ಹೆಂಡತಿಯೆಂಬ ಒಗಟಿನೊಡನೆ
ಸಾಗುತಿದೆ ಒಲವಪಥದಲಿ
ಸಂಸಾರವೆಂಬ ಸಾರೋಟು.!
ಮದುವೆಯೆಂಬ ಮೂರುಗಂಟು
ಬೆಸೆದ ಜನ್ಮಾಂತರದ ನಂಟು.!
ಸಪ್ತಪದಿ ತುಳಿದು ಅಂದು
ಜೊತೆಯಾಗಿ ಶುರುವಾದದ್ದು
ಬದುಕಿನ ಹೊಸ ಹಾದಿ..!
ಹತ್ತಾರು ಸಡಗರ ಸಂಭ್ರಮಗಳ
ನೂರಾರು ನೋವು ನಲಿವುಗಳ
ಹಲವಾರು ಕನಸುಗಳ ಯಾದಿ.!
ಇಷ್ಟೆಲ್ಲ ವರ್ಷ, ಎಷ್ಟೆಲ್ಲ ಹರ್ಷ.!
ಹಾದಿ ಸವೆದಿದ್ದು, ಕಾಲ ಸರಿದಿದ್ದು
ತಿಳಿಯಲಿಲ್ಲ, ತಿಳಿಯುತ್ತಲೇ ಇಲ್ಲ.!
ಏಕೆಂದರೆ ನಾವೆಂದು, ಇಂದಿಗೂ
ಗಂಡ-ಹೆಂಡತಿಯರಾಗಲೇ ಇಲ್ಲ.!
ಶುದ್ದ ತರಲೆ ತೀಟೆ ತುಂಟಾಟ.!
ಶತೃಗಳಂತೆ ಹಟ ಜಗಳ ಕಿತ್ತಾಟ.!
ಈಗಲೂ ಅದೇ ಮಕ್ಕಳಂತೆ ಆಟ..!
ಅನುಕ್ಷಣ ಅಗಲದ ಒಡನಾಟ.!
ಆಗಲೇ ಇಲ್ಲ ಶಿಸ್ತಿನ ಸತಿ-ಪತಿ.!
ನಾವಿಬ್ಬರು ಅಕ್ಷರಶಃ ಗೆಳೆಯ-ಗೆಳತಿ.!
ಅವಳಿಂದಿಗೂ ನನಗೆ ಒಗಟು.!
ನಾನೀಗಲೂ ಅವಳಿಗೆ ಕಗ್ಗಂಟು.!
ಆದರೂ ಮಧುರ ನಮ್ಮ ನಂಟು.!
ಹೆಂಡತಿಯ ಅರ್ಥಮಾಡಿಕೊಳ್ಳಲು
ಎಂದೂ ಪ್ರಯತ್ನಿಸಲೇಬಾರದು.!
ಆಗಲೇ ಅಮರ, ಮಧುರ, ಸಂಸಾರ.!
ಬದುಕು ನಿಜಕ್ಕೂ ಸುಖಸಾಗರ.!
ಎ.ಎನ್.ರಮೇಶ್. ಗುಬ್ಬಿ.