ಮತಲಬಿಗಳೇ ತುಂಬಿರುವ ಈ ಜಗದಲಿ ಒಬ್ಬ ಮುಸಾಫಿರನೂ ನನಗೆ ಸಿಗಲಿಲ್ಲ
ದೌಲತು ದರಬಾರುಗಳೇ ತುಂಬಿರುವ ಈ ಜಗದಲಿ ಒಬ್ಬ ಮುಸಾಫಿರನೂ ನನಗೆ ಸಿಗಲಿಲ್ಲ

ಕುಂಚದಲಿ ಬಿಡಿಸಿಟ್ಟ ನಕಾಶೆಯಲ್ಲ ಈ ಜೀವನ ಎಡವಲೇಬೇಕು ನಿತ್ಯ ಪಯಣ
ಗೋರ್ಖಲ್ಲು ಬಂಡೆಗಳೇ ತುಂಬಿರುವ ಈ ಜಗದಲಿ ಒಬ್ಬ ಮುಸಾಫಿರನೂ ನನಗೆ ಸಿಗಲಿಲ್ಲ

ಮಂತ್ರಿಸಿಕೊಟ್ಟ ನೀರಿಗೇ ನಳನಳಿಸಿ ಅರಳುವ ಮುಗ್ಧ ಜನರಿಲ್ಲಿ ಬಡತನಕೆ‌ ಜೀತದಾಳು
ಬರಗಾಲದ ಬವಣೆಗಳೇ ತುಂಬಿರುವ ಈ ಜಗದಲಿ ಒಬ್ಬ ಮುಸಾಫಿರನೂ ನನಗೆ ಸಿಗಲಿಲ್ಲ

ಎಷ್ಟೆಲ್ಲ ಸಂಕಟಗಳು ಇಲ್ಲಿ ಮನಸಿಗೂ ಹೃದಯಕೂ ಢೀಕೊಟ್ಟು ರಣಕೇಕೆ ಹಾಕುವವು
ಅನಾಥ ಚಿತೆಗಳೇ ತುಂಬಿರುವ ಈ ಜಗದಲಿ ಒಬ್ಬ ಮುಸಾಫಿರನೂ ನನಗೆ ಸಿಗಲಿಲ್ಲ

ಬಿಟ್ಟು ಬಿಟ್ಟು ಬೀಳುವ ಕನಸುಗಳಿಗಿಂತ ತಟ್ಟಿ ತಟ್ಟಿ ಬರುವ ಕನಸುಗಳು ಸುಮ್ಮನಿರವು
ಜಾಲಿ ಮಾನವ ಯಂತ್ರಗಳೇ ತುಂಬಿರುವ ಈ ಜಗದಲಿ ಒಬ್ಬ ಮುಸಾಫಿರನೂ ನನಗೆ ಸಿಗಲಿಲ್ಲ

 ✍️ವೇಣು ಜಾಲಿಬೆಂಚಿ,ರಾಯಚೂರು.