ಬಾಳ ಹೆದ್ದಾರಿಯಲಿ
ಎದ್ದೋಡುವವರದೇ ಆರ್ಭಟ
ಎತ್ತ ಸಾಗುವರೋ
ಹೊರಟ ಮೇಲೆಯೇ ದಾರಿ ದಿಟ
ಅಪಾಯವೆಂದರೂ ಅವಸರ ಬಿಡರು ; ಅವರವರದೇ ಚಿತ್ತಹೂಟ
ಅದೆಂತಹ ದಾಳಿಯ ಧಾವಂತ
ಒಬ್ಬರ ಮೇಲೊಬ್ಬರದಾಟ
ಎಲ್ಲಿದೆ ಸಹಜತೆಯ ಏಕಾಂತ
ಮರೀಚಿಕೆಯೆಂಬಂತಿದೆ ಒಳನೋಟ
ದೂರ ದಾರಿಯ ತೀರದ ದಾಹ
ಮುಗಿಯದು; ಇರಲಿ ದೂರನೋಟ
ಗಂತವ್ಯವ ಶೋಧಿಸಿ ಶರಣು
ಶರಣಾದವರದದೋ ಇಲ್ಲಿದೆ ಪಾಠ
ಜೋಕೆ, ಮಧ್ಯೆ ಗಾಲಿ
ಮುರಿದುಕೊಂಡವರ ಗೋಳಾಟ
ವಿರಮಿಸಿ; ಅನುಭವಿಸಿ
ಕಂಡರಿಯದ ಬದುಕಿನ ತೋಟ
ಅಬ್ಬಾ ಇದೇ ಅಲ್ಲವೇ
ಶರೀಫರು ಹಾಡಿದ ಕೊಡದ ಮಾಟ
ಮುಗಿಯದ ಅಧ್ಯಾಯವಿದು
ಪಯಣವೆಂದರದೋ ದೊಡ್ಡಸ್ತಿಕೆಯ ಕಾಟ
ತಮ್ಮ ಪಾಡಿಗೆ ತಾವೆಂದುಕೊಂಡು
ಸೆಳೆತವಿಲ್ಲದೇ ಹೊರಟವರ ಆನಂದ ಕೂಟ
ಸವಾಲುಗಳ ದಿಣ್ಣೆ ದೊಣ್ಣೆಗಳ ಕೆನ್ನೆ
ಸವರಿದಂತೆ, ಬಾಳದೋ ಚೆಲ್ಲಾಟ
ದಟ್ಟಣೆಯೊಳಗೆಲ್ಲವ ಬಾಚಿಕೊಂಡು
ಉಳಿಯಬೇಕೆನ್ನುವ ಸ್ವಾರ್ಥದ ತಳ್ಳಾಟ
ವಿಶ್ವಪಥದ ಹಾದಿಯಲ್ಲೀಗ ಖಾಲಿತನ
ಗೊತ್ತಿಲ್ಲವೇ ಪಥೇಶ್ವರನಿಗೆ ಮನುಜರ ಈ ಮಳ್ಳಾಟ
✍️ ಶ್ರೀ.ಚಂದ್ರಶೇಖರ ಹೆಗಡೆ
ಕನ್ನಡ ಸಹಾಯಕ ಪ್ರಾಧ್ಯಾಪಕರು
ರು.ಪಾ.ಸರಕಾರಿ ಪ್ರಥಮ ದರ್ಜೆ ಕಾಲೇಜು ಬೀಳಗಿ -೫೮೭೧೧೬