ಮನೆಯ ಒಳಗಡೆ ಮಲಗಿದ್ದ ಮಗಳು ಒಮ್ಮೆಲೆ ಚೀರಿದಾಗ ದೌಡಾಯಿಸಿ ಒಳಗೊಡಿ ಅಪ್ಪಿಕೊಂ ಡು ಯಾಕೋ ಬಂಗಾರಾ ಏನಾತು? ಎಂದು ಕಣ್ಣೀರು ಒರೆಸುತ್ತ ಕೇಳಿದೆ. ಅಮ್ಮಾ ಎಂದು ಹೆದರುತ್ತ ಕೈಸನ್ನೆ ಮೇಲೆ ಹೋದಾಗ,ಹಾವೊಂದು ಮೇಲ್ಛಾವಣಿಯಲ್ಲಿ ಕಾಣಿಸಿದ್ದೆ ತಡ‌ ನನಗೂ ಭಯ ಮೂಡಿತು. ಆದರೂ ಧೈರ್ಯಗೆಡದೆ ಮಗಳನ್ನು ಹೊರಗೆ ಕರೆದು ತಂದೆ. ಅವಳ ಕಣ್ಣು ಗಳು ಮಾತ್ರ ಹಾವನ್ನು ಅರಸುತ್ತಿತ್ತು. ಮನೆಯ ವರೆಲ್ಲ ಆ ಹಾವನ್ನು ಹೊಡೆಯಲು, ಓಡಿಸಲು, ಕೋಲು, ಕೋಲಿಗೆ ಬಟ್ಟೆ ಕಟ್ಟಿ ಬೆಂಕಿ ಹಚ್ಚಿ ಅದನ್ನ ಹಾವಿನತ್ತ ನೂಕುತ್ತಿದ್ದರು. ಪಾಪ ಅದು ಕಪ್ಪೆಯ ನ್ನು ನುಂಗಿದ್ದರಿಂದ ಅದಕೆ ಚಲಿಸಲಾಗದೆ ಗೋಡೆಯ ನಡುವೆ ಬಚ್ಚಿಟ್ಟುಕೊಂಡು ನಿಧಾನ ವಾಗಿ ಪಲಾಯನ ಮಾಡಿತ್ತು.

ಹಾವು ತಪ್ಪಿಸಿಕೊಂಡಿತು ಜಸ್ಟ್ ಮಿಸ್ ಎನ್ನುವ ಪದ ಕೇಳಿ ಸಮಾಧಾನವಾಯಿತು. ಅನಾಯಾಸ ವಾಗಿ ಬಲಿಯಾಗುತ್ತಿತ್ತು. ಮಗಳು ಅಮ್ಮಾ.. ಹಾವು ಯಾಕೆ ನಮ್ಮ ಮನೆಗೆ ಬಂತು? ನನಗೆ ಕಚ್ಚಿದ್ದರೆ?ಅದರ ಕಣ್ಣು ನಾಲಿಗೆ ಮೈಬಣ್ಣ ನೋಡಿ ನನಗೆ ತುಂಬಾನೆ ಭಯವಾಯಿತು ಮತ್ತೆ ಬರು ತ್ತಾ? ಅದಕೆ ಮನೆಯಿಲ್ಲವಾ? ಆಯ್ತು ತಡಿಯೇ ಮುದ್ದು, ಹಾವು ನಿನಗೆ ಇಷ್ಟನಾ? ಅಯ್ಯೋ ಇಲ್ಲಮ್ಮಾ? ಅವಳ ಮುಗ್ಧ ಮುಖ. ನೋಡಿ ಸರಿ ಬಿಡು. ಅದರ ‌ ಗುಂಗಲಿ ಇರಬೇಡ. ಅತ್ತ ನನ್ನತ್ತೆ ಹಾವು ಮನಿಗೆ ಬಂದಾವು ಅಂದರ ಏನ ಏನ ಮುಡಚಟ್ಟು‌ ಆಗಿರಬೇಕು. ಇಲ್ಲಾ ಯಾವುದೋ‌ ಹರಕೆ ಬಾಕಿ ಇರಬೇಕು ಎಂದು ಅಡಕಿ ಮೆಲ್ಲುತ್ತ ನುಡಿದಾಗ ವಯಸ್ಸಾದವರು ಅನುಭವದಿಂದ ಹೇಳತಾರ ಅನ್ನೊ ನಂಬಿಕೆ. ಆದ್ರ ಅದು ಅವರ ನಂಬಿಕೆ ಅದರ ಹಿಂದಿನ ಸತ್ಯವನ್ನು ಮಗಳಿಗೆ ಮನನ ಮಾಡಿಕೊಡುವುದು ಅನಿವಾರ್ಯ ಅನ್ನಿಸಿತು.

ಕೇಳು ಮಗಾ ಹಾವೊಂದು ಉಭಯವಾಸಿ. ಅಥವಾ ಸರಿಸೃಪ,ನಿಶಾಚರಿ ಕೂಡ.ತೆವಳುವುದರ ಮೂಲಕ ಚಲಿಸುವ ಹಾವುಗಳಿಗೆ ಕಾಲುಗಳು, ಭುಜಗಳು, ಎದೆ, ಕಿವಿಯೋಲೆ, ದುಗ್ಧರಸ ಗ್ರಂಥಿ ಗಳಿರುವುದಿಲ್ಲ. ಹಾವಿನ ಕಣ್ಣು ರೆಪ್ಪೆಗಳು, ಕಣ್ಣು ಗಳನ್ನು ಕೊಳಕಿನಿಂದ ರಕ್ಷಿಸಲು ಯಾವಾಗಲೂ ಮುಚ್ಚಿದ ಪಾರದರ್ಶಕ ಮಾಪಕಗಳು. ಹಾವಿಗೂ ಉಳಿವಿನ ಹಕ್ಕಿದೆ. ಆಹಾರಸರಪಳಿಯಲ್ಲಿ ಯಾವುದಾದರೊಂದು ಕೊಂಡಿ ಕಳಚಿದರೂ ಅದರ ಪರಿಣಾಮ ಪರಿಸರದ ಮೇಲಾಗುತ್ತದೆ. ಇಂದು ಹಾಳಾದ ಕೊಂಡಿಯ ಪರಿಣಾಮವನ್ನು ಮುಂದಿ ನ ಪೀಳಿಗೆ ಅನುಭವಿಸಬೇಕಾಗುತ್ತದೆ.. ಹಾಗೆಂದ ರೆ ಏನಮ್ಮಾ…ಅಯ್ಯೋ ಸಾಕುಬಿಡು ಮತ್ತೊಮ್ಮೆ ಹೇಳುವೆ ಎಂದು ಹೊರಟವಳ ಕೈ ಹಿಡಿದು ಅಮ್ಮಾ ಹೇಳಮ್ಮಾ ನಾನು ತಿಳಕೊಳ್ಳ ಬೇಕು. ನನ್ನ ಗೆಳತಿರಿಗೂ ಹೇಳಬೇಕು. ನಾಗರ ಪಂಚಮಿ ಹಬ್ಬದಲ್ಲಿ ನಾಗಪ್ಪಗೆ ಹಾಲು ಎರೆದಿ ದ್ದೀವಿ ಆದರೂ ನಮ್ಮ ಮನಿಗೆ ಮತ್ತ ಹಾಲು ಕುಡಿಯಾಕ ಬಂತಾ? ಪರಿಸರ ಸಮತೋಲನ ಹಾವು ಕಾಯತ್ತಾ? ಪ್ರಶ್ನೆಗೆ ನನಗೂ‌ ಖುಷಿಯೆ ನಿಸಿತು.

ನಿಜ.. ಪರಿಸರದಲ್ಲಿ ಸಮತೋಲನ ಕಾಯ್ದುಕೊ ಳ್ಳುವ ಪ್ರಕ್ರಿಯೆಯಲ್ಲಿ ಹಾವುಗಳು ಮಹತ್ವದ ಪಾತ್ರವಿದೆ. ಹಾವುಗಳಿಗೆ ಇಲಿ, ಹೆಗ್ಗಣ, ಕಪ್ಪೆಗಳೇ ಆಹಾರ. ಬೆಕ್ಕು, ನಾಯಿ, ಗೂಬೆ ಹಾಗೂ ಹದ್ದುಗ ಳು ಇಲಿಗಳು ಬಿಲದಿಂದ ಹೊರಗಡೆ ಬಂದಾಗ ಅವುಗಳನ್ನು ಹಿಡಿದು ಕೊಲ್ಲುತ್ತವೆ. ಆದರೆ ಹಾವು ಗಳು ಇಲಿಗಳ ಬಿಲಕ್ಕೇ ನುಗ್ಗಿ ಬೇಟೆಯಾಡುತ್ತದೆ. ಬಿಲದಲ್ಲಿರುವ ಮರಿಗಳನ್ನೂ ಸದ್ದಿಲ್ಲದಂತೆ ತಿಂದು ಮುಗಿಸುತ್ತವೆ. ಅಬ್ಬಾ..! ಹಾವುಗಳ ಧೈರ್ಯ ಮೆಚ್ಚಲೇ ಬೇಕು. ದೊಡ್ಡ ಹಾವುಗಳು ಹಾವಿನ ಮರಿಗಳು, ಚಿಕ್ಕ ಗಾತ್ರದ ಹಾವುಗಳನ್ನು ತಿನ್ನುವ ಮೂಲಕ ಹಾವಿನ ಸಂಖ್ಯೆ ಹೆಚ್ಚಾಗದಂತೆ ನಿಯಂ ತ್ರಿಸುತ್ತವೆ. ಯಾವ ಪ್ರದೇಶದಲ್ಲಿ ಹಾವುಗಳು ಇರುವುದಿಲ್ಲವೋ ಅಲ್ಲಿ ಇಲಿ ಹಾಗೂ  ಹೆಗ್ಗಣಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಅಂತಹ ಪ್ರದೇಶಗಳಲ್ಲಿ ಸಾಮಾನ್ಯವಾಗಿಯೇ ಇಲಿ ಹಾಗೂ ಹೆಗ್ಗಣಗಳಿಂದ ಬರುವ ರೋಗಗಳು ಹೆಚ್ಚಾಗುತ್ತದೆ. ಇದರ ಪರಿ ಣಾಮ ಅನುಭವಿಸುವುದು ನಾವಲ್ಲವಾ?

ಹೌದಮ್ಮಾ..ನಮ್ಮ ಮನೆಯಾಗ ಇಲಿಗಳು ಹೆಚ್ಚಾ ಗಿದ್ದವು, ಅದಕ ಹಾವು ಬಂತಲ್ವಾ, ಬಂದದ್ದು ಒಳ್ಳೆದಾತು. ನಮ್ಮ ಮನಿಯಾಗಿನ ಇಲಿ ಕಡಮಿ ಯಾಗತದ ಅಲ್ವಾ ಅಮ್ಮಾ? ಹು ಮತ್ತ.. ಅದಕ ನಮ್ಮ ಭಾರತೀಯ ಪರಂಪರೆ ಇದೇ ಕಾರಣಕ್ಕೆ ಹಾವುಗಳಿಗೆ ಧಾರ್ಮಿಕ ಮಹತ್ವ ನೀಡಿತ್ತು. ಹಾವು ಗಳ ರಕ್ಷಣೆ ಪುಣ್ಯದ ಕೆಲಸ ಎಂಬ ನಂಬಿಕೆ ಬಿತ್ತಿತ್ತು.ಆದರೆ ಇಂದು ಪರಿಸ್ಥಿತಿ ವ್ಯತಿರಿಕ್ತವಾಗಿದೆ. ಕಲ್ಲ ನಾಗರ ಕಂಡರೆ ಹಾಲನೆರೆಯುವರು–ದಿಟದ ನಾಗರ ಕಂಡರೆ ಕೊಲ್ಲೆಂಬರು’ ಎಂಬ ಬಸವಣ್ಣನ ವರ ಮಾತು ಇಂದಿಗೂ ನಿಜ. ಹಾವು ಕೊಂದವರು ಶಾಂತಿ ಮಾಡಿಸಿ, ಪಾಪಪ್ರಜ್ಞೆಯನ್ನು ಕಳೆದುಕೊ ಳ್ಳುತ್ತಾರೆಯೇ ವಿನಃ ಅವುಗಳಿಗೂ ನಮ್ಮಂತೆಯೇ ಜೀವಿಸುವ ಹಕ್ಕಿದೆ ಎಂದು ಯೋಚಿಸುವುದಿಲ್ಲ.

ನಾವಾಗಿಯೇ ಅವುಗಳಿಗೆ ತೊಂದರೆ ಕೊಡದಿದ್ದರೆ ಅವು ಅವುಗಳ ಪಾಡಿಗೆ ನೆಮ್ಮದಿಯಿಂದ ಇರಲು ಬಿಟ್ಟರೆ ಯಾವ ಹಾನಿಯು ಇಲ್ಲ. ನಾವು ನಮ್ಮ ಪ್ರಾಣ ರಕ್ಷಣೆಗೆ ಅವುಗಳ ಪ್ರಾಣ ತೆಗೆದರೆ ಯಾವ ನ್ಯಾಯ.? ಅವುಗಳಿಂದ ದೂರವಿದ್ದು ಅವುಗಳಿಗೆ ಹಾನಿಯುಂಟಾಗದಂತೆ ನಿಗಾವಹಿಸಿದರೆ ಒಳ್ಳೆಯ ದು.ಆಹಾರ ಸರಪಳಿಯು ನಮ್ಮನ್ನು ಸಮತೋಲ ನದಲ್ಲಿಟ್ಟಿರುವ ಪ್ರಕೃತಿಗೆ ನಾವು ಕೃತಜ್ಞತಾ ಭಾವ ದಿಂದ ಇರುವುದನ್ನು ಕಲಿಯಬೇಕು ತಿಳಿತಾ ಮಗಾ? ಥ್ಯಾಂಕ್ಯೂ.. ಅಮ್ಮಾ ಹಾವು ಕಂಡು ಹೆದರಿದ್ದು ಒಳ್ಳೆಯದಾಯಿತು ನಿನ್ನಿಂದ ಹಾವಿನ ಮಹತ್ವ ತಿಳಿದಂಗಾತು.. ನೋಡು ಮಗಾ ವಿಷ ಜಂತುಗಳು ತಾವಾಗಿಯೇ ವಿಷಕಾರುವುದಿಲ್ಲ. ಹೀಗಾಗಿ ನಾವು ನಮ್ಮ ಕರ್ತವ್ಯವನ್ನು ಮರೆಯ ಬಾರದು.

 ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ