ನಮ್ಮ ಹಳ್ಳಿಯಲ್ಲಿ ಹುಲ್ಲು ಹೊದಿಸಿದ್ದ ಗುಡಿಸಲು ಗಳು ಕಾಲಕ್ರಮೇಣ ಕಣ್ಮರೆಯಾಗಿ, ಮಣ್ಣಿನ ಮನೆಗಳಾಗಿ ಪರಿವರ್ತನೆಗೊಂಡು, ಮಣ್ಣಿನ ಮನೆಗಳು ಈಗ ಕಾಂಕ್ರೀಟಿನ ಮನೆಗಳಾಗಿವೆ. ಮುಳ್ಳು- ಕಂಟಿಗಳ ಕಾಲುಹಾದಿ ಮಣ್ಣಿನ ರಸ್ತೆ ಯಾಗಿ, ಮಣ್ಣು- ಕಲ್ಲುಗಳ ಕಚ್ಚಾ ರಸ್ತೆಯೀಗ ಡಾಂಬರಿನ ಹೊದಿಕೆಯನ್ನು ಹೊದ್ದುಕೊಂಡು ನವೀಕರಣಗೊಂಡಿದೆ. ನದಿ- ತೊರೆಗಳವರೆಗೆ ಮೈಲಿಗಟ್ಟಲೆ ನಡೆದುಕೊಂಡು ಹೋಗಿ ಒಂದು ಬಿಂದಿಗೆ ನೀರನ್ನು ತರುತ್ತಿದ್ದ ಕಷ್ಟನಿವಾರಣೆಯಾಗಿ ಮನೆಯ ಮುಂದೆಯೇ ಕೊಳಾಯಿಯಲ್ಲಿ ನೀರು ಸುರಿಯುತ್ತಿದೆ. ಅಲ್ಲೊಂದು- ಇಲ್ಲೊಂದು ಎಂದು ಉರಿಯುತ್ತಿದ್ದವಿದ್ಯುತ್ ದೀಪಗಳೀಗ ಮನೆ-ಮನೆ ಯಲ್ಲೂ ಪ್ರಜ್ವಲಿಸಲು ಪ್ರಾರಂಭವಾಗಿವೆ. ಪಟ್ಟಣ ದಿಂದ ದಿನಕ್ಕೆರಡು ಸಲ ನಮ್ಮ ಹಳ್ಳಿಗೆ ಬಂದು ಹೋಗುತ್ತಿದ್ದ ಖಾಸಗಿ ಬಸ್ಸಿನ ಬದಲು ಈಗ ಗಂಟೆಗೊಮ್ಮೆ ಸರಕಾರಿ ಬಸ್ಸುಗಳು ಬಂದು ಹೋಗಿ, ಸಾರಿಗೆ ವ್ಯವಸ್ಥೆ ಸುಧಾರಿಸಿದೆ. ಸಂಜೆ ಹೊತ್ತಲ್ಲಿ ತಮ್ಮ-ತಮ್ಮ ಮನೆಯ ಕಟ್ಟೆಯ ಮೇಲೆ ಕುಳಿತು, ಅಕ್ಕ-ಪಕ್ಕದ ಮನೆಯವರ ಹತ್ತಿರ ಸುಖ-ದುಃಖ ಮಾತನಾಡುತ್ತ, ರಾತ್ರಿ ಕಂದೀಲಿನ ಮಿಣುಕು ದೀಪ ಹಚ್ಚಿಕೊಂಡು, ರೇಡಿಯೋ ಕೇಳುತ್ತ ಸಮಯ ಕಳೆಯುತ್ತಿದ್ದ ನಮ್ಮ ಹಳ್ಳಿಯ ಜನ, ಈಗ ಹೊಲದ ಕೆಲಸ ಮುಗಿಸಿ ಮನೆಗೆ ಬಂದ ಕೂಡಲೇ ಟಿ.ವಿ.ಯ ಮುಂದೆ ಕುಳಿತು ಸೀರಿಯಲ್ ಗಳನ್ನು ನೋಡುತ್ತಾರೆ. ಬಾಲ್ಯದಿಂದ ಇಂದಿನವರೆಗಿನ ಪ್ರತಿದಶಕಗಳನ್ನು ಮೆಲುಕುಹಾಕಿ ದಾಗ ಕಂಡುಬರುವ ಅಂಶವೆಂದರೆ ಬದಲಾವಣೆ, ತಪ್ಪಿಸಿಕೊಳ್ಳಲಾಗದ ಜಗದ ನಿಯಮ!

ಜಗದ ಈ ನಿಯಮಕ್ಕೆ ಹೊಂದಿಕೊಳ್ಳುತ್ತ ಹೋಗು ವ ನಮಗೆ, ನಾವು ನಡೆದು ಬಂದ ದಾರಿಯನ್ನೊ ಮ್ಮೆ ಹಿಂತಿರುಗಿ ನೋಡಿದಾಗಲೇ ಈ ಬದಲಾವಣೆ ಗಳ ಅರಿವಾಗುತ್ತದಲ್ಲವೇ? ಪ್ರಕೃತಿಯಲ್ಲಿನ ಬದ ಲಾವಣೆ ಸಹಜವಾದದ್ದು, ನೈಸರ್ಗಿಕ ಎಂದಾದರೆ, ಬಹುತೇಕ ಬದಲಾವಣೆಗಳನ್ನು ನಾವು ಬದುಕಿನು ದ್ದಕ್ಕೂ ನಮ್ಮ-ನಮ್ಮ ಅವಶ್ಯಕತೆಗಳಿಗೆ ತಕ್ಕಂತೆ, ನಾವು ಒಳಪಡುವ ಪರಿಸ್ಥಿತಿಗಳಿಗನುಸಾರವಾಗಿ, ನಮ್ಮ ಜೀವನಾನುಭವಗಳಿಂದ ಕಂಡುಕೊಳ್ಳುತ್ತೇ ವೆ. ಪ್ರತಿಯೊಬ್ಬ ಮನುಷ್ಯನ ಜೀವನವೆನ್ನುವುದು ಆತತನಗೆಂದು ಆರಿಸಿಕೊಂಡ ಜೀವನಾಸಕ್ತಿಯಲ್ಲಿ ಸಾರ್ಥಕತೆಯ ಗುರಿಯನ್ನು ತಲುಪುವವರೆಗಿನ ಪಯಣವೆಂದಾಗ, ಮನುಷ್ಯ ತನ್ನ ಪಯಣವನ್ನು ಮುಂದುವರಿಸದೆ ನಿಂತರೆ ಆತನೊಂದಿಗೆ ‘ಸಮಯ’ನಿಲ್ಲುವುದಿಲ್ಲ! ಸಾಗುವ ಸಮಯದೊಂ ದಿಗೆ ನಾವು ನಡೆಯಲೇಬೇಕೆಂದಾಗ ಗಡಿಯಾರದ ಟಿಕ್-ಟಿಕ್ ಶಬ್ದ, ಸಮಯದ ಚಲನೆಯನ್ನು ಹೇಳುವುದರೊಂದಿಗೆ ಬದುಕಿನಲ್ಲಿನ ಬದಲಾವಣೆ ಯ ಕಥೆಯನ್ನೂ ಹೇಳುತ್ತದೆ.

ಹಳ್ಳಿಯಿರಲಿ, ನಗರವಿರಲಿ ಅಥವಾ ಮನೆಯನ್ನು ಕಟ್ಟಲು ಬಳಸಿದ ಸಾಮಗ್ರಿಗಳೇನೇ ಇರಲಿ, ಪುಟ್ಟ ಮಗುವಾಗಿ ತನ್ನ ಜೀವನವನ್ನು ಪ್ರಾರಂಭಿಸುವ ಪ್ರತಿಯೊಬ್ಬನ ಬದುಕಿನ ಪಯಣದಲ್ಲಿ, ಮನೆಯೆ ನ್ನುವುದು ಭಾವನಾತ್ಮಕ ತಾಣವಾಗಿ, ಆತನ ಜೀವನದ ಅದೆಷ್ಟೋ ಬದಲಾವಣೆಗಳಿಗೆ ಸಾಕ್ಷಿ ಯಾಗುತ್ತದೆ. ಅದು ಬರೀ ನಾಲ್ಕು ಗೋಡೆಗಳ ಕಟ್ಟಡವಾಗಿರದೆ, ಪತ್ರ ವ್ಯವಹಾರದ ವಿಳಾಸವಾಗಿ ರದೆ, ಜೀವನದಲ್ಲಿ ಪ್ರೀತಿ, ವಿಶ್ವಾಸ, ಸಂಬಂಧ, ಸಂಸ್ಕಾರಗಳ ಮಹತ್ವವನ್ನು ಕಲಿಸಿಕೊಟ್ಟು,  ಪುಟ್ಟ ಮಕ್ಕಳಿಂದ ವಯೋವೃದ್ಧರವರೆಗೆ ಮನಸ್ಸಿನ ಸ್ವಾತಂತ್ರ್ಯವನ್ನೂ ನೀಡುತ್ತದಲ್ಲವೇ? ಮನೆಯೆನ್ನು ವುದು ನಾವು ಜೀವನದ ಮೌಲ್ಯಗಳನ್ನು ಕಲಿಯು ವಲ್ಲಿ ಹೇಗೆ ಮಾರ್ಗದರ್ಶಿಯಾಗುತ್ತದೆ ಎಂದುಕೊ ಳ್ಳುತ್ತ,  ವರ್ಷಗಳುರುಳಿದಂತೆ  ಹಿಂದಿನ ಮತ್ತು ಇಂದಿನ ತಲೆಮಾರಿನವರ ಜೀವನ ಕ್ರಮ, ಪಾಲಿಸಿ ಕೊಂಡು ಬಂದ ರೂಢಿ-ಪದ್ಧತಿಗಳು, ಉಳಿಸಿಕೊಂ ಡ ಜೀವನದ ಮೌಲ್ಯಗಳಲ್ಲಿ ಏನೆಲ್ಲ ಬದಲಾವಣೆ ಗಳಾಗಿವೆ ಎಂದು ಯೋಚಿಸತೊಡಗಿದೆ. ಮಗು ವಾಗಿ ಹುಟ್ಟಿ, ಬೆಳೆದು ದೊಡ್ಡವರಾದಂತೆ ಪ್ರತಿ ವ್ಯಕ್ತಿಯ ಮೊಗ್ಗಿನ ಮನಸ್ಸನ್ನು ಹೂವಾಗಿ ಅರಳಿಸಿ, ಕಾಯಾಗಿಸಿ,ಹಣ್ಣಾಗಿಸಿ,ಆ ವ್ಯಕ್ತಿಯ ವ್ಯಕ್ತಿತ್ವವನ್ನು ಸಕಾರಾತ್ಮಕವಾಗಿ ಬೆಳೆಸುವಲ್ಲಿ ರೂವಾರಿಯಾಗುವ ಮನೆಯೇ ಈಗ ಬದಲಾವಣೆ ಯ ಕೇಂದ್ರವಾಗಿ ಕಂಡಿತ್ತು. ಆದರೆ ಈಗಲೂ ನಮ್ಮಹಳ್ಳಿಯ ಮನೆಗಳಲ್ಲಿ ಇಂತಹ ಬದಲಾವಣೆ ಗಳು ಅಷ್ಟಾಗಿ ಕಂಡು ಬರುವುದಿಲ್ಲ ಎನ್ನುವುದು ಸಮಾಧಾನ ತಂದರೂ, ಇವೆಲ್ಲ ನಗರಗಳಲ್ಲಿ ಕಾಣಿಸಿಕೊಳ್ಳುವ ನಕಾರಾತ್ಮಕ ಬದಲಾವಣೆಗಳು ಅನ್ನುವ ಭಾವನೆ ಮೂಡಿತ್ತು.

ಮನೆಯೆಂದಾಕ್ಷಣ ನನ್ನ ಕಣ್ಣ ಮುಂದೆ ಸುಳಿಯು ವ ಚಿತ್ರವೆಂದರೆ ವಿಶಾಲವಾದ ಅಂಗಳ, ಸುತ್ತಲೂ ಎತ್ತರದ ಕಾಂಪೌಂಡಿನ ಗೋಡೆ, ಕಬ್ಬಿಣದ ಗೇಟು, ಅದಕ್ಕೆ ಚಪ್ಪರ ಹಾಕಿ ಹಬ್ಬಿಸಿದ ಮಲ್ಲಿಗೆ ಬಳ್ಳಿ, ಹೂದೋಟ,ಮನೆಯ ಮುಂದಿನ ಜಗುಲಿ, ಅಂಗ ಳದಲ್ಲಿನ ವೈವಿಧ್ಯಮಯ ರಂಗೋಲಿ,ದೊಡ್ಡದಾದ ಮನೆ, ವಿವಿಧ ಬಗೆಯ ಹಣ್ಣಿನ ಗಿಡಗಳಿಂದ ತುಂಬಿದ ಹಿತ್ತಲು ಮತ್ತು ಇವುಗಳೊಂದಿಗೆ ಮನ ದಂಗಳದಲ್ಲಿ ಮೂಡುವ ಸಾವಿರಾರು ನೆನಪಿನ ಚಿತ್ತಾರಗಳು! ಕಾಲ ಬದಲಾಗಿ ಕಾಂಕ್ರೀಟಿನ ಕಾಡಾಗಿ ಪರಿವರ್ತನೆಗೊಳ್ಳುತ್ತಿರುವ ನಗರಗಳಲ್ಲಿ ಮನೆಯ ಅಂಗಳವೆಲ್ಲಿ? ಹಿತ್ತಲವೆಲ್ಲಿ? ಇದನ್ನೆಲ್ಲ ನೋಡಿದಾಗ, ಇತ್ತೀಚಿನ ವರ್ಷಗಳಲ್ಲಿ ನಮ್ಮ ನಗರದ ಮನೆಗಳ ಮುಂದಿನ ಅಂಗಳದ ರಂಗೋಲಿಯೂ ಮಾಸುತ್ತ ಹೋಗುತ್ತಿದೆ ಎನಿಸು ತ್ತದೆ. ರಂಗೋಲಿಯ ಚಿತ್ತಾರಕ್ಕೂ ಜಾಗವಿಲ್ಲವೆಂ ದಾಗ, ಅಂಗಳದಲ್ಲಿನ ಬಣ್ಣ-ಬಣ್ಣದ ಹೂಗಿಡ ಗಳು, ಕಾಂಪೌಂಡಿನ ಗೇಟಿಗೆ ಹಬ್ಬಿಸುತ್ತಿದ್ದ ಕಾಗದದ ಹೂವಿನ ಗಿಡ, ಮಲ್ಲಿಗೆಯ ಬಳ್ಳಿಗಳೂ ಮಾಯವಾಗಿವೆ.

 “ನನ್ನ ಅಂಗಳದಾಗ ಮಲ್ಲೀಗಿ ಗಿಡ ಹುಟ್ಟಿ, ಝಲ್ಲೀಸ ಬ್ಯಾಡೊ ಗಿಣಿರಾಮಾ…”

ಎನ್ನುವ ಗರತಿಯ ಹಾಡಿನ ಸಾಲುಗಳು ವಾಸ್ತವ ವಾಗದೆ ಪುಸ್ತಕದಲ್ಲಿಯೇ ಉಳಿದು ಹೋಗುತ್ತಿವೆ. ಅಂಗಳದೊಂದಿಗೆ ಹಿತ್ತಲವೂ ಮಾಯವಾಗಿ, ಪೇರಲ-ಮಾವಿನ ಮರಗಳೂ ಕಾಣೆಯಾಗಿ, ಹಣ್ಣ ನ್ನು ಸವಿಯಲು ಹಿಂಡು-ಹಿಂಡಾಗಿ ಬರುತ್ತಿದ್ದ ಗಿಣಿ ಗಳೂ ದೂರವಾಗಿವೆ.ಮನೆಯಲ್ಲೆಲ್ಲ ಮುಕ್ತವಾಗಿ ಹಾರಾಡಿಕೊಂಡು, ಮೂಲೆಯಲ್ಲೊಂದು ಗೂಡು ಕಟ್ಟಿಕೊಂಡು, ಅಜ್ಜಿ ಹೇಳುತ್ತಿದ್ದ ‘ಕಾಗಕ್ಕ- ಗುಬ್ಬಕ್ಕ ನ ಕಥೆ’ಗೆ ಅರ್ಥ ಕೊಡುತ್ತಿದ್ದ ಗುಬ್ಬಚ್ಚಿಗಳೆಲ್ಲ ಎಲ್ಲಿ ಹೋದವೋ ಎಂದು ಯೋಚಿಸುವಂತಾಗಿರುವಾ ಗ, ಗಿಣಿಗಳು ಕಣ್ಮರೆಯಾದದ್ದು ಅಸಹಜವೆನಿಸು ವುದಿಲ್ಲ.ಹತ್ತು ವರ್ಷಗಳ ಹಿಂದೆ ನಾವು ಬೆಂಗಳೂ ರಿನಲ್ಲಿ ಹೊಸದಾಗಿ, ದೊಡ್ಡದಾದ ಮನೆಯನ್ನು ಕಟ್ಟಲು ಮುಂದಾದಾಗ, ಹಳೆಕಾಲದ ಹೆಂಚಿನ ಮನೆಯೊಂದಿಗೆ ಅಂಗಳ-ಹಿತ್ತಲವೂ ಉಳಿಯದೆ, ಅದೆಷ್ಟೋ ವರ್ಷಗಳಿಂದ ಬೆಳೆದುನಿಂತಿದ್ದ ಮಾವಿನಮರ, ಚಕ್ಕೋತದ ಮರಗಳನ್ನು ಉಳಿಸಿ ಕೊಳ್ಳಲಾಗಲಿಲ್ಲ. ಅದರೊಂದಿಗೆ “ಚಕ್ಕೋತದ ಮರವಿರುವ ಮನೆ” ಅನ್ನುವ  ಬಾಯಿಮಾತಿನ ವಿಳಾಸವನ್ನು ಈಗಿನ ಮೂರಂತಸ್ತಿನ ದೊಡ್ಡ ಮನೆ ಕಳೆದುಕೊಂಡಿದೆ. ‘ತುಳಸಿ’ ಗಿಡದೊಂದಿಗೆ ಹಲವಾರು ಹೂವಿನ ಗಿಡಗಳು, ಅಲಂಕಾರಿಕ ಸಸ್ಯಗಳು ಹೂಕುಂಡಕ್ಕೆ ಸೀಮಿತಗೊಂಡಿವೆ.ಹೀಗೆ, ಅಂಗಳದಿಂದ ಆರಂಭಗೊಂಡ ಬದಲಾವಣೆ ನಗರದ ಹಲವಾರು ಮನೆಗಳ  ಹೊಸ್ತಿಲುಗಳಿಂದ ಒಳಗೆ ಕಾಲಿಟ್ಟು ‘ಗೃಹ ಪ್ರವೇಶ’ ಮಾಡಿದೆ!

ಮನೆಯ ವಿಸ್ತೀರ್ಣ-ವಿನ್ಯಾಸ ಕಾಲಕ್ಕೆ ತಕ್ಕಂತೆ, ಅವಶ್ಯಕತೆಗೆ ತಕ್ಕಂತೆ ಬದಲಾದಂತೆ, ಹಿಂದಿನ- ಇಂದಿನ ಜೀವನ ಶೈಲಿಯಲ್ಲಿಯೂ ಬದಲಾವಣೆ ನೋಡಬಹುದು. ಮನುಷ್ಯನ ಬದಲಾದ ಜೀವನ ಕ್ರಮದಲ್ಲಿ ನಮ್ಮ ಹವ್ಯಾಸಗಳು, ತಿನ್ನುವ ಆಹಾರ ಕ್ರಮ, ವಿಶ್ರಾಂತಿಗೆಂದು ಮಾಡುವ ನಿದ್ದೆಯೂ ಬದಲಾವಣೆಯನ್ನು ಕಂಡಿವೆ. ಹಳ್ಳಿ-ಪಟ್ಟಣಗಳಿಗೆ ಹೋಲಿಸಿ ನೋಡಿದಾಗ ನಗರಗಳಲ್ಲಿನ ಜೀವನ ಕಷ್ಟಕರವಾದದ್ದು, ಪ್ರತಿ ನಿಮಿಷವೂ ಓಟ! ಸಮ ಯವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ತೊಂದ ರೆ ತಪ್ಪಿದ್ದಲ್ಲವೆನ್ನುವಾಗ, ನಿಯಮಿತವಾಗಿರಬೇಕಾ ಗಿದ್ದ ಜೀವನ ಶೈಲಿಯನ್ನು ಬಹಳಷ್ಟು ಕುಟುಂಬ ಗಳು ತಮ್ಮ-ತಮ್ಮ‌ ಅವಶ್ಯಕತೆಗಳಿಗೆ ತಕ್ಕಂತೆ ಬದಲಾಯಿಸಿಕೊಂಡಿರುವುದು ಕಂಡುಬರುತ್ತಿದೆ. ಮನುಷ್ಯನ ಅವಶ್ಯಕತೆಗಳಿಗೆ ಅನುಸಾರವಾಗಿ  ಬದುಕಿನ ಕ್ರಮವೇ ಬದಲಾದಾಗ,  ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಬೇಗ ಎದ್ದು,ನಸುಕಿನಲ್ಲಿ ವಾಯು ವಿಹಾರ ಮಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ ಎನಿಸುತ್ತದಲ್ಲವೇ? ಅಡುಗೆ ಮನೆಯ ಊಟೋಪಚಾರಗಳೂ, ದೇವರಮನೆ ಯ ಪೂಜಾಪದ್ಧತಿಗಳೂ ಬದಲಾವಣೆಯ ಪಟ್ಟಿಗೆ ಸೇರಿಕೊಂಡಿವೆಯಲ್ಲವೇ? ಇಂತಹ ಬದಲಾವಣೆ ಗಳು ಪ್ರತಿದಿನದ ಬದುಕಿನಲ್ಲಿ ವಿಶೇಷತೆಯನ್ನು ಪಡೆಯದೆ ಇದ್ದರೂ, ಹಬ್ಬದ ದಿನಗಳಲ್ಲಿ ವಿಶೇಷ ವಾಗಿ ಎಲ್ಲರಗಮನವನ್ನು ತಮ್ಮತ್ತ ಸೆಳೆಯುತ್ತವೆ. ಅಜ್ಜಿಯ ಕಾಲದಲ್ಲಿ ಹಬ್ಬದ ದಿನಗಳಲ್ಲಿ ಕಟ್ಟಿಗೆ ಒಲೆಯ ಮೇಲೆ ಬೇಳೆ ಕುದಿಸಿ, ರುಬ್ಬುವ ಕಲ್ಲಿನಲ್ಲಿ ಹೂರಣ ರುಬ್ಬಿ, ಹೋಳಿಗೆಯನ್ನು ಮಾಡುವ ಪದ್ಧತಿಯೀಗ, ಹಬ್ಬದ ಹಿಂದಿನ ದಿನ ಹೋಳಿಗೆ ಮಾರುವ ಅಂಗಡಿಯ ಮುಂದೆ ಸಾಲುಗಟ್ಟಿ ನಿಂತು  ಸರದಿಯಲ್ಲಿ ಹೋಳಿಗೆಯನ್ನು ಕೊಂಡು ತರುವಲ್ಲಿಗೆ ಬದಲಾಗಿದೆ.‌ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತುಕೊಂಡು ಬಾಳೆಎಲೆಯಲ್ಲಿ ಊಟ ಮಾಡುವುದು ಮರೆಯಾಗಿ ಹೋಗಿರುವುದರೊಂ ದಿಗೆ,ಬಾಳೆಯೆಲೆ ಹರಡಿ, ಸಾಂಪ್ರದಾಯಿಕ ಊಟ ಬಡಿಸುವ ಅದೆಷ್ಟೋ ಹೊಟೇಲುಗಳು ತಲೆಯೆತ್ತಿ ವೆ.ಶಾಲಾ-ಕಾಲೇಜು,ಆಫೀಸುಗಳಿಗೆ ರಜೆಯಿರುವ ಹಬ್ಬದ ದಿನದಂದು ತಡವಾಗಿ ಎದ್ದು, ರಜೆಯ ಮಜವನ್ನು ಸವಿದು, ಸಾಂಪ್ರದಾಯಿಕ ಊಟ ಬಡಿಸುವ ಹೊಟೇಲಿನಲ್ಲಿ ಹಬ್ಬದೂಟ ಮಾಡುವು ದನ್ನು ತಮ್ಮ ಆಧುನಿಕತೆಯ ಲಕ್ಷಣವೆಂದುಕೊಂ ಡಿರುವ ಕೆಲವರನ್ನು ನೋಡುತ್ತೇವೆ. ಇದನ್ನು, ಅವರು ಕಂಡುಕೊಂಡ ಬದಲಾವಣೆಯ ಭ್ರಮೆ ಎನ್ನಬಹುದೇನೋ? ಒಂದು ದಿನದ ಹಬ್ಬದಾಚರ ಣೆಯೇ ಹೀಗಾಗಿದೆಯೆಂದರೆ,ಒಂದು ವರ್ಷಕ್ಕಾಗು ವಷ್ಟು ಉಪ್ಪಿನಕಾಯಿ, ಹಪ್ಪಳ-ಸಂಡಿಗೆಗಳನ್ನು ಮಾಡಿಡುತ್ತಿದ್ದ ಪದ್ಧತಿಯೂ ನಿಂತುಹೋಗಿದೆ. ಇವುಗಳನ್ನು ತಿನ್ನಬೇಕೆಂಬ ಯೋಚನೆ ಮೂಡಿ ನಾಲಗೆ ನೀರೂಡಿಸಿದರೆ,’ಸುಬ್ಬಮ್ಮ, ಕಮಲಮ್ಮ’ ನ ಅಂಗಡಿಯಿಂದ ಖರೀದಿಸಿದರಾಯಿತೆಂಬ ಬದಲಾವಣೆಯನ್ನು ಕಾಣುತ್ತೇವೆ. ಹಬ್ಬಗಳ ಸಂಭ್ರಮಾಚರಣೆಗೆಂದೇ ವರ್ಷಕ್ಕೆ ಮೂರರಿಂದ ನಾಲ್ಕು ಸಲ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದ ರೂಢಿಯೂ ಬದಲಾವಣೆಯ ಜಾಡನ್ನು ಹಿಡಿ ದಿದೆ.ವರ್ಷಪೂರ್ತಿ ಕಣ್ಸೆಳೆಯುವ ಸೇಲ್ ಗಳಲ್ಲಿ, ಆನ್ ಲೈನ್ ಶಾಪಿಂಗ್ ಎಂದು ಮನೆಯಲ್ಲಿಯೇ ಕುಳಿತು ಖರೀದಿ ಮಾಡಿದರೂ, ಎಲ್ಲರಲ್ಲಿ ಅದೇನೋ ಅತೃಪ್ತಿ ಕಾಣುತ್ತದೆ.

ಮನೆಯಲ್ಲಿನ ಜನರ ಜೀವನಶೈಲಿ ಬದಲಾಗುವು ದರೊಂದಿಗೆ ಅವರ ಹವ್ಯಾಸಗಳೂ ಬದಲಾಗಿದ್ದ ನ್ನು ಕಾಣುತ್ತೇವಲ್ಲ? ದಶಕಗಳು ಕಳೆದಂತೆ ಪುಸ್ತಕ ಗಳನ್ನು ಓದುವ ಹವ್ಯಾಸ ಬಹುತೇಕ ಮನೆಗಳಲ್ಲಿ ಕಡಿಮೆಯಾಗಿರುವುದು ಕಂಡುಬರುತ್ತಿದೆ. ನಾನು  ಬಾಲ್ಯದಿಂದಲೂ   ಓದಿಕೊಂಡು  ಬೆಳೆದ ‘ಚಂದಾಮಾಮಾ’,’ಬೊಂಬೆಮನೆ’ಪತ್ರಿಕೆಗಳು  ಬರೀ ನೆನಪುಗಳಾಗಿ ಉಳಿದಿವೆ. ಅದೆಷ್ಟೋ ಮನೆ ಗಳಲ್ಲಿ ವಾರಪತ್ರಿಕೆಗಳು,  ಮಾಸ ಪತ್ರಿಕೆಗಳನ್ನು  ಕೊಂಡು ಓದುವ  ರೂಢಿ ನಿಂತುಹೋಗಿದೆ. ಇದಕ್ಕೆ ನಮ್ಮಮನೆಯೂ ಹೊರತಾಗಿಲ್ಲ. ನಾವೆಲ್ಲ  ಶಾಲಾ  ಕಾಲೇಜಿನ ದಿನ ಗಳಲ್ಲಿ ಮನೆಗೆ ತಂದು  ಓದುತ್ತಿದ್ದ ವಾರ ಪತ್ರಿಕೆಗಳನ್ನು  ಓದಲು  ಈಗ   ನಮ್ಮ ಮನೆ ಯಲ್ಲಿನ ಮಕ್ಕಳು, ಹಿರಿಯರು ಇಷ್ಟ ಪಡುವುದಿಲ್ಲ ಎನ್ನುವ ಕಾರಣ ಮನಸ್ಸಿಗೆ  ನೋವನ್ನು ತರುತ್ತದೆ

ದೃಶ್ಯಮಾಧ್ಯಮದ ಹಾವಳಿಯಿಂದಾಗಿ‌ ಈ ಬದ ಲಾವಣೆಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳು ವಂತೆ ಮಾಡುತ್ತದೆ. ಜೊತೆಗೆ ‌‌ ದೂರದರ್ಶನದ ಒಂದು ಚಾನೆಲ್ ನೋಡುತ್ತಿದ್ದ ಅಂದಿನವರ ಉತ್ಸಾಹವನ್ನು ಈಗಿನ ನೂರಾರು ಚಾನೆಲ್ ಗಳ ನ್ನು ನೋಡುವ‌‌ (ಚಾನೆಲ್ ಗಳನ್ನು ಬದಲಾಯಿ ಸುವ) ಹುಚ್ಚಿಗೆ ಹೋಲಿಸಿ ನೋಡಿದಾಗ, “ಅತಿಯಾದರೆ ಅಮೃತವೂ ವಿಷವಾಗುತ್ತದೆ” ಎನ್ನುವಂತಾಗಿದೆಯಲ್ಲವೇ? ಇನ್ನು, ಕಳೆದೊಂದು ದಶಕದಿಂದ ನಮ್ಮೆಲ್ಲರ ಜೀವನಕ್ಕೆ ಲಗ್ಗೆಯಿಟ್ಟ ಸಾಮಾಜಿಕ ಜಾಲತಾಣಗಳು,ತಂತ್ರಜ್ಞಾನದಲ್ಲಿನ ಬದಲಾವಣೆ, ಮನುಷ್ಯನ ಬದುಕಿನಲ್ಲಿ ವೈಜ್ಞಾನಿಕ ವಾಗಿ, ಸಾಮಾಜಿಕವಾಗಿ ಏನೆಲ್ಲ ಹೊಸತನ್ನು ನೀಡಿದ್ದರೂ, ಅವುಗಳ ಬಳಕೆಯಲ್ಲಿನ ಮಿತಿ- ಪರಿಮಿತಿಗಳನ್ನು ಅರಿತುಕೊಂಡಾಗಲೇ ಅದು ಸಕಾರಾತ್ಮಕ ಬದಲಾವಣೆ ಎನಿಸಿಕೊಳ್ಳುತ್ತದೆಯ ಲ್ಲವೇ?ಈ ಬದಲಾವಣೆಯನ್ನುಕಾಣುವಲ್ಲಿ ಹಳ್ಳಿ- ಪಟ್ಟಣಗಳ ಮನೆಗಳೂ ನಗರದ ಮನೆಗಳೂ ಎಂಬ ಭೇದವಿಲ್ಲ. ಆಗಸದ ‘ಚಂದಾಮಾಮಾ’ ನನ್ನು ತೋರಿಸಿ ಪುಟ್ಟಮಕ್ಕಳಿಗೆ ಅಜ್ಜಿ- ಅಮ್ಮ ಊಟ ಮಾಡಿಸುತ್ತಿದ್ದ ಬಗೆ ಬದಲಾಗಿ, ಟಿ.ವಿ. ಯನ್ನು ತೋರಿಸುತ್ತ ಊಟ ಮಾಡಿಸುವದರೊಂ ದಿಗೆ ಈಗ ಮಕ್ಕಳ ಕೈಯಲ್ಲಿ ಸ್ಮಾರ್ಟ್ಫೋನ್ ಇಟ್ಟು ಊಟ ಮಾಡಿಸುವಲ್ಲಿಗೆ ಬದಲಾವಣೆಯನ್ನು ಕಂಡಿದೆ! ನಾವೆಲ್ಲ ಚಿಕ್ಕವರಾಗಿದ್ದಾಗ ಆಡಿದ ಆಟಗಳನ್ನು ನಮ್ಮ ಮಕ್ಕಳಿಗೂ ಕಲಿಸುವ ಬದಲು, ಹಿಂದಿನ ಆಟ-ಪಾಟಗಳು ಮರೆಯಾಗಿ ಹೋಗಿವೆ ಎಂದು ನೆನಪಿಸಿಕೊಳ್ಳಲೂ ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿರುವುದು ಈಗ ಸಾಮಾನ್ಯವಾಗಿದೆ. ಮನೆಯ ಹಿರಿಯರು ಟಿ.ವಿ. ಧಾರಾವಾಹಿಗಳಿಗೆ ಅಂಟಿಕೊಂಡಂತೆ, ಮಕ್ಕಳೂ ಕೂಡ ವಿಡಿಯೋ ಗೇಮ್‌ಗಳಲ್ಲಿ ಮಗ್ನರಾಗಿದ್ದಾರೆ. ಮಕ್ಕಳಿಗೆ ಅಜ್ಜಿ-ತಾತ ಹೇಳುವ ಕಥೆಗಳು ಬೇಕಾ ಗಿಲ್ಲ,ತಾತ-ಅಜ್ಜಿಗೆ ಟಿ.ವಿ.ಯ ಧಾರಾವಾಹಿಗಳಿಂದ ಸಮಯ ಸಿಗುವುದಿಲ್ಲ! ಚಿಕ್ಕಂದಿನಲ್ಲಿ ನಮಗೆಲ್ಲ ಅಜ್ಜಿ ಹೇಳುತ್ತಿದ್ದ ಪೌರಾಣಿಕ ಕಥೆಗಳು, ನೀತಿಕಥೆ ಗಳು ವಿಡಿಯೋ ಗೇಮ್ ಗಳ ಹಾವಳಿಯಲ್ಲೀಗ ಕಳೆದುಹೋಗಿವೆ.

ಮನೆಯಲ್ಲಿ ಕಂಡ ಬದಲಾವಣೆಗಳ ಬಗ್ಗೆ ಬರೆ ಯುವಾಗ,ಅಕ್ಕ-ಪಕ್ಕದ ಮನೆಯವರ ಬಗ್ಗೆ ಬರೆ ಯದಿದ್ದರೆ ಹೇಗೆ? ಈ ನಿಟ್ಟಿನಲ್ಲಿನ ಬದಲಾವಣೆ ಯನ್ನು ಹೆಚ್ಚಾಗಿ ನಗರಗಳಲ್ಲಿಯೇ ಕಾಣುತ್ತೇವೆ. ಇತ್ತೀಚೆಗೆ ದಾರಿಯಲ್ಲಿ ನಮ್ಮನ್ನು ಕಂಡಾಗ ಮುಗುಳ್ನಗುವವರ, ಪರಸ್ಪರ ಸುಖ-ದುಃಖ ವಿಚಾರಿಸುವವರ, ಇತರರಿಗಾಗಿ ಸ್ಪಂದಿಸುವವರ ಸಂಖ್ಯೆ ಕಡಿಮೆಯಾಗಿದೆ ಎನಿಸುವುದಲ್ಲವೇ? ಪ್ರತಿ ನಿಮಿ‌ಷವೂ ಓಡುವುದನ್ನೇ ಅಪೇಕ್ಷಿಸುವ ನಗರಜೀವನದಲ್ಲಿ ಇದಕ್ಕೆಲ್ಲ ಸಮಯವೆಲ್ಲಿದೆ? ಹೆಣ್ಣುಮಕ್ಕಳು ತಮ್ಮ ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತುಕೊಂಡು, ಕಾಂಪೌಂಡಿನ ಗೋಡೆಗೆ ಒರಗಿಕೊಂಡು ಮಾತುಕತೆಯಲ್ಲಿ ನಿರತರಾಗಿರುತ್ತಿದ್ದರು ಎಂಬುದನ್ನು ಈಗ ಊಹಿಸಲೂ ಆಗದಂತಾಗಿದೆ. ಹಿಂದಿನ ಕಾಲದ ಸಿ.ಸಿ.ಟಿ.ವಿ.ಗಳೆಂದು ಅಕ್ಕಪಕ್ಕದ ಮನೆಯ ಅಜ್ಜಿ ಯರನ್ನು ಹಾಸ್ಯಾಸ್ಪದವಾಗಿ ತೋರಿಸಿದ್ದ ಸಂದೇಶ ವೊಂದನ್ನು ವಾಟ್ಸ್ಯಾಪಿನಲ್ಲಿ ನೋಡಿದಾಗ, ಅವಶ್ಯಕತೆಯಿದ್ದಾಗ ಒಬ್ಬರಿಗೊಬ್ಬರು ಸಹಾಯ ಕ್ಕೆ ನಿಂತು, ನೆರೆ- ಹೊರೆಯವರ ಸಂತೋಷದಲ್ಲಿ ಭಾಗಿಯಾಗುವದರೊಂದಿಗೆ ಅವರ ನೋವಿಗೆ ಸ್ಪಂದಿಸುತ್ತಿದ್ದವರು ಈ ಅಕ್ಕಪಕ್ಕದ ‌ ಮನೆಯವ ರಲ್ಲವೇ ಎನಿಸಿತ್ತು. ಈಗೀಗ ಪಕ್ಕದ ಮನೆಯಲ್ಲಿ ರುವವರ ಪರಿಚಯವೇ ನಮಗೆ ಇರುವುದಿಲ್ಲ ವೆಂದಾದಾಗ ಸ್ಪಂದಿಸುವ  ವಿಚಾರವೆಲ್ಲಿಯದು?  ಇನ್ನು ಬಹುಮಹಡಿಯ ಫ್ಲ್ಯಾಟ್ ಗಳಲ್ಲಿ ವಾಸಿಸು ವವರಿಗೆ ತಮ್ಮ ಪಕ್ಕದ ಮನೆಯಲ್ಲಿರುವ   ಕುಟುಂಬದವರ  ಮುಖ  ಪರಿಚಯವೂ ಇರುವು ದಿಲ್ಲ. ಎದುರಿಗೆ ಸಿಕ್ಕರೆ ಇವರು ನಮ್ಮ ಪಕ್ಕದ   ಮನೆಯವರೆಂದು ಗುರುತಿಸಲೂ  ಆಗದಿದ್ದಾಗ,   “ನಮಗೇಕೆ  ಇನ್ನೊಬ್ಬರ  ಗೊಡವೆ?”ಎನ್ನುವಷ್ಟರ ಮಟ್ಟಿಗೆ ಬದಲಾದ ಪರಿಸ್ಥಿತಿಯನ್ನು   ಕಾಣುತ್ತಿ ದ್ದೇವೆ.

ಮನೆಯೊಂದಿಗೆ ಕುಟುಂಬ, ಅದರೊಡನೆ ಬರುವ ಸಂಬಂಧಗಳು, ಈ ಎಲ್ಲ ಸಂಬಂಧಗಳೊಂದಿಗೆ ಕಳೆಯುವ ಕ್ಷಣಗಳು ಬದುಕಿನುದ್ದಕ್ಕೂ ಜೊತೆ ಯಾಗುವವು. ಸಂಬಂಧಗಳ ನಡುವಿನ ವಿಶ್ವಾಸ, ಅಲ್ಲಿನ ಪ್ರತಿಯೊಬ್ಬ ಸದಸ್ಯ ಬೆಳೆಸಿಕೊಳ್ಳುವ ಆತ್ಮವಿಶ್ವಾಸಕ್ಕೂ ಕಾರಣವಾಗುತ್ತದೆ ಎನ್ನುವ ಮಾತು ನಿಜವೆನಿಸಿದರೂ, ಬದಲಾದ ಮನೆಯ ವಾತಾವರಣ ಮನಗಳನ್ನು ಬದಲಾಯಿಸುವಲ್ಲಿ ತಡಮಾಡುವುದಿಲ್ಲ ಎನಿಸುತ್ತದೆ.ನಮ್ಮ ನಡುವಿನ ಭಾವನಾತ್ಮಕ ಬೆಸುಗೆಗಳು ಬದಲಾಗುವುದರೊಂ ದಿಗೆ ಕೆಲವೊಮ್ಮೆ ನಾವೂ ಬದಲಾಗುತ್ತೇವೆ. ಹೊಂದಾಣಿಕೆಯೆ ಬದುಕಿನ ಸೂತ್ರವೆನ್ನುವುದು ಮರೆತು ಹೋಗಿದೆ. ಹಲವು ವರ್ಷಗಳಿಂದ ಕಣ್ಮರೆ ಯಾಗುತ್ತ ಬಂದ ಅವಿಭಕ್ತ ಕುಟುಂಬ ಪದ್ಧತಿ, ಈಗ ಒಂದು ಕುಟುಂಬಕ್ಕೇ ಸೀಮಿತಗೊಂಡಿದ್ದನ್ನು ಕಾಣುತ್ತೇವೆ.’ನಾವು’,’ನಮ್ಮದು’ಎನ್ನುವ ಹೃದಯ ವೈಶಾಲ್ಯತೆ,’ನಾನು’, ‘ನನ್ನದು’ ಎಂದು ಸಂಕುಚಿತ ಗೊಂಡಿದೆ. ಈ ಬದಲಾವಣೆಯನ್ನು ಕಂಡಾಗ,

“ಹತ್ತಿರವಿದ್ದು ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ

ಎನ್ನುವ ಸಾಲುಗಳು ನೆನಪಾಗುತ್ತವೆ. ಕಾಲ ಬದಲಾದಂತೆ ಮನೆಯಲ್ಲಿನ ಸಂಬಂಧಗಳ ವ್ಯಾಪ್ತಿಯೂ ವಿಸ್ತಾರವಾಗುತ್ತದೆ. ಅದಕ್ಕೆ ತಕ್ಕಂತೆ ನಮ್ಮ ಮನಸ್ಸನ್ನು ಬದಲಾಯಿಸಿಕೊಳ್ಳುವ ಪ್ರಬು ದ್ಧತೆಯೂ ಬೇಕಲ್ಲವೇ?  ನಮ್ಮ ಬದುಕಿನ ಆದ್ಯತೆ ಗಳನ್ನು ತೂಗುವಲ್ಲಿ ಮನಸ್ಸು ವಿಫಲಗೊಂಡಾಗ, ಮನೆಯ ಹಿರಿಯರನ್ನು ದೂರ ಮಾಡುವುದನ್ನೂ, ಒಂಟಿಯಾಗಿ ಬದುಕುವಂತೆ ಮಾಡುವುದನ್ನೂ ಕಾಣುತ್ತೇವೆ. ಇನ್ನು ಬದುಕಿನ ಸತ್ಯವನ್ನು ಎದುರಿ ಸುವ ಸರದಿ ನಮ್ಮದಾದಾಗ, ನಾವು ನೀಡುವ ಅನವಶ್ಯಕ ಸಮರ್ಥನೆಗಳು,ಮಾಡುವಆರೋಪ- ಪ್ರತ್ಯಾರೋಪಗಳು ಮನಸ್ಸನ್ನು ಅನಾರೋಗ್ಯಗೊ ಳಿಸುವಲ್ಲಿ  ಮುಂಚೂಣಿಯಲ್ಲಿರುತ್ತವೆ ಎನ್ನುವು ದನ್ನು ನಮಗಾಗುವ ಅನುಭವಗಳಿಂದ ತಿಳಿದು ಕೊಳ್ಳುತ್ತೇವೆ.ಮನುಷ್ಯ ತನ್ನ ಪ್ರಾಮಾಣಿಕತೆಯನ್ನ ಕಳೆದುಕೊಂಡಾಗ ಮನದ‌ ಕನ್ನಡಿಯೂ ಬದಲಾಗಿ ವಿರೂಪದ ಪ್ರತಿಬಿಂಬವನ್ನೇ ಬಿಂಬಿಸುತ್ತದೆಯ ಲ್ಲವೇ? ಈ ಹಿಂದೆ ಹೀಗಿರಲಿಲ್ಲವಲ್ಲ, ಸಾಗುವ ಸಮಯದೊಂದಿಗೆ ಅಂತರಾತ್ಮವೂ ಬದಲಾಗು ವುದೇ? ಮನುಷ್ಯನ ಭಾವನೆಗಳನ್ನು ಮನೆಯ ವರೇ ದುರುಪಯೋಗಪಡಿಸಿಕೊಳ್ಳುವುದನ್ನು ಬದಲಾವಣೆ ಎನ್ನುವುದೇ ಎಂದು ಪ್ರಶ್ನಿಸಿಕೊಳ್ಳು ವಂತಾಗಿದೆ.

ಇನ್ನು  ಅಂತರ್ಜಾಲ, ಸಾಮಾಜಿಕ ಜಾಲತಾಣಗ ಳಿಂದ ಅರೆ-ಬರೆ ಮಾಹಿತಿ ಪಡೆದ ಇಂದಿನ ‘ಗೂಗಲ್ ಜ್ಞಾನಿ’ಗಳ ಮತ್ತು ಜೀವನಾನುಭದಿಂದ ಜ್ಞಾನ ಪಡೆದ ಹಿಂದಿನ ‘ಅನುಭವಜ್ಞಾನಿ’ ಗಳ ನಡುವೆ ಮಾತಿನ ಘರ್ಷಣೆ ನಡೆದಾಗ, ಮಲ್ಲಪ್ಪ ಮನಸ್ಸುಗಳು ದೂರವಾಗುದಷ್ಟೇ ಅಲ್ಲ ಅಪರಿಚಿ ತವಾಗುವುದೂ ಕಂಡು ಬರುತ್ತದೆ. ನಾವಾಡುವ ಅದೆಷ್ಟೋ ಅನವಶ್ಯಕ, ಅರ್ಥವಿಲ್ಲದ  ಮಾತುಗ ಳು ಮನಸ್ಸುಗಳನ್ನು ಬದಲಾಯಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ ಎಂದುಕೊಂಡಾಗ,

“ಮಾತು ಬರುವುದು ಎಂದು ಮಾತಾಡುವುದು ಬೇಡ, ‌‌‌‌‌‌ ಒಂದು ಮಾತಿಗೆ ಎರಡು ಅರ್ಥವುಂಟು, ಎದುರಿಗಿ‌ರುವವನ ಕೂಡ ಮಾತು ಬಲ್ಲವ ಗೆಳೆಯ, ಬರಿದೆ ಆಡುವ ಮಾತಿಗರ್ಥವಿಲ್ಲ

ಎನ್ನುವ ಕವಿತೆಯ ಸಾಲುಗಳು ನಮ್ಮ ಬದುಕಿಗೆ ಕಿವಿಮಾತಾಗಿ ಕಾಣುತ್ತವೆ. ನಮ್ಮ ಸ್ವಾಭಿಮಾನ, ವ್ಯಕ್ತಿತ್ವಕ್ಕೆ ಧಕ್ಕೆ ಉಂಟುವಾಡುವ. ಸಂಬಂಧ ಗಳಿಂದ ದೂರ ಉಳಿಯುವುದೇ ಒಳಿತೆನ್ನುವ ನಿರ್ಧಾರ ಮನಸ್ಸಿನದಾಗುತ್ತದೆ. ಮನಸ್ಸುಗಳ ನಡುವಿನ ಅಂತರ ಸಂಬಂಧದ ಎಳೆಗಳನ್ನು ಸಡಿ ಲಗೊಳಿಸುತ್ತದಲ್ಲವೇ? ಬದಲಾಗುವ ಸಮಯ ಹಾಗೂ ಪರಿಸ್ಥಿತಿಗಳ ಜೊತೆಗೆ ಸಂಬಂಧಗಳು ಬದಲಾಗುತ್ತವೆಯೇ? ಅಥವಾ ಅವುಗಳನ್ನು ನಿಭಾಯಿಸುವವರು ಬದಲಾಗುವರೋ?ಬಾಲ್ಯದ ದಿನಗಳಿಂದ ನನ್ನ ಸುತ್ತಮುತ್ತಲಿನ ಮನೆ-ಮನ ಗಳಲ್ಲಿ ಆದ ಬದಲಾವಣೆಗಳನ್ನು ನೋಡುತ್ತ, ಕಾರಣವನ್ನು ಹುಡುಕುತ್ತ ಯೋಚಿಸಿದಂತೆಲ್ಲ, “ದಿನಗಳೆದಂತೆ ಸಂಬಂಧಗಳು ಬಣ್ಣ ಕಳೆದು ಕೊಂಡು ಮಸುಕಾಗುತ್ತವೆ” ಎನ್ನುವ ಸಾಲು ಗಳು ನನ್ನನ್ನು ಕಾಡುತ್ತವೆ.

ಬಾಲ್ಯದ ದಿನಗಳಲ್ಲಿ ಸಂಬಂಧಗಳಲ್ಲಿ ಕಂಡುಬರು ವ ಗಾಢತೆ ಸಮಯ ಸರಿದಂತೆ ಏಕೆ ಮಸುಕಾ ಗುತ್ತದೆ? ಬಟ್ಟೆಯ ನೇಯ್ಗೆಯ  ಎಳೆಗಳು  ಸಡಿಲ ಗೊಂಡಂತೆ, ಪ್ರೀತಿ ವಾತ್ಸಲ್ಯ,ಮಮತೆ-ವಿಶ್ವಾಸಗಳ ಎಳೆಗಳಿಂದ ನೇಯಲ್ಪಟ್ಟ ಸಂಬಂಧದ ಎಳೆಗಳು ಸಡಿಲಗೊಳ್ಳುತ್ತವೆಯೇ? ಕಾಲ ಬದಲಾದಂತೆ ಪರಿಸ್ಥಿತಿ, ಮನಸ್ಥಿತಿಗಳಲ್ಲಿ ಇಷ್ಟೊಂದು ಬದಲಾವ ಣೆಯೇ? ನನ್ನನ್ನು ಕಾಡಿದ ಈ ಎಲ್ಲ ಪ್ರಶ್ನೆಗಳಿಗೆ ಡಿ.ವಿ.ಜಿ. ಅವರ ‘ಮಂಕು ತಿಮ್ಮನ ಕಗ್ಗ’ ದ ಪದ್ಯವೊಂದರಲ್ಲಿ ಉತ್ತರ ಕಂಡಿತ್ತು.

“ಮಲಗಿದೋದುಗನ ಕೈ ಹೊತ್ತಗೆಯು ನಿದ್ದೆಯಲಿ|  ಕಳಚಿ ಬೀಳ್ವದು; ಪಕ್ವ ಫಲವಂತು ತರುವಿಂ||  ಇಳೆಯ ಸಂಬಂಧಗಳು ಸಂಕಲ್ಪ ನಿಯಮಗಳು|  ಸಡಿಲುವುವು ಬಾಳ್ ಮಾಗೆ – ಮಂಕುತಿಮ್ಮ ||”

ನಮ್ಮ ಬದುಕಿನಲ್ಲಿ ಮನೆ-ಮನಗಳ ಬದಲಾವಣೆ ಯನ್ನು ಒಪ್ಪಿಕೊಳ್ಳುವುದು ‘ಕಹಿಸತ್ಯ’ವೆನಿಸಿದರೂ

“ಕೋಯಿ ಲೌಟಾದೆ ಮೆರೆ ಬೀತೆ ಹುವೆ ದಿನ್, ಬೀತೆ ಹುವೆ ದಿನ್ ವೊ ಮೇರೆ ಪ್ಯಾರೆ ಪಲಛಿನ್ (ಕಳೆದು ಹೋದ ನನ್ನ ಸುಂದರವಾದ ದಿನಗಳನ್ನು ಯಾರಾದರೂ ಹಿಂದಿರುಗಿಸುತ್ತೀರಾ?)”

ಎಂದು ಹಾಡಿಕೊಂಡು ಮನನೊಂದುಕೊಳ್ಳುವು ದರ ಬದಲು,ಈಬದಲಾವಣೆಗಳನ್ನು ಒಪ್ಪಿಕೊಳ್ಳು ವಂತಹ ಮನಸ್ಸಿನ ಪಕ್ವತೆಯನ್ನು ಪಡೆಯುವ ಪ್ರಯತ್ನ ನಮ್ಮದಾಗಬೇಕಲ್ಲವೇ?

ಸರಿತಾ ನವಲಿ,
ನ್ಯೂಜರ್ಸಿ,ಅಮೇರಿಕಾ