ಲಾಲಿ ಹಾಡು ಕೇಳಿ ನಿದ್ರಿಸದ ಕಂದನಿಲ್ಲ, ಹಾಡಿ ಮಲಗಿಸದ ಅಮ್ಮನಿಲ್ಲ. ಅಮ್ಮ ಮತ್ತು ಮಗು ವಿನ ಕರುಳ ಬಂಧದೊಡನೆ ಭಾವದ ಬೆಸುಗೆ ಜೋಗುಳ. ಅಮ್ಮನ ಲಾಲಿ ಹಾಡು ಕೇಳುತ್ತಾ ಇದ್ದರೆ ಮಗುವಿಗೊಂದು ಸುರಕ್ಷತಾಭಾವ ಹಾಗೂ ಆ ಬೆಚ್ಚಗಿನ ಭಾವನೆಯೊಂದಿಗೆ ಅದು ನಿದ್ರೆಗೆ ಜಾರುತ್ತದೆ. ಇನ್ನು ಹೆಣ್ಣು ಮಕ್ಕಳಂತೂ ಕೈಯ ಲ್ಲೊಂದು ಪುಟ್ಟ ಗೊಂಬೆ ಹಿಡಿದು ಅದಕ್ಕೆ ಲಾಲಿ ಹಾಡುತ್ತಾ ಮಲಗಿಸುತ್ತಾ ಇರುವ ಆಟಆಡುತ್ತಾರೆ ಮುಂದಿನ ಜೀವನ ನಾಟಕಕ್ಕೆ ನಡೆಯುವ ತಾಲೀಮಿನಂತೆ.ಸರಳ ಸುಂದರ ನುಡಿಗಳು ಮೆಲು ದನಿಯ ರಾಗ ಎಲ್ಲಕ್ಕಿಂತ ಹೆಚ್ಚು ಗರ್ಭದಲ್ಲಿದ್ದಾಗಿ ನಿಂದ ಪರಿಚಿತವಾದ ಅಮ್ಮನ ಕಂಠ ಇನ್ನೇನು ಬೇಕು?ಜೋಗುಳದ ಅಪ್ಯಾಯತೆಯನ್ನು ಹೆಚ್ಚಿಸು ವುದಕ್ಕೆ.

ಇನ್ನು ನನ್ನ ಹಾಗೂ ಲಾಲಿ ಹಾಡುಗಳ ನಂಟು. ನನಗಿಂತ ನಾಲ್ಕುವರ್ಷ,ಏಳುವರ್ಷ ಕಿರಿಯರಾದ ನನ್ನ ತಂಗಿಯರನ್ನು ಮಲಗಿಸುವಾಗ ತೊಟ್ಟಿಲು ತೂಗುವ ಕೆಲಸವನ್ನು ಅಮ್ಮ ನನಗೆ ವಹಿಸಿದ್ರಂತೆ. ಮೊದಲ ತಂಗಿಯ ವಿಷಯ ಅಷ್ಟು ನೆನಪಿಲ್ಲ. ಆದರೆ ಅಮ್ಮ ಹೇಳುವಂತೆ ಬರುವ ಹಾಡುಗಳನ್ನೆ ಲ್ಲ ಸಾಲಾಗಿ ಹೇಳುತ್ತಿದ್ದೆನಂತೆ. ಕೆಲವೊಮ್ಮೆಮಗು ನಿದ್ರಿಸಿದ್ದರೂ ನನ್ನ ತೂಗಾಟ ಹಾಡಾಟ ನಿಂತಿರು ತ್ತಿರಲಿಲ್ಲವಂತೆ. ನಮ್ಮ ಸೋದರಮಾವ ಮೈಸೂರ ಲ್ಲೇ ಇದ್ದುದರಿಂದ ಅವರ ಮಕ್ಕಳಿಗೂ ನನ್ನ ಈ ತೊಟ್ಟಿಲು ತೂಗುವ ಜೋಗುಳ ಹಾಡುವ ಸೇವೆ ಸಂದಿತ್ತು.  ಕೆಲವೊಮ್ಮೆ ತಂಗಿಯರನ್ನು ಸೇರಿಸಿ ಕೊಂಡು ಜುಗಲ್ ಬಂದಿ. ಪಾಪ! ಅವರ ಕರ್ಣ ಗಳಿಗೆ ಅದೆಷ್ಟು ಕಠೋರ ಶಿಕ್ಷೆ ಕೊಟ್ಟಿರಬಹುದು. ಇನ್ನು ಈಗಲೂ ಕೆಲವೊಮ್ಮೆ ಸಂಬಂಧಿಕರ ಮಕ್ಕಳನ್ನು ಮಲಗಿಸುವುದುಂಟು. ಮಕ್ಕಳು ನನ್ನ ಬಳಿ ಬೇಗ ಮಲಗುತ್ತವೆ. ಆದರೆ ಅದಕ್ಕೆ ನನ್ನವರ Expert comment ಏನು ಗೊತ್ತಾ? ನನ್ನ ಹಾಡು ಕೇಳುವುದಕ್ಕಿಂತ ಮಲಗುವುದು ಲೇಸು ಎಂದು ಬೇಗ ಮಲಗಿಬಿಡುತ್ತವಂತೆ. ನಾನು ಈ ಮಾತು ಒಪ್ಪುವುದಿಲ್ಲ,ಅದು ಬೇರೆವಿಷಯ ಬಿಡಿ. 😁😁😁😁

ಕನ್ನಡದ ಲಾಲಿ ಹಾಡುಗಳ ವಿಷಯಕ್ಕೆ ಬಂದರೆ ಜಾನಪದ, ದಾಸರಪದಗಳು, ಭಾವಗೀತೆಗಳು ಮತ್ತು ಸಿನಿಮಾ ಹಾಡುಗಳು ಎಂಬ 04 ರೀತಿಯ ವಿಂಗಡಣೆಯನ್ನು ಮಾಡಬಹುದು. ಜನಪದದಲ್ಲಿ ಲಾಲಿಹಾಡುಗಳ ವೈವಿಧ್ಯತೆಯನ್ನೇ ಕಾಣಬಹು ದಾಗಿದೆ. ಹೆಚ್ಚಾಗಿ ತ್ರಿಪದಿ ಶೈಲಿಯಲ್ಲಿರುವ ಈ ಪದಗಳಲ್ಲಿ ಮೂರನೆಯ ಸಾಲಿನಲ್ಲಿ ಎರಡನೆಯ ಸಾಲಿನ ಕಡೆಯ ಪದದ ದ್ವಿರುಕ್ತಿಯಾಗುತ್ತದೆ. ಉದಾಹರಣೆಗೆ:

ಏಕಳುವೆ ಎಲೆ ರಂಗ ಬೇಕಾದ್ದು ನಿನಗೀವೆ
ನಾಕೆಮ್ಮೆ ಕರೆದ ನೊರೆಹಾಲು
ನಾಕೆಮ್ಮೆ ಕರೆದ ನೊರೆ ಹಾಲು ಸಕ್ಕರೆ
ನೀ ಕೇಳಿದಾಗ ಕೊಡುವೇನು 

ಅಳ್ಳೊಳ್ಳಾಯೀ ಎಂದು ಶುರು ಮಾಡಿ ಮುಂದೆ ಸಾಗುವ ಈ ತ್ರಿಪದಿಗಳ ಅದೆಷ್ಟೋ ಪದಗಳ ಭಂಡಾರವಿದ್ದು ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಸಂಸ್ಕೃತಿಯ ಸಂಪತ್ತು ಇದು. ಅತ್ತರೆ ಅಳಲವ್ವಾ ಈ ಕೂಸು ನಮಗಿರಲಿ, ಕತ್ತೆಯ ಮರಿ ಚೆಂದ, ಕೂಸಿದ್ದ ಮನೆಗೆ ಬೀಸಣಿಗೆ ಯಾಕ, ತಾಯಿದ್ರೆ ತವರು ಹೆಚ್ಚು, ಕಂದನ ತುಟಿಯ ಹವಳಾದ ಕುಡಿ ಹಂಗ ಮುಂತಾದವು ಜನಪ್ರಿಯ ಜೋಗುಳ ಪದಗಳು. ಇತ್ತೀಚೆಗೆ ಕೇಳುವವರಿಲ್ಲದೆ ಬಳಕೆಯಲ್ಲಿಲ್ಲದೆ ಈ ಪದಕಣಜ ಸೊರಗುತ್ತಿದೆ, ನಶಿಸುವ ಹಾದಿಯಲ್ಲಿ ದೆ. ಉಳಿಸಿಕೊಳ್ಳಲು ಸೂಕ್ತ ಪ್ರಯತ್ನ ಬೇಕಾಗಿದೆ.

ಇನ್ನು ದಾಸರ ಪದಗಳು. ನಮ್ಮ ದಾಸವರೇಣ್ಯರಿ ಗಂತೂ ಎಷ್ಟು ವಿಧದಲ್ಲಿ ಹಾಡಿ ಹರಿಯನ್ನು ಮಲ ಗಿಸಿದರೂ ತೃಪ್ತಿಇಲ್ಲ.ಬಹುಶಃ ಬೇರೆಲ್ಲಾ ಅವತಾರ ಗಳಿಗಿಂತ ಶ್ರೀಕೃಷ್ಣಾವತಾರದಲ್ಲಿ ಭಗವಂತನಿಗೆ ಹೆಚ್ಚು ಲಾಲಿ ಕೇಳಿದ ಭಾಗ್ಯ. ಜೋಜೋ ಶ್ರೀಕೃಷ್ಣ ಪರಮಾನಂದ ಕೇಳಿ ಮಲಗದ ಕನ್ನಡದ ಕಂದ ಇರಲಿಕ್ಕೇ ಇಲ್ಲ. ನಮ್ಮ ದಾಸ ಸಾಹಿತ್ಯದಲ್ಲೂ ಕೃಷ್ಣನ ಲಾಲಿ ಹಾಡುಗಳ ಸಂಖ್ಯೆ ವಿಫುಲ. ಕೆಲವನ್ನು ಹೆಸರಿಸಿದ್ದೇನೆ ಅಷ್ಟೇ.ತೂಗುವೆರಂಗನ, ಜೋಜೋ ರಂಗಧಾಮ, ಪವಡಿಸು ಪರಮಾತ್ಮನೆ ಸ್ವಾಮಿ, ಲಾಲಿ ಪಾವನ ಚರಣ, ಜೋ ಜೋ ಕಂದರ್ಪ ಕೋಟಿ ಲಾವಣ್ಯ, ಲಾಲಿ ಗೋವಿಂದ ಲಾಲಿ.ಒಂದು ಡಾಕ್ಟರೇಟ್ ಪ್ರಬಂಧವನ್ನೇಬರೆಯ ಬಹುದಾದಷ್ಟು ಸಮಗ್ರ ಈ ವಿಷಯ.

ಲಾಲಿ ಹಾಡುವುದರಲ್ಲಿ ನಮ್ಮ ಕನ್ನಡ ಕವಿಗಳೇ ನೂ ಹಿಂದುಳಿದಿಲ್ಲ. ಭಾವಗೀತೆಗಳಲ್ಲಿ ಜೋಗುಳ ದ ಲಾಲಿ ಹಾಡುಗಳ ಅಪಾರ ಸಂಖ್ಯೆ ಕಾಣಬಹು ದು.ಕನ್ನಡಕ್ಕೇ ವಿಶಿಷ್ಟವಾದ ಭಾವಗೀತೆಯಪ್ರಕಾರ ಲಾಲಿ ಹಾಡುಗಳನ್ನು ಕೊಡುವುದರಲ್ಲಿ ಹಿಂದೆ ಬಿದ್ದಿಲ್ಲ. ನನ್ನ ಸೀಮಿತ ಜ್ಞಾನಕ್ಕೆ ಅಲ್ಪಕಾಲದಲ್ಲಿ ಹೊಳೆದ ಕೆಲವು ಗೀತೆಗಳ ಪಟ್ಟಿ ಮಾಡಿದ್ದೇನೆ ಅಷ್ಟೇ. ಆದರೆ ಸಂಖ್ಯೆ ಮಾತ್ರ ಅನಂತ ಹಾಗೂ ಇನ್ನೂ ಅವಿರತ. ಅತ್ತಿತ್ತ ನೋಡದಿರು ಅತ್ತು ಹೊರಳಾಡಿದರು, ಮಲಗು ಮಲಗೆನ್ನ ಮರಿಯೇ, ನಿದ್ದೆ ಬರುತ್ತಿದೆ ಕಣ್ಣಿನಲ್ಲಿ,ನಿದಿರೆ ನಗರಕ್ಕೆ ಬಾರೆನ್ನ ದೊರೆಯೇ,ಹೂಬಳ್ಳಿಯ ಹಿಗ್ಗೆ ಆನಂದದ ಮೊಗ್ಗೆ, ತಿಳಿ ಮುಗಿಲು ತೊಟ್ಟಿಲಲ್ಲಿ ಮಲಗಿದ್ದ ಚಂದಿರನ ಇತ್ಯಾದಿ ಇತ್ಯಾದಿ.

ಕನ್ನಡ ಚಿತ್ರರಂಗದಲ್ಲಂತೂ ಜೋಗುಳದ ಹಾಡು ಗಳ ಸುರಿಮಳೆಯೇ ಆಗಿಹೋಗಿದೆ. ಪರಮಾತ್ಮನ ನ್ನು ಮಲಗಿಸುವ ದಾಸರ ಪದಗಳ ಅಳವಡಿಕೆ ಮತ್ತು ಎಸ್ಪಿಬಿಯವರ ಶ್ರೀನಿವಾಸ ಕಲ್ಯಾಣ ಚಿತ್ರ ದ “ಪವಡಿಸು ಪರಮಾತ್ಮ ಶ್ರೀ ವೆಂಕಟೇಶ” ಹಾಡನ್ನು ಸ್ಮರಿಸದಿದ್ದರೆ ಆದೀತೆ? ಕಂದನಿಗೆ ಹಾಡುವ ಲಾಲಿಗಳಲ್ಲಿ ಮುಖ್ಯವಾಗಿ ಜೋಜೋ ಲಾಲಿ ನಾ ಹಾಡುವೆ (ಚಿನ್ನಾ ನಿನ್ನ ಮುದ್ದಾಡುವೆ) ನಿನ್ನ ಮುಖ ಅರವಿಂದ ನಿನ್ನ ನಗು ಶ್ರೀಗಂಧ ಮುದ್ದು ಕಂದ (ಕಲ್ಯಾಣಿ), ಲಾಲಿ ಲಾಲಿ ಲಾಲಿ (ಸರ್ವಮಂಗಳ) ಬಾರ ಒಲಿದು ಬಾರ (ಹಣ್ಣೆಲೆ ಚಿಗುರಿದಾಗ) ಲಾಲಿ ಲಾಲಿ ಸುಕುಮಾರ (ಭಕ್ತ ಪ್ರಹ್ಲಾದ) ರಾಜೀವ ನೇತ್ರನಿಗೆ (ಸ್ವಾತಿ ಮುತ್ತು) ಹಾಡೊಂದ ಹಾಡುವೆ ನೀ ಕೇಳು ಮಗುವೆ (ನಾಂದಿ) ನನ್ನ ಮುದ್ದು ತಾರೆ (ಮಂಕುತಿಮ್ಮ) ಇಲ್ಲಿಗೇ ಮುಗಿಯಲಿಲ್ಲ. ಪ್ರಿಯತಮೆಗೆ ಹಾಡುವ ಲಾಲಿ ಹಾಡುಗಳಲ್ಲಿ ಲಾಲೀ ಸುವ್ವಾಲಿ ಹಾಡೆಲ್ಲ ಲಾಲಿ (ಜೋಡಿ ಹಕ್ಕಿ) ಪ್ರಮುಖವಾದುದು. ಪವಡಿಸು ಪಾಲಾಕ್ಷ ಶ್ರೀ ವಿರೂಪಾಕ್ಷ ಹಾಡನ್ನು ಈ ಪಟ್ಟಿಗೆ ಸೇರಿಸಬಹುದು. ತಾಯಿಗೆ ಲಾಲಿ ಹಾಡುವ ತುಸು ಮೆಲ್ಲ ಬೀಸು ಗಾಳಿಯೇ ತುತ್ತಮುತ್ತ ಚಿತ್ರದ ಹಾಡು ಗಮನಾರ್ಹ. ಹೂವು ಹಣ್ಣು ಚಿತ್ರದ “ಲಾಲಿ ಹಾಡು ಭೂಮಿ ತಾಯಿಗೆ ಲಾಲಿ ಹಾಡು ಹೆತ್ತ ತಾಯಿಗೆ” ಸಹವಿಶಿಷ್ಟವಾಗಿದೆ.

ಯಾವುದಾದರೂ ಒಂದು ಲಾಲಿ ಹಾಡಿನ ಬಗ್ಗೆ ಬರೆಯೋಣ ಎಂದು ಬರೆಯಲು ಕೂತಾಗ ಎಲ್ಲಾ ಲಾಲಿ ಹಾಡುಗಳು ನಾಮುಂದು ತಾಮುಂದು ಎಂದು ಬರತೊಡಗಿದವು. ಒಂದನ್ನು ಬರೆದರೆ ಇನ್ನೊಂದಕ್ಕೆ ಅನ್ಯಾಯವಾದಂತೆ ಎಂದೆಣಿಸಿದ ಪರಿಣಾಮ ಈ ಸುದೀರ್ಘ ಬರಹ. ಬೇಸರಿಸದೆ ಓದಿ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವಿರಿ ಎಂದು ನನ್ನ ನಂಬಿಕೆ.

ಸುಜಾತಾ ರವೀಶ್,ಮೈಸೂರ