ನಾಲ್ಕಗುಳು ಅನ್ನ ಮೂರಗುಳು ಆಸೆಯನಲ್ಲದೆ ಬದುಕು ಏನನ್ನು ಕೇಳಿತು/
ಗುಟುಕು ಪ್ರೀತಿಯನಲ್ಲದೆ ಬದುಕು ಏನನ್ನು ಕೇಳಿತು.//

ಇತಿಹಾಸ ಪುರಾಣಗಳಾಚೆಯಿಂದಲೂ ಕೇಳಿಸುತ್ತಿದೆ ನೋವ ಆಕ್ರಂದನವೊಂದು/
ಸಾಂತ್ವನದ ಬೆರಳ ಹಿತಸ್ಪರ್ಶವನಲ್ಲದೆ ಬದುಕು ಏನನ್ನು ಕೇಳಿತು.//

ನೆಲವೆಂಬುದು ಹುಲ್ಲುಗರಿಕೆ ಹೂವು-ಬೀಜ ಮಳೆ-ಮೊಳಕೆಗಳದೇ ಬೆರಗು/
ಮೊಳೆವ ಚಿಗುರುವ ನಿರಂತರ ಹಂಬಲವನಲ್ಲದೆ ಬದುಕು ಏನನ್ನು ಕೇಳಿತು//

ದೇವರ ಸಾವಿರ ನಾಮಗಳು ಮೊಳಗುತ್ತಿದ್ದರೂ ಲೋಕದಲ್ಲಿ/
ಜತೆಯಾಗಿ ಸಾಗುವ ಸ್ನೇಹ-ಒಲವನಲ್ಲದೆ ಬದುಕು ಏನನ್ನು ಕೇಳಿತು//

ಮುಚ್ಚಿದ ರೆಪ್ಪೆಗಳು ಬಿಚ್ಚುವ ಮುನ್ನ ಮಿಸುಕಾಡಿದರೇನು ಕೋಟಿ ಹತಿಯಾರಗಳು/
ಕೊಲುವ ಹತಿಯಾರಗಳ ಗೆಲುವ ಜೀವಗಳನಲ್ಲದೆ ಬದುಕು ಏನನ್ನು ಕೇಳಿತು//

ಪ್ರತಿ ಬೆಳಗಿಗು ಬೊಗಸೆ ಚಾಚಿದರೆ ನಿರಾಸೆಯ ಮರಳುಗಾಡೊಂದು ತೇಲುವುದು/
ಮರಳುಗಾಡಿನಲೂ ನಿನ್ನ ಆನಂದವನಲ್ಲದೆ ಬದುಕು ಏನನ್ನು ಕೇಳಿತು!//

✍️ ಗಣೇಶ ಹೊಸ್ಮನೆ 
ಜಾನ್ಮನೆ, ಶಿರಸಿ