ಕರುನಾಡ ಮಣ್ಣಿನಲಿ ಬೆಳೆದ ಬಂಗಾರದಲಿ/
ಅನುರಣನಗೊಳ್ಳುತಿದೆ ಸಿರಿಗನ್ನಡ/
ಕೋಕಿಲೆಯ ಕಂಠದಲೂ ಕಾವೇರಿಯೊಡಲ್ಲೂ/
ಕೈ ಬಳೆಯ ಕಿಂಕಿಣಿಯೇ ಸವಿಗನ್ನಡ//

ಯಾಣ- ತಾಣಗಳಲ್ಲೂ ಗಿರಿಶಿಖರ ಕಂದರದೀ/
ಸಂಚರಿಸೋ ಮಿಂಚಿನಾ ಕಿಡಿ- ಕನ್ನಡ!
ಶರಧಿಯಾ ಬುರುಗಲ್ಲೂ ಅಲೆಅಲೆಯಾ ಕೆಚ್ಚಲ್ಲೂ/
ಭೋರ್ಗರೆವಾ ಮಂತ್ರವೇ ಶ್ರೀಗನ್ನಡ//

ನಿತ್ಯೋತ್ಸವ ನಾಡಿನಲಿ ದೀಪೋತ್ಸವ ಮಾಲೆಯಲಿ/
ಚಂದನವೂ ಪಸರಿಸಿದೆ ಶುಭಕನ್ನಡ/
ರಾಗಿ ಮುದ್ದೆಯೊಡೆ ಭಕ್ರಿ ಭಾಜಿಯಿಡೆ/
ವಿವಿಧತೆಯಲೇಕತೆಯಾ ರುಚಿ- ಕನ್ನಡ//

ಭುವನವೇ ಬೆರಗೀಗ ಕನ್ನಡಿಗರ ಕೀರುತಿಗೆ/
ತಂತ್ರಾಂಶದ ತೇರೆಳೆದ ತಿಳಿಗನ್ನಡ/
ಪಂಪರನ್ನರ ನಾಡು ಬೇಂದ್ರೆಯಜ್ಜನ ಹಾಡು/
ಮನೆಮನದಿ ಮಿನುಗುತಿಹ ಸ್ಫೂರ್ತಿ ಕನ್ನಡ//

ಕನ್ನಡಮ್ಮನ ಹರಕೆ ದಿಗ್ದೆಶೆಗೆ ಹರಡಿರಲಿ/
ಕಂದನಾಡೋ ನುಡಿಯೇ ಸಿಹಿಗನ್ನಡ/
ಡಿಂಡಿಮವ ಬಾರಿಸಲು ಮಕ್ಕಳೊಕ್ಕರಲಿಂದ/
ಸತ್ಯವೂ- ಸುಂದರವೂ ಶಿವವೇ ಕನ್ನಡ!!

✍️ಡಾ.ಸೌಮ್ಯ ಕೆ.ವಿ.
ಯಲ್ಲಾಪುರ