ಈ ಕನಸುಗಳೇ ಹೀಗೆ
ಕಾಡುತಿವೆ ಬೆನ್ನುಬಿಡದೇ
ಅತೃಪ್ತ ಭಾವನೆಗಳು
ಸಂತೃಪ್ತ ಮನಸುಗಳು
ಆಗಾಗ ಇಣುಕು ನೋಡುತ್ತವೆ

ನಾಳೆಗಳ ಚಿಂತನೆ
ನೆನ್ನೆಯ ಘಟನೆಗಳಲಿ
ಒಮ್ಮೆ ಭರವಸೆ ಕಡೆ
ಮತ್ತೊಮ್ಮೆ ದಿಗ್ಭ್ರಮೆ
ನಿದ್ದೆಯ ಜಾಡಲಿ

ಸದ್ದು ಮಾಡುತಿವೆ
ಒಳದನಿಯ ಸ್ಮರಿಸಿ
ಕದಡಿದ ಬಾನಂತೆ
ಸಿಡಿದ ಸ್ಫೋಟಕೂ
ಮಿಡಿದ ಹೃದಯ ನದಿಯಲಿ

ಸುರಿವ ಜಲಧಾರೆಯಾಗಿ
ಸರಿದ ಸಂಬಂಧಕೂ ಮಂಕು
ಗುರಿಯಡೆ ಗರಿಗೆದರಿದ
ಸ್ಮೃತಿಪಟಲಕೂ ಕನ್ನಡಿ ಹಿಡಿದು
ಆಗಾಗ ಝಳಪಿಸುತಿದೆ

ನರನಾಡಿನ ಆವೇಗದಿ
ಮಾರ್ಪಾಡಿನ ಅಂಚಿಗೂ
ವೇದನೆಯ ತೋರ್ಪಡಿಸುವಿಕೆ
ಸವಿಯ ಸ್ವಪ್ನ ಮಗದೊಮ್ಮೆ
ಭಂಗ ಗೊಳಿಸುವುದು ತಿಳಿಕೊಳವ.

✍️ರೇಷ್ಮಾ ಕಂದಕೂರ
ಶಿಕ್ಷಕಿ,ಸಿಂಧನೂರ