ಕವಿತೆ ಬರೆಯುತಿರುವೆ ಸ್ವಲ್ಪ  ಮಾತಿಗಾಗಿ ಕಾಯಬೇಕು/  ದುಃಖಿತರ ಕಣ್ಣೀರಾಗುತಿರುವೆ ನಗುವಿಗಾಗಿ ಕಾಯಬೇಕು//

ಜಗವೆಲ್ಲ ಪ್ರೇಮ ಕ್ಷಾಮದಿ ತತ್ತರಿಸಿ ರೋಧಿಸುತಿದೆ ಸಾಕಿ/ ಮುಗಿಲಿಗೆ ಮೋಡ ಬಿತ್ತಿರುವೆ ಮಳೆಗಾಗಿ ಕಾಯಬೇಕು//

ಮನುಷ್ಯ ಮುಖವಾಡಗಳ ಹಿಂದೆ ಅವಿತು ಕುಳಿತ ದಾನವರು/ ಕಗ್ಗಲಿಗೆ ಹಾಲು ಹನಿಸಿರುವೆ ದೇವರ ದಯೆಗಾಗಿ ಕಾಯಬೇಕು//

ನನ್ನ ಮಾತಿಗೆ ಯಾರೋ ನಕ್ಕು ಹೇಳಿದರು ಬರೀ ಸುಳ್ಳು / ಕತ್ತಲೆಗೆ ಕಳೆಯಲು ಕೇಳುತಿರುವೆ ಬೆಳಕಿಗಾಗಿ ಕಾಯಬೇಕು//

ಅವರೆಲ್ಲ ನನ್ನ  ನಿರ್ಗಮನಕ್ಕಾಗಿ ಕಾಯುತಿರಬಹುದು ಪೀರ್/ ಅವನ ಕೊನೆ ಕರೆಗೆ ಕಾಯುತಿರುವೆ ಖುಷಿಗಾಗಿ ಕಾಯಬೇಕು//

ಅಶ್ಫಾಕ್ ಪೀರಜಾದೆ.ಗೋಕಾಕ