ಅಟಲ್ ಬಿಹಾರಿ ವಾಜಪೇಯಿಯವರ ಎರಡು ಅನುಭೂತಿಗಳು ಕವನ. ಕಡು ನಿರಾಶೆಯಲ್ಲಿ ಮುಳುಗಿ ದುಃಖಿಸುವ ಮನಸ್ಥಿತಿಯನ್ನು ಮೊದಲ ಅನುಭೂತಿ ಕವನದಲ್ಲಿ ವರ್ಣಿಸುವ ಕವಿ ಮುಂದೆ ಆ ಶೋಕ ಕೂಪದಿಂದ ಮೇಲೆದ್ದು ಆಶಾವಾದದತ್ತ ಮುಖ ಮಾಡುತ್ತಾನೆ. ಅದರ ವಿವರಣೆ ಎರಡನೆಯ ಅನುಭೂತಿಯಲ್ಲಿ.ಒಂದೇ ನಾಣ್ಯದ ಎರಡು ಮುಖಗಳಾದ ಆಶಾವಾದ ಮತ್ತು ನಿರಾಶಾವಾದವನ್ನು ಬಿಂಬಿಸಿರುವ ಈ ಕವನ ಮನಕ್ಕೆ ತುಂಬಾ ಹತ್ತಿರವೆನಿಸಿತು. ಅವರ ಜನ್ಮದಿನದ ನಿಮಿತ್ತ ಈ ಕವನವನ್ನು ಕನ್ನಡೀಕರಿ ಸುವ ಒಂದು ಸಣ್ಣ ಪ್ರಯತ್ನ.


ಎರಡು ಅನುಭೂತಿಗಳು
ಪ್ರಥಮ ಅನುಭೂತಿ
ಮುಖವಾಡ ಥರಿಸಿದ ಮುಖಗಳುˌ ಮಾಯದ ಗಾಯಗಳು
ಇಂದ್ರಜಾಲದ ಮಬ್ಬು ಹರಿದಿದೆˌ ಇಂದೇಕೋ ಧೈರ್ಯವಾಗುತ್ತಿಲ್ಲ
ನನಗೆ ಹಾಡಲಾಗುತ್ತಿಲ್ಲ.
ಬಿದ್ದಾಯ್ತು ಕೆಟ್ಟ ದೃಷ್ಟಿ.ಪುಡಿಯಾಗಿದೆ ಪಟ್ಟಣ ಗಾಜಿನ ಸೃಷ್ಟಿ
ನನ್ನದೇ ಊರಿನ ಸಂತೆಯಲ್ಲಿ ಒಬ್ಬನೂ ಗೆಳೆಯನಿಲ್ಲ
ನನಗೆ ಹಾಡಲಾಗುತ್ತಿಲ್ಲ.
ಬೆನ್ನಿಗೆ ಬಿದ್ದ ಚೂರಿಯೇಟುˌ ದಾರಿ ಕಾಣದೆ ಕಗ್ಗಂಟು
ಬಿಡುಗಡೆಯಾಗುವ ಕ್ಷಣದಲ್ಲಿ ಮತ್ತೆ ಬಂಧಿಯಾಗುತಿಹೆನಲ್ಲ
ನನಗೆ ಹಾಡಲಾಗುತ್ತಿಲ್ಲ.
ದ್ವಿತೀಯ ಅನುಭೂತಿ
ತುಂಡಾಗಿ ಹೋದ ತಂತಿಯಿಂದ ಹೊರಟಿದೆ ಸುಸ್ವರ
ಕಲ್ಲು ಬಂಡೆಯ ನಡುವಲ್ಲೂ ಅಂಕುರಿಸಿದೆ ನವಪಲ್ಲವ
ಹಸಿರೆಲೆಯ ಸುಳಿವಿರದಿದ್ದರೂ ಹಾಡುತಿದೆ ಕೋಕಿಲ
ಮೂಡಣದಿ ಕೆಂಪು ರಂಗ ಅರುಣನು ತಂದಿಹನು
ನಾ ಹೊಸ ಹಾಡೊಂದನು ಹಾಡುವೆನು.
ಯಾರಿಗೂ ಕೇಳುವುದಿಲ್ಲ ಇನ್ನು ˌಮುರಿದ ಸ್ವಪ್ನಗಳ ಬಿಕ್ಕಳಿಕೆ
ಅಂತರಾಳವ ಸೀಳುತಿದ್ದ ವ್ಯಥೆ ಮಾಯವಾಯ್ತು ಕ್ಷಣಾರ್ಧಕೆ
ಸೋಲನೆಂದೂ ಒಪ್ಪಲಾರೆ ˌಧೃಡನಿಶ್ಚಯ ತಪ್ಪಲಾರೆ
ಕಾಲನ ಹಣೆಯ ಮೇಲೆ ಹೊಸ ಬರಹ ಬರೆಯುವೆನು
ನಾ ಹೊಸ ಹಾಡೊಂದನು ಹಾಡುವೆನು
✍️ಹಿಂದಿ ರಚನೆ:ಶ್ರೀಅಟಲ್ ಬಿಹಾರಿ ವಾಜಪೇಯಿ
ಕನ್ನಡಕ್ಕೆ:ಸುಜಾತಾ ರವೀಶ
ಮೈಸೂರು