ಹೊಸ‌ ಸಂಖ್ಯೆ-೧೨

ಆಳವಾದ ಕಡಲಿಗೆ ಆಳವಿಲ್ಲದ ದಡವು
ಅತ್ತ ಹೋಗಿ ಇತ್ತ ಬರುವ ಮಾಯಾ ಹಡಗು
ದೋಣಿ ಮುಳುಗಲು ಸಣ್ಣ ರಂಧ್ರ ಸಾಕು
ದೇಹ ಮುಳುಗದಿರಲು ಸಶಕ್ತ ಪಂಚೇಂದ್ರಿಯಗಳಿರಬೇಕು
ಆಳದ ಕಡೆಗೆ ಹೋದ ಯಾನ ದಡದೆಡೆಗೆ ಬರುವುದು
ದಡದಲಿ ನಿಂತ ಕಣ್ಣೋಟ ಆಳದ ಕಡೆಗೆ ನೋಡುವುದು
ಗೂಟದ ಹಗ್ಗ ಕಸಿದು ಪಾಶದ ಹಗ್ಗ ಸೇರುವ ತನಕ
ದೇಹ ದೋಣಿಗಳ ಯಾನಕ್ಕೆ ದಿಕ್ಸೂಚಿಯಾಗಯ್ಯಾ
ಶ್ವೇತಪ್ರಿಯ ಗುರುವೆ

ಹೊಸ ಸಂಖ್ಯೆ-೧೩

ಕೈಚಾಚಿದ ಗರ್ಭದ ಸುತ್ತಾ ಮೈಚಾಚಿದೆ ಧರೆಯು
ಭುವಿಯಂಥ ಗರ್ಭದ ಸುತ್ತೆಲ್ಲಾ ಜೇಡರ ಬಲೆಯು
ಒಣಗುತ್ತಿದೆ ತಾಯ ಮೊಲೆಯು
ಮಳೆಯನ್ನೇ ನೋಡುತ್ತಿದೆ ಒಣಗಿದ ನೆಲವು
ಗಾಳಿಯಲಿ ತೇವವಿಲ್ಲ ನಾಲಿಗೆಯಲಿ ಹಸಿಯ ಪಸೆಯಿಲ್ಲ
ಕರುಳು ಸುತ್ತಿಕೊಂಡ ಮಗುವಿಗೆ ಗರ್ಭಜಲವೇ ಇಲ್ಲ
ಒಳಗರ್ಭ ಹೊರಗರ್ಭ ಮಿಡುಕುತ್ತಿರುವ ಕಾಲದಲಿ
ಗರ್ಭಸಂಜಾತರಿಗೆ ಮಳೆಯ ನೀರು
ಮೊಲೆಯ ಹಾಲಿನ ಅರ್ಥ ತಿಳಿಸಯ್ಯಾ
ಒಳಜೀವವ ಬಿಡದೆ ಉಳಿಸಯ್ಯಾ
ಶ್ವೇತಪ್ರಿಯ ಗುರುವೆ

ಹೊಸ ಸಂಖ್ಯೆ-೧೪

ಹಡೆವಾಗ ದುಡಿಯುವುದು ಬಿಟ್ಟು
ನುಡಿಯುವುದು ಗೊತ್ತಿಲ್ಲ ಒಡಲಿಗೆ
ಬಿರಿದ ಮಲ್ಲಿಗೆ ಹೂವಿನ ಗಿಡದ ಬೇರಿಗೆ
ಪರಿಮಳದ ಸುಖವೇ ಗೊತ್ತಿಲ್ಲ ಮೂಲಕೆ
ತನ್ನ ದಾರಿಯನು ತಾನೇ ಅರಿಯದ ಹೊಳೆಗೆ
ನೂಲುಂಡೆ ಉರುಳಿದಂತೆ ತಗ್ಗೇ ದಾರಿದೀಪ
ಗುರಿಯೆಂದರೆ ಗರ್ವವಲ್ಲ ಅಹಮಿಲ್ಲದ ಅಮ್ಮನೆಂಬೋ ದುಡಿಮೆ
ಅಲ್ಲವೇ ಶ್ವೇತಪ್ರಿಯ ಗುರುವೆ?

ಹೊಸ‌‌ ಸಂಖ್ಯೆ-೧೫

ಗೆರೆ ಎಳೆವ ಕೈವಾರ ತಂದು
ಒಂದರೊಳಗೊಂದು ಸುತ್ತುಗಳ ಸುತ್ತಿದರೂ
ಕೇಂದ್ರದ ಮೊನೆ ಮಾತ್ರ ತಾಯ ತನವು
ಹಾರಿ ಹೌಹಾರಿ ಯಾವೂರ ಸುತ್ತಿದರೂ
ಗೋರಿಗೆ ಗುರಿಯಾಗೋ ತನಕ ಬಿಡದು ತಾಯ ಮನವು
ಹಾಲೆಲ್ಲಾ ನರ ಮಾಂಸ ಮೂಳೆ ರಕುತವಾದ
ಜೋಗುಳದ ದನಿಯ ಘಮಲು
ಜೀವ ಕೇಂದ್ರಕ್ಕೆ ಪರಿಧಿ ಅವಳ ಹಾಸು ಮಡಿಲು
ಅಮ್ಮ ಎಂದರೆ ಕಂಸಗಳೇ ಇಲ್ಲದ ಆವರಣ
ಅಲ್ಲವೇ ಶ್ವೇತಪ್ರಿಯ ಗುರುವೆ?

✍️ಡಾ.ಬೇಲೂರು ರಘುನಂದನ
ಕನ್ನಡ‌ ಸಹಾಯಕ ಪ್ರಾಧ್ಯಾಪಕರು
ಸ.ಪ್ರ.ದ.ಕಾಲೇಜು,ವಿಜಯನಗರ ಬೆಂಗಳೂರು