ಹೊಸದೆಂದರೆ ಕಣ್ಣು
ಸೆಳೆಯುವ ಆಕರ್ಷಣೆಯ
ತನ್ನೊಳಗಿಟ್ಟು ಬಾ ಎನ್ನುವ
ಕುತೂಹಲದ ಮುನ್ನೋಟ
ಕಣ್ಣ ನೋಟದ ಆಚೆಗೇನೋ
ಹುಡುಕುವ ತವಕದ ಭಾವ॥೧॥
ಹಳೆ ಎಳೆಯು ಹೊಸ
ಕಳೆಯ ಸೊಬಗು ಬೀರಿ
ತಳ ತಳಿಸುವ ಪಳಪಳಿಸುವ
ನಳ ನಳಿಸುವ ನವಪಲ್ಲವ
ಬಾಳ ಪಲ್ಲವಿಯ ಪದ
ಪಾದಗಳ ನಡೆ ನುಡಿಗಾನ॥೨॥
ಇದ್ದುದ್ದು ಇದ್ದಾಂಗೆ ಇದ್ದು
ಮತ್ತೇನೋ ಎದ್ದು ಸದ್ದು
ಮಾಡಿ ಸುದ್ಧಿಯಾಗುವ ಪುಳಕ
ಹೊಸ ನಡಿಗಿಗೆ
ಹಿಂದೆಗಡೆ ನೋಡಿ ಮುಂದುಗಡೆ
ಹೊಸ ಅಡಿ ಇಡಬೇಕಿದೆ॥೩॥
ಇಟ್ಟ ಅಡಿಗೆ ಬೆಟ್ಟ
ಕಾಲ ಕೆಳಗಾಗುವ ದಿಟ್ಟಗತಿ
ಗತಕಾಲ ಮರೆಸಿ ಹೊಸಗಾಲ
ಮೆರೆಯಿಸಿ,ಬಾಳ ಹೊನ್ನಾಗುವ
ಹೊಸ ಜಾಡು ಹಿಡಿಯಬೇಕಿದೆ॥೪॥
ಕಾಲ ಹೊಸದಾದರೇನಂತೆ
ಭಾವ ಹೊಸದಾಗದನ್ನಕ್ಕ
ಹೊಸಭಾವ ಇಲ್ಲದ ಕಾಲಕ್ಕೆ
ಕಾಲುಭಾಗದ ಕಿಮತ್ತು ಇಲ್ಲ
ಅಲ್ಲೇನಿದೆ ಹೊಸ ಭಾವಗಳ
ಹೊಸ ತಾಳದ ಸರಿಗಮಪ ಬಿಟ್ಟು ॥೫॥
ಹೊಸಕಾಲದ ಶುಭಾಶಯಗಳು-2022
✍🏻ಪರಸಪ್ಪ ತಳವಾರ
ಕನ್ನಡ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ಲೋಕಾಪೂರ