ಅಕ್ಷರಪ್ರಣತೆ -1

ವಿನಮ್ರತೆ ಸಹೃದಯತೆ ಪ್ರತಿರೂಪ ಪುನೀತ
ಅಬಾಲವೃದ್ಧರಾಗಿ ಸಕಲರಿಗೂ ವಿನೀತ
ಕರುನಾಡಿನ ಕೀರ್ತಿ ಪಸರಿಸಿದ ಧೀಮಂತ
ಮಣ್ಣಾದರೂ ಪ್ರತಿಮನದಲ್ಲೂ ಸದಾ ಜೀವಂತ.!

ಅಕ್ಷರಪ್ರಣತೆ -2

ವೃತ್ತಿ ಬಂಧವಿಲ್ಲ, ರಕ್ತ ಸಂಬಂಧವಿಲ್ಲ
ಹುಟ್ಟೂರಿನ ನಂಟಿಲ್ಲ, ಗೆಳೆತನದ ಅಂಟಿಲ್ಲ
ಆದರೂ ಮನಸೇಕೋ ವಿಕ್ಷಿಪ್ತ ವಿಹ್ವಲ
ವ್ಯಕ್ತಿಸಲಾಗದ ನೋವು ಸಂಕಟ ತುಮುಲ
ಇದೇ ಪುನೀತ ಪ್ರಭೆಯ ಚೈತನ್ಯ ಜಾಲ.!

ಅಕ್ಷರಪ್ರಣತೆ -3

ಇದೆಂತಹಾ ಸಾವು? ಮನಸು ಜರ್ಝರಿತ
ವಿಧಿ ವಿಧಾತರ ಮೇಲೆ ನಂಬಿಕೆಗಳೇ ಕುಸಿತ
ಬದುಕಿನ ಭರವಸೆಗಳಿಗೇ ಮರ್ಮಾಘಾತ
ಹೃನ್ಮನಗಳೆಲ್ಲಾ ದಿಗ್ಭ್ರಾಂತ ಶೂನ್ಯದಿಂದಾವೃತ.!

ಅಕ್ಷರಪ್ರಣತೆ -4

ಲಕ್ಷಾಂತರ ಮನ-ಮನೆಗಳನು ಬೆಳಗುತಿದ್ದ
ನಂದಾದೀಪವೇ ನಂದಿ ಹೋದರೆ ಬೆಳಕಿನ್ನೆಲ್ಲಿ?
ಸಹಸ್ರಾರು ಸಾಧಕರಿಗೆ ನಿತ್ಯ ಸ್ಫೂರ್ತಿಯಾಗಿದ್ದ
ರೂಪವೇ ಅಸ್ತಂಗತವಾದರೆ ಬದುಕಿನ್ನೆಲ್ಲಿ..??

ಅಕ್ಷರಪ್ರಣತೆ -5

ಜೀವ-ಜೀವನಗಳ ವಿಶ್ವಾಸಗಳೇ ಛಿದ್ರ-ಛಿದ್ರ
ಬೆಚ್ಚಿದ ಆಂತರ್ಯಗಳು ತಲ್ಲಣಿಸಿ ಆರ್ದ್ರ
ಅಯ್ಯೋ ಅದೆಷ್ಟು ಕ್ರೂರಿಯಾಯ್ತು ಸಾವು
ಬರಡಾಯ್ತು ಕನಸು-ಭರವಸೆಗಳ ಠಾವು.!
ಬತ್ತಿತು ಕೋಟಿಹೃದಯಗಳ ಭಾವಜಲವು.!

✍️ಎ.ಎನ್.ರಮೇಶ್.ಗುಬ್ಬಿ.