ಕನ್ನಡವೆಂದರೆ ನಮ್ಮವ್ವ
ಹಾಲೂಣಿಸುವಾಗ ಮುದದಿ
ಲೋ ಲೋ ಜೋಗುಳ ಹಾಡಿ
ಸುಖ ನಿದ್ರೆಗೆ ಜಾರಿಸಿದ
ವಾತ್ಸಲ್ಯಾಮೃತದ ಭಾಷೆ
ನಮ್ಮಪ್ಪ ಹೊಲ ಹರಗುವಾಗ
ಬಿಳಿ ಎತ್ತ ಮಹಾಲಿಂಗ
ಕರಿ ಎತ್ತ ಕಾಳಿಂಗವೆಂದು
ಹೃದಯದಿಂದ ಹಾಡಿ ಉಳುಮೆ
ಬೇಸರ ಕಳೆದ ಭಾಷೆ.
ನಮ್ಮಣ್ಣ ನಮ್ಮಕ್ಕ ಹೆಗಲಲಿ
ಬಗಲಿಲಿ ಹೊತ್ತು ನಡೆವಾಗ
ತಮ್ಮ ತಮ್ಮನೆಂದು
ಬಾಯ ತುಂಬ ಹೊಗಳಿ
ತಾವು ಕುಣಿದು ನನ್ನನ್ನೂ
ಕುಣಿಸಿ ಕುಪ್ಪಳಿಸಿದ ಭಾಷೆ
ಗೆಳೆಯರೆಲ್ಲ ಕೂಡಿ ಚೇಷ್ಟೆ
ಮಂಗನಾಟ ಆಡುವಾಗ
ವಿಪರೀತ ಬೈದಾಡಿಕೊಂಡು
ಹೆಗಲಿಗೆ ಹೆಗಲ ಕೊಟ್ಟು
ಬಾಲ್ಯದ ಸುಖಕೆ ಜೋಡಿಯಾದ
ಗೆಳೆಯ ಗೆಳತಿಯರ ಭಾಷೆ
ಕುಂಡಿಯ ಮೇಲೆ ಎರಡು
ಬಾರಿಸಿ ನನ್ನ ಗುರುಗಳು
ಎನಗೆ ಅಕ್ಷರ ದೀಕ್ಷೆ
ಕೊಟ್ಟಾಗ ಮನದ ತುಂಬ
ಸಂಚಲನ ಮೂಡಿಸಿದ
ಎನ್ನ ದೈವ ಭಾಷೆ.
✍🏻ಪರಸಪ್ಪ ತಳವಾರ
ಕನ್ನಡ ಸಹಾಯಕ ಪ್ರಾಧ್ಯಾಪಕರು ಸ.ಪ್ರ.ದ.ಕಾಲೇಜು,ಲೋಕಾಪೂರ ಜಿ:ಬಾಗಲಕೋಟೆ