ಇಲ್ಲಿ ಸಕಲರಿಗೂ ಪದವಿ,
ಪಟ್ಟಗಳಿಂದ ಶೋಭೆ.!
ಕೆಲವರಿಂದ ಮಾತ್ರವೇ
ಪದವಿಪಟ್ಟಗಳಿಗೇ ಶೋಭೆ.!
ಅಂತಹವರು ನಮ್ಮಯ
ಲಾಲ್ ಬಹದ್ದೂರರು.!!

ಇಲ್ಲಿ ಸಾಮಾನ್ಯರಿಗೆ ಗದ್ದುಗೆ,
ಅಧಿಕಾರಗಳಿಂದ ಗೌರವ.!
ಧೀಮಂತರಿಂದ ಮಾತ್ರವೇ
ಅಧಿಕಾರ, ಗದ್ದುಗೆಗೇ ಗೌರವ.!
ಅಂತಹವರು ನಮ್ಮಯ
ಹೆಮ್ಮೆಯ ಲಾಲ್‍ಬಹದ್ದೂರರು.!!

ರೈತನ ಬೆವರಿನ ಪಾವಿತ್ರತೆ,
ಯೋಧನ ನೆತ್ತರಿನ ಶ್ರೇಷ್ಟತೆ
ದೇಶಕೆ ಮನದಟ್ಟು ಮಾಡಿಸಿದರು.!
‘ಜೈ ಜವಾನ್, ಜೈ ಕಿಸಾನ್’
ಎಂಬ ಘೋಷಣೆ ಸಾರಿದರು.!
ನಮ್ಮ ಲಾಲ್‍ಬಹದ್ದೂರರು.!!

ರಾಜಕಾರಣವೆಂದರೆ..
ಹಣ ಮಾಡುವ ಉದ್ಯಮವಲ್ಲ
ನಿಸ್ವಾರ್ಥ ಸೇವಾಕ್ಷೇತ್ರವೆಂದು
ಜಗಕೆಲ್ಲ ತಿಳಿಸಿ ಹೇಳಿದರು.!
ಸಾಧಿಸಿ ಜೀವಿಸಿ ತೋರಿಸಿದರು
ನಮ್ಮ ಲಾಲ್‍ಬಹದ್ದೂರರು.!

ದೇಶಭಕ್ತಿಯನೇ ಉಸಿರಾಡುತ್ತಾ,
ರಾಷ್ಟ್ರಶಕ್ತಿಗಾಗಿಯೇ ಮಿಡಿಯುತ್ತ,
ಬದುಕಿದ ಮಹಾನ್ ದೇಶಭಕ್ತರು.!
ಸ್ವಾರ್ಥಿ ನಾಯಕರ ಮೆರೆದಾಟದಲ್ಲಿ
ಜನಮಾನಸದಿ ಮಸುಕಾದವರು..
ನಮ್ಮ ಹೆಮ್ಮೆಯ ಲಾಲ್‍ಬಹದ್ದೂರರು.!

ಎ.ಎನ್.ರಮೇಶ್, ಗುಬ್ಬಿ.