ಸಂಕ್ರಾಂತಿ ಧಾರ್ಮಿಕ ಆಚರಣೆ ಅನ್ನುವುದ ಕ್ಕಿಂತ ಒಂದು ಸಾಮಾಜಿಕ ಆಚರಣೆಯಾಗಿ ಹೆಚ್ಚು ಗುರುತಿಸಲ್ಪಟ್ಟಿದೆ. ಬಹುತೇಕ ಎಲ್ಲಾ ಹಬ್ಬಗಳು ಚಾಂದ್ರಮಾನ ರೀತ್ಯಾ ಆಚರಿಸಿ ಕೊಳ್ಳುವುದಾ ದರೆ ಸಂಕ್ರಾಂತಿಯ ಆಚರಣೆ ಸೋರಮಾನ ರೀತ್ಯಾ. ಯಾವಾಗಲೂ ಜನವರಿ ಹದಿನಾಲ್ಕು ಅಥವಾ ಹದಿನೈದರಂದು ಬರುತ್ತದೆ.ಇದು ಸೂರ್ಯನ ಆರಾಧನೆಗೆ ಮೀಸಲಾದ ದಿನ. ಸೂರ್ಯ ತನ್ನ ಚಲನೆಯ ನ್ನು ಉತ್ತರಾಭಿಮುಖ ವಾಗಿ ಆರಂಭಿಸುವ ದಿನ. ಚಳಿಯ ತೀವ್ರತೆ ಕಡಿಮೆಯಾಗುತ್ತಾ ದೀರ್ಘ ಹಗಲುಗಳು ಶುರು ವಾಗುತ್ತದೆ. ಒಟ್ಟಿ ನಲ್ಲಿ ವಾತಾವರಣದಲ್ಲಿ ಚೈತನ್ಯ ತುಂಬಿಸುವ ಕಾಲ. ದಕ್ಷಿಣಾಯಣವನ್ನು ದೇವತೆಗಳ ರಾತ್ರಿ ಎಂದು ಪರಿಗಣಿಸುವುದರಿಂದ ಈ ದಿನದಿಂದ ದೇವತೆಗಳ ಹಗಲು ಆರಂಭವಾ ಗುತ್ತದೆ. ಪುಣ್ಯ ಕಾರ್ಯಗಳನ್ನು ಮಾಡಲು ಸಕಾಲ. ಸಂಕರಾಸುರ ಎಂಬ ರಾಕ್ಷಸನನ್ನು ಸಂಕ್ರಾಂತಿ ದೇವತೆಯು ಈ ದಿನ ಸಂಹರಿಸಿದ್ದು ಪುರಾಣೋಕ್ತ.

ಮೊದಲೇ ಹೇಳಿದಂತೆ ಇದು ಸಾಮಾಜಿಕ ಹಬ್ಬವೂ ಕೂಡ. ಪೈರು ಕಟಾವಾಗಿ ಮನೆಗೆ ಬರುವ ಸಮಯವಾದ್ದರಿಂದ ರೈತಾಪಿ ವರ್ಗಕ್ಕೆ ಸಂಭ್ರಮ.ಹೀಗಾಗಿ ಸುಗ್ಗಿಯ ಸಂಭ್ರಮವನ್ನು ಸಡಗರ ಹಬ್ಬವಾಗಿಯೂ ಸಂಕ್ರಾಂತಿ ಪ್ರಚಲಿತ. ಬೇಸಾಯದ ಕಾರ್ಯ ಮುಗಿದು ಪುರುಸೊ ತ್ತಾಗಿ ರುವುದರಿಂದ ಜಾತ್ರೆ ಮೇಳ ತೇರು ಉತ್ಸವಗಳ ಭರಾಟೆಯೂ ಜೋರಿರುತ್ತದೆ. ಒಟ್ಟಿನಲ್ಲಿ ಮನೆ ಮನಗಳಲ್ಲಿ ಖುಷಿಯ ವಾತಾವರಣ.ಹಬ್ಬ ಆಚರಿಸಲು ಇದಕ್ಕಿಂತ ಇನ್ನೇನು ಬೇಕು?

ನಮ್ಮ ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಹಬ್ಬ ವನ್ನು ಹೇಗೆ ಆಚರಿಸುತ್ತಾರೆ ನೋಡೋಣ ಬನ್ನಿ. ಅದರೊಂದಿಗೆ ನೆರೆಯ ಕೆಲವು ರಾಜ್ಯ ಗಳಲ್ಲಿ ವಿಶಿಷ್ಟ ರೀತಿ ಹಬ್ಬದ ಆಚರಣೆ ಹೇಗಿದೆ ಎಂದು ತಿಳಿಯೋಣವೇ?

ಕರ್ನಾಟಕ

ಸುಗ್ಗಿ ಹಬ್ಬ ಅಥವಾ ಸಂಕ್ರಾಂತಿ ಎಂದು ಕರೆಸಿ ಕೊಳ್ಳುವ ಈ ದಿನದ ವಿಶೇಷ. ಹೊಸ ಅಕ್ಕಿ ಯಿಂದ ಮಾಡಿದ ಹುಗ್ಗಿ ಹಾಗೂ ಹೆಂಗಳೆ ಯರು ಎಳ್ಳು ಬೀರುವುದು. ಎಳ್ಳು ಹುರಿಗಡಲೆ ಹುರಿದ ಕಡಲೆಕಾಯಿ ಬೀಜ ಕೊಬ್ಬರಿ ಹಾಗೂ ಬೆಲ್ಲದ ಚೂರುಗಳಿಂದ ತಯಾರಿಸಿದ ಎಳ್ಳನ್ನು ತಟ್ಟೆಯ ಲ್ಲಿಟ್ಟು ವಿವಿಧ ಆಕಾರದಲ್ಲಿ ತಯಾರಿ ಸಿದ ಅಕ್ಕರೆ ಅಚ್ಚುಗಳು ಸೂಕ್ತ ಉಡುಗೊರೆ ಗಳೊಂದಿಗೆ ಕಬ್ಬು ಬಾಳೆಹಣ್ಣು ಸಹಿತ ಬಂಧು ಮಿತ್ರರೊಂದಿಗೆ ವಿನಿಮಯ.”ಎಳ್ಳು ತಿಂದು ಒಳ್ಳೆ ಮಾತ ನಾಡು” ಎಂದು ನಾಣ್ನುಡಿ. ಮದುವೆಯಾದ ಮೊದಲ ಐದುವರ್ಷ ಹೆಣ್ಣುಮಕ್ಕಳು ಐದರಿಂದ ಆರಂಭಿಸಿ ವರ್ಷ ವರ್ಷಕ್ಕೆ ಐದರಂತೆ ಹೆಚ್ಚಿಸುತ್ತಾ ಬಾಳೆ ಹಣ್ಣಿನ ಬಾಗಿನವನ್ನು ಐದು ಜನರಿಗೆ ಕೊಡುವ ಪದ್ಧತಿ ಇದೆ. ಅಂತೆಯೇ ಮಕ್ಕಳು ಹುಟ್ಟಿದಾಗ ಮೊದಲ ವರ್ಷ ಹೆಣ್ಣು ಮಗುವಾ ದರೆ ಬೆಳ್ಳಿಯ ಪುಟ್ಟ ಅರಿಶಿನ ಕುಂಕುಮದ ಬಟ್ಟಲು, ಗಂಡು ಮಗುವಾದರೆ ಅಂಬೆಗಾಲಿ ಡುವ ಪುಟ್ಟ ಬಾಲ ಕೃಷ್ಣನ ಮೂರ್ತಿಯನ್ನು ಹತ್ತಿರದ ಬಂಧು-ಮಿತ್ರ ರಿಗೆ ಕೊಡುವ ಪರಿಪಾಠ. ಸಕ್ಕರೆ ಮಣಿ ಗಳಿಂದ ಆಭರಣ ತಯಾರಿಸಿ ಮಕ್ಕಳಿಗೆ ತೊಡಿಸುತ್ತಾರೆ. ಸಂಜೆಯ ವೇಳೆ ಸಣ್ಣ ಎಲಚಿ ಹಣ್ಣು ಕೊಬ್ಬರಿ ಚೂರು ಕಾಸುಗಳನ್ನು ಹಾಕಿ ಮಕ್ಕಳಿಗೆ ಎರೆದು ಆರತಿ ಮಾಡುತ್ತಾರೆ ಹೀಗೆ ಮಾಡುವುದರಿಂದ ದೃಷ್ಟಿ ಪರಿಹಾರ ಆಗುವು ದೆಂಬ ನಂಬಿಕೆ. ಮಾರನೆಯ ದಿನ ಪುಟ್ಟ ಮಕ್ಕಳ ಕೈಲಿ ಬೊಂಬೆ ಗಳನ್ನು ಕೊಡಿಸಿ ಎಳ್ಳು ಬೀರುತ್ತಾರೆ. ಬೊಂಬೆ ಎಳ್ಳು ಅಂತ ಕರೆಯುವ ಕ್ರಮ. ಇನ್ನು ರಾಸು ಗಳನ್ನು ಸಾಕಿದವರು ಅವುಗಳ ಮೈತೊಳೆದು ಅಲಂಕಾರ ಮಾಡಿ ಸಂಜೆಯ ಹೊತ್ತು ಕಿಚ್ಚು ಹಾಯಿಸುವುದನ್ನು ನೋಡುವು ದೇ ಒಂದು ಆನಂದ.

ಮತ್ತೆ ಹೊಸ ಬಟ್ಟೆಯ ಧಾರಣೆ ಮನೆ ಮನೆಯ ಮುಂದೆ ಬಣ್ಣ ಬಣ್ಣದ ರಂಗವಲ್ಲಿ ಮನೆಯ ವರೆಲ್ಲಾ ಸೇರಿ ಸವಿ ಸುಗ್ರಾಸ ಭೋಜನ ಸಾಕಲ್ಲವೇ ಒಂದು ಹಬ್ಬದ ಸುಸಂಪನ್ನತೆಗೆ?

ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯ

ನೆರೆಯ ಈ ರಾಜ್ಯದಲ್ಲಿ ಸಂಕ್ರಾಂತಿಯಂದು ನಾಲ್ಕು ದಿನಗಳ ವೈಭವ. ಹಿಂದಿನ ದಿನ ಭೋಗಿ ಹಳೆಯ ತ್ಯಾಜ್ಯ ವಸ್ತುಗಳಿಂದ ಬೆಂಕಿ ಹಾಕಿ ಕಿಚ್ಚು ಹಾಯಿಸುತ್ತಾರೆ. ಸಂಕ್ರಾಂತಿಯ ದಿನ ದೊಡ್ಡ ದೊಡ್ಡ ರಂಗವಲ್ಲಿಗಳನ್ನು ಹಾಕಿ ಅದನ್ನು ಸಗಣಿ ಮತ್ತು ಹೂವುಗಳಿಂದ ಅಲಂಕರಿಸುತ್ತಾರೆ ಅದಕ್ಕೆ ಗೊಬ್ಬೆಮ್ಮ ಎಂದು ಹೆಸರು. ನಾವು ದೀಪಾವಳಿ ಯ ನರಕಚತು ರ್ದಶಿಯಂದು ಮಾಡುವಂತೆ. ವಿವಿಧ ಸಾಂಪ್ರದಾಯಿಕ ತಿಂಡಿಗಳಿಂದ ಹಬ್ಬದ ಊಟ. ಮೂರನೆಯ ದಿನ ಕನುಮು ಎಂದು. ಅಂದು ಹಸು ಕರುಗಳಿಗೆ ಸ್ನಾನ ಅಲಂಕಾರ ಮತ್ತು ಪೂಜೆ ನಡೆಯುತ್ತದೆ ನಾಲ್ಕನೆಯ ದಿನ ಮುಕ್ಕುನುಮು ಅಂದು ವ್ಯವಸಾಯ ಸ್ನೇಹಿ ಪ್ರಕೃತಿಯ ಅಂಶಗಳಿಗೆ ಪೂಜೆ ಸಲ್ಲಿಸಿ ಬಲಿ ಕೊಡುತ್ತಾರೆ. ಊರ ದೇವತೆಗಳಿಗೂ ಅಂದು ಪೂಜೆ ಸಲ್ಲಿಸಲಾಗುತ್ತದೆ.

ಆಂಧ್ರದ ಸಂಕ್ರಾಂತಿಯ ವಿಶೇಷವೇನೆಂದರೆ ಹರಿದಾಸು ಮತ್ತು ಗಂಗಿರೆಡ್ಡಿವಾಳ್ಳು ಹಸು ಅಥವಾ ಎತ್ತನ್ನು ಅಲಂಕರಿಸಿ ಮುಂಜಾವಿನಲ್ಲಿ ಮನೆಮನೆಗೆ ಹಾಡು ಹೇಳುತ್ತಾ ಮೆರವಣಿಗೆ ಹೋಗುವುದು. ಆ ಸಂದರ್ಭದಲ್ಲಿ ಅವರು ಮಾತನಾಡದೆ ಬರೀ ಹಾಡು ಮಾತ್ರ ಹೇಳುತ್ತಾ ರಂತೆ.

ತಮಿಳುನಾಡು

ಪೊಂಗಲ್ ಎಂದು ಆಚರಿಸಲ್ಪಡುವ ಇದು ಇಲ್ಲಿ ತುಂಬಾ ವೈಭವದ ಹಬ್ಬ. ಒಟ್ಟು ನಾಲ್ಕು ದಿನಗಳ ಕಾಲ ಆಚರಣೆ ಮೊದಲ ದಿನ ಭೋಗಿ ಪೊಂಗಲ್. ಅಂದು ಮನೆಯ ಹಳೆಯ ನಿರುಪ ಯುಕ್ತ ವಸ್ತು ಗಳನ್ನು ಬೆಂಕಿಯಲ್ಲಿ ಸುಡುತ್ತಾರೆ. ಮನೆಮನೆಗಳಲ್ಲಿ ಬೇವಿನ ಎಲೆಗಳನ್ನು ಚಾವಣಿ ಹಾಗೂ ಗೋಡೆಗಳ ಮೇಲೆ ಇಡುತ್ತಾರೆ.

ತಾಯಿ ಪೊಂಗಲ್ ಎನ್ನುವ ಸಂಕ್ರಾಂತಿಯ ದಿನ ಆಚರಣೆ ಹೀಗೆ. ಹೊಸ ಅಕ್ಕಿಯನ್ನು ಹಾಲು ಬೆಲ್ಲದೊಂದಿಗೆ ಹೊಸ ಮಡಿಕೆಯಲ್ಲಿ ಬೇಯಿ ಸುತ್ತಾರೆ. ಆ ತಿನಿಸಿಗೆ ಪೊಂಗಲ್ ಎಂದೇ ಹೆಸರು ಹಾಗೂ ಹಬ್ಬಕ್ಕೆ ಆ ಹೆಸರು ಬರಲು ಕಾರಣವೂ ಇದೆ. ಅಕ್ಕಿ ಕುದಿದು ಉಕ್ಕಿ ಬರುವಾಗ ಶಂಖ ಊದಿ ಸಂಭ್ರಮಿಸುತ್ತಾರೆ. ಆ ಪೊಂಗಲ್ ಅನ್ನು ಸೂರ್ಯನಿಗೆ ನಿವೇದಿಸಿ ಸೇವಿಸುತ್ತಾರೆ.

ಮೂರನೆಯ ದಿನ ಮಾಟ್ಟು ಪೊಂಗಲ್ ಅಂದು ಮನೆಯ ಹಸು ಕರುಗಳನ್ನು ತೊಳೆದು ಅಲಂಕ ರಿಸಿ ಅದಕ್ಕೆ ಬೆಲ್ಲದ ಅನ್ನ, ಕಬ್ಬುಗಳ ನ್ನು ತಿನ್ನಿಸು ತ್ತಾರೆ. ದನಗಳನ್ನು ಸುಂದರವಾಗಿ ಅಲಂಕರಿಸು ವುದು ವಿಶೇಷ. ಜಲ್ಲಿಕಟ್ಟು ಎಂಬ ಹೋರಿಗಳನ್ನ ಪಳಗಿಸುವ ಸ್ಪರ್ಧೆಯೂ ನಡೆಯುತ್ತದೆ.

ಕನ್ನುಮ್ ಪೊಂಗಲ್ ನಾಲ್ಕನೆಯ ದಿನ ಬಂಧು ಮಿತ್ರರನ್ನು ಸಂದರ್ಶಿಸುವ ದಿನ. ಸಾಮಾನ್ಯ ಕಿರಿ ಯರು ಹಿರಿಯರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಾರೆ.

ದೊಡ್ಡ ದೊಡ್ಡ ಬಣ್ಣ ಬಣ್ಣದ ರಂಗೋಲಿಗ ಳನ್ನು ಹಾಕುವುದು ಇಲ್ಲಿನ ಪೊಂಗಲ್ ಹಬ್ಬದ ವಿಶೇಷ.

ಕೇರಳ

ಕೇರಳದ ಶಬರಿಮಲೆಯಲ್ಲಿ ಅಂದು ಮಕರ ಜ್ಯೋತಿ ದರ್ಶನ. ಹೆಚ್ಚಿನ ಆಚರಣೆಗಳೇನೂ ಕಂಡು ಬರುವುದಿಲ್ಲ ಈ ರಾಜ್ಯದಲ್ಲಿ.

ಮಹಾರಾಷ್ಟ್ರ

ಮಹಾರಾಷ್ಟ್ರದ ವಿಶೇಷ ಪೂರಣ್ ಪೋಳಿ (ನಮ್ಮ ಒಬ್ಬಟ್ಟು)ಈ ಹಬ್ಬದಲ್ಲಿ ಮಾಡುತ್ತಾರೆ. ಸಕ್ಕರೆ ಅಚ್ಚಿನಂತಹ ಬಣ್ಣ ಬಣ್ಣದ ಪೇಡಾ ಮತ್ತು ಎಳ್ಳುಂಡೆಗಳ ವಿನಿಮಯ. ಸಂಜೆ ಮಹಿಳೆಯರು ಹಳದಿ ಕುಂಕುಮ ಅಂದರೆ ಅರಿಶಿನ ಕುಂಕುಮಕ್ಕೆ ಒಬ್ಬರನ್ನೊಬ್ಬರು ಕರೆ ಯುತ್ತಾರೆ ಹಾಗೂ ಆ ಸಂದರ್ಭದಲ್ಲಿ ಕಪ್ಪು ಬಟ್ಟೆ ಧರಿಸುವುದು ವಿಶೇಷ. ವಾತಾವರಣ ತಣ್ಣಗಿರುವುದರಿಂದ ಬೆಚ್ಚಗಿ ರಲು ಕಪ್ಪುಬಟ್ಟೆ ಧರಿಸುವುದು ಒಂದು ಅಂಶವಾದರೆ ಮತ್ತೊಂದು ವಿಶೇಷ ಹೀಗಿದೆ. ಸೂರ್ಯದೇವ ನು ಈ ಸಂಕ್ರಾಂತಿಯ ದಿನ ತನ್ನ ಮಗ ಶನಿ ಯನ್ನು ಕ್ಷಮಿಸಿ ಭೇಟಿಯಾಗಲು ಬಂದನಂತೆ. ಹಾಗಾಗಿ ಯೇ ಇಂದು ಹಳೆಯ ವಿರಸ ವೈಷಮ್ಯ ಮರೆತು ಶನಿಗೆ ಪ್ರಿಯವಾದ ಕಪ್ಪು ಬಟ್ಟೆ ಧರಿಸಿ ಅವನಿಗೆ ಇಷ್ಟವಾದ ಎಳ್ಳಿ ನಿಂದ ಮಾಡಿದ ಉಂಡೆಗಳ ವಿನಿಮಯ ಮಾಡುವು ದಂತೆ. ನಮ್ಮಲ್ಲಿನ ಎಳ್ಳು ತಿಂದು ಒಳ್ಳೆ ಮಾತನಾಡು ಎನ್ನುವ ನುಡಿಯ ಅರ್ಥ ದಂತೆ ಮರಾಠಿಯಲ್ಲಿ ತಿಲ್ ಗುಲ್ ಗ್ಯಾ ಆನಿ ಗಡ್ ಗಡ್ ಬೋಲಾ ಎಂಬ ನಾಣ್ನುಡಿ ಇದೆ.

ಒರಿಸ್ಸಾ

ಮಕರ ಸಂಕ್ರಾಂತಿಯಂದು ಹಸಿ ಅಕ್ಕಿ, ಬಾಳೆ, ಹಣ್ಣು, ಕಾಯಿ ತುರಿ, ಬೆಲ್ಲ, ಎಳ್ಳುಗಳಿಂದ ತಯಾ ರಿಸಿದ ಮಕರ ಚೌಲ ಎಂಬ ಖಾದ್ಯ ವನ್ನು ತಯಾರಿಸುತ್ತಾರೆ.ಇಲ್ಲಿನ ವಿಶೇಷವೆಂದ ರೆ ಇಬ್ಬರು ಪುರುಷರ ಅಥವಾ ಸ್ತ್ರೀಯರ ಮಧ್ಯೆ ಸ್ನೇಹದ ದಾರವನ್ನು ಕಟ್ಟಿಕೊಂಡು ಕನಿಷ್ಠ ಒಂದು ವರ್ಷದ ವರೆಗೆ ಪರಸ್ಪರರನ್ನು ಹೆಸರು ಹಿಡಿದು ಕರೆಯದೆ ಪುರುಷರಾದರೆ ಮಹರ್ಷದ್ ಎಂದು ಸ್ತ್ರೀಯ ರಾದರೆ ಮಕರ ಎಂದು ಕರೆದುಕೊಳ್ಳು ತ್ತಾರೆ. ಮತ್ತೆ ಕೆಲವು ಕಡೆ ಪರಸ್ಪರ ಪುರಿಯ ಜಗನ್ನಾಥ ದೇವಾಲಯದ ಪ್ರಸಾದ ತಿನ್ನಿಸಿ ಕೊಂಡು ಸ್ನೇಹ ವಚನ ಪಾಲನೆ ಮಾಡುತ್ತಾರೆ.

ವಿವಿಧ ರಾಜ್ಯದ ಆಚರಣೆಗಳ ಬಗ್ಗೆ ತಿಳಿಯು ವಾಗ ಎಳ್ಳು ಮತ್ತು ಬೆಲ್ಲದ ಸೇವನೆ ಹಾಗೂ ವಿನಿಮಯ ಪ್ರತಿಯೊಂದು ರಾಜ್ಯದ ಆಚರಣೆ ಯಲ್ಲಿನ ಪ್ರಮುಖ ಅಂಗವಾಗಿರುವುದು ಕಂಡು ಬರುತ್ತದೆ. ಋತು ಬದಲಾವಣೆಯ ಈ ಸಮಯ ದಲ್ಲಿ ದೇಹಕ್ಕೆ ಬೇಕಾದ ಉಷ್ಣತೆ ಸ್ನಿಗ್ಧತೆ ಕಾಪಾಡಿ ದೇಹವನ್ನು ಸಮತೋಲನ ಸ್ಥಿತಿಯಲ್ಲಿ ಇರಿಸಲು ಇದು ಅವಶ್ಯ. ನಮ್ಮ ಹಿರಿಯರ ಪ್ರತಿ ಆಚರಣೆ ಯಲ್ಲೂ ಆರೋಗ್ಯ ದ ಬಗ್ಗೆ ಇದ್ದ ಕಾಳಜಿಯನ್ನು ಇದು ಎತ್ತಿ ತೋರಿಸುತ್ತದೆ.ಇನ್ನು ಬಂಧು ಮಿತ್ರರ ಭೇಟಿ ಎಳ್ಳು ವಿನಿಮಯ ಇದೆಲ್ಲವೂ ಸಾಮಾಜಿಕ ಬಾಂಧವ್ಯಗಳ ಜತನಿಕೆಗೆ ಅವಶ್ಯ. ಇಂದಿನ ಈ ಕಾಲಕ್ಕಂತೂ ಇದು ಮತ್ತೂ ಹೆಚ್ಚು ಪ್ರಸ್ತುತವಾ ಗುತ್ತದೆ. ಪರಸ್ಪರ ಸ್ನೇಹ ಸಂಬಂಧ ಒಡನಾಟ ಗಳು ಮಾನಸಿಕ ಸದೃಢತೆಗೆ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಸಹಕಾರಿ. ಹೊಂದಿ ಬಾಳುವ ಹಂಚಿ ತಿನ್ನುವ ಪ್ರವೃತ್ತಿಯನ್ನು ಅದು ಕಲಿಸುತ್ತದೆ. ಈ ಹಬ್ಬದ ನೆಪದಲ್ಲಾದರೂ ಹಿಂದಿನ ವೈಮನಸ್ಯ ಕಳೆದು ಹೊಸ ಸ್ನೇಹ, ಪ್ರೀತಿ ಮೂಡಲೆಂದು ಹಬ್ಬದ ಆಚರಣೆಗಳ ಮೂಲ ಧ್ಯೇಯ. ನಾವು ಅದರ ಹಿಂದಿನ ಸದುದ್ದೇಶವನ್ನು ಮನಗಂಡು ಸರಿಯಾದ ರೀತಿಯಲ್ಲಿ ನಡೆಯಬೇಕು ಅಷ್ಟೇ. ಏಕತಾನತೆಯಿಂದ ಹೊರ ಬಂದು ಮನಸ್ಸು ಪ್ರಫುಲ್ಲಿತ ವಾಗಲು ಇಂತಹ ಸಾಮೂಹಿಕ ಆಚರಣೆಗಳು ಇಂದಿನ ಮೂಲಭೂತ ಅವಶ್ಯ ಕತೆ ಅಂದರೆ ತಪ್ಪಲ್ಲ.

ತನ್ನ ಸುತ್ತ ತಾನೇ ಕಟ್ಟಿಕೊಂಡ ವಲ್ಮೀಕದಿಂದ ಹೊರಬಂದು ಜನರೊಡನೆ ಬೆರೆತರೆ ಮನವೂ ಗಾಳಿಪಟದಂತೆ ಸ್ವಚ್ಛಂದ ಹಾರಾಡಬಹು ದೇನೋ.

✍️ಸುಜಾತಾ ರವೀಶ್,ಮೈಸೂರು