ಕನ್ನಡ ಎನ್ನುವ ಚೆಂದವಾದ ಭಾಷೆ, ಅದರೊ ಡನೆ ಹೊಸೆದುಕೊಂಡಿರುವ ಸಂಸ್ಕೃತಿ, ಸಂಪ್ರ ದಾಯ ಮತ್ತು ಮೌಲ್ಯಗಳು ಕಾಣೆಯಾಗುತ್ತಿವೆ ಯೇ?ಎನ್ನುವ ಆತಂಕ ಕನ್ನಡವನ್ನು ಮನಸಾರೆ ಪ್ರೀತಿಸುವ ಎಲ್ಲರನ್ನೂ ಕಾಡುತ್ತಿರುವ ಕಾಲ ವಿದು. ಮೂಲಭೂತವಾದ ಪ್ರಾಥಮಿಕ ಶಾಲಾ ಶಿಕ್ಷಣ ಕನ್ನಡದಲ್ಲಿ ದೊರಕದೆ ಇದ್ದರೆ, ಕರ್ನಾಟಕದ ಮುಂದಿನ ತಲೆಮಾರುಗಳು ಕನ್ನಡವನ್ನು ಅರೆ- ಬರೆ ಮಾತ್ರ ಆಡುತ್ತ, ಬರೆ ಯಲು, ಓದಲು, ಮನ ದಲ್ಲೆ ಚಿಂತಿಸಲು ಮತ್ತೊಂದು ಭಾಷೆಗೆ ಶರಣು ಹೋಗಬಹುದು ಎನ್ನುವ ಕಹಿಯಾದ ಭವಿಷ್ಯ ವಾಣಿ ಹಲವರಿಗೆ ನುಂಗಲಾರದ ತುತ್ತಾಗಿದೆ.

ಅವಕಾಶ ಮತ್ತು ಉದ್ಯೋಗವನ್ನ ಅರಸಿ ಕನ್ನಡ ನಾಡನ್ನು ತೊರೆದು ವಿದೇಶಗಳಿಗೆ ಬರುವ ಕನ್ನಡ ಪ್ರೀತಿಯ ಕನ್ನಡಿಗರು  ಎದುರಿ ಸುವ  ಒಂದು ಮೂಲಭೂತ ದ್ವಂದ್ವ ಎಂದರೆ, ಕರ್ನಾಟಕದಲ್ಲಿ ನ ಮಕ್ಕಳೇ ಇಂಗ್ಲೀಷಿನ ಹಿಂದೆ ಬಿದ್ದು ಕನ್ನಡ ಕಲಿ ಯದಿರುವಾಗ ನಮ್ಮ ಮಕ್ಕಳಿಗೆ ಕನ್ನಡದ ಅಗತ್ಯ ವಿದೆಯೇ?ಎಂಬ ವಿಚಾರ. ಈ ಬಗ್ಗೆ ಅವಿರತ ಚರ್ಚೆ ಇಂಗ್ಲೆಂಡಿ ನಲ್ಲಿ ನಡೆಯುತ್ತಲೇ ಇರುತ್ತದೆ.

ಲಂಡನ್‌, ಅದರ ಸುತ್ತಮುತ್ತಲ ಹಲವು ವಾಸ ಸ್ಥಳಗಳಲ್ಲಿ ಐ.ಟಿ. ಕ್ಷೇತ್ರದ ಹಲವು ಕನ್ನಡ ಸಂಸಾ ರಗಳು ಒಂದೇ ಜಾಗದಲ್ಲಿ ನೆಲೆಯೂ ರಿವೆ. ಇನ್ನೂ ಕೆಲವು ದೊಡ್ಡ ಮತ್ತು ಚಿಕ್ಕ ಊರುಗಳಲ್ಲಿ ಇಂಜಿನೀಯರಿಂಗ್‌ ವೃತ್ತಿಯ ಹಲವು ಕನ್ನಡ ಸಂಸಾರಗಳು ಒತ್ತಟ್ಟಿಗೆ ನೆಲೆ ನಿಂತಿವೆ. ಆದರೆ, ಇದು ಎಲ್ಲ ಊರುಗಳಿಗೂ ಅನ್ವಯಿಸದಮಾತು. ವೈದ್ಯ ವೃತ್ತಿಯಲ್ಲಿ ತೊಡಗಿದವರು ದೇಶದ ಪ್ರತಿ ನಗರಗಳಲ್ಲಿ ಹಂಚಿಹೋಗಿದ್ದಾರೆ. ಕೆಲವು ಊರು ಗಳಲ್ಲಿ ಇಡೀ ಊರಿಗೆ ಒಂದೇ ಒಂದು ಕನ್ನಡದ ಸಂಸಾರ ಇರಬಹುದು. ಅಥವಾ ಒಂದೆರಡು ಸಂಸಾರಗಳು ಮಾತ್ರ ಇರಬಹುದು.

ಇಂತಹ ಮನೆಯ ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನವೇನಾದರು ನಡೆದರೆ, ಅದು ನೀರಿನ ಹರಿವಿನ ಸಹಜ ಓಟಕ್ಕೆ ವಿರುದ್ಧ ಈಜುವ ಸಾಹಸವಾಗುತ್ತದೆ. ಮನೆ, ಸಮುದಾಯದಲ್ಲಿ ಕನ್ನಡ ಪದಗಳು ಕಿವಿಗೆ ಬಿದ್ದರೂ, ಮಕ್ಕಳ ಬಹುತೇಕ ಬದುಕಿನ ಎಲ್ಲ ಸ್ಥರಗಳಲ್ಲಿ ಬೇರೊಂದು ಭಾಷೆಯ ಪಾತ್ರವೇ  ಪ್ರತಿಶತ ಇರುವಾಗ ಮಕ್ಕಳು ಕೂಡ ಕನ್ನಡವನ್ನು ಕಲಿ ಯಲು ಹಿಮ್ಮೆಟ್ಟಬಹುದು. ಕೆಲವರು ತಾಯಿ- ತಂದೆ ಯರು ಪೂರ್ತಿ ಪ್ರಯತ್ನ ಮಾಡಿ ಮಕ್ಕಳಿಗೆ ಕನ್ನಡದ ಅ.ಆ ಇ.ಈ…ಯಿಂದ ಹಿಡಿದು, ಓದಲು ಮತ್ತು ಬರೆಯಲು ಕಲಿಸುವ ಪ್ರಯತ್ನ  ಮಾಡಿ ಕೊನೆಗೆ ಕನ್ನಡವನ್ನು ಉಪಯೋಗಿ ಸುವ ಅವಕಾಶವೇ ಇಲ್ಲದೆ ಮಕ್ಕಳು ಅದನ್ನು ಮರೆತಿರುವ ಉದಾಹರಣೆ ಗಳೂ ಇವೆ.

ಮೇಲಿನ ಇಂತಹ ಸಂಶಯಗಳಿಗೆ ಆಸ್ಪದವನ್ನೇ ನೀಡದ ಹಲವರು ಕನ್ನಡವನ್ನು ಉಳಿಸಿ ಬೆಳೆ ಸಲು ಪಣತೊಟ್ಟು  ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ.ವಿದೇಶಗಳಲ್ಲಿರುವ ಹಲವು ಕನ್ನಡ ಪ್ರಿಯರು ಮುಂದಿನ ಪೀಳಿಗೆಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ತಲುಪಿ ಸಲು ತಮ್ಮದೇ ಕೈಂಕರ್ಯಗಳಲ್ಲಿ ತೊಡಗಿಸಿ ಕೊಂಡಿ ದ್ದಾರೆ.

ಕೆಲವು ಪೋ಼ಷಕರು ತಮ್ಮ ಅವಿರತ ಶಿಸ್ತು ಮತ್ತು ಪ್ರಯತ್ನದಿಂದ ಮಕ್ಕಳಿಗೆ ಕನ್ನಡ ಭಾಷೆ ಯ ಜೊತೆ ಕನ್ನಡದ ಹಾಡುಗಾರಿಕೆ, ನೃತ್ಯ ಇತ್ಯಾದಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಕೂಡ ಯಶಸ್ವಿಯಾಗಿ ದಾಟಿಸುವಲ್ಲಿ ಸಫಲ ರಾಗಿದ್ದಾರೆ. ಇಂಗ್ಲೆಂಡಿನಲ್ಲಿಯೇ ಹುಟ್ಟಿ ಬೆಳೆ ದರೂ, ಇಂಗ್ಲೀಷಿ ನಲ್ಲಿಯೇ ಬದುಕು ಸಾಗಿಸಿ ದರೂ ಕನ್ನಡದ ದೀವಟಿಗೆಯನ್ನು ಹೊತ್ತ ಇಂತಹ ಮಕ್ಕಳು, ಕರ್ನಾಟಕದಲ್ಲೇ ಹುಟ್ಟಿ ಬೆಳೆದು ಇಂಗ್ಲೀಷಿನವ ರಂತೆ ವರ್ತಿಸುವ ತಾಯ್ನಾಡಿನ ಕೆಲವು ಮಕ್ಕಳ ಕಣ್ತೆರೆಸುವಷ್ಟು ಪ್ರಜ್ವಲವಾಗಿ ಬೆಳಗುತ್ತಾರೆ. ಅವರ ಪೋಷಕ ರು, ಮಕ್ಕಳಿಗೆ ಎರಡೆರಡು ಭಾಷೆಗಳ ನ್ನು ಯಶಸ್ವಿಯಾಗಿ ಕಲಿಸಬಹುದು ಎನ್ನುವ ವಿಚಾರದ ನಿಜರೂಪದ ಉದಾಹರಣೆ ಗಳಾಗು ತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಕನ್ನಡ ಸಮುದಾಯದ ಇತರೆ ಮಕ್ಕಳಿ ಗೂ ಕನ್ನಡದ ಕಂಪನ್ನು ಹರಡುವ ಕೆಲಸದಲ್ಲಿ ಇಂತವರು ನಿರತರಾಗಿದ್ದಾರೆ. ಅಂತಹ ಒಂದು ಉದಾಹರಣೆಯೆಂದರೆ ಸ್ಮಿತ ಮತ್ತು ಗೋಪಾಲ್ ದಂಪತಿಗಳು. ಅನನ್ಯ ಮತ್ತು ಸನ್ನುತಿ ಎನ್ನುವ ಅವರ ಮಕ್ಕಳು.

ಮೂರು-ನಾಲ್ಕು ತಿಂಗಳ ಅನನ್ಯ ಎನ್ನುವ ಮಗುವಿನೊಂದಿಗೆ ಇಂಗ್ಲೆಂಡಿಗೆ ಬಂದ ಈ ದಂಪತಿಗಳು ಲಂಡನ್ನಿನ ಸಮೀಪದ ‘ವೂಡ್ಲಿʼ ಎನ್ನುವ ಜಾಗದಲ್ಲಿ ಪ್ರಸ್ತುತ ವಾಸವಿದ್ದಾರೆ.

ಕನ್ನಡ ಮತ್ತು ಕನ್ನಡ ಸಂಗೀತದ ಅಭಿಮಾನಿ ಯಾದ ಸ್ಮಿತ ಮಗಳು ಅನನ್ಯಳಿಗೆ ಆರು ವರ್ಷ ಗಳಿದ್ದಾಗ ಇಂಗ್ಲೆಂಡಿನಲ್ಲೇ ಕರ್ನಾಟಿಕ  ಶೈಲಿಯ ಶಾಸ್ತ್ರೀಯ  ಸಂಗೀತ ಅಭ್ಯಾಸ ಶುರುಮಾಡಿಸಿ ದರು.

ಮೊದಲ ಮೂರು ವರ್ಷ ಇಲ್ಲಿಯೇ ನೆಲೆಸಿದ್ದ ಶ್ರೀಮತಿ ಅರವಿಂದ ಎನ್ನುವ ಗುರುಗಳಿಂದ, ನಂತರದ ಎರಡು ವರ್ಷ ಶ್ರೀಮತಿ ಸುಮನ ಧ್ರುವ ಎನ್ನುವ ಗುರುಗಳಿಂದ ಮಾರ್ಗದರ್ಶನ  ಪಡೆದ ಅನನ್ಯ ‌ ಇದೀಗ ಪ್ರಯತ್ನ ನಿಲ್ಲಿಸದೆ ಬೆಂಗಳೂರಿನ ಶ್ರೀಮತಿ ಬೃಂದ ಎನ್‌ ರಾವ್ ಎನ್ನುವವರ ಮೂಲಕ  ಆನ್‌ ಲೈನ್‌ ನಲ್ಲಿಯೇ ಸಂಗೀತ ಕಲಿಕೆ ಮುಂದುವರೆಸಿದ್ದಾಳೆ. ಇಲ್ಲಿ ನಡೆವ ಹಲವು ಕನ್ನಡ ಕಾರ್ಯಕ್ರಮಗಳಲ್ಲಿ ಮುಂದಿನ ತಲೆಮಾರಿನ ಕನ್ನಡತಿಯಾಗಿ ಕನ್ನಡ ಗೀತೆಳನ್ನು ಹಾಡಿದ್ದಾಳೆ.

ವೇದಿಕೆಯ ಮೇಲೆ ಹೋಗಿ  ‘ಕನ್ನಡದಲ್ಲಿʼ ಸ್ಪಷ್ಟವಾಗಿ ಹಾಡಬಲ್ಲ ಎದೆಗಾರಿಕೆ ವಿದೇಶಗ ಳಲ್ಲಿ ಬೆಳೆಯುವ ಎಲ್ಲ ಮಕ್ಕಳಿಗೂ ಇರುವು ದಿಲ್ಲ. ಅವಕಾಶಗಳು ಮತ್ತು ಪ್ರೇರಣೆ ಎರಡೂ ಕಡಿ ಮೆಯೇ. ಉತ್ತೇಜಕ ಸ್ಪರ್ಧೆಗಳಂತೂ ಇನ್ನೂ ಕಡಿಮೆ. ಅವಕಾಶಗಳಿಗಾಗಿ ದೇಶದ ಉದ್ದಗಲ ತಿರುಗುತ್ತ ಹಲವು ಕನ್ನಡ ಸಂಘಗಳ ಕಾರ್ಯ ಕ್ರಮಗಳನ್ನೇ ಅವಲಂಬಿಸಿ ನಡೆಯ ಬೇಕಾಗು ತ್ತದೆ.  ಅಂತಹದ್ದೇ ಆಸಕ್ತಿಯ ಇತರೆ ಮಕ್ಕಳು ಹೆಚ್ಚು ಸಿಗದ ಕಾರಣ ಇಲ್ಲಿನ ಮಕ್ಕಳಿಗೆ ತಾವು ಒಂಟಿ ಎನ್ನಿಸಿ ಹಿಮ್ಮೆಟ್ಟಿದರೂ ಅಚ್ಚರಿಯಿಲ್ಲ.

ಇಂತಹ ಯಾವ ಕಾರಣಗಳಿಂದಲೂ ಹಿಂಜರಿ ಯದ ಅನನ್ಯ ರೆಡಿಂಗ್‌ ಕನ್ನಡ ಮಿತ್ರ ಸಂಘ ದಲ್ಲಿ ತಾನೊಬ್ಬಳೇ ಹಾಡಿರುವುದಲ್ಲದೆ ರತ್ನ ಮಾಲಾ ಪ್ರಕಾಶ್‌, ವಿದ್ಯಾಭೂಷಣ, ಸುಪ್ರಿಯಾ ರಘುನಂದನ್‌, ಎಸ್.ಎಲ್‌.‌ ಭೈರಪ್ಪ, ಶತಾವ ಧಾನಿ ಗಣೇಶ್‌ ಇತ್ಯಾದಿ ಗಣ್ಯರು ಇಂಗ್ಲೆಂಡಿನ ಸಭೆ ಸಮಾರಂಭಗಳಿಗೆ ಬಂದಾಗ ಅವರೆದುರು ಹಾಡಿ ದ್ದಾಳೆ.

ಸಂಗೀತದ ಐದು ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್‌ ಪಡೆದಿರುವ ಆಕೆಯ ಹಲವು ಗಾಯನಕ್ಕೆ ನೂರಕ್ಕೆ ನೂರು ಅಂಕ ದೊರೆತಿವೆ. ಅನಿವಾಸಿ ಕನ್ನಡದ ಮಕ್ಕಳಿಗೆಂದೇ ನಾವಿಕ ತಂಡದವರು ಏರ್ಪಡಿಸುವ ವಿಶ್ವಮಟ್ಟದ ಗಾಯನ ಸ್ಪರ್ಧೆ ಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಒಂದನ್ನು ತನ್ನದಾಗಿಸಿಕೊಂಡಿದ್ದಾಳೆ.ಸಂಗೀತದ ಅಭಿಮಾ ನಿಗಳಾದ ಈ ದಂಪತಿಗಳು  ಯುನೈಟೆಡ್ ಕಿಂಗ್ಡ್ಂ ನಲ್ಲಿ ಎಲ್ಲೇ ಕಾರ್ಯಕ್ರಮಗಳು ನಡೆದರೂ ಮಗಳು ಅನನ್ಯಳ ಜೊತೆ ಹೋಗಿ ಬರುತ್ತಾರೆ.

ಶಾಲೆಯ ಇತರೆ ಚಟುವಟಿಕೆಗಳು ಮತ್ತು ವ್ಯಾಸಂಗದಲ್ಲೂ ಮುಂದಿರುವ ಅನನ್ಯ ಮುಂದೆ ವೈದ್ಯೆಯಾಗುವ ಕನಸು ಹೊತ್ತಿದ್ದಾಳೆ.

ಅನನ್ಯಳ ತಂಗಿ ಸನ್ನುತ ಕೂಡ ಆರು ವರ್ಷಕ್ಕೆ ಕನ್ನಡವನ್ನು ಓದಲು, ಬರೆಯಲು ಮತ್ತು ಮಾತಾ ಡಲು ಕಲಿತವಳು.ಅದಕ್ಕಾಗಿ ಸ್ಮಿತ ಶ್ರಮಿಸಿದ್ದಾರೆ. ಶಿಸ್ತಿನ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ.

ಜೊತೆಗೆ ಸ್ಮಿತ ತಮ್ಮಂತೆಯೇ ಕನ್ನಡವನ್ನು ಪ್ರೀತಿ ಸುವ ರೆಡಿಂಗ್‌ ಕನ್ನಡ ಸ್ವಯಂ ಸೇವಕ ಮಿತ್ರರ ಜೊತೆ ಸೇರಿ  ತಮ್ಮೂರಿನ ಮತ್ತು ಸುತ್ತ ಮುತ್ತ ಲಿನ ಕನ್ನಡ ಮಕ್ಕಳಿಗಾಗಿ ‘ಕಥಾ ಚಾವಡಿ‘ ಎನ್ನುವ ತರಗತಿ/ಸೆಷನ್‌ ಗಳನ್ನು ನಿಯಮಿತ ವಾಗಿ ನಡೆಸುತ್ತಿದ್ದಾರೆ. ಎರಡನೇ ತಲೆಮಾರಿನ ಇಲ್ಲಿನ ಕನ್ನಡದ ಮಕ್ಕಳಿಗೆ ಮಾತೃಭಾಷೆಯಲ್ಲಿ ಆಸಕ್ತಿ ಮೂಡಿಸಿ,  ಭಾಷೆಯನ್ನು ಉಳಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ ಮಕ್ಕಳಿಗೆ ಕನ್ನಡ ಕಲಿಸಲು ಬಳಸಿದ ವಿಧಾನ ಮತ್ತು ಪರಿಕರಗಳನ್ನು ಬಳಸಿ ಇತರೆ ಮಕ್ಕಳಿಗೂ ಕನ್ನಡ ಕಲಿಸುವ ಪ್ರಯತ್ನ ನಮ್ಮದು ಎನ್ನುತ್ತಾರೆ ಸ್ಮಿತ. ಮೊದಲಿಗೆ ಮಾತು,ನಂತರ ಬರಹ ಮತ್ತು ಓದು ಎನ್ನುವ ಸೂತ್ರ ಬಳಸಿ ಕನ್ನಡದ ಸರಪಳಿಯನ್ನು ಜೀವಂತ ಇಡುವ ಪ್ರಯತ್ನ ನಡೆಸಿದ್ದಾರೆ. ಪ್ರತಿ ಭಾನುವಾರದಂದು ನಡೆಸುವ ಈ ತರಗತಿಗಳು ಈಗ ಮೂರೂವರೆ ವರ್ಷಗಳಿಂದ ಅವಿರತ ನಡೆಯುತ್ತಿವೆ. ಆಸಕ್ತಿ ಯ ವಿಚಾರ ಎಂದರೆ ಇತ್ತೀಚೆಗೆ ಇಂಗ್ಲೆಂಡಿನಲ್ಲಿ ಶುರುವಾದ ‘ಕನ್ನಡ ಕಲಿʼ ಎನ್ನುವ ಕಾರ್ಯಕ್ರ ಮಕ್ಕಿಂತ ಮುನ್ನವೇ ಉದಿಸಿದ ವಿಶಿಷ್ಟ ಪ್ರಯತ್ನ ವಿದು. ಪದಗಳನ್ನು ಪೇಪರಿನ ಮೇಲೆ ಮಾತ್ರ ಬರೆಸಿ ಕಲಿಸುವಂತ ಪ್ರಯತ್ನ ಇದಲ್ಲ. ಉದಾಹ ರಣೆಗೆ ಗೋಧಿ ಹಿಟ್ಟನ್ನೇ ಜೊತೆಗೊಯ್ದು ಚಿಟಿಕೆ ಉಪ್ಪು, ಹನಿ ಎಣ್ಣೆ ಎಂದು ವಿವರಿಸುತ್ತ ಮನೆ ಯಲ್ಲೇ ಸಿಗದ ಅವಕಾಶಗಳನ್ನು ಮಕ್ಕಳಿಗೆ ಒದಗಿಸಿ, ಅವರಿಗೇ ಹಿಟ್ಟನ್ನು ನಾದಿ ಕಲೆಸಲು ಬಿಟ್ಟು ಕನ್ನಡದ ಶಬ್ದಗಳನ್ನು ಎದೆಗಿಳಿಸುವಂತ ಪ್ರಯೋಗ.ನಿಜವಾದ ತರಕಾರಿ,ಹಣ್ಣುಗಳನ್ನೇ ಬಳಸಿ ಪ್ರಾಯೋಗಿಕ ಕನ್ನಡವನ್ನು ಮಾತಾಡಲು ಸುಲಭವಾಗಿ ಕಲಿಸುವ ವಿಧಾನ. ಜೊತೆಗೆ ಹಾಡು, ಹಸೆ ಇತ್ಯಾದಿ ಗಳನ್ನೂ ಹೇಳಿಕೊಡುವ ಪರ್ಯಾ ಯ ಕಲಿಕೆಯಿದು. ಹಲವಾರು ಕನ್ನಡ ಸೇನಾನಿ ಗಳು ಈ ತರಗತಿಗಳಲ್ಲಿ ಗುರುಗಳ ಕೆಲಸ ನಿರ್ವಹಿಸಿ ದ್ದಾರೆ. ಆದರೆ, ಅಕ್ಷರಗಳ  ಕಲಿಕೆಯ ವಿಚಾರ ಬಂದಾಗ ಆ ಜವಾಬ್ದಾರಿ ಯನ್ನು ಶಾಲೆ ಶುರು ವಾದಾಗಿನಿಂದ ಪ್ರತಿ ಭಾನುವಾರ ಸ್ಮಿತ ತಾವೊಬ್ಬರೇ ನಿಭಾಯಿಸುತ್ತ ಬಂದಿದ್ದಾರೆ.

ಕನ್ನಡದ ಅವಕಾಶಗಳಿಗೆ ೨೦೦೫ ರಿಂದ ಊರೂರು ಸುತ್ತಿದ ನಂತರ ಇಲ್ಲಿನ ದೊಡ್ಡ ದೊಡ್ಡ ಕನ್ನಡ ಸಂಘಗಳಲ್ಲಿ ಅತಿಥಿಗಳಿಗೆ ದೊರೆವಂತ ಅವಕಾಶಗಳು ಸ್ಥಳೀಯ ಮಕ್ಕಳಿಗೇ ಇಲ್ಲದ್ದನ್ನು ಗಮನಿಸಿದ ಸ್ಮಿತ ಮತ್ತು ಇನ್ನಿತರ ನಾಲ್ವರು ಗೆಳತಿಯರು ೨೦೧೬ ರಿಂದ ‘ರೆಡಿಂಗ್ ಕನ್ನಡ ಮಿತ್ರರುʼ ಎನ್ನುವ ಪುಟ್ಟ ಸಂಘವನ್ನೇ ಶುರುಮಾಡಿ ತಮ್ಮೂರಿನ ಮಕ್ಕಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿ ದ್ದಾರೆ. ಹೆಂಗೆಳೆಯರೇ ಕಟ್ಟಿದ ಸಂಘವಿದು ಎನ್ನುವ ಹೆಮ್ಮೆಯೂ ಇವರಿಗಿದೆ. ‘ಆಟ-ಊಟ-ಕೂಟʼ ಎನ್ನುವ ವಿನೋದ ಮಯ ಉಗಾದಿ ಆಚರಣೆ, ಕಲೆ- ಸಂಗೀತ-ವಿಚಾರ ವಿನಿಮಯ, ಜನಪದ ಸಂಜೆ ಇನ್ನಿತರ ವೈಚಾರಿಕ ಚರ್ಚೆಗಳನ್ನು ಸಮಾವೇಶ ಗಳನ್ನು ಪ್ರತಿ ವರ್ಷ ನಡೆಸುತ್ತ ಬಂದಿದ್ದಾರೆ. ಇಂಗ್ಲೆಂಡಿನ ಹಲವು ಕಾರ್ಯಕ್ರಮಗಳಲ್ಲಿ ಸ್ಮಿತ ಕನ್ನಡದ ನಿರೂಪಕಿಯಾಗಿ ಶಿಸ್ತಾಗಿ ಕೆಲಸ ನಿರ್ವಹಿಸಿ ದ್ದಾರೆ.ಮನೆಯಲ್ಲಿ ಕನ್ನಡದ ಹಬ್ಬ ಹರಿದಿನ ಗಳನ್ನು, ತಾಯ್ನಾಡಿನ ಸಂಭ್ರಮವನ್ನು ವಿಧಿವತ್ತಾಗಿ ಆಚರಿಸುತ್ತ ಇತರರಿಗೂ ಉಣ ಬಡಿಸುತ್ತಿದ್ದಾರೆ.

ತಂದೆ ಗೋಪಾಲ್‌ ಸೈಕ್ಲಿಂಗ್‌ ವಿಚಾರದ ಪರಮ ಅಭಿಮಾನಿ. ಇದೀಗ ಕಡಿಮೆ ಮಾಡಿದ್ದರೂ ವ್ಯಾಯಾಮ ಮತ್ತು ಸೈಕ್ಲಿಂಗ್‌ ಅವರ ಆಪ್ತ ಚಟುವಟಿಕೆಗಳಾಗಿ ಮುಂದುವರೆದಿವೆ. ಹೆಂಡತಿ ಮತ್ತು ಮಕ್ಕಳ ಪ್ರಯತ್ನಗಳಿಗೆ ಅವರು ಬೆಂಬಲ ನೀಡುತ್ತ ಬಂದಿದ್ದಾರೆ.  

ತಾವು ಮೈಗೂಡಿಸಿಕೊಂಡ ಶಿಸ್ತು, ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಅಭಿಮಾನದಿಂದ ಈ ಕುಟುಂಬ ಕನ್ನಡದ ಕಂಪನ್ನು ಯು.ಕೆ.ಯ ಒಂದು ಭಾಗದಲ್ಲಿ ಬೆಚ್ಚಗೆ ಹರಡುತ್ತಿದೆ. ಇಲ್ಲಿ ಇಂತಹ ಇನ್ನೂ ಹಲವು ಹತ್ತು ಕುಟುಂಬ ಮತ್ತು ವ್ಯಕ್ತಿಗಳಿದ್ದಾರೆ. ಇವರೆಲ್ಲರ ಕಾರಣವೇ ಇಂದು ಆಂಗ್ಲರ ನೆಲದಲ್ಲಿ ಹೊಸ ತಲೆಮಾರಿನ ಕನ್ನಡ ದನಿಗಳನ್ನು ನಾವು ಕೇಳಬಲ್ಲೆವಾಗಿ ದ್ದೇವೆ.

✍️ಡಾ.ಪ್ರೇಮಲತ ಬಿ.
ದಂತ ವೈದ್ಯರು,
ಲಂಡನ್,ಇಂಗ್ಲೆಂಡ್