ಯುಗದ ಕವಿ ಡಾ.ದ.ರಾ.ಬೇಂದ್ರೆಯವರ ಪುಣ್ಯ ತಿಥಿಯ ಅಂಗವಾಗಿ ದಿ:31/10/2021 ರಂದು ಧಾರವಾಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯ ಕ್ರಮ ಬೇಂದ್ರೆ ಗೀತ ನೃತ್ಯೋತ್ಸವ. ಧಾರವಾಡ ದ ಮಣ್ಣಿನವರೇ ಆದ ಕವಿ ಬೇಂದ್ರೆ ಯವರು, ಧಾರವಾಡವನ್ನು ಸಾಹಿತ್ಯದ ಪ್ರಮುಖ ಕೇಂದ್ರವ ನ್ನಾಗಿ ಮಾಡಿದ್ದಷ್ಟೇ ಅಲ್ಲದೆ, ಧಾರವಾಡದ ಮಡಿಲಿಗೆ ಅತ್ಯಂತ ಗೌರವಪೂರ್ಣ ಸಾಹಿತ್ಯಿಕ ಪ್ರಶಸ್ತಿಯಾದ ಜ್ಞಾನಪೀಠ ಪ್ರಶಸ್ತಿಯನ್ನೂ ಅರ್ಪಿಸಿದರು. ಅವರ ಕಾವ್ಯಗಳಲ್ಲಿರುವ ಭಾಷೆ, ತಾಳ, ಲಯ, ರೂಪಾಲಂಕಾರಗಳು ಅನನ್ಯವಾ ಗಿವೆ.

ನುರಿತ ವಿದ್ವಾಂಸರಿಗೂ ತೋಚದ, ತಿಳಿಯದ ಕ್ಲಿಷ್ಟಕರ ಪದ್ಯಗಳು ಬೇಂದ್ರೆಯವರ ಸಂಗ್ರಹಣೆ ಯಲ್ಲಿದೆ. ಅಂತಹ ಭಾವಪೂರ್ವವಾದ ರಚನೆ ಗಳಿಗೆ ನೃತ್ಯ ಸಂಯೋಜನೆ ಮಾಡುವುದು ಅಷ್ಟು ಸುಲಭದ ಕೆಲಸವೇನಲ್ಲ.ಆದರೆ,ಆ ಕಾರ್ಯವನ್ನ ಭೇಷ್ ಎನಿಸಿಕೊಳ್ಳುವಂತೆ ಮಾಡಿದವರು ರತಿಕಾ ನೃತ್ಯ ನಿಕೇತನದ ಮಕ್ಕಳು.

ಧಾರವಾಡದ ರತಿಕಾ ನೃತ್ಯ ನಿಕೇತನ ೨೫ಕ್ಕೂ ಹೆಚ್ಚು ವರ್ಷಗಳಿಂದ ಸಾವಿರಾರು ಮಕ್ಕಳಿಗೆ ನೃತ್ಯ ಶಿಕ್ಷಣವನ್ನು ಧಾರೆ ಎರೆಯುತ್ತಿದೆ. ಈ ಸಂಸ್ಥೆಯ ಕಲಾ ನಿರ್ದೇಶಕಿಯಾದ ವಿದುಷಿ ಶ್ರೀಮತಿ ನಾಗರತ್ನ ನಾಗರಾಜ್ ಹಡಗಲಿ ಯವರು ಎಷ್ಟು ಸರಳರೋ ಅಷ್ಟೇ ಪ್ರತಿಭಾ ವಂತರು. ಅವರ ಗರಡಿಯಲ್ಲಿ ಪಳಗಿದ ಹಲವಾರು ಶಿಷ್ಯರು ಇಂದು ತಮ್ಮದೇ ನೃತ್ಯ ಕೇಂದ್ರಗಳನ್ನು ಸ್ಥಾಪಿಸಿ ಮಕ್ಕಳಿಗೆ ಭಾರತದ ಸಂಸ್ಕೃತಿಯ ಮೌಲ್ಯಗಳ ಕುರಿತಾಗಿ ತಿಳಿವಳಿಕೆ ಮೂಡಿಸುತ್ತಿದ್ದಾರೆ. ರತಿಕಾ ನೃತ್ಯ ನಿಕೇತನ ನಡೆಸಿಕೊಟ್ಟ ವಿಶೇಷವಾದ ಕಾರ್ಯಕ್ರಮ “ಬೇಂದ್ರೆ ಗೀತ ನೃತ್ಯೋತ್ಸವ.”

ಧಾರವಾಡ ಶಹರದ ಶರತ್ಕಾಲದ ಆ ಸಂಜೆ, ಕರ್ನಾಟಕ ವಿದ್ಯಾವರ್ಧಕ ಸಂಘ ಪುಟ್ಟ ಪುಟ್ಟ ಮಕ್ಕಳ ಚಿಲಿಪಿಲಿ ಕಲರವದಿಂದ ಝೇಂಕರಿಸು ತ್ತಿದೆ.ಮಕ್ಕಳ ಹಿಂದೆ ಓಡಾಡುವ ಅವರ ಪಾಲಕ ರೂ ಈ ‌ ಝೇಂಕಾರಕ್ಕೆ ಧ್ವನಿಗೂಡಿಸಿದ್ದಾರೆ. ಈ ಗಲಾಟೆಯಲ್ಲಿ ಇನ್ನೊಂದೆಡೆ ಪ್ರಸಾದನ ನಡೆ ಯುತ್ತಿದೆ.ಇವೆಲ್ಲಾ ವೇದಿಕೆಯ ಹಿಂಭಾಗದ ದೃಶ್ಯಗಳಾದರೆ, ಮುಂಭಾಗದಲ್ಲಿ ಕಾರ್ಯಕ್ರಮ ದ ಅಂತಿಮ ಕ್ಷಣಗಳ ತಯಾರಿಗಳು ನಡೆಯು ತ್ತಿವೆ.

ವೇದಿಕೆ ಸಜ್ಜಾಗಿದೆ.‌ ನೃತ್ಯ ಪ್ರದರ್ಶನಕ್ಕೂ ಮುಂಚೆ, ಶ್ರೀಧರ ಕುಲಕರ್ಣಿರವರ ಸಂಗೀತ ಕಾರ್ಯಕ್ರಮ‌ ಬೇಂದ್ರೆಯವರ ರಚನೆಗಳನ್ನು ಸುಗಮ ಸಂಗೀತ ಶೈಲಿಯಲ್ಲಿ ಹಾಡಿ, ಜನಮನ ಗೆದ್ದರು. ಪ್ರೇಕ್ಷಕರನ್ನೂ ತಮ್ಮೊಂದಿಗೆ ಹಾಡಲು ಪ್ರೋತ್ಸಾಹಿಸುವ ಮೂಲಕ ಇಡೀ ಸಭಾಂಗಣ ವೇ ಬೇಂದ್ರೆಯವರ ಹಾಡುಗಳಿಂದ ಪ್ರತಿಧ್ವನಿ ಸುವಂತೆ ಮಾಡಿದರು. ಕರ್ಣಗಳಿಗೆ ಸೊಗಸಾದ ಈ ಭಾವಗೀತೆಗಳ ಕಂಪನ್ನು ಮುಟ್ಟಿಸಿದ ಗಾಯಕ ಶ್ರೀಧರ ಕುಲಕರ್ಣಿಯವರು ಬೇಂದ್ರೆ ಯವರ ಸುಪ್ರಸಿದ್ಧ ಕಾವ್ಯ: ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ, ಇದರೊಂದಿಗೆ ತಮ್ಮ ಸಂಗೀತದ ಸುಧೆಯನ್ನು ಮುಕ್ತಾಯಗೊಳಿಸಿದರು.

ಆ ವೇದಿಕೆಯಲ್ಲಿ ಮೊದಲು ಮೂಡಿಬಂದ ನೃತ್ಯ:

ಅಂತರಂಗದ ಮೃದಂಗ ಅಂತುತೋಂತ ನಾನ / ಚಿತ್ತ ತಾಳ ಭಾರಿಸುತಿತ್ತು ಝಂಝನನ ನಾನಾ/

ಒಂದು ಪ್ರದರ್ಶನಕ್ಕೆ ‌ಯಾವ ರೀತಿ ಶೃತಿ, ಲಯ, ತಾಳಗಳ ಅಗತ್ಯವಿದೆಯೋ, ಅದೇ ರೀತಿ‌ ನಮ್ಮ ಜೀವನವನ್ನು ಮುಂದೆ ಸಾಗಿಸಲು ನಮ್ಮ ಅಂತ ರಂಗದ ತಾಳ, ಲಯ ಅಷ್ಟೇ ಮುಖ್ಯ.ಇವುಗಳು ಸರಿಯಾಗಿ   ಒಂದಕ್ಕೊಂದು ಹೊಂದಿಕೊಂಡು ಹೋಗದಿದ್ದಲ್ಲಿ, ಜೀವನ ಕಠಿಣವೆನಿಸಬಹುದು. ಇದರ ನಂತರ ಬೇಂದ್ರೆಯ ಮತ್ತೊಂದು ಪ್ರಸಿದ್ಧ ಗೀತೆ:

ಬಾರೋ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ.

ಧಾರವಾಡದ ಸೊಬಗನ್ನ, ಅಲ್ಲಿಯ ವಾತಾವರ ಣವನ್ನು ತುಂಬಾ ಸೊಗಸಾಗಿ ಈ ಪದ್ಯದಲ್ಲಿ ಹೇಳಿದ್ದಾರೆ.ಈ ಸಾಲುಗಳನ್ನು ಬೇಂದ್ರೆ ತಮಗೆ ತಾವೇ ಹೇಳಿಕೊಂಡಿರಲೂ ಸಾಧ್ಯ ಎಂದು ಹಲವು ವಿದ್ವಾಂಸರು ಭಾವಿಸಿದ್ದಾರೆ. ಮುಂದಿನ ನೃತ್ಯ:

ಕುಣಿಯೋಣು ಬಾರಾ ಕುಣಿಯೋಣು ಬಾ.

ಕುಣಿಯಲಿಕ್ಕೆ ಗೆಜ್ಜೆ ಯಾಕೆ, ತಾಳ ಯಾಕೆ, ತಂತಿ ಯಾಕೆ, ಕುಣಿಯುವ ಹುಮ್ಮಸ್ಸು ಮಾತ್ರ ಸಾಕು ಎಂದಿದ್ದಾರೆ ಬೇಂದ್ರೆಯವರು.

ಮೂರು ನೃತ್ಯಗಳ ನಂತರ ಸಭಾ ಕಾರ್ಯಕ್ರಮ ಜರುಗಿತು. ಅತಿಥಿ ಅಭ್ಯಾಗತರು ಬೇಂದ್ರೆಯವ ರನ್ನು ಸ್ಮರಿಸುತ್ತ, ರತಿಕಾ ನೃತ್ಯ ನಿಕೇತನವನ್ನು, ನರ್ತಿಸಿದ ಎಲ್ಲಾ ಮಕ್ಕಳನ್ನು ಅಭಿನಂದಿಸಿ, ಎಲ್ಲರಿಗೂ ಶುಭ ಕೋರಿದರು. ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆದುಕೊಂಡು ಇತರ ವಿದ್ಯಾರ್ಥಿಗಳಿಗೆ ಮಾದರಿಯಾದ ಮಕ್ಕಳಿಗೆ ಸನ್ಮಾನವೂ ಜರುಗಿತು. ಸಾಂಸ್ಕೃತಿಕ ಕಾರ್ಯ ಕ್ರಮಗಳ ಧ್ಯೇಯವನ್ನು ಅರಿತು ಅತಿಥಿಗಳೆಲ್ಲ ರೂ ಸಮಯ ಮೀರಿ ಮಾತಾಡದೆ ಮುಂದಿನ ಕಾರ್ಯಕ್ರಮಕ್ಕೆ ಅಣಿಮಾಡಿಕೊಟ್ಟರು.

ಸಭಾ ಕಾರ್ಯಕ್ರಮದ ನಂತರದ ಮೊದಲ ನೃತ್ಯ

ಮುಗಿಲ ಮಾರಿಗೆ ರಾಗರತಿಯಾ ನಂಜ ಏರಿತ್ತ, ಆಗ ಸಂಜೆಯಾಗಿತ್ತ.

ತಾಳ-ಲಯ-ಭಾವಪೂರ್ಣವಾಗಿ ಮಕ್ಕಳು ಈ ಹಾಡಿಗೆ ಹೆಜ್ಜೆ ಹಾಕಿದರು.ಎಲ್ಲರಿಗೂ ಆಹ್ಲಾದ, ಆಶ್ಚರ್ಯವಾಗುವಂತೆ, ಮುಂದಿನ ನೃತ್ಯವನ್ನು ತಮ್ಮ ಮಕ್ಕಳೊಂದಿಗೆ ಗುರುಗಳಾದ ವಿದುಷಿ ಶ್ರೀಮತಿ ನಾಗರತ್ನ ನಾಗರಾಜ್ ಹಡಗಲಿಯವ ರೇ ನರ್ತಿಸಿದರು.

ನಾನು ಬಡವಿ, ಆತ ಬಡವ ಒಲವೆ ನಮ್ಮ ಬದುಕು

ಎಂಬ ಭಾವೋತ್ಪೂರ್ಣ ಹಾಡಿಗೆ ಹೆಜ್ಜೆ ಹಾಕುತ್ತ, ಬದುಕಲು ಅಷ್ಟೆಶ್ವೆರ್ಯಗಳಾವುವೂ ಬೇಡ, ಕುಟುಂಬದವರಲ್ಲಿ ಪ್ರೀತಿ ವಿಶ್ವಾಸವಿದ್ದರೆ ಜೀವನ ಸರಾಗವಾಗಿ ಸಾಗುತ್ತದೆ ಎಂದು ಮನೋಜ್ಞವಾಗಿ ಅಭಿನಯಿಸಿದರು.

ಘಮ ಘಮಾಡಿಸ್ತಾವ ಮಲ್ಲಿಗೀ ನೀ ಹೊರಟಿದ್ದಿ ಈಗ ಎಲ್ಲಿಗೆ

ಎಂಬ ಲವಲವಿಕೆಯಿಂದ ಕೂಡಿದ‌ಹಾಡಿಗೆ ಮುಂದಿನ ನೃತ್ಯ ಮೂಡಿಬಂತು.

ಕಾರ್ಯಕ್ರಮದ ಕೊನೆಯ ನೃತ್ಯದಲ್ಲಿ ಶ್ರಾವಣ ಮಾಸದ ಕಲರವವನ್ನ ಕಣ್ಣಿಗೆ ಕಟ್ಟುವಂತೆ, ಎಲ್ಲಾ ತಂಡದ ಮಕ್ಕಳೂ ನರ್ತಿಸಿದರು. ೭೩ ಮಕ್ಕಳು ಒಂದೇ ಬಾರಿ ವೇದಿಕೆಯನ್ನು ಆಕ್ರಮಿಸಿದ್ದುದನ್ನು ಕಂಡರೆ, ಶ್ರಾವಣದಲ್ಲಿನ ಎಲ್ಲರ ಗಲಿಬಿಲಿಯೇ ನೆನಪಿಗೆ ಬಂತು.

ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ ಬಂತು ಬೀಡಿಗೆ, ಬಂತು ಶ್ರಾವಣ.

ವಿಜೃಂಭಣೆಯಿಂದ ರಾರಾಜಿಸುತ್ತ ಬಂದ ಶ್ರಾವಣವನ್ನು ಅಚ್ಚುಕಟ್ಟಾಗಿ ಪ್ರೇಕ್ಷಕರ ಮುಂದೆ ಎತ್ತಿ ಹಿಡಿದು,ನರ್ತಿಸಿದ ಎಲ್ಲರೂ ಶೋಭಿಸಿದರು.

ಭಾವ ಗೀತೆಗಳನ್ನು ಅರ್ಥ ಮಾಡಿಕೂಳ್ಳುವುದು ಸುಲಭವಲ್ಲ. ಅದರಲ್ಲೂ ಬೇಂದ್ರೆಯವರ ಕವಿತೆ ಗಳು ಒಮ್ಮೆ ಓದಿದಾಗ ಒಂದು ರೀತಿ ಅರ್ಥ ಮಾಡಿಕೊಂಡರೆ, ಇನ್ನೊಮ್ಮೆ ಓದಿದಾಗ ಅದರ ಮತ್ತೊಂದು ಮುಖದ ಪರಿಚಯವಾಗು ತ್ತದೆ. ಎಷ್ಟು ಬಾರಿ ಓದಿದರೂ ಅಷ್ಟು ವಿಧದ‌ ಅರ್ಥಗ ಳನ್ನು ಕಲ್ಪಿಸುವ ಶಕ್ತಿಯಿದೆ ಅವರ ಭಾವಗೀತೆ ಗಳಿಗೆ. ಅಂತಹ ನಿಗೂಢ ಜಗತ್ತನ್ನು ಪ್ರವೇಶಿಸಿ ಪರಿಶೋಧಿಸುವ ನಾಗರತ್ನರವರ ಧೈರ್ಯವನ್ನು ಮೆಚ್ಚಬೇಕು. ಈ ಪದ್ಯಗಳ‌ ಅರ್ಥಗಳನ್ನು ಅರ್ಥೈ ಸಿಕೊಂಡು,ಅದನ್ನು ಮಕ್ಕಳಿಗೆ ಅರ್ಥವಾಗುವಂತೆ ತಿಳಿಸಿ,ನೃತ್ಯ ಸಂಯೋಜಿಸಿ ಪ್ರದರ್ಶಿಸಿದ್ದು ರತಿಕಾ ನೃತ್ಯ ನಿಕೇತನಕ್ಕೂ,ಗುರುಗಳಾದ ನಾಗರತ್ನರಿಗೂ ಹೆಮ್ಮೆಯ ವಿಷಯ. ಧಾರವಾಡದಲ್ಲಿ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಯ ಲ್ಲಿ ಮೂಡಿಬರಲಿ. ನಮ್ಮ ಸಂಸ್ಕೃತಿ, ನಮ್ಮ ಸಾಹಿತ್ಯ ಭಾರತದಲ್ಲಷ್ಟೇ ಅಲ್ಲದೆ, ವಿಶ್ವದೆಲ್ಲೆಡೆ ಪಸರಿಸಲಿ. ಧಾರವಾಡದ ಕಲಾ ಸಾಧನೆ, ಸೊಬಗು ಇನ್ನಷ್ಟು ಉನ್ನತ ಶಿಖರವನ್ನು ತಲುಪಲಿ.

✍️ಡಾ.ಸಮತಾ ಗೌತಮ
ಉಡುಪಿ