ನಾನೊಂದು ಮಂಜುಗಡ್ಡೆಯಂತೆ
ತಂಪಾಗುವೆನು,ಗಟ್ಟಿಯಾಗುವೆನು
ಆದರೂ
ಕರಗಿ ನೀರಾಗುವೆನು ಒಂದು ದಿನ

ನಾನೊಂದು ದೀಪದಂತೆ
ಬೆಳಗುವೆನು,ಬೆಳಕ ನೀಡುವೆನು
ಆದರೂ
ಉರಿದು ಉರಿದು ಆರುವೆನು ಒಂದು ದಿನ

ನಾನೊಂದು ಮೋಡದಂತೆ
ಎತ್ತರೆತ್ತರಕೆ ಹಾರಾಡುವೆನು
ಆದರೂ
ಮಳೆಯಾಗಿ ಧರೆಗಿಳಿವೆನು ಒಂದು ದಿನ

ನಾನೊಂದು ಕರ್ಪೂರದಂತೆ
ಧಗಧಗನೇ ಉರಿಯುವೆನು
ಆದರೂ
ಸುಟ್ಟು ಮರೆಯಾಗುವೆನು ಒಂದು ದಿನ

ನಾನೊಂದು ನದಿಯಂತೆ
ಸಾಗುವೆನು ಬಂದುದೆಲ್ಲವನ್ನೂ ನುಂಗಿ
ಮುಂದೆ ಮುಂದೆ ನುಗ್ಗುವೆನು
ಆದರೂ
ಸಾಗರವ ಸೇರಿ ಶಾಂತವಾಗುವೆನು ಒಂದು ದಿನ

ನಾನೊಂದು ಬಂಡೆಗಲ್ಲಿನಂತೆ
ಗಟ್ಟಿಯಾಗಿರುವೆನು,ಅಲುಗಾಡದಿರುವೆನು
ಆದರೂ
ಪುಡಿಯಾಗಿ ಮಣ್ಣಲಿ ಮಣ್ಣಾಗುವೆನು ಒಂದು ದಿನ.

✍️ಶಿವಾನಂದ ಉಳ್ಳಿಗೇರಿ.        ಶಿಕ್ಷಕರು,ಬೈಲುಹೊಂಗಲ