ಇಂದು ನೆನಪಾಗುತ್ತಾರೆ
ಬಾಪು ಮಹಾತ್ಮಗಾಂಧಿ..
ಸಮಾರಂಭ, ಸಭೆಗಳಲ್ಲಿ,
ಜೈಕಾರ, ಘೋಷಣೆಗಳಲ್ಲಿ,
ಎಲ್ಲೆಡೆ ಎಲ್ಲರ ಭಾಷಣಗಳಲ್ಲೂ.!

ಇಂದು ವಿಜೃಂಭಿಸುತ್ತದೆ
ಗಾಂಧಿಯ ಪವಿತ್ರ ಟೋಪಿ..
ಸಕಲ ಅಂಗಡಿ-ಮಳಿಗೆಗಳಲ್ಲಿ,
ವೇದಿಕೆಗಳಲ್ಲಿ, ವಾಹಿನಿಗಳಲ್ಲಿ,
ಕಳ್ಳರ, ಭ್ರಷ್ಟರ ಶಿರಗಳಲ್ಲೂ.!

ಇಂದು ಮೊಳಗುತ್ತವೆ
ಬಾಪುವಿನ ತತ್ವಾದರ್ಶಗಳು..
ನಾಟಕ, ನೃತ್ಯ, ರೂಪಕಗಳಲ್ಲಿ
ಚರ್ಚೆ, ಉಪನ್ಯಾಸಗಳಲ್ಲಿ,
ವಂಚಕರ ಬಾಯಿಗಳಲ್ಲೂ.!

ಇಂದು ರಾರಾಜಿಸುತ್ತದೆ
ಧೂಳೊರೆಸಿದ ಗಾಂಧಿಪಟ
ಮೆರವಣಿಗೆಯ ಸಾಲಿನಲ್ಲಿ,
ಶಾಲೆ, ಕಾಲೇಜು, ಕಛೇರಿಗಳಲ್ಲಿ
ಮಲಿನಗೊಂಡ ಮನ-ಮನೆಗಳಲ್ಲೂ.!

ಕ್ಷಮಿಸಿ ಬಿಡು ಬಾಪು..
ಈಗ ನೀನೊಂದು ಲಾಂಛನ
ಅಧಿಕಾರ, ಕೀರ್ತಿ, ಹೆಸರುಗಳ
ಪಡೆಯಲು ಬಳಸೊ ಸಾಧನ.!
ಪ್ರಚಾರಕ್ಕಷ್ಟೇ ನಿನ್ನ ಗುಣಗಾನ.!

ಮನ್ನಿಸಿ ಬಿಡು ಮಹಾತ್ಮ..
ಸತ್ಯ-ಶಾಂತಿ-ಅಹಿಂಸೆಗಳ
ತತ್ವಗಳನೆಲ್ಲ ಗಾಳಿಗೆ ತೂರಿ
ನಿನ್ನ ಕನಸು ಭಗ್ನವಾಗಿಸಿದ್ದಕ್ಕೆ.!
ಈ ನೆಲವ ಭ್ರಷ್ಟವಾಗಿಸಿದ್ದಕ್ಕೆ.!

ಎ.ಎನ್.ರಮೇಶ್, ಗುಬ್ಬಿ.