ಕಳೆದ ಬಾರಿ ಜುಲೈನಲ್ಲಿ ಕವಿಶೈಲ ಸಂದರ್ಶಿಸಿದಾ ಗಲೇ  ಮೃಗವಧೆ ಕ್ಷೇತ್ರದ ಭೇಟಿಯಾಗಬೇಕಿತ್ತು. ಆಗಲೇ ಸಂಜೆಯಾಗಿದ್ದರಿಂದ ಜೋರುಮಳೆಯೂ ಬರುತ್ತಿದ್ದುದರಿಂದ ಮಲೆನಾಡ ಮಳೆಗೆ ಅಂಜಿ ನೋಡದೆ ಹಿಂದಿರುಗಿದ್ದೆವು. ಈ ಬಾರಿ ಕವಿಶೈಲಕ್ಕೆ ಹೋದಾಗ ಆ ಕನಸು ನನಸಾಯಿತು. ತುಂಬಾ ಸುಂದರ ಪ್ರಶಾಂತ ಸ್ಥಳ.ಭಕ್ತಿ ಭಾವ ಮೂಡಿಸುವ ಶಿವಲಿಂಗದೆದುರಿನ ನಂದಿಯಂತೂ ತುಂಬಾ ಮಾಟವಾಗಿ ಕೆತ್ತಲ್ಪಟ್ಟಿದೆ. ಹಿಂದೆಯೇ ಮೌನವಾಗಿ ಹರಿಯುವ ಬ್ರಾಹ್ಮಿತಟವಂತೂ ಮನೋಹರ. ಹೆಚ್ಚು ಆಳವಿರದ ನೀರಿನಿಂದ ಎದ್ದು ಬರಲೇ ಮನಸ್ಸಾಗುವುದಿಲ್ಲ.

ಶಿವಮೊಗ್ಗೆಗೆ ಪಯಣ ಹೊರಟಾಗ ಮೊದಲು ಕವಿ ಶೈಲ ನೋಡಿ ನಂತರ ಶಿವಮೊಗ್ಗಕ್ಕೆ ಹೋಗುವ ಪ್ಲಾನ್ ಮಾಡಿದ್ದೆವು. ನಸುಕಿನಲ್ಲೇ ಹೊರಟು ಹಾಸನದಲ್ಲಿ ಹೊಟ್ಠೆ ಪೂಜೆ ಮುಗಿಸಿ ಬಾಳೆಹೊ ನ್ನೂರು ಕೊಪ್ಪದ ಮೂಲಕ ಕುಪ್ಪಳ್ಳಿ ಕಡೆಗೆ.  ಪಶ್ಚಿಮ ಘಟ್ಟಗಳ ಉನ್ನತ ಗಿರಿಶಿಖರ ಪಕ್ಕದಲ್ಲೇ ಪಾತಾಳ ಕಾಣುವ ಕಣಿವೆಗಳು ಈ ನಯನ ಮನೋಹರ ಪ್ರಕೃತಿ ಸೌಂದರ್ಯದ ರಸದೂಟ ಮಾಡುತ್ತಾ ದಾರಿಯಲ್ಲಿ ಕೊಪ್ಪದ ಹೊಟೇಲೊಂ ದರಲ್ಲಿ ಊಟ ಮುಗಿಸಿ ಕವಿಮನೆ ತಲುಪಿದವು.  ಕವಿಶೈಲದ ವರ್ಣನೆ ಈಗಾಗಲೇ ಮಾಡಿರುವುದ ರಿಂದ ಈ ಬಾರಿ ಬೇಡ. ಈ ಸಲದ ವಿಶೇಷವೆಂದರೆ ಪೂರ್ಣಚಂದ್ರ ತೇಜಸ್ವಿಯವರ ಮ್ಯೂಸಿಯಂ, ಮತ್ತೊಂದು ಬಾರಿ ಕವಿಶೈಲವನ್ನು ಕಣ್ತುಂಬಿಸಿ ಕೊಂಡು ಪುಟ್ಟ ಕ್ಯಾಂಟೀನಿನ ಬಾಳೆಕಾಯಿ ಮತ್ತು ಮೆಣಸಿನಕಾಯಿ ಬಜ್ಜಿ ಟೀಯೊಂದಿಗೆ ಸವಿದು ಮೃಗಶೈಲದ ದಾರಿ ಹಿಡಿದೆವು.

ಅಬ್ಬಾ ನಿಸರ್ಗ ದೇವಿಯು ತನ್ನ ಪೂರ ಹಸಿರುಡು ಗೆಯ ಸೀರೆಯನ್ನು ಅಲ್ಲೇ ಹರವಿದ್ದಾಳೋ ಎಂಬಂಥ ಸುಂದರ ದೃಶ್ಯಾವಳಿಗಳು. ದಾರಿ ಸವೆ ದದ್ದೇ ತಿಳಿಯದೆ ನೇರ ದೇವಸ್ಥಾನದ ಮುಂದೆ ಬಂದಿದ್ದೆವು. ಗೂಗಲ್ ಅಣ್ಣನ ಸಹಾಯ ಇದ್ದುದ ರಿಂದ ಮಧ್ಯೆ ಮಧ್ಯೆ ನಿಲ್ಲಿಸಿ ಕೇಳುವ ಪ್ರಮೇಯ ಬರಲಿಲ್ಲ. ತಂತ್ರಜ್ಞಾನ ಮುಂದುವರೆದಿದ್ದು ಒಳ್ಳೆ ಯದೇನೋ ಸರಿ ಆದರೆ ಮನುಷ್ಯರ ಒಡನಾಟವೆ ಕಣ್ಮರೆಯಾಗುತ್ತಿದೆಯಲ್ಲಾ ಅಂತ ಅನ್ನಿಸಿದ್ದು ಸುಳ್ಳಲ್ಲ.

ಇದರ ಇನ್ನೊಂದು ಹೆಸರು ಮರವಸೆ. ಇದು ಪಾರ್ವತಿ ತಪಸ್ಸು ಮಾಡಿದ ಸ್ಥಳ ಅಂತೆ. ಮೃಗ ವಧೆ ಎಂದರೆ ಮಿಗ (ಜಿಂಕೆ)ಯನ್ನು ವಧಿಸಿದ ಸ್ಥಳ.ಇದು ತೀರ್ಥಹಳ್ಳಿಯಿಂದ ೨೫ ಕಿಲೋಮೀಟ ರ್ ಹಾಗೂ ಕೊಪ್ಪದಿಂದ ೨೨ ಕಿಲೋಮೀಟರ್ ದೂರದಲ್ಲಿದೆ. ಅಲ್ಲಿ ಅರ್ಚಕರು ಹೇಳಿದ ಸ್ಥಳ ಪುರಾಣದಂತೆ,ಹಿಂದೆ‌ ಸೀತಾಪಹರಣದ ಸಂದರ್ಭ ರಾವಣನು ಶಿವಪೂಜೆ ಮಾಡುತ್ತಿದ್ದ ಮಾರೀಚನ ಬಳಿ ಬಂದು ಮಾಯಾ ಜಿಂಕೆಯ ರೂಪ ಧರಿಸಿ ತನಗೆ ಸಹಾಯ ಮಾಡಲು ಕೋರುತ್ತಾನೆ. ಮೊದ ಲಿಗೆ ಮಾರೀಚ ಒಪ್ಪುವುದಿಲ್ಲ. ಕೊನೆಗೆ ರಾವಣ ಕೊಲ್ಲಲು ಮುಂದಾದಾಗ ರಾವಣನ ಕೈಲಿ ಹತ ವಾಗುವುದಕ್ಕಿಂತ ರಾಮನ ಮೂಲಕ ವಧೆಯಾಗು ವುದೇ ಒಳಿತೆಂದು ರಾವಣನ ಮಾತಿಗೆ ಒಪ್ಪು ತ್ತಾನೆ. ಪೂಜಿಸುತ್ತಿದ್ದ ಲಿಂಗವನ್ನು ತನ್ನ ತೊಡೆಯ ಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ.

ಮುಂದೆ ರಾಮ ಲಕ್ಷ್ಮಣ ಸೀತೆಯರ ಮುಂದೆ ಓಡಾಡಿದ ಮಾಯಾ ಜಿಂಕೆಯನ್ನು ನೋಡಿ ಸೀತೆ ಯು ಬಯಸಿ ರಾಮನಿಗೆ ಅದನ್ನು ತರುವಂತೆ ಕೋರಿದಾಗ ರಾಮನು ಅವನನ್ನು ಬೆನ್ನಟ್ಟಿ ಕೊಲ್ಲ ಲು ಮುಂದಾದಾಗ ಸಾಯುವಾಗ ಮಾರೀಚ ‘ಹಾ ಲಕ್ಷ್ಮಣ ಹಾ ಸೀತಾ’ಎಂದು ಕರೆದು ಲಕ್ಷ್ಮಣ ನು ಸೀತೆಯನ್ನು ಬಿಟ್ಟು ಹೊರಡುವಂತಹ ಸಂದರ್ಭ ಸೃಷ್ಟಿಸುತ್ತಾನೆ . . ಇತ್ತ ವಧೆಯಾದ ಮಾರೀಚನ ದೇಹದ ಮುಂಡವು ಮಂಡಗದ್ದೆ ಯಲ್ಲಿ ಬಿತ್ತಂತೆ. ಅವನ ರುಂಡವು ಕೋಳಾವರ ದಲ್ಲಿ ಬಿದ್ದಿತ್ತಂತೆ .. ಶಿವಲಿಂಗ ಈ  ಪ್ರದೇಶದಲ್ಲಿ ಬಂದು ಬಿದ್ದಿತ್ತಂತೆ. ಬ್ರಹ್ಮಹತ್ಯಾ ದೋಷದಿಂದ ಪಾರಾಗಲು ರಾಮನು ಮಾರೀಚನ ದೇಹದಿಂದ ಬಾಣ ಹಾಗೂ ಇಲ್ಲಿ ಬಿದ್ದಿದ್ದ ಶಿವಲಿಂಗವನ್ನು ತೆಗೆದು ಇಲ್ಲಿ ಪ್ರತಿಷ್ಠಾಪಿಸಿದನಂತೆ. ಈ ಲಿಂಗದ ಮೂಲಹೆಸರು ಮಲ ಹಾನಿಕರೇಶ್ವರ ಎಂದಿದ್ದು, ಆಮೇಲೆ ಮಲ್ಲಿಕಾರ್ಜುನ ಎಂಬ ಹೆಸರು ಬಂದಿತು. ಬಾಣ ಲಿಂಗ ಎಂದು ಸಹ ಕರೆಯು ತ್ತಾರೆ. ದೇವಸ್ಥಾನದ ಸುತ್ತಲೂ ಈಶ್ವರನ ಸಮಸ್ತ ಗಣಗಳು ನೆಲೆಸಿವೆ ಎಂಬ ಪ್ರತೀತಿ.  

ಈಗಿರುವ ಈ ದೇವಾಲಯವನ್ನು ಚಾಲುಕ್ಯರ ಅರಸನಾದ ತ್ರಿಭುವನಮಲ್ಲನು ೧೦೬೦ರಲ್ಲಿ  ನಿರ್ಮಿಸಿದನು. ಕಾಲಾಂತರದಲ್ಲಿ ಕೆಳದಿಯ ಸೋಮಶೇಖರನ (೧೭೧೪- ೧೭೪೦) ಕಾಲದಲ್ಲಿ ಪುನರುತ್ಥಾನ ಮಾಡಿದರು. ೪.೫ ಅಡಿ ಎತ್ತರದ ಆಗಮ ಶಿವಲಿಂಗ ಇಲ್ಲಿನ ವೈಶಿಷ್ಟ್ಯ.  

ರಾಮನು ಬ್ರಾಹ್ಮಿ ಮುಹೂರ್ತದಲ್ಲಿ ನದಿ ತೀರ ದಲ್ಲಿ ಶಿವಲಿಂಗವನ್ನು ಸ್ಥಾಪಿಸಿದ್ದರಿಂದ ಈ ನದಿಗೆ ಬ್ರಾಹ್ಮಿ ನದಿ ಎನ್ನುತ್ತಾರೆ. ಸದ್ದಿರದೆ ತುಂಬಾ ಆಳ ವೂ ಇರದೆ ಶಾಂತವಾಗಿ ಹರಿಯುವ ನೀರ ಹರಿವಿ ನಲ್ಲಿ ಇಳಿದಾಗ ಅದರ ತಂಪಿನ ಮಾರ್ದವತೆ ಮನದಾಳ ಮುಟ್ಟುತ್ತದೆ. ಮೊಗೆದು ಮುಖಕ್ಕೆ ಸುರಿದುಕೊಂಡಾಗ ಉಂಟಾಗುವ ಹಿತ,ಅನುಭವ ವೇದ್ಯ ಮಾತ್ರವೇ. ಅಕ್ಕಪಕ್ಕದ ಬೃಹತ್ ಮರಗಳ ಲ್ಲಿ ಹಕ್ಕಿಗಳ ಚಿಲಿಪಿಲಿ ಪ್ರಶಾಂತತೆಯ ಗಾನಕ್ಕೆ ಶ್ರುತಿ ಹಿಡಿದಂತೆ ಅನಿಸುತ್ತದೆ. ಪುಟ್ಟ ಮಕ್ಕಳನ್ನು ಸಹ ಭೀತಿಗೆಡೆಯಿರದಂತೆ  ತನ್ನೊಳಗೆ ಆಟವಾಡ ಲು ಕರೆದುಕೊಳ್ಳುವ ಈ ನದಿ ತಟ ಅಲ್ಲಿಂದೆದ್ದು ಹೋಗುವುದೇ ಬೇಡ ಎನಿಸುವಂತೆ ಮಾಡುತ್ತದೆ. ಆ ಪ್ರಾಂಗಣದಲ್ಲಿ ವಿಘ್ನವಿನಾಶಕನ ಪುಟ್ಟ ಗುಡಿ ಇದ್ದು ಗಣಪ ಕೈಯೆತ್ತಿ ಆಶೀರ್ವದಿಸಿದ. ಒಂದಿಷ್ಟು ಮೆಟ್ಟಿಲು ಮೇಲೇರಿದಂತೆ ಮುಖ್ಯ ಗುಡಿ. ಶಿವನಿಗೆ ಕಾವಲಿರುವ ನಂದಿಯೂ ಎಂಥದ್ದೋ ವಿಶ್ವಾಸ ನೀಡುವಂತೆ ಭಾಸ. ಇನ್ನು ಕೃತಕ ದೀಪಗಳಿರದ ಗರ್ಭಗುಡಿಯಲ್ಲಿ ಬೆಳಗುವ ಸೊಡರ ಕಾಂತಿಯ ಲ್ಲಿ ಆ ನಾಲ್ಕೂವರೆ ಅಡಿ ಎತ್ತರದ ಆಗಮ ಶಿವ ಲಿಂಗ ಭಕ್ತಿಭಾವವನ್ನು ಉದ್ದೀಪನಗೊಳಿಸುತ್ತದೆ. ಆ ಮಂದ ಬೆಳಕಿನಲ್ಲಿ ದೇವರ ಕಾಣುವಾಗ ಉಂಟಾಗುವ ಅನುಭೂತಿಯದು ಅವರ್ಚನೀ ಯ.  ಗರ್ಭಗುಡಿಯ ಸುತ್ತ ವಿಶಾಲ ಚಂದ್ರಶಾಲೆ ಯಲ್ಲಿ ಕೂತಾಗ ರಾಮ ಸೀತೆ ಲಕ್ಷ್ಮಣರು ಇಲ್ಲಿಯೆ ಓಡಾಡಿದ್ದಿರಬೇಕು ಎಂಬ ಭಾವ ಮನ ತುಂಬಿತ್ತು. ತ್ರಿಕಾಲ ಪೂಜೆ ನಡೆಯುವ ಈ ಪುಣ್ಯಕ್ಷೇತ್ರದಲ್ಲಿ ಮಧ್ಯಾಹ್ನ ಭೋಜನ ಪ್ರಸಾದದ ವ್ಯವಸ್ಥೆಯೂ ಇದೆ. ವಿಶಾಲ ಭೋಜನ ಶಾಲೆ ಅಚ್ಚುಕಟ್ಟುತನಕ್ಕೆ ಸಾಕ್ಷಿಯಾಗಿದೆ.

ಇತ್ತೀಚೆಗೆ‌ ಭೇಟಿಕೊಟ್ಟ ದೇವಾಲಯಗಳಲ್ಲಿ ತುಂಬಾ ಆಪ್ಯಾಯವೆನಿಸಿದ್ದು ಈ ದೇಗುಲ.  ಪಾವಿತ್ರ್ಯದ ಸಂಕೇತದ ಶಿವಲಿಂಗ, ಆ ಪ್ರಾಂಗಣ ದಲ್ಲಿ ಕೂತಾಗ ಉಂಟಾದ ಪ್ರಶಾಂತತೆ ನಿರಾಳತೆ ಯ ಭಾವ, ವೇದಮಂತ್ರಗಳ ಘೋಷ ಇನ್ನೂ ಅನುರಣನಗೊಳ್ಳುತ್ತಿದೆಯೇನೋ ಅನ್ನಿಸುವ ಸುಮಧುರತೆ, ಹಿನ್ನೆಲೆಯ ಆ ನದಿಯ ಹರಿವು. ಯಾಂತ್ರಿಕ ನಗರದ ಜೀವನದಿಂದ ದೂರಾಗಿ ಕಳೆ ಯುವ ಇಂತಹ ಕೆಲವು ಕ್ಷಣಗಳು ಬೊಗಸೆಯಲ್ಲಿ ನ ಜಲದಂತೆ ಹಿಡಿದಿಟ್ಟುಕೊಳ್ಳಲಾಗದು. ಅನುಭ ವಿಸಿದ ಅನುಭಾವದ ನೆನಪ ಮೆಲುಕುಗಳು ಮಾತ್ರ ಲಭ್ಯ.ಆದರೂ ಬೇಕು ಇಂತಹ ಸವಿಗಳಿಗೆ ಗಳು. ದೈನಂದಿನ ಜಂಜಾಟವನ್ನು ಮರೆಸುವ ಟಾನಿಕ್ ಳಾಗಿ ಮತ್ತೆ ಮುಂದೆಂದೋ ಸಿಗಬಹು ದಾದ ಇಂತಹ ಅಮೃತಗಳಿಗೆಗಳ ಸಂಚಯನ ಕ್ಕಾಗಿ.

ದರ್ಶನ ಮುಗಿಸಿ ಹೊರಬಂದಾಗ ದಿನಕರ ತನ್ನ ಪಾಳಿ ಮುಗಿಸಿ ಮನೆಗೆ ಹೊರಟಿದ್ದ.  ನಮಗೂ ಬೇಗ ಊರು ಸೇರುವ ತವಕವಿತ್ತು. ಅಂತೆಯೇ ಇಂದು ನಾಳೆಯ ಸೇರಿ ವರ್ತಮಾನ ಗತವಾಗುವ ಆ ಸಂಧಿ ಕಾಲದಲ್ಲಿ ಮನವಿರದ ಮನದಿಂದ ಮೃಗವಧೆ ಕ್ಷೇತ್ರಕ್ಕೆ ಅಲ್ಲಿ ಕಳೆದ ಸವಿನಿಮಿಷಗಳಿಗೆ ವಿದಾಯ ಕೋರಿ ಹೊರಟಿದ್ದೆವು. ದಿನ ಉರುಳಿ ರಾತ್ರಿಗೆ ಜಾರುತ್ತಿತ್ತು. 

(ಸಪ್ಟಂಬರ್ – 27 ವಿಶ್ವ ಪ್ರವಾಸಿ ದಿನದ ನಿಮಿತ್ತ ಈ ಲೇಖನ)

ಸುಜಾತಾ ರವೀಶ್, 
ಮೈಸೂರು