ಹೊಯ್ಸಳರ ಬಹುತೇಕ ದೇವಾಲಯಗಳಂತೆ ಈ ದೇವಾಲಯ ಸಹ ನಕ್ಷತ್ರಾಕಾರದ ಜಗಲಿಯ ಮೇಲೆ ನಿರ್ಮಿತವಾಗಿದ್ದು ಸಂಪೂರ್ಣ ವೈಷ್ಣವ ತ್ರಿಕೂಟಾಚಲ ದೇವಾಲಯವಾಗಿದ್ದು ಮೂರು ಗರ್ಭ ಗುಡಿ, ಹೊಂದಿಕೊಂಡಂತ ಒಂದೇ ಅಂತ ರಾಳ, ನವರಂಗ, ಮುಖಮಂಟಪ ಹೊಂದಿದೆ. ಗರ್ಭಗುಡಿಯಲ್ಲಿ ಶ್ರೀಧರ, ಶ್ರೀ ಲಕ್ಷ್ಮೀನರಸಿಂಹ ಮತ್ತು ಶ್ರೀವೇಣುಗೋಪಾಲನ ಮೂರ್ತಿ ಇದೆ. ಇಲ್ಲಿನ ಮುಖ್ಯ ದೇವರು ಶ್ರೀಧರನಾಗಿದ್ದರೂ (ಶಂಖಾ, ಚಕ್ರ, ಗಧಾ ಹಾಗು ಪದ್ಮ) ಶ್ರೀ ಲಕ್ಷ್ಮೀ ನರಸಿಂಹ ದೇವರೇ ಪ್ರಧಾನ ದೇವರಾಗಿ ಈಗ ಪೂಜಿತನಾಗಿದ್ದು, ದೇವಾಲಯವು ಸಹ ‌ಅದೇ ಹೆಸರಿನಿಂದ ಕರೆಯಲ್ಪಡುತ್ತಿದೆ.

ಹೊಯ್ಸಳರ ದೇವಾಲಯಗಳು ಶಿಲ್ಪಕಲಾ ವೈಭವಕ್ಕೆ ಪ್ರಸಿದ್ದಿ. ಅವರಿಂದ ನಿರ್ಮಿತವಾದ ಹಲವು ದೇವಾಲಯಗಳಲ್ಲಿ ಕೆಲವು ದೇವಾಲಯ ಗಳು ಮೇರು ದೇವಾಲಯಗಳ ವ್ಯಾಪ್ತಿಗೆ ಕಾಣ ಬರುತ್ತವೆ. ಅಂತಹ ಮೇರು ದೇವಾಲಯಗಳಲ್ಲಿ ಜಾವಗಲ್ಲಿನಲ್ಲರುವ ಶ್ರೀಲಕ್ಷ್ಮೀನರಸಿಂಹ ದೇವಾ ಲಯವೂ ಒಂದು.ಈದೇವಾಲಯವು ಅವರಿಂದ ನಿರ್ಮಿತ ತ್ರಿಕೂಟಾಚಲ ದೇವಾಲಯಗಳಲ್ಲಿ ಮುಖ್ಯವಾದ ದೇವಾಲಯಗಳಲ್ಲಿ ಒಂದಾಗಿದೆ. ಸಂಪೂರ್ಣ ವೈಷ್ಣವ ದೇವಾಲಯ. ಆಗಿರುವ ಈ ದೇವಾಲಯದ ಗರ್ಭಗುಡಿಗಳಲ್ಲಿ ಮೂರು ವಿಷ್ಣುವಿನ ಸ್ವರೂಪವನ್ನ ನೋಡಬಹುದು.

ನವರಂಗದಲ್ಲಿ ವಿತಾನದಲ್ಲಿನ ಕೆತ್ತೆನೆ ಕಲಾತ್ಮಕ ವಾಗಿದೆ. ಇಲ್ಲಿನ ಅಷ್ಟ ದಿಕ್ಪಾಲಕರ ಕೆತ್ತೆನೆ ಹಾಗು ಕಮಲದ ವಿನ್ಯಾಸ ಗಮನ ಸೆಳೆಯುತ್ತದೆ. ನವ- ರಂಗದಲ್ಲಿ ಹೊಯ್ಸಳ ಶೈಲಿಯ ಸುಂದರ ನಾಲ್ಕು ಕಂಭಗಳಿದ್ದು ಸುಂದರವಾಗಿದೆ. ಇಲ್ಲಿ ಪಶ್ವಿಮ ಭಾಗದಲ್ಲಿನ ಶಿಖರ ಭಾಗ ಮಾತ್ರ ಈಗ ಉಳಿದು ಕೊಂಡಿದ್ದು ಉಳಿದ ಶಿಖರಭಾಗಗಳು ಉಳಿದಿಲ್ಲ. ಈ ದೇವಾಲಯಕ್ಕೆ ವಿಜಯನಗರದ ಅರಸರು ದೊಡ್ಡದಾದ ಪ್ರವೇಶದ್ವಾರವನ್ನು ನಿರ್ಮಿಸಿದ್ದಾರೆ. ಇಲ್ಲಿನ ಮಖಮಂಟಪ ಸಹ ನಂತರ ಕಾಲದ ಸೇರ್ಪಡೆ.

ಇಡೀ ದೇವಾಲಯದ ಹೊರಭಿತ್ತಿ ಕೆತ್ತೆನೆಯಿಂದ ತುಂಬಿಕೊಂಡಿದ್ದು, ಕೆತ್ತೆನೆಯ ಕಲಾತ್ಮಕತೆಯೆ ವೈಭವದ ಕುರುಹನ್ನು ಸಾರುತ್ತದೆ. ಗಜ, ಆಶ್ವ, ಲತಾಪಟ್ಟಿಕೆಗಳು ಕೆಳಸಾಲಿನಲ್ಲಿದ್ದು ನಂತರ ರಾಮಾಯಣದ ಕೆತ್ತೆನೆ ಗಮನ ಸೆಳೆಯುತ್ತದೆ.  ನಂತರದ ಸಾಲಿನಲ್ಲಿ ಸುಂದರ ಶಿಲ್ಪಗಳ ಕೆತ್ತೆನೆ ಇದ್ದು,ಇವುಗಳಲ್ಲಿ ದಶಾವತಾರದ ಕೆತ್ತೆನೆ,ಮರ್ತ್ಯ ಭೇಧನ, ಕಾಳಿಂಗ ಮರ್ಧನ, ಶೇಷಶಯನ, ಗಣ ಪತಿ, ಚತುರ್ವಿಂಶತಿ ವಿಷ್ಣುವಿನ ಮೂರ್ತಿಗಳು, ಪರವಾಸುದೇವ, ವೇಣುಗೋಪಲನ ಮೂರ್ತಿ ನೋಡಲೇಬೇಕಾದ ಕೆತ್ತೆನೆಗಳು. ಇನ್ನು ಇಲ್ಲಿನ ರಾಮಾಯಣ ಕಥನ ಕುತೂಹಲವಾಗಿದ್ದು ಲಂಕೆ ಯಲ್ಲಿ ಹನುಮಂತ ಸೀತೆಯನ್ನು ದುರ್ಬೀನಿನಲ್ಲಿ ಹುಡುಕುತ್ತಿರುವಂತೆ ಇರುವ ಶಿಲ್ಪವು ಗಮನ ಸೆಳೆಯುತ್ತದೆ.ಇಡೀ ದೇವಾಲಯದ ಕೆತ್ತೆನೆ ಒಮ್ಮೆ ನಮ್ಮನ್ನು ಕಲಾತ್ಮಕ ಕಥನಶಾಲೆಗೆ ಸೆಳೆಯುತ್ತದೆ.

ಹೊಯ್ಸಳರ ಈ ದೇವಾಲಯದ ನಿರ್ಮಾಣದ ಬಗ್ಗೆ ಖಚಿತ ಮಾಹಿತಿ ಸಿಗದಿದ್ದರೂ ಈ ದೇವಾಲ ಯದ ನಿರ್ಮಾಣದಲ್ಲಿ ಅವರ ಮುಖ್ಯ ಶಿಲ್ಪಿ ಮಲ್ಲಿ ತಿಮ್ಮನ ಹೆಸರು ಕಾಣಸಿಗುವ ಕಾರಣ ಈ ದೇವಾಲಯ ನಿರ್ಮಾಣ ಕಾಲವನ್ನು ಸುಮಾರು 13 ನೇ ಶತಮಾನಕ್ಕೆ ಸೇರಿಸಬಹುದು.

ಜಾವಗಲ್ ಹೊಯ್ಸಳರ ಕಾಲದ ಪ್ರಮುಖವಾದ ಅಗ್ರಹಾರವಾಗಿದ್ದು, ಇಲ್ಲಿ ಈ ದೇವಾಲಯದ ಜೊತೆಯಲ್ಲಿ ಗಂಗಾಧರ ದೇವಾಲಯವೂ ಇದೆ. ಇಲ್ಲಿ ಹೊಯ್ಸಳರ ಕಾಲದ ಜೈನ ಬಸದಿಯಿದ್ದು, ಹಾಸನ ಜಿಲ್ಲೆಯಲ್ಲಿ ಕಾಣ ಬರುವ ಹೊಯ್ಸಳ ಬಸದಿಗಳ ಸಾಲಿನಲ್ಲಿ ನಿಲ್ಲುತ್ತದೆ. ಹೊಯ್ಸಳರ ಕಾಲದ ನಂತರ ವಿಜಯಯನಗರ ಕಾಲದಲ್ಲಿ ಈ ದೇವಾಲಯಕ್ಕೆ ಸ್ಥಳೀಯ ಪಾಳೇಗಾರರು ನಿರ್ಮಿ ಸಿದ ಒಂದು ಮಂಟಪ ಹಾಗು ವಿಜಯನಗರದ ಅರಸರು ನಿರ್ಮಿಸಿದ ಬೃಹತ್ ಪ್ರವೇಶದ್ವಾರವಿದೆ ಇಲ್ಲಿ ಬೈರವನೆಂಬ ಸ್ಥಳೀಯ ಮಾಂಡಲೀಕ ನಿರ್ಮಿಸಿದ ಬೃಹತ್ ಕೆರೆ ಸಹ ಇದ್ದು, ಇಲ್ಲಿನ ಕೋಟೆ ಹಾಗು ಊರಿನ ಹೆಬ್ಬಾಗಿಲನ್ನು ಸಹ ನಿರ್ಮಿಸಿದ್ದ.

ಇಲ್ಲಿ ಪ್ರತಿವರ್ಷ ಬುದ್ಧ ಪೌರ್ಣಮಿಯಂದು ಶ್ರೀಲಕ್ಷ್ಮೀನರಸಿಂಹ ಸ್ವಾಮಿಯ ರಥೋತ್ಸವವು ನಡೆಯಲಿದ್ದು ಅಸಂಖ್ಯಾತ ಭಕ್ತರು ಸೇರುತ್ತಾರೆ.

ತಲುಪವ ಬಗ್ಗೆ:ಈದೇವಾಲಯ ಹಾಸನ ಜಿಲ್ಲೆಯ ಅರಸೀಕೆರೆಯ ತಾಲ್ಲೂಕಿನಲ್ಲಿದ್ದು ಬಾಣಾವರ ಹಳೇಬೀಡು ಮಾರ್ಗದಲ್ಲಿ ಹಳೇಬೀಡಿನಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ.

✍️ಶ್ರೀನಿವಾಸಮೂರ್ತಿ ಎನ್.ಎಸ್. ಬೆಂಗಳೂರು