದ ಚಿಟ್ಟೆಗಳನು ಹಾರಲು ಬಿಡು ಸಖಿ

ಆಗಸ ಭೂಮಿ ಮಧ್ಯೆ ಬಾಳು ಅದೆಷ್ಟು ಸಲ ಕಂಪನದ ಗೂಡಾಗುವುದು ನೋಡು
ದಿಗಂತ ಧ್ಯಾನದೊಳಿರುವೆನು ಬಣ್ಣದ ಚಿಟ್ಟೆಗಳನು ಹಾರಲು ಬಿಡು ಸಖಿ

ನಂಬಿಕೆಯಾಗದು ನಿನಗೆ ನಾ ಮರಮರಳಿ ಸತ್ತು ಗೆಲ್ಲುವೆ ನಿನ್ನ ಕಣ್ಣಿಗಾಗಿ
ನಿನ್ನದೇ ಬಿಂಬ ತುಂಬಿಕೊಂಡಿರುವೆನು ಬಣ್ಣದ ಚಿಟ್ಟೆಗಳನು ಹಾರಲು ಬಿಡು ಸಖಿ

ಆ ಬಣ್ಣದ ಚಿಟ್ಟೆಗಳೇ ನಮ್ಮಿಬ್ಬರ ಪುರಾತನ ರಾಯಭಾರಿಗಳು ಅಲ್ಲವೇ ಜಾಲಿ
ಜಗದಲ ಮುಗಿಲಗಲ ಸಂದೇಶ ಸಾರುವೆನು ಬಣ್ಣದ ಚಿಟ್ಟೆಗಳನು ಹಾರಲು ಬಿಡು ಸಖಿ

✍️ವೇಣು ಜಾಲಿಬೆಂಚಿ
ರಾಯಚೂರು.