ತರಹಿ ಗಜಲ್
ದಸ್ತಗೀರ ದಿನ್ನಿ ಸರ್ ಅವರ ಮಿಶ್ರಾ
(ಸುರಿವ ಒಲವ ಮಳೆಯ)

ಸುರಿವ ಒಲವ ಮಳೆಯ ಧಾರೆಯಲಿ ನೆನೆದಿರುವೆ ನಲುಗಿಸದಿರು ನನ್ನ
ನಿನ್ನ ಪ್ರೇಮ ಲಹರಿಯ ಹಾದಿಯ ಹಿಡಿದಿರುವೆ ಬದಲಿಸದಿರು ನನ್ನ

ನೀನಿಲ್ಲದ ಗಳಿಗೆಯ ಅನುಭವ ಖಾಲಿ
ಕೋಣೆಯ ನೆನಪಿಸುವುದು
ಬಹು ತಪಿಸಿ ನಿನ್ನ ದರುಶನಕೆ ಕಾದಿರುವೆ ನಿರಾಸೆಗೊಳಿಸದಿರು ನನ್ನ

ನಿನ್ನ ತನುವ ಗಂಧ ಗಾಳಿಯಲಿ ಬೆರೆತು
ಸಮ್ಮೋಹನಗೊಳಿಸಿತು
ನಿನ್ನ ನಗೆ ಮೋಹ ಓಕುಳಿಯಾಡಿರುವೆ ವಿವರ್ಣವಾಗಿಸದಿರು ನನ್ನ

ಮಲ್ಲಿಗೆಯ ಮಾತಿನಲಿ ವಶಗೊಳಿಸಿದೆ ಸೋತುಹೋದೆ ಓ ದೊರೆಯೆ
ನಿನಗಾಗಿ ಸರ್ವ ಋತುವಿನಲೂ ಹಾಡುತಿರುವೆ ಮೌನವಾಗಿಸದಿರು ನನ್ನ

ಕೋಪ ಪರಿತಾಪಗಳಲೂ ನಿನ್ನ ಹೆಸರೇ
ಜಪವಾಗಿದೆ ಈ ಅಧರಕೆ
ಬಿಡುವ ಮಾತಿಲ್ಲ ಮಧುರ ಬಂಧದಲ್ಲಿರುವೆ‌ ಮುಕ್ತವಾಗಿಸದಿರು ನನ್ನ

ಬೆನ್ನು ತಿರುಗಿಸಿ ನಡೆದವನ ಬಿಡದೆ ಅನುಕರಿಸಿದ ಯಶೋಧರೆಯ ಕನಲಿದು ಅನು
ಲೋಕ ಬೆಳಕಿನಲಿ ಮಿಂದೇಳುತಿರುವೆ ಕತ್ತಲಲ್ಲಿರಿಸದಿರು ನನ್ನ

(“ಆತ್ಮಾನುಸಂಧಾನ” ಗಜಲ್ ಸಂಕಲನ ದಿಂದ)

✍️ಅನಸೂಯ ಜಹಗೀರದಾರ
ಕೊಪ್ಪಳ