ನುಡಿದಂತೆ ನಡೆಯುವುದು ಅಷ್ಟು ಸುಲಭವಾ? ಅಥವಾ ನಡೆದಂತೆ ನುಡಿಯುವುದು ಸುಲಭವಾ? ಎಂಬೆಲ್ಲ ಮಾತುಗಳು ನಮ್ಮೊಳಗೆ ಯಾವಾಗಲೂ ಜಿದ್ದಾ ಜಿದ್ದಿಗೆ ಬಿದ್ದಾಗ ಅದೊಂದು ವಿನಾಕಾರಣ ದ್ವಂದ್ವ ಏರ್ಪಟ್ಟು ಆ ಕ್ಷಣ ಮರೆತು ಬಿಡುತ್ತೆವೆ. ಮಕ್ಕಳು ಭಾವಿ ಪ್ರಪಂಚದ ವಾರಸುದಾರರು. ನಾವು ಇರುವಷ್ಟು ದಿನ ಅವರ ಮುಂದೆ ಹೇಗಿರ ಬೇಕೆಂಬ ಚಿಂತನೆಯಲ್ಲೆ ಕಳೆದು ಹೋಗಿ ಕೊನೆಗೆ ನಮಗನಿಸಿದಕ್ಕೆ ಜೊತು ಬಿದ್ದುಸುಮ್ಮನಾಗುತ್ತೆವೆ. ದೃಷ್ಟಿಕೋನ ಭಿನ್ನವಾಗಿ ಒಮ್ಮತಕ್ಕೆ ಬರದೇ ಸುಮ್ಮನಾಗುತ್ತೆವೆ.

ಒಬ್ಬ ವಿದ್ವಾಂಸ ಪಂಡಿತನಿಗೆ ಅವನ ಪಾಂಡಿತ್ಯದ ಮೇಲೆ ಅತಿ ಹೆಚ್ಚು ಗರ್ವವಿರುತ್ತದೆ. ಅವನು ಹೊಳೆಯನ್ನು ದಾಟುವಾಗ ಹುಟ್ಟುಹಾಕಿ ದೋಣಿ ನಡೆಸುವ ಅಂಬಿಗನಿಗೆ ತನ್ನ ಪಾಂಡಿತ್ಯದ ಬಗ್ಗೆ ಹೇಳಿಕೊಳ್ಳುತ್ತಾ,ನಿನ್ನ ಜೀವನ ಯಶಸ್ಸು ಕಾಣಬೇ ಕಾದರೇ ನನ್ನಂತೆ ಜ್ಞಾನ ಪಡೆದರೆ ಮಾತ್ರ ಸಾಧ್ಯ. ಎಷ್ಟು ಕಲಿತಿರುವೆ? ಎಂದು ಪ್ರಶ್ನಿಸಿದಾಗ ಅಂಬಿಗ ನಾಚುತ್ತಾ..ಒಡೆಯಾ ನಾನು ಶಾಲೆ ಮೆಟ್ಟಿಲನ್ನು ಹತ್ತಿಲ್ಲ, ಅಕ್ಷರ ಜ್ಞಾನ ನನಗಿಲ್ಲ ಸ್ವಾಮಿ. ನನಗೆ ದೋಣಿ ನಡೆಸುವುದೊಂದೆ ಗೊತ್ತು ಹೊಟ್ಟೆ ಪಾಡಿಗೆ ಎಂದು ವಿನಯದಿಂದ ತಲೆ ತಗ್ಗಿಸಿದ. ನಿಮ್ಮಂತಹ ಪಂಡಿತರನ್ನು ಕಂಡರೆ ಗೌರವ ಎಂದಾಗ, ಪಂಡಿತರು ನಿನೊಬ್ಬ ದಡ್ಡ, ಅಜ್ಞಾನಿ, ಶತಮೂರ್ಖ. ನನ್ನ ಹಾಗೆ ವೇದಾಧ್ಯಯನ, ಉಪನಿಷತ್ತು ಹೀಗೆ ಹತ್ತು ಹಲವು ವಿಷಯದಲ್ಲಿ ಪ್ರಾವಿಣ್ಯತೆಯಿಲ್ಲದ ನಿನ್ನ ಜೀವನವೇ ವ್ಯರ್ಥ ಎಂದು ಹೀಗಳೆದರು.

ಏಕಾಏಕಿ ನದಿಯ ಅಲೆಗಳ ಏರಿಳಿತದಲ್ಲಿ ವ್ಯತ್ಯಾ ಸ ವಾಗಿ ಇನ್ನೇನು ದೋಣಿ ಮಗುಚಿ ಬೀಳುವ ಸಂಧರ್ಭದಲ್ಲಿ ಎಲ್ಲರು ತಮ್ಮ ತಮ್ಮ ಜೀವ ರಕ್ಷಣೆ ಗಾಗಿ ನದಿಗೆ ಹಾರಿದರು.ಅಂಬಿಗ ಸ್ವಾಮಿ ದೋಣಿ ಯ ಹಿಡಿತ ನನ್ನ ಕೈ ಮೀರುತ್ತಿದೆ. ನೀವು ನದಿಗೆ ಧುಮುಕಿ ಈಜಿ ದಡಸೇರಿ ಪ್ರಾಣ ಉಳಿಸಿಕೊಳ್ಳಿ, ನನಗೆ ವಿದ್ಯೆ ಇದೊಂದೇ ಎನ್ನುತ್ತ ಅಂಬಿಗನು ನದಿಗೆ ಹಾರಿ ಈಜಿ ದಡ ಸೇರಲು ಮುನ್ನುಗ್ಗುವಾಗ ಈಜಲು ಬಾರದೆ ನದಿಯಲ್ಲಿ ಮುಳುಗುವ ಪಂಡಿ ತರನ್ನು ಕಂಡು ಅವನಲ್ಲಿ ಮಾನವೀಯತೆಯು ಜಾಗೃತವಾಗಿ, ಪಂಡಿತರ ಅಂಗಿಯನ್ನು ಬಲವಾಗಿ ಹಿಡಿದು ದಡಕ್ಕೆ ಏಳೆತಂದು ಜೀವ ಉಳಿಸಿದ ಆ ನಾವಿಕ. ಪಂಡಿತರು ತನ್ನೆಲ್ಲ ಅಹಂಕಾರವನ್ನು ಸಾವು ಬದುಕಿನ ನಡುವೆ ಅನ್ವಯವಿಲ್ಲದ ವಿದ್ಯೆ ಯಾವುದಕ್ಕೆ ಸಮ? ಎಂಬುದು ಅರಿವಾಗಿತ್ತು. ಕಥೆ ಮೇಲ್ನೋಟಕ್ಕೆ ಸುಲಭವೆನಿಸಿದರೂ ಅದರ ಒಳಾರ್ಥ ನಮ್ಮೊಳಗಿನ ಜ್ಞಾನವನ್ನು ಒರೆಗೆ ಹಚ್ಚಿ ದಂತೆ.

“ವಿದ್ಯೆಗೆ ವಿನಯವೇ ಭೂಷಣ ಅವನತಿಗೆ ಅಹಂಕಾರವೇ ಭೂಷಣ” ವೆಂಬಂತೆ, ಬಹಳ ಷ್ಟು ಓದಿದ ಮಾತ್ರಕ್ಕೆ ಅವ ಜ್ಞಾನಿಯಲ್ಲ. ಯಾವ ಜ್ಞಾನ ಬದುಕನ್ನು ರೂಪಿಸಿ ಹಣತೆಯಂತೆ ಇತರ ರಿಗೆ ಮಾರ್ಗದರ್ಶನ ನೀಡುವುದೊ ಅದು ನಿಜ ವಾದ ಜ್ಞಾನ. ಕಲಿಕೆಯನ್ನುವುದು ನಿರಂತರವಾ ದುದು. ಅದು ಇಷ್ಟಕ್ಕೆ ಸೀಮಿತವೆಂದು ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ನಮ್ಮಲ್ಲಿರುವ ಜ್ಞಾನ ನಮ್ಮ ವಿಕಾಸದ ಜೊತೆಗೆ ಇತರರಿಗೂ ದಾರಿದೀಪ ವಾದರೆ ಒಳ್ಳೆಯದು. ನಾನು ಎಂಬ ಅಹಂಕಾರ ದಿಂದ ಮೇಲೆ ಬಂದಷ್ಟು ಒಳಿತು. ಮಕ್ಕಳು ನಮ್ಮಿಂದ ನಿರೀಕ್ಷಿಸುವುದು ಸಂಸ್ಕಾರಯುತ ಜೀವನ.“ಆಪತ್ತಿಗಾದವನೆ ನೆಂಟ” ಎಂಬ ಗಾದೆ ಮಾತಿನಂತೆ, ಅನ್ವಯವಿರದ ವಿದ್ಯೆ, ವಿನಯದ ದಾರಿ ತೋರುತ,ಮಾನವಿಯತೆಯ ಗುಣನಮ್ಮಲಿ ಮೊಳಕೆಯೊಡೆಸದಿದ್ದರೆ ಯಾವ ಮಜಲುಗಳಲ್ಲಿ ಮೌಲ್ಯಗಳನ್ನು ಬಿತ್ತಲು ಸಾಧ್ಯ?

‘ತೆನೆಬಿಡುವ ಪೈರು, ಗೊನೆಬಿಡುವ ಬಾಳೆ, ಫಲ ನೀಡುವ ಗಿಡ ಎಲ್ಲವು ಬಾಗುತ್ತವೆ’. ಜಗತ್ತಿಗೆ ಏನೂ ಕೊಡದೆ ಜಂಬದ ಈ ಜಡ ಜೀವವೇಕೆ ಬೀಗುತ್ತಿದೆ? ಬೀಗುವುದು ಸದ್ಗುಣವಲ್ಲ, ಬೀಗಿದ ವರು ಅಳಿಸಿಹೋದರು, ಬಾಗಿದವರು ಅಮರರಾ ದರು ಬಾಗುವುದು ಒಂದು ಸದ್ಗುಣ. ಹೀಗೆ

“ಸರ್ವಜ್ಞನೆಂಬುವವನು ಗರ್ವದಿಂದಾದವನೆ?
ಸರ್ವರೊಳು ಒಂದೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ.”

ಹಿರಿಯರಾದವರು ಮಕ್ಕಳಿಗೆ ಜ್ಞಾನ ನೀಡುವಾಗ ಬಾಗಿ ನೀಡಿದಷ್ಟು ಮಕ್ಕಳ ಮನಸ್ಸು ಅದನ್ನು ಸ್ವೀಕರಿಸಲು ಸಾಧ್ಯ.

ಪ್ರತಿಕ್ಷಣ ನಮ್ಮ ಅನುಕರಣೆಯಿಂದ ಬದುಕ ಕಟ್ಟು ವ ಮಗುವಿಗೆ ಪುಸ್ತಕ ಜೊತೆ ನೈಜ ಬದುಕಿಗೆ ಅವಶ್ಯವಾದ ಜೀವನ ಮೌಲ್ಯಗಳನ್ನು ಉತ್ತಿಬಿತ್ತಿ ದರೆ‌‌ ಅದು ಸಶಕ್ತವಾಗಿ ಸಮಾಜಕ್ಕೆ ಕೊಡುಗೆ ಯಾದಿತು. ಹಿರಿತಲೆಗಳು ಕಿರಿತಲೆಗಳ ಒಳಗಣ್ಣ ತೆರೆಸುವತ್ತ ವಾಲಿದಷ್ಟು, ನಾವುಗಳು ತೆರೆದಗಣ್ಣು, ಮನಸ್ಸಿನಿಂದ ಸ್ವೀಕರಿಸುವತ್ತ ಸಿದ್ದರಿರಬೇಕು. ಅಂದಾಗ ಮಾತ್ರ ಜಗತ್ತಿನ ತುಂಬ ಆಹ್ಲಾದಕರ ಆಕ್ಸಿಜನ್ ಪ್ರವಹಿಸಲು ಸಾಧ್ಯವಾದೀತು.

ಸಕಾರಾತ್ಮಕ ಚಟುವಟಿಕೆಗಳು ಮನೆಯಿಂದ ಸಮಾಜಕ್ಕೆ ಕೊಡುಗೆಯಾದರೆ, ಶಾಲೆ, ಕಾಲೇಜು ಗಳು ಅವುಗಳನ್ನು ಸಶಕ್ತಗೊಳಿಸಿ ಚೌಕಟ್ಟನ್ನು ಒದಗಿಸಿ ಪುಷ್ಟಿದಾಯಕ ಭದ್ರ ನೆಲೆಗಟ್ಟನ್ನು ಹಾಕಿ ಕೊಡಲು ಸಾಧ್ಯವಾಗುತ್ತದೆ. ಮಕ್ಕಳನ್ನು ದೋಷಿ ಸುವುದರ ಬದಲು,ಮಕ್ಕಳ ಮನಸ್ಥಿತಿಗೆ ಅನುಗು ಣವಾಗಿ ಬದುಕು ರೂಪಿಸುವುದು ಬಹುಮುಖ್ಯ.

ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ