“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀ ಯಸಿ” ಅಂತ ಆ ಮರ್ಯಾದಾ ಪುರುಷೋತ್ತ ಮ ರಾಮಚಂದ್ರನೇ ಹೇಳಿಬಿಟ್ಟಿದ್ದಾನೆ ಕಣ್ರೀ…ಇನ್ನು ನಮ್ಮಂಥವರು ಹಾಗೆ ಅಂದುಕೊಳ್ಳುವುದ ರಲ್ಲಿ ಖಂಡಿತ ಆಶ್ಚರ್ಯವೇನೂ ಇಲ್ಲ;ಹೆಚ್ಚುಗಾರಿ ಕೆ ಅಂತೂ ಖಂಡಿತಾ ಇಲ್ಲ.  

ಬದುಕಿನ ಐವತ್ತು ವಸಂತಗಳನ್ನು ದಾಟಿದಮೇಲೆ ಮುಂದಿನ ಜನ್ಮದ ಬಗ್ಗೆ ಯೋಚನೆ ಬಂದಾಗಲೇ ಅಲ್ಲ ಅನಿಸೋದು ಬರೋ ಜನ್ಮದಲ್ಲೂ ಈ ಕನ್ನಡ ನಾಡಲ್ಲೇ ಹುಟ್ಟಿಸಪ್ಪಾ  ದೇವರೇ. ಯಾಕೆ ಅಂತ ಕೇಳ್ತೀರಾ?ಜನ್ಮಪೂರ್ತಿ ಓದಿದರೂ ಮುಗಿ ಯದ ವಿಪುಲವಾದ ಸಾಹಿತ್ಯ ವಾಜ್ಞ್ಮಯ ರೀ….. ಖಂಡಿತ ಈ ಜನ್ಮದಲ್ಲಿ ಮುಗಿಸೋಕಾಗಲ್ಲ,ಆವಾ ಗ ಬಂದು ಮುಂದುವರಿಸಬಹುದು ಅಂತ.  ಇದು ಅತಿಶಯೋಕ್ತಿ ಖಂಡಿತ ಅಲ್ಲ. ಆದಿಕವಿ ಪಂಪನ ಆದಿಯಾಗಿ ರನ್ನ, ಜನ್ನ, ನಾಗವರ್ಮ, ರಾಘವಾಂಕರ ಕೃತಿಗಳು, ಅನುಭಾವದ ಗಣಿಗ ಳಾದ ವಚನಗಳು, ಆಧ್ಯಾತ್ಮದ ಅರಿವು ಮೂಡಿ ಸುವ ದಾಸ ಸಾಹಿತ್ಯ. ಇನ್ನು ಆಧುನಿಕ ಕನ್ನಡ ಸಾಹಿತ್ಯದ ಕಾವ್ಯ, ಕವನ, ಪ್ರಬಂಧ,ಹರಟೆ, ಸಣ್ಣ ಕಥೆ ಕಾದಂಬರಿಗಳು ಇಂತಹ ಸಮೃದ್ಧ ಸಾಹಿತ್ಯದ ಪರಿಚಯ ಮಾಡಿಕೊಳ್ಳಲು ಏಳೇಳು ಜನ್ಮಗಳೇ ಸಾಲವು.8 ಜ್ಞಾನಪೀಠಗಳನ್ನು ಪಡೆದ ಅದ್ಭುತ ಸಾಧನೆ ನಮ್ಮ ಸಾಹಿತ್ಯ ಕ್ಷೇತ್ರದ್ದು. ಅದಕ್ಕೆ ನಾನು ಅಣ್ಣಾವ್ರ ಹಾಡಿಗೆ ದನಿ ಸೇರಿಸಿ ಹಾಡೋದು: 

ಹುಟ್ಟಿದರೇ ಕನ್ನಡ ನಾಡಲ್ ಹುಟ್ಟಬೇಕು ಮೆಟ್ಟಿದರೇ ಕನ್ನಡ ಮಣ್ಣನ್ನು ಮೆಟ್ಟಬೇಕು

ಭೌಗೋಳಿಕವಾಗಿ ತೊಗೋಳಿ. ಎಂತಹ ಸಮೃದ್ಧ ಪ್ರಕೃತಿ ಸೌಂದರ್ಯದ ಮಡಿಲು ನಮ್ಮ ಕನ್ನಡ ನಾಡು.ಕೊರಳ ಹಾರವಾಗಿ ಶೋಭಿಸುವ ಕರಾವ ಳಿ, ಸಸ್ಯ ಸಮೃದ್ಧಿಯ ಹಚ್ಚಹಸಿರಿನ ಮಲೆನಾಡು, ಮಲೆನಾಡ ಸೆರಗಾದ ಚಿಕ್ಕಮಗಳೂರು, ಹಾಸನ ಧಾರವಾಡಗಳು, ಗಂಡು ಮೆಟ್ಟಿನ ನಾಡು ಚಿತ್ರ ದುರ್ಗ,ಬಿಸಿಲ ಬೇಗೆಯನ್ನು ಉಂಡರೂ ಸವಿಯ ಆತಿಥ್ಯದ ಸೊಗವುಣಿಸುವ ಉತ್ತರ ಕರ್ನಾಟಕ, ನಿಸರ್ಗ ಸೌಂದರ್ಯದ ಉತ್ತರಕನ್ನಡ, ಸಾಂಸ್ಕೃ ತಿಕ ಸಮೃದ್ಧ ಹಳೆ ಮೈಸೂರು ಪ್ರಾಂತ್ಯ ವಿಭಿನ್ನ ರೀತಿಯ ಅನುಭವ ಕೊಡುವ ಸುಂದರ ತಾಣ ಗಳು.  ಇವೆಲ್ಲವನ್ನು ಮನಃಪೂರ್ತಿ ಮನದಣಿಯೆ ನೋಡಿ ಹಾಡಿ ಅನುಭವಿಸಲು ಈಜನ್ಮ ಸಾಲದೇ ಸಾಲದು. ಪಂಪ ನುಡಿದಂತೆ:

ಆರಂಕುಸವಿಟ್ಟೊಡಂ ನೆನೆವುದೆನ್ನ 
ಮನಂ ಬನವಾಸಿದೇಶಮಂ 

ಎಂಬಂತೆ ಮತ್ತೆ ಮತ್ತೆ ನರಜನ್ಮ ಬಂದರೆ ಕರ್ನಾ ಟಕದಲ್ಲೇ ಆಗಲಿ ನನ್ನ ಜನನ ಎನ್ನುವುದು ನನ್ನ ಮನ.

ಗಂಧದನಾಡು, ಚಂದನದ ಬೀಡು, ವೀಣೆಯ ಖನಿ, ರೇಷ್ಮೆಯ ನವಿರು, ಸಜ್ಜನತೆಯ ತೇರು, ಸ್ನೇಹದ ಸುಗಂದ, ಸಹಿಷ್ಣುತೆಯೆನ್ನುವ ಧಾರಾಳ ತನ ಇಲ್ಲಿಲ್ಲದೇ ಇನ್ನೆಲ್ಲಿ ಕಾಣಲು ಸಾಧ್ಯ? ಅನ್ಯ ಭಾಷಿಗರಿಗೂ ಕೂಡ. ನೆಲೆ-ಬೆಲೆಕೊಟ್ಟು ಕೊನೆಗೆ ನಮ್ಮತನವನ್ನೇ ಕಳೆದುಕೊಳ್ಳುತ್ತಿರುವುದು ವಿಪ ರ್ಯಾಸ.ಈ ದೌರ್ಬಲ್ಯಗಳನ್ನು ಹತ್ತಿಕ್ಕಿ ಕವಿರಾಜ ಮಾರ್ಗದಲ್ಲಿ ಬಣ್ಣಿಸಿದ ಕನ್ನಡಿಗರಂತೆ: 

ಸುಭಟರ್ಕಳ್ ಕವಿಗಳ್
ಸುಪ್ರಭುಗಳ್ ಚೆಲ್ವರ್ಕಳಭಿಜನರ್ಕಳ್  ಗುಣಿಗಳ್ ಅಭಿಮಾನಿಗಳತ್ಯುಗ್ರರ್
ಗಭೀರಚಿತ್ತರ್ ವಿವೇಕಿಗಳ್ ನಾಡವರ್ಗಳ್  

ಎಂಬಂತಹ ನಾಡಜನ ತುಂಬಿದ ಕನ್ನಡಾಭಿ ಮಾನದ ಕನ್ನಡ ನಾಡನ್ನು ಕಾಣಲು ಮತ್ತೆ ಮತ್ತೆ ಹುಟ್ಟಿ ಬರಲೇಬೇಕಲ್ಲವೇ ಈ ನಮ್ಮ ಚೆಲುವಿನ ಬೀಡಿನಲ್ಲಿ?

ಶಿಲ್ಪಕಲೆಯ ಸಾಕಾರವಾದ ಚೆಲುವೇ ಮೂರ್ತಿವೆ ತ್ತ ಬೇಲೂರು, ಹಳೇಬೀಡು, ಸೋಮನಾಥಪುರ, ಹಂಪೆ ಪಟ್ಟದಕಲ್ಲುಗಳ ಸೌಂದರ್ಯ ಸವಿಯಲು ಧರ್ಮಸ್ಥಳದ ಮಂಜುನಾಥ, ಕುಕ್ಕೆಸುಬ್ರಹ್ಮಣ್ಯದ ನಾಗಪ್ಪ, ನಂಜನಗೂಡು ಮುರುಡೇಶ್ವರದ ಈಶ್ವ ರ,ಶ್ರೀರಂಗಪಟ್ಟಣ ಬಿಳಿಗಿರಿ ಬೆಟ್ಟದ ರಂಗನಾಥ, ವೇಣುಗೋಪಾಲರ ದರ್ಶನ ಎಷ್ಟು ನೋಡಿದರು ಸಾಕೆನಿಸುವುದಿಲ್ಲ. ಶೃಂಗೇರಿಯ ಶಾರದಾಂಬೆ, ಕೊಲ್ಲೂರ ಮೂಕಾಂಬೆ, ಹೊರನಾಡು ಅನ್ನ ಪೂರ್ಣೆ, ನಮ್ಮೂರ ಚಾಮುಂಡಿ ಎಷ್ಟು ನೋಡಿ ದರೂ ಮನ ತಣಿಯುವುದಿಲ್ಲ. ಮತ್ತೆ ಮತ್ತೆ ಬೇಕೆ ನಿಸುತ್ತಲೇ ಇರುತ್ತದೆ.  ಅದಕ್ಕೇ 

ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ಬನವಾಸಿ ದೇಶದೊಳ್ 

ಎಂಬ ಪಂಪನ ಅಭಿಲಾಷೆಯೇ ನನ್ನ ಅಭಿಮತ ವೂ ಕೂಡ. 

ಎಂಟನೇ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಗಳಿಸಿದ ಕನ್ನಡ ಉಚ್ಚರಿಸಿದಂತೆಯೇ ಬರೆಯುವ ಉಚ್ಛ ಭಾಷೆ.ಲಿಪಿಯೋ ಮುತ್ತುಗಳನ್ನು ಪೋಣಿ ಸಿದಂತೆ. ಅದಕ್ಕೆ ಆಚಾರ್ಯ ವಿನೋಬಾ ಭಾವೆ ಯವರು ಕನ್ನಡವನ್ನು “ಲಿಪಿಗಳ ರಾಣಿ” ಎಂದಿ ರುವುದು. ನಮ್ಮ ಈ ಸುಂದರ ಭಾಷೆಗೆ ಮೊಟ್ಟ ಮೊದಲ ನಿಘಂಟು ಬರೆದವರು ವಿದೇಶಿಯರೇ “ರೆವರೆಂಡ್ ಕಿಟಲ್” ರವರು ಅಂದರೆ ಇದರ ಚುಂಬಕತೆಯ ಪರಿ ಅರಿಯಬಹುದು.

“ಸಿಲಿಕಾನ್ ಸಿಟಿ” ಎಂದೇ ಪ್ರಖ್ಯಾತವಾದ ನಮ್ಮ ಬೆಂಗಳೂರು ನವೀನ ತಂತ್ರಜ್ಞಾನದ ತೊಟ್ಟಿಲು. ಪ್ರಸಿದ್ಧ ಅಭಿಯಂತರಾದ ವಿಶೇಶ್ವರಯ್ಯ,ಖ್ಯಾತ ವಿಜ್ಞಾನಿ ಸಿ.ವಿ.ರಾಮನ್, ಇನ್ಫೋಸಿಸ್ ನ ಸುಧಾ ಮೂರ್ತಿ, ನಾರಾಯಣಮೂರ್ತಿ ಹೀಗೆ ಹೆಸರಿಸು ತ್ತಾ ಹೋದರೆ ಮುಗಿಯದ ಪಟ್ಟಿ.ಎಲ್ಲಾ ಕ್ಷೇತ್ರಗಳ ಲ್ಲೂ ಯಶಸ್ಸು ಸಾಧಿಸಿದ ಕನ್ನಡಿಗರಿದ್ದಾರೆ ಎಂಬುದು ನಮ್ಮ ಹೆಮ್ಮೆ. 

ಇವೆಲ್ಲ ಸಂಗತಿಗಳು ಒತ್ತಟ್ಟಿಗಾದರೆ ಕನ್ನಡವನ್ನು ಕನ್ನಡಮ್ಮನನ್ನು ಕನ್ನಡನಾಡನ್ನು ಪ್ರೀತಿಸಲು ಕಾರಣಗಳೇ ಬೇಕಿಲ್ಲ.ಅಮ್ಮನ ಒಡಲಲ್ಲಿ ಇದ್ದಾಗಿ ನಿಂದ ಕೇಳಿದ ಭಾಷೆ,ಅಮ್ಮನ ಮಡಿಲಲ್ಲಿ ಅಪ್ಪನ ಹೆಗಲಲ್ಲಿ ಜಗವನ್ನು ಅರ್ಥಮಾಡಿಕೊಂಡ ಭಾಷೆ, ಸೋದರ -ಸೋದರಿ, ಮಿತ್ರರೊಂದಿಗೆ ನಲಿದ ಭಾಷೆ, ನನ್ನ ಮೆಚ್ಚಿದವನನ್ನು ಅರಿಯಲು ಸಹಾ ಯಕವಾದ ಭಾಷೆ,  ಸಮಾಜದಲ್ಲಿ ನೆಲೆಗೊಳ್ಳಲು ವ್ಯವಹರಿಸಲು ಅನುಕೂಲವಾದ ಭಾಷೆ; ಸರ್ವ ವೂ ಅವಳೇ! ಸರ್ವಸ್ವವೂ ಅವಳೇ! ಅನನ್ಯ, ಅನುಪಮ, ಅದ್ಭುತ, ಅಮೂಲ್ಯ ನಮ್ಮ ಕನ್ನಡ. ಈಗ ಬದುಕಿನ ಅಸ್ಮಿತೆಯ ಹುಡುಕಾಟದಲ್ಲಿ ಬರ ವಣಿಗೆಯ ಮಾರ್ಗ ತೋರಿಸಿ ಕೈಹಿಡಿದು ಮುನ್ನ ಡೆಸುತ್ತಿರುವ ಮಾರ್ಗದರ್ಶಿ ದೈವೀ ಸ್ವರೂಪ. ಅಂತಹ ಕನ್ನಡವನ್ನು ಪ್ರೀತಿಸಲು, ಬಣ್ಣಿಸಲು, ಹೊಗಳಲು ಕಾರಣದ ಅಗತ್ಯತೆ ಅನಿವಾರ್ಯತೆ ಗಳಿಲ್ಲ.ಇರುವುದು ಶಬ್ದಗಳ ಅಭಾವ;ಭಾವವನ್ನ ಪದಗಳಿಗಿಳಿಸುವ ಅಸಮರ್ಥತೆ ಅಷ್ಟೇ; ಮುಂದೆ ಯೂ ಕನ್ನಡ ಭುವನೇಶ್ವರಿಯ ಆರಾಧನೆಗೈವ ಕಸುವನ್ನು ಆಕೆ ಕೊಡಲಿ, ಅಸುವು ಹೋದರೆ ಮತ್ತೆ ಇಲ್ಲೇ ಹುಟ್ಟಿ ಬರುವ ಸೌಭಾಗ್ಯ ಒದಗಲಿ. ರತ್ನನ ನನ್ನಿಷ್ಟದ ಈ ಪದಗಳೊಂದಿಗೆ ವಿದಾಯ ಹೇಳುವೆ:

ನರಕಕ್ ಇಳ್ಸಿ ನಾಲ್ಗೆ ಸೀಳ್ಸಿ 
ಬಾಯ್ ಒಲಿಸಾಕಿದ್ರೂನೆ 
ಮೂಗ್ನಲ್ ಕನ್ನಡ್ ಪದವಾಡ್ತೀನಿ 
ನನ್ ಮನಸನ್ನ್ ನೀ ಕಾಣೆ 

✍️ಸುಜಾತಾ ರವೀಶ್,ಮೈಸೂರು