ನೀನೊಂದು ಪುಸ್ತಕ
ದಿನವೂ ಕಣ್ಣಾಡಿಸುತ್ತೇನೆ

ಅದರೊಳಗಿನ ಅಕ್ಕರಗಳನು
ಪದಪದಗಳಲೂ ಇರುವ ಹದವನು
ಹೀರುತ್ತೇನೆ ಮಧುವಿನಂತೆ
ಆಗ ಆ ಪುಸ್ತಕ
ಲಹರಿ ತುಂಬಿ ಕೊಡುವ
ಮಧು ಬಟ್ಟಲಾಗುತ್ತದೆ ನನಗೆ

ಆ ಪುಸ್ತಕದ
ಅಂತರಂಗದ ಹೂರಣವು
ಒಡಲೊಳಗೆ ಒಂದಾಗಿ
ಪಚನವಾಗಿ ರಕುತವಾಗಿ
ನರನಾಡಿಗಳಲ್ಲಿ ಹರಿದಾಡುತ್ತದೆ
ನನ್ನಲ್ಲಿ
ನೆತ್ತರು ಹೊತ್ತು ತರುವ
ಉಸಿರ ವಾಹಕವಾಗುತ್ತದೆ ನನಗೆ

ಪುಸ್ತಕವನು
ಅಂಗೈಯಲ್ಲಿ ಹಿಡಿದು
ಎದೆಗೆ ಒರಗಿಸಿಕೊಂಡು
ಚಿಂತನ ಮಂಥನಗಳಿಗೆ ಮನ ತೆರೆದುಕೊಂಡು
ಭಾವ ಹನಿ ಸಿಂಚನವಾಗಿ
ಆರ್ದ್ರವಾಗಿ ಆಪ್ತವಾಗಿ
ಮೈ ಮತಿ ಮುಟ್ಟಿ ಮುಟ್ಟಿ
ಗುಟ್ಟ ಹೇಳುವ ದನಿಯಾಗುತ್ತದೆ ನನಗೆ

ಹೊತ್ತು ಹೊತ್ತಿಗೆ
ಈ ಹೊತ್ತಿಗೆಯಲ್ಲಿನ
ಆಕೃತಿಯೊಂದು ಎದ್ದು ಬಂದು
ಕೈಯಲ್ಲೊಂದು ಹಿಲಾಲು ಹಿಡಿದು
ತಮವ ಕಳೆದು ತಾಮಸ ಅಳಿದು
ಕರುಣೆಯ ಬೆಳಕಾಗುತ್ತದೆ ನನಗೆ


✍️ಶ್ರೀಮತಿ.ಅನಸೂಯ ಜಹಗೀರದಾರ
ಶಿಕ್ಷಕಿ,ಕೊಪ್ಪಳ