ಕರುಣೆಯ ಬೆಳಕನ್ನೆಲ್ಲ ಆತ್ಮಕೆ
ಪ್ರತಿಫಲಿಸುವ ದೀಪ
ಆಂತರ್ಯ ತಿಳಿವನ್ನೆಲ್ಲ ಹೃದಯಕೆ
ವರ್ಗಾಯಿಸುವ ದೀಪ

ಹೊರಗಿನ ಬೆಳಕಿಗೆ ನಯನಗಳ
ತೆರೆದುಕೊಳ್ಳುವರು ನಾವು
ನರವಾಹದ ಮಿಡಿತವನ್ನೆಲ್ಲ ಮಸ್ತಿಷ್ಕಕೆ
ರವಾನಿಸುವ ದೀಪ

ಆಗಸದ ದೀಪಗಳಿಗೆ ಎಂದಿಗಾದರು ತಾರತಮ್ಯವಿದೆಯೆ
ಭುವನದ ಹಸಿರನ್ನೆಲ್ಲ ಮನಕೆ
ಭರ್ತಿಸುವ ದೀಪ

ತಾನುರಿದು ಬೆಳಕನೀವ ಶಮೆ
ಎಂದಿಗೂ ಬೇಸರಿಸದು
ಬೆಳಗುವ ನಂಬಿಕೆಯನ್ನೆಲ್ಲ ಜನಕೆ
ಸ್ಫುರಿಸುವ ದೀಪ

ಸ್ವರಕೆ ಸ್ವರ ಬೆರೆತರೆ ಸುಮಧುರ
ಸಂಗೀತ ಗಾನವು ಅನು
ಸದಾಚಾರ ಚಿಂತನಯನ್ನೆಲ್ಲ ಜಗಕೆ
ಕೀರ್ತಿಸುವ ದೀಪ

✍️ಅನಸೂಯ ಜಹಗೀರದಾರ,
ಕೊಪ್ಪಳ