ಸೌಂದರ್ಯದ  ಅಳತೆಗೋಲಿಗೆ ಮಹಿಳೆಯರ ಮುಖವನ್ನೇ ಮೊದಲಾಗಿಸುವುದು ಸಾಂಪ್ರದಾ ಯಿಕವಾಗಿ ನಡೆದು ಬಂದಿರುವ ವಿಚಾರ. ಮುಖ ವೊಂದರ ಅಂದ ಚಂದಕ್ಕೆ ಕಣ್ಣು, ಮೂಗು, ಕೆನ್ನೆ, ತುಟಿ ಮತ್ತು ಬಾಯಿಯ ಜೊತೆ ಕಾಲಾನುಕ್ರಮ ದಲ್ಲಿ ಮತ್ತೆ ಮತ್ತೆ ಸೇರ್ಪಡೆಯಾಗಿರುವುದು ಮಹಿಳೆಯ ಹುಬ್ಬುಗಳು. ಈ ಹುಬ್ಬುಗಳಿಗೂ ಫ್ಯಾಷನ್ ಸೋಕಿದಾಗಿಂದ ಅವುಗಳ ಸ್ವರೂಪ ಗಳು ಮನುಷ್ಯ ಹುಬ್ಬೇರಿಸುವಷ್ಟರ ಬಗ್ಗೆ ಬದಲಾ ಗುತ್ತ ನಡೆದಿರುವುದನ್ನು ನೋಡಬಹುದು.

ಮುಖದ ಇತರೆ ಅಂಗಗಳಂತೆಯೇ ಸೌಂದರ್ಯ ದ ಹೊರತಾಗಿ ಹುಬ್ಬಿಗೂ ತನ್ನದೇ ಆದ ಕೆಲಸ ವಿದೆ. ಹುಬ್ಬಿನ ಕೆಲಸವೆಂದರೆ, ಧೂಳು, ನೀರು, ಬೆವರು ಕಣ್ಣಿಗೆಬೀಳದಂತೆ ತಡೆಯುವುದು ಮತ್ತು ಅಪಘಾತಗಳಾದ ಸಂದರ್ಭದಲ್ಲಿ ಕಣ್ಣಿಗೆ ರಕ್ಷಣೆ ಒದಗಿಸುವುದೇ ಆಗಿದೆ. ಸೂರ್ಯನ ಪ್ರಖರ ಬೆಳಕಿನಿಂದಲೂ ಅಲ್ಪ ಮಟ್ಟಿಗಿನ ರಕ್ಷಣೆಯನ್ನು ಹುಬ್ಬುಗಳು ನೀಡುತ್ತವೆ.ಈಎಲ್ಲಾ ಕಾರಣಗಳಿಗಾ ಗಿ ಸಾಮಾನ್ಯವಾಗಿ ಉಬ್ಬಿದ ಹುಬ್ಬಿನ ಮೂಳೆಯ ಕೆಳಭಾಗದ ಆಕೃತಿಯಲ್ಲೇ ಹುಬ್ಬು ಬೆಳೆಯುತ್ತದೆ. ಆದರೆ ಮನುಷ್ಯನ ವಿಕಸನವಾದಂತೆಲ್ಲ ಹುಬ್ಬು ಗಳು  ನಮ್ಮ  ಮುಖದ  ಹಲವು   ಭಾವಗಳನ್ನು ವ್ಯಕ್ತಪಡಿಸುವ ಬಹುಮುಖ್ಯ ಅಂಗಗಳಾಗಿಯೂ ಕೆಲಸ ಮಾಡುತ್ತಿವೆ.

ಮನುಷ್ಯ ಮಂಗನಾಗಿ ಕಾಡುಮೇಡಿನಲ್ಲಿದ್ದ ಕಾಲ ದಲ್ಲಿ ಹುಬ್ಬಿನ  ಭಾಗದ ಮೂಳೆ ಬಹು ಎತ್ತರವಾ ಗಿದ್ದು, ಹುಬ್ಬು ದಪ್ಪ ದಿಂಡಿನಂತೆ  ಅಥವಾ ಪೊದೆ ಯಂತೆ ಕೂದಲನ್ನು ಹೊಂದಿತ್ತು.ಆಗಹಣೆ ಬಹಳ ಚಿಕ್ಕದಾಗಿತ್ತು. ಆದರೆ ಮನುಷ್ಯ ವಿಕಸಿತನಾದಂತೆ ಲ್ಲ ಸಾಮಾಜಿಕ ಜೀವಿಯಾದ ಆತ ಮುಖವನ್ನು ಇತರರೊಡನೆ ಸಂವಾದಿಸುವಲ್ಲಿ ಹಲವುರೀತಿಯ ಲ್ಲಿ ಬಳಸತೊಡಗಿದ ಕಾರಣ ಹಣೆಯ ಸ್ನಾಯು ಗಳು ಅಗಲವಾಗಿ, ನೆತ್ತಿ ಮೇಲಕ್ಕೇರಿತಂತೆ ಅದರ ಜೊತೆಯಲ್ಲೇ ಆತ ಕಾಡಿನ ಜೀವನವನ್ನು ತೊರೆ ದು ನಾಡಿನ ಬದುಕನ್ನು ರೂಪಿಸಿಕೊಂಡ ನಂತರ ಪೊದೆಹುಬ್ಬುಗಳು ಕಾಣೆಯಾಗಿ, ಹುಬ್ಬಿನ ಎತ್ತರ ದಲ್ಲೂ ಮಾರ್ಪಾಡಾಯಿತು ಎನ್ನುವುದು ವಿಕಸನ ಸಿದ್ದಾಂತ. ಆದರೆ ಪ್ರಕೃತಿ ನೀಡಿದಂತಹ ರೋಮ ಭರಿತ ಹುಬ್ಬಿಗೆ ತನ್ನಿಷ್ಟದ ಆಕೃತಿಯನ್ನು ನೀಡುವ ಕೆಲಸವನ್ನು ಮನುಷ್ಯ ಶತಮಾನಗಳಿಂದಲೂ ತನ್ನ ಕೈಗೆತ್ತಿಕೊಂಡಿದ್ದಾನೆ.

 ಇದು ಹುಬ್ಬೇರಿಸುವ ವಿಚಾರವೇನಲ್ಲ.

ಮೇಲಕ್ಕೇರಿ ಬಾಗುವ ಹುಬ್ಬುಗಳನ್ನು ಯೌವನದ ಮತ್ತು ಸೌಂದರ್ಯದ ಲಕ್ಷಣವೆಂದು ಗುರುತಿಸು ವುದು ಶತಮಾನದಿಂದ ಬಂದಿರುವ ವಾಡಿಕೆ. ಹಾಗಾಗಿ ನೇರಕ್ಕಿರುವ ಅಥವಾ ಕೆಳಗಿರುವ ಹುಬ್ಬುಗಳ ಜಾಗವನ್ನು ಬದಲಿಸುವುದು ಅಥವಾ “ಐ ಬ್ರೊ ಲಿಫ್ಟಿಂಗ್” ಬಹಳ ಹಳೆಯ ಪದ್ದತಿ. 1919 ರಲ್ಲಿ ಫ್ರೆಂಚ್ ವೈದ್ಯ ಡಾ.ರೇಮಂಡ್ ಪಸ್ಸಾಟ್ ಈಬಗ್ಗೆ ಬರೆದ ಲೇಖನ ಲಭ್ಯವಿದೆ. 8ನೇ ಶತಮಾನದಲ್ಲಿ ಜಪಾನಿನಲ್ಲಿ ಹಿಕಿಮಾಯು ಎಂದು ಕರೆವ ಹುಬ್ಬನ್ನು ಶೇವ್ ಮಾಡಿಕೊಳ್ಳುವ ಅಥವಾ ಚಿಮುಟದಿಂದ ಕಿತ್ತುಕೊಳ್ಳುವ ವಿಧಾನ ಗಳ ಬಗ್ಗೆ ಉಲ್ಲೇಖವಿದೆ. ಆದರೆ 3500BC- 2500BC ಯಲ್ಲಿ ಇದ್ದ ಈಜಿಪ್ಟಿನ ಹೋರಸ್ ನಂತಹ ದೇವತೆಗಳಲ್ಲಿ ಹುಬ್ಬುಗಳು ದಪ್ಪಗೆ, ಕಪ್ಪ ಗೆ ಉದ್ದಕ್ಕಿದ್ದು ಬಣ್ಣದಲ್ಲಿ ಅದ್ದಿದಂತೆ ಇದ್ದುದನ್ನು ದೊರಕಿರುವ ಪೇಂಟಿಗ್ ಗಳಲ್ಲಿ ನೋಡಬಹುದು.

ಕ್ಲಿಯೋಪಾತ್ರಳ ದಪ್ಪ ಹುಬ್ಬುಗಳು ಇವತ್ತಿಗೂ ಪ್ರಸಿದ್ದವೇ ಸರಿ. 800 BC – 146 BC ಯಲ್ಲಿ ರೋಮನ್ನರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೂಡುಬ್ಬಿಗಳೇ ಸುಂದರಿಯರೆಂದು ಪರಿ ಗಣಿಸಿದ್ದರು. ಮದುವೆಯಾದ ಹೆಂಗಸರಿಗೆ ದಟ್ಟ ಹುಬ್ಬಿದ್ದಲ್ಲಿ ಅವನ್ನು ಮದುವೆಯಿಲ್ಲದ ತರುಣಿ ಯರು ಮುಟ್ಟಿದರೆ ಅವರಿಗೆ ಬೇಗ ಮದುವೆಯಾ ಗುತ್ತದೆ ಎಂಬ ಪದ್ದತಿಗಳಿದ್ದವಂತೆ. 753  BC476 AD ಯಲ್ಲಿ ಫ್ಯಾಷನ್ ಪ್ರಿಯ ರೋಮನ್ನರಿ ಗೂ ದಟ್ಟ ಹುಬ್ಬುಗಳೇ ಸುಂದರವಾಗಿದ್ದವಂತೆ. 1066 – 1485 ದ ಮಧ್ಯಪ್ರಾಚೀನ ಮಹಿಳೆಯ ರು ಇದನ್ನು ಬದಲಿಸಿ ಹುಬ್ಬೇ ಕಾಣದಂತೆ ಚಿಮು ಟಗಳ ಮೂಲಕ ಹುಬ್ಬನ್ನು ಬೋಳಿಸಿಕೊಳ್ಳುತ್ತಿ ದ್ದುದು ಈಗ ಇತಿಹಾಸ. ಆದರೆ ಕಾಲ ಮತ್ತೆ ತನ್ನ ಕೈಚಳಕವನ್ನು ತೋರುತ್ತಲೇ ನಡೆದಿರುವುದನ್ನು ಕಾಣಬಹುದು.

1920 ರಲ್ಲಿ ಅತಿ ಸಣ್ಣ ಗೀರಿನ ಕಮಾನಿನಂತಿದ್ದ ಹುಬ್ಬಿನ ಫ್ಯಾಷನ್ 1930 ರ ವೇಳೆಗೆ ದುಂಡಗೆ ಮೇಲಕ್ಕೇರಿ ಬಾಗಿದವು. ಈ ಅರೆ ದುಂಡನೆಯ ಆಕಾರಕ್ಕೆ ಬಣ್ಣಹಚ್ಚಿ ಎದ್ದು ಕಾಣುವಂತೆ ಮಾಡು ವ ಟ್ರೆಂಡ್ ಹುಟ್ಟಿತು. 1960 ರಲ್ಲಿ ಹಾಲಿವುಡ್ ತಾರೆ ಆಡ್ರಿ ಹೆಪ್ಬರ್ನ್ ತನ್ನ ನೈಜ ದಪ್ಪ ಹುಬ್ಬುಗ ಳನ್ನು ಜನಪ್ರಿಯಗೊಳಿಸಿದಳು. ಅದನ್ನು ಜಗತ್ತಿ ಗೇ ಜನಪ್ರಿಯಗೊಳಿಸಲು ಮಾರುಕಟ್ಟೆ ಹುಬ್ಬು ಗಳನ್ನು ದಪ್ಪಗೆ ಕಾಣುವಂತೆ ಮಾಡಿಕೊಳ್ಳಲು ಅಲಂಕಾರ ಸಾಮಗ್ರಿಗಳನ್ನು ಜನರಿಗೆ ನೀಡಿತು. ಅಲ್ಲಿಂದ ಮುಂದಕ್ಕೆ ಹುಬ್ಬಿನ ಕೂದಲನ್ನು ತೆಗೆ ಯಲು, ಬೆಳೆಸಲು,ಬೇಕಾದ ಬಣ್ಣಕ್ಕೆ ಬದಲಾಯಿ ಸಲು, ಹೆಚ್ಚು ಕಡಿಮೆ ಬೇಕಾದ ಜಾಗಕ್ಕೆ ಹುಬ್ಬನ್ನು ಏರಿಸಿ ಇಳಿಸಲು  ಉದ್ಯಮಗಳು ಹೊಸ ಹೊಸ ಆವಿಷ್ಕಾರಗಳಿಗೆ ಕೈ ಹಚ್ಚಿತು. ಇದೀಗ ಹುಬ್ಬಿನ ಟ್ರೆಂಡ್ ಮತ್ತು ಮೇಕಪ್ಪುಗಳು ಪ್ರತಿ ವರ್ಷವೂ ಬದಲಾಗುವುದು  ಸಾಮಾನ್ಯ ಸಂಗತಿಯೆನಿಸಿದೆ.

70 ರ ದಶಕದಲ್ಲಿ ಮತ್ತೆ ಸಣ್ಣ ಗೀರಿನಂತ ಸೆಟೆದು ಬಾಗಿ ನಿಂತ ಹುಬ್ಬುಗಳು ಮರೆಯಾಗಿ, ಇದೀಗ ಮಾಟವಾದ ದಪ್ಪ ಕಪ್ಪಗಿನ ಹುಬ್ಬಗಳು ಮತ್ತೆ ಜನ ಪ್ರಿಯವಾಗಿದೆ.ಈ ಸೌಂದರ್ಯದ ನಿಯಮ ಗಳನ್ನು ತನ್ನ ತಾಳಕ್ಕೆ ತಕ್ಕಂತೆ ಕುಣಿಸುವುದು ಮಾರುಕಟ್ಟೆಯಲ್ಲದೆ ಮತ್ತೊಂದಲ್ಲ. ಸಣ್ಣ ಗೀರಿ ನಂತಹ ಹುಬ್ಬುಗಳು ನಾಗರೀಕ ಮಹಿಳೆಯರ ಲಕ್ಷಣಗಳು ಎಂದಾಗ ಹುಬ್ಬನ್ನು ಸಣ್ಣಗೆ ಮಾಡಿ ಕೊಳ್ಳುವ ಎಲ್ಲ ಸಾಧನಗಳನ್ನು ಜನರಿಗೆ ತಲುಪಿ ಸಿದ ಮಾರುಕಟ್ಟೆ, ಇದೀಗ ದಪ್ಪ ಹುಬ್ಬನ್ನು ರೂಪಿ ಸಲು ಬೇಕಾದ ಎಲ್ಲ ಪ್ರಸಾಧನಗಳನ್ನು ಮಾರಾ ಟಮಾಡುತ್ತಿದೆ. ಆದರೆ ಇದೀಗ ದಪ್ಪ ಹುಬ್ಬುಗಳು ಹಲವಾರು ತಿಂಗಳುಗಳ ಕಾಲ ಇರುವಂತೆ ಹೊಸ ಸೌಂದರ್ಯ ಚಿಕಿತ್ಸೆಗಳನ್ನು ಶುರುಮಾಡಿಲ್ಪಟ್ಟಿವೆ.

ಪ್ರತಿಯೊಬ್ಬರ ಹುಬ್ಬಿನ ಕೂದಲು ಎಷ್ಟಿರಬೇಕು ಎನ್ನುವ ಗಣಿತ ಆಯಾ ಮನುಷ್ಯನ ಚರ್ಮದಲ್ಲಿ ಹೊಸೆದುಕೊಂಡಿದೆ. ಅದರಂತೆ ಎಷ್ಟು ಬೆಳೆಯ ಬೇಕು ಎನ್ನುವುದು ಕೂಡ. ಅಂದರೆ,  ತಲೆಯ ಮೇಲೆ ಉದ್ದಕ್ಕೆ ಬೆಳೆಯುವ ಕೂದಲು ಹುಬ್ಬಿನ ಲ್ಲಿ ಕಡಿಮೆ ಬೆಳೆಯುತ್ತದೆ. ಹುಬ್ಬಿನ ಕೂದಲು ನಾಶವಾಗಿ ಕೂದಲ ಬೇರುಗಳು ಆರೋಗ್ಯವಾಗಿ ದ್ದಲ್ಲಿ ಸಾಮಾನ್ಯವಾಗಿ ಸುಮಾರು 45 ದಿನಗಳಲ್ಲಿ ಹುಬ್ಬು ಮತ್ತೆ ಬೆಳೆದುಕೊಳ್ಳುತ್ತದೆ. ಆರೋಗ್ಯವಾ ಗಿದ್ದು ಹುಬ್ಬಿಲ್ಲದೆ ಹುಟ್ಟಿದ ಮಕ್ಕಳಲ್ಲಿ ಕೂಡ ನಿಧಾನವಾಗಿ ಹುಬ್ಬು ಬೆಳೆಯುತ್ತದೆ. ವಯಸ್ಸಿಗೆ ತಕ್ಕಂತೆ ಹುಬ್ಬಿನ ಕೂದಲಿನ ಬೆಳವಣಿಗೆಯಲ್ಲಿ ಕೂಡ ಬದಲಾವಣೆಯಾಗುವುದು ಸಾಮಾನ್ಯ.

ಸೌಂದರ್ಯಕ್ಕಾಗಿ  ಹುಬ್ಬುಗಳನ್ನು ಸಣ್ಣಗೆ ಮತ್ತು ಬೇಕಾದ ಆಕಾರಕ್ಕೆ ಮಾಡಿಕೊಳ್ಳಲು ವ್ಯಾಕ್ಸಿಂಗ್, ಥ್ರೆಡಿಂಗ್ ಮತ್ತು ಪ್ಲಕಿಂಗ್, ಶೇವಿಂಗ್ ಮತ್ತಿತರ ವಿಧಾನಗಳು ಚಾಲ್ತಿಯಲ್ಲಿವೆ. ಎಲೆಕ್ಟ್ರೊನಿಕ್ ಪ್ಲಕರ್ ಗಳು ಕೂಡ  ಬಳಕೆಯಲ್ಲಿ ಇವೆ. ಪೂರ್ವ ಭಾಗದ ದೇಶಗಳಲ್ಲಿ ಥ್ರೆಡಿಂಗ್ ಜನಪ್ರಿಯ ವಿಧಾ ನವಾದರೆ, ಪಾಶ್ಚಿಮಾತ್ಯ ದೇಶಗಳಲ್ಲಿ ವ್ಯಾಕ್ಸಿಂಗ್ ಜನಪ್ರಿಯ ವಿಧಾನವಾಗಿದೆ.

ಹುಬ್ಬನ್ನು ದಟ್ಟವಾಗಿ ಕಾಣುವಂತೆ ಮಾಡಲು ಪೆನ್ಸಿಲ್ ಮತ್ತು ಬ್ರಷ್ ಗಳು, ಐ ಶಾಡೋಗಳು, ಬಣ್ಣದ ಪುಡಿಗಳು, ತಲೆಯ ಕೂದಲಿಗೆ ಹಚ್ಚು ವಂತ ಹುಬ್ಬಿನ ಅರೆಶಾಶ್ವತ ಮತ್ತು ಶಾಶ್ವತ ಹೇರ್ ಡೈಗಳು, ಜೆಲ್ ಗಳು, ಪೈಂಟ್  ಮತ್ತು ಮೈಕ್ರೊ ಟಿಂಟಿಂಗ್  ಪೆನ್ಸಿಲ್ ಗಳು ಲಭ್ಯವಿವೆ.

ಕೆಲವರಲ್ಲಿ ಅನುವಂಶಿಕವಾಗಿ, ಮತ್ತೆ ಕೆಲವರಲ್ಲಿ ಅತಿಯಾಗಿ ಪ್ಲಕಿಂಗ್ ಮಾಡಿಕೊಳ್ಳುವ ಕಾರಣ, ಎಲೆಕ್ಟ್ರೊಲಿಸಿಸ್ ಅಥವಾ ಲೇಸರ್ ಹೇರ್ ರಿಮೂವಲ್  ಕಾರಣ, ಹಾರ್ಮೋನುಗಳು ಏರು ಪೇರಾಗುವ ಕಾರಣ, ವಯಸ್ಸಿನ ಕಾರಣ ಹುಬ್ಬು ಗಳು  ಕಡಿಮೆಯಾಗಬಹುದು. ಇವರಿಗೆ ಹುಬ್ಬಿನ ಕೂದಲನ್ನು ಬೆಳೆಸುವ ಭರವಸೆ ನೀಡುವ ಸೀರಂ ಗಳು  ಈಗ ಮಾರುಕಟ್ಟೆಗೆ ಬಂದಿವೆ. ಹುಬ್ಬಿಗಾಗಿ ಯೇ ಬಾಚಣಿಗೆ, ಬ್ರಶ್ ಮತ್ತು ಪ್ರಚೋದಿಸುವ ಸ್ಟಿಮ್ಯುಲೇಟರ್ ಗಳು ಲಭ್ಯವಿವೆ.

ಕೆಲವು ಬಾರಿ ಸರ್ಜರಿಗಳ ಕಾರಣ, ಹುಬ್ಬಿನ ಕೂದಲಿನ ಭಾಗಕ್ಕೆ ಗಾಯಗಳಾದರೆ ಅಥವಾ ಕೂದಲು ಆಕಸ್ಮಿಕವಾಗಿ ಸುಟ್ಟರೆ ಕೂದಲಿನ ಬೇರುಗಳು ಶಾಶ್ವತವಾಗಿ ನಾಶವಾಗಿ ಹುಬ್ಬಿನ ಕೂದಲು ಬೆಳೆಯದೇ ಇರಬಹುದು.

ಕೆಲವರಿಗೆ ಹುಬ್ಬಿನ ಮೊದಲರ್ಧಭಾಗದಲ್ಲಿ ಕೂದ ಲಿದ್ದು ಉಳಿದರ್ಧ ಬಹಳ ಕಡಿಮೆ ಕೂದಲಿರಬ ಹುದು. ಮತ್ತೆ ಕೆಲವರಿಗೆ ಹಲವು ಖಾಯಿಲೆಯ ಕಾರಣ ಅಥವಾ ಚಿಕಿತ್ಸೆಯ ಕಾರಣ ಹುಬ್ಬಿನ ಕೂದಲು ಕಾಣೆಯಾಗಬಹುದು. ಪುರಾಣಗಳಲ್ಲಿ ಯೂ ಕೂಡ ಹುಬ್ಬಿಲ್ಲದ ದೇವಾನು ದೇವತೆಗಳ ಉಲ್ಲೇಖವೂ ಸಿಗುತ್ತದೆ. ಆಧಾರಗಳಿಲ್ಲದಿದ್ದರೂ ಕೆಲವು ಅಂಬೋಣಗಳ ಪ್ರಕಾರ ಅಶ್ವಿನಿ ದೇವತೆ ಗಳಿಗೆ ಹುಬ್ಬೇ ಇರಲಿಲ್ಲವಂತೆ! ಜಗತ್ಪ್ರಸಿದ್ದವಾದ ಮೋನಾಲಿಸಾಳಿಗೂ ಅತಿಕಡಿಮೆ ಹುಬ್ಬಿರುವುದ ದನ್ನು ಕಾಣಬಹುದು.

ಇಂತಹವರಿಗೆ ಹುಬ್ಬನ್ನು ಹಚ್ಚೆಯ ಮೂಲಕ ಬೇಕಾದಂತೆ ಬರೆಯುವ   ಹೊಸ ವಿಧಾನಗಳು (Eyebrow Tattooing ) ಈಗ ಶುರುವಾಗಿ ವೆ. ಹಚ್ಚೆಯ ಇಂಕನ್ನು ಬಳಸಿ ಬರೆಯುವ ಹುಬ್ಬು ಗಳು ಶಾಶ್ವತವೇನಲ್ಲ.ಆಗಾಗ ಮತ್ತೆ ಮತ್ತೆ ಇದನ್ನ ಮಾಡಿಸಿಕೊಳ್ಳಬೇಕಾಗಬಹುದು.

ಮೈಕ್ರೊ ಸ್ಟ್ರೋಕಿಂಗ್, ಮೈಕ್ರೊ ಬ್ಲೇಡಿಂಗ್, ನ್ಯಾನೋ ಬ್ಲೇಡಿಂಗ್, ಐ ಬ್ರೊ ಕಸೂತಿ ಅಥವಾ ಬ್ಲೇಡ್ ಅಂಡ್ ಶೇಡ್ ಎಂದು ಕರೆವ ಮತ್ತೊಂದು ವಿಧಾನದ ಶಾಶ್ವತ ಹುಬ್ಬಿನ ಮೇಕಪ್ಪುಗಳು ಈಗ ಮಾರುಕಟ್ಟೆಯಲ್ಲಿವೆ. ಈ ವಿಧಾನದಲ್ಲಿ   ವ್ಯಕ್ತಿಗೆ ಹೊಂದುವ ಬಣ್ಣದ ವರ್ಣದ್ರವ್ಯ (ಪಿಗ್ಮೆಂಟು) ಗಳನ್ನು ಕಾಯ್ಲ್, ರೋಟರಿ ಮತ್ತು ಲೈನಿಯರ್ ಮಿಷೀನ್ ಗಳ ಮೂಲಕ ಬಳಸಲಾಗುತ್ತದೆ ಅಥ ವಾ ಹುಬ್ಬನ್ನು ಬರೆಯಬಲ್ಲ ಕಲಾವಿದರು ಹುಬ್ಬಿ ನ ಕೂದಲನ್ನು ಹೋಲುವಂತೆ ಚರ್ಮದಲ್ಲಿ ಚಿಕ್ಕ ಬ್ಲೇಡನ್ನು ಬಳಸಿ ಸಣ್ಣಸಣ್ಣ ಎಳೆಗಳನ್ನು ಎಳೆದು ಅದರಲ್ಲಿ ಬಣ್ಣವನ್ನು ತುಂಬುತ್ತಾರೆ.ಇದು ಶಾಶ್ವತ ಎನ್ನುತ್ತಾರಾದರೂ ಆಗಾಗ ಇದರ ಬಣ್ಣವನ್ನು ಮತ್ತೆ ಮತ್ತೆ ತುಂಬಿಸಿಕೊಳ್ಳಬೇಕಾಗುತ್ತದೆ.

ಮೈಕ್ರೊ ಫೆದರಿಂಗ್ ಅಥವಾ ಮೈಕ್ರೊ ಥ್ರೆಡಿಂಗ್ ಎಂಬ ವಿಧಾನಗಳಲ್ಲಿ ಸಣ್ಣ ಸಣ್ಣ ಸೂಜಿಗಳನ್ನು ಬಳಸಿ ಹುಬ್ಬನ್ನು ಹೋಲುವಂತೆ ಒಪ್ಪುವ ಬಣ್ಣ ಗಳನ್ನು ಬಳಸಿ ಶಾಶ್ವತವಾಗಿ  ಹುಬ್ಬನ್ನು ಚರ್ಮದ ಒಳಗಿನಿಂದಲೇ  ಬರೆಯುವ ಹೊಸ ವಿಧಾನಗಳು ಬಂದಿವೆ.  

ಮೇಲಿನ ಯಾವುದೇ ವಿಧಾನಗಳು ಚರ್ಮದ ತೊಂದರೆಯಿರುವ ಜನರಿಗೆ ಹೊಂದಿಕೆಯಾಗದಿರ ಬಹುದು.ಹಾಗಾಗಿ ಎಚ್ಚರವಹಿಸಿ ಜೊತೆಗೆ ಪರಿಣಿ ತರಿಂದ ಮಾತ್ರ ಈ ಚಿಕಿತ್ಸೆಗಳನ್ನು ಪಡೆಯಿರಿ.

ಇತ್ತೀಚೆಗೆ ಬಕ್ಕ ತಲೆಯನ್ನು ಮತ್ತೆ ಕಪ್ಪಾಗಿಸಲು ಹೇರ್ ಟ್ರಾನ್ಸ್ ಪ್ಲಾಂಟ್ ಗಳ ಚಿಕಿತ್ಸೆ ದೊರಕುತ್ತಿ ರುವುದು ನಿಮಗೆ ತಿಳಿದಿರಬಹುದು. ಅದೇ ರೀತಿ ಹುಬ್ಬಿನ ಕಸಿಯ ಚಿಕಿತ್ಸೆ ಕೂಡ ಲಭ್ಯವಿದೆ. ಬೇಡ ವಾದ ಹುಬ್ಬಿನ ಕೂದಲು ಅಥವಾ ತಲೆಯ ಹಿಂ ಭಾಗದಿಂದ ಕೂದಲ ಕಸಿಯನ್ನು ತೆಗೆದು ಬೇಕಾದ ಸ್ಥಳದಲ್ಲಿ, ಬೇಕಾದ ಆಕಾರಕ್ಕೆ ತಕ್ಕಂತೆ ಹುಬ್ಬನ್ನು ಕಸಿ ಮಾಡಲಾಗುತ್ತಿದೆ. ತಲೆಯ ಕೂದಲಾದಲ್ಲಿ ಉದ್ದಕ್ಕೆ ಬೆಳೆಯುವ ಸಾಧ್ಯತೆಯಿರುವ ಕಾರಣ ಇದನ್ನು ನಿಯಮಿತವಾಗಿ ಕತ್ತರಿಸಿಕೊಳ್ಳಬೇಕಾಗು ತ್ತದೆ. ಇದು ಅತಿ ನಾಜೂಕಾದ ಸರ್ಜರಿ. ಹಾಗಾಗಿ ಒಂದೋ ಎರಡೋ ಕೂದಲನ್ನು ಸರಿಯಾದ ಕೋನದಲ್ಲಿ ಅತಿಸಣ್ಣ ಸಾಧನಗಳನ್ನು ಬಳಸಿ ಕಸಿ ಮಾಡಲಾಗುತ್ತದೆ. 50 ರಿಂದ 325 ಕೂದಲುಗಳ ನ್ನು ಪ್ರತಿ ಹುಬ್ಬಿನಲ್ಲಿ ಅಗತ್ಯಕ್ಕೆ ತಕ್ಕಂತೆ ಕೂಡಿಸ ಲಾಗುತ್ತದೆ. ಹೀಗೆ ಕಸಿ ಮಡಿದ ಕೂದಲುಗಳು 2 ವಾರದ ನಂತರ ಉದುರಿಹೋಗಿ ಹೊಸ ಕೂದ ಲುಗಳು 3ತಿಂಗಳ ನಂತರ ಬೆಳೆಯತೊಡಗುತ್ತವೆ.

ಇತ್ತೀಚೆಗೆ ‘ರೋಮಂ ಪುರುಷ ಲಕ್ಷಣಂ’ ಎನ್ನುವ ಅಲಿಖಿತ ನಿಯಮವನ್ನು ಮುರಿಯುವ ಪುರುಷ ರ ಹೊಸ ದಂಡೇ ಹುಟ್ಟಿಕೊಂಡಿದೆ. ನಿಯಮಿತ ವಾಗಿ ದೇಹದ ಕೂದಲನ್ನು ವ್ಯಾಕ್ಸಿಂಗ್ ಮೂಲಕ ತೆಗೆಸಿಕೊಳ್ಳುವ ಇವರು ತಮ್ಮ ಕೂದಲಿನ ಹುಬ್ಬು ಗಳನ್ನು ಮಾಟವಾಗಿ ವ್ಯಾಕ್ಸಿಂಗ್ ಅಥವಾ ಥ್ರೆಡಿಂಗ್ ಮೂಲಕ ತೆಗೆಸಿಕೊಳ್ಳುವುದು ಜನಪ್ರಿ ಯವಾಗುತ್ತಿದೆ. ಇವರು  ನಿಯಮಿತವಾಗಿ ಹುಬ್ಬಿ ನ ಕೂದಲನ್ನು ಮಹಿಳೆಯರಂತೆಯೇ ಪ್ಲಕಿಂಗ್ ಮಾಡಿಕೊಳ್ಳುತ್ತಾರೆ. ಇದು ಪಾಶ್ಚಿಮಾತ್ಯ ದೇಶಗ ಳಲ್ಲಿ  ಅತಿ ಸಾಮಾನ್ಯವಾದ ಸಂಗತಿಯಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ  ದಟ್ಟ ಕಪ್ಪು ಹುಬ್ಬುಗಳು ಹಲವು ದೇಶಗಳಲ್ಲಿ ಬಹಳ ಜನಪ್ರಿಯ ವಿಚಾರ ಗಳಾಗಿವೆ. ಅದರಲ್ಲೂ ಕೂಡು ಹುಬ್ಬುಗಳು ಅಥವಾ ಯೂನಿಬ್ರೊಗಳು ಅರಬ್ಬೀ ಸಂಸ್ಕೃತಿ ಯಲ್ಲಿ ಸೌಂದರ್ಯದ ಸಂಕೇತಗಳು.  ಎಷ್ಟರ ಮಟ್ಟಿಗೆಂದರೆ ಹಲವು  ಒಮಾನ್ ದೇಶದ ಮಹಿ ಳೆಯರು ಪೆನ್ಸಿಲ್ ಬಳಸಿ ಹುಬ್ಬುಗಳು ಕೂಡು ವಂತೆ ಗೆರೆಗಳನು ಬರೆದುಕೊಳ್ಳುತ್ತಾರೆ. ಇದು ಅವರ ದೈನಂದಿನ ಮೇಕಪ್ಪಿನ ಕ್ರಮವಾ ಗಿದೆ.

ತಜಾಕಿಸ್ತಾನದಲ್ಲಿ ಕೂಡು ಹುಬ್ಬು ಹೆಂಗಸು ಮತ್ತು ಗಂಡಸರಲ್ಲಿಯೂ ಸೌಂದರ್ಯದ ಸಂಕೇತವೆನಿಸಿದೆ. ಹೆಂಗಸರಲ್ಲಿ ಇದು ಕನ್ಯತ್ವ ಮತ್ತು ಶುದ್ದತೆಯ ಸಂಕೇತವಾದರೆ, ಗಂಡಸರಿಗೆ ಇದು ವೀರ್ಯವಂತಿಕೆಯ ಗುರುತಾಗಿದೆ. ಹೀಗಾಗಿ ಪುರುಷ ಮತ್ತು ಮಹಿಳೆಯರಿಬ್ಬರೂ ಕೂಡು ಹುಬ್ಬುಗಳನ್ನು ಬರೆದುಕೊಳ್ಳುವುದು ಫ್ಯಾಷನ್ ಕೂಡ.

ಆದರೆ ಇತರೆ ದೇಶಗಳಲ್ಲಿ ಕೂಡು ಹುಬ್ಬನ್ನು ಸೌಂದರ್ಯವೆಂದು ಪರಿಗಣಿಸುವುದಿಲ್ಲ.

ವಯಸ್ಸಾಗುವ ಕಾರಣ ಹುಬ್ಬಿನ ಕೂದಲು ತೆಳ್ಳಗಾಗಬಹುದು.  ಬೊಟಾಕ್ಸ್  ಚಿಕಿತ್ಸೆ ಅಥವಾ ಫೇಸ್ ಲಿಫ್ಟ್ ಚಿಕಿತ್ಸೆಗಳಲ್ಲಿ ಕೂಡ ಹುಬ್ಬಿನ ಸ್ಥಾನವನ್ನು ಬದಲಿಸುವ ತಂತ್ರಗಳಿವೆ.

ಹಣೆಯ ಸುಕ್ಕುಗಳನ್ನು ಹೋಗಲಾಡಿಸಲು ಬೊಟಾಕ್ಸ್ ಅಥವಾ ಅಂತಹ ಕೆಲವು ನಂಜಿನ ದ್ರವವನ್ನು ಇಂಜೆಕ್ಷನ್ ಮೂಲಕ ಪಡೆಯುವ ಜನರಲ್ಲಿ ಸ್ನಾಯುಗಳು ಅರೆ ಬರೆ ಕೆಲಸ ಮಾಡು ವ ಕಾರಣ ಹುಬ್ಬುಗಳು ಮೇಲೇರದೆ ಇರಬಹು ದು.ಇದೇ ಬೋಟಕ್ಸ್ ನ್ನು ಬಳಸಿ ಹುಬ್ಬು ಮೇಲೇ ರುವಂತಹ ಚಿಕಿತ್ಸೆ ನೀಡುವುದು ಸಾಧ್ಯವಿದೆ.

ಒಟ್ಟಿನಲ್ಲಿ  ಕಣ್ಣಿನ ರಕ್ಷಣೆಗೆ, ಮುಖದಲ್ಲಿ ಭಾವನೆ ಗಳನ್ನು ಅಭಿವ್ಯಕ್ತಗೊಳಿಸಲು ಇರುವ ಹುಬ್ಬುಗಳ ಸೌಂದರ್ಯವನ್ನು ಹೆಚ್ಚಿಸಲು ಮನುಷ್ಯ ಹುಬ್ಬುಗ ಳನ್ನು  ಅವಿರತವಾಗಿ   ಆಯಾ ಕಾಲದ ಸೌಂದ ರ್ಯದ ಅಳತೆಗೋಲಿಗೆ ತಕ್ಕಂತೆ ಮಾರ್ಪಾಟು ಮಾಡಿಕೊಂಡು ಬಳಸಿಕೊಳ್ಳುತ್ತಿದ್ದಾನೆ.

ಡಾ.ಪ್ರೇಮಲತ ಬಿ
ದಂತವೈದ್ಯರು
ಲಂಡನ್, ಇಂಗ್ಲೆಂಡ್