ಸಖೀ,,,,,,
ನಿನ್ನೊಡನೆ ಹೇಳಬೇಕೆಂದರೂ
ಹೇಳಲಾಗದ್ದು,ಹೇಳಬಾರದ್ದು,
ಹೆಳಲೇಬೇಕಾದದ್ದು ಬಹಳಷ್ಟಿದೆ-
ಇನ್ನೂ………ಆದರೆ….!!!

ಬೆನ್ನೇರಿದ ಬೇತಾಳದ ಕಥೆಗೆ
‘ಹೂಂ’ಗುಟ್ಟುತ್ತ,ಪ್ರಶ್ನೆಗೆ ಉತ್ತರಿಸುತ್ತ,
ದಾರಿ ಸವೆಸಬೇಕಿದೆ.
ಹೊತ್ತು ಗೊತ್ತಿಲ್ಲದೆ…
ಗೊತ್ತು ಗುರಿಯಿಲ್ಲದೇ…….!!!!

ಅರಿವಿದ್ದೋ ಅರಿವಿಲ್ಲದೆಯೋ
ಸೆರಗಲ್ಲಿ ಕೆಂಡ ಕಟ್ಟಿಕೊಂಡಾಗಿದೆ,
ಎಂದೋ……..!!!!

ಹೊಯ್ದಾಡುವ ಕಡಲ ಮಧ್ಯದಲಿ,
ಒಡಕು ನಾವೆಯನೇರಿ ಪಯಣ,
ದಡಮುಟ್ಟುವದು ಖಾತ್ರಿಯಿಲ್ಲ.

ಕಡಲತಡಿಯ ಒದ್ದೆ ಮರಳಲ್ಲಿ,
ಹೆಜ್ಜೆ ಮೂಡಿಸಲು ಪರದಾಟ,
ತೆರೆಯಪ್ಪಳಿಸಿ,ಕಾಲಡಿಯ ನೆಲ
ಶಿಥಿಲಗೊಳ್ಳುತ್ತಿದ್ದರೂ………!!!!

ಕೆಲವೊಮ್ಮೆ ನನ್ನೊಳಗಿನ ನಾ
ನಿಶ್ಚಿಂತ,ಮಲಗಿ ಗೊರಕೆ-
ಹೊಡೆಯಲೂ ಬಿಡುತ್ತಿಲ್ಲ,
ಬಾಗಿಲ ಕರೆಗಂಟೆ.
ಕಾಲನ ಕರೆಗಂಟೆಯಂತೇ ಭಾಸ.
ವ್ಯಾಕುಲದ ಬದುಕು ನಿತ್ಯ.

ಈ ಎಲ್ಲಗಳ ನಡುವೆ ನೀ ಒಮ್ಮೆ
ಕೈಗೆ ಸಿಗುವಂತಿದ್ದರೆ…..
‘ಗಭಕ್’ನೆ ಬರಸೆಳೆದು,ಅಪ್ಪಿ,
ಮುದ್ದಾಡಿ,ಲಲ್ಲೆಗರೆದು,ಕಿವಿಯಲ್ಲಿ-
ಎಲ್ಲ,,,ಎಲ್ಲ…ಪಿಸುನುಡಿಯಬೇಕೆಂದು
ಕಾಯುತ್ತಿದ್ದೇನೆ,ಉತ್ಕಟ ನಿರೀಕೆ಼ಯಲ್ಲಿ.
ಆದರೆ ನೀ ಕೈಗೇ,,ಸಿಗಲೊಲ್ಲೆ.

ಎತ್ತರದಲ್ಲಿ,ಬಿತ್ತರದ ಬಾನ
ಹತ್ತಿರದಲ್ಲಿ,ಮುಗಿಲ ಮರೆಯಲ್ಲಿ,
ಕುಳಿತು,’ಕಿಸಕ್’ನೆ ತುಂಟ ನಗು-
ಬೀರಿ,ಛೇಡಿಸಿ,ಕರೆಯುತ್ತಿರುವೆ-
ಹತ್ತಿರ…….ಬಾ…..ಎಂದು….!!!

ನಿನ್ನೆತ್ತರಕ್ಕೇರ ಬೇಕೆಂದರೆ…
ತಲೆಯ ಮೇಲ್ಗಡೆ ತ್ರಿವಿಕ್ರಮನ
ಪಾದ,ತುಳಿಯುತ್ತಿದೆ ರಸಾತಳಕ್ಕೆ.
ನಾ..’ಬಲಿ’ಯಾಗಬೇಕೆ? ಹೇಳು ?

ಪ್ರಿಯೆ,,,,,ನಾ ನಿನ್ನೊಡನೆ-
ಹೇಳಲಾಗದ್ದು,ಹೇಳಬಾರದ್ದು,
ಹೇಳಲೇಬೇಕಾದದ್ದ ಹೇಳುವ-
ಮೊದಲು…..ನಿನ್ನ ಸೇರಲಿ ಹೇಗೆ ?
ನನ್ನೊಳಗಿನ ‘ನಾ’ ಅಳಿದುಳಿಯುವ
ಮೊದಲು…………………..????

✍️ಅಬ್ಳಿ ಹೆಗಡೆ, ಹೊನ್ನಾವರ