ಜಿಕಾ ಜಿಕಾ ಜಿರುಂಡಿ ಜೋಕಾಲಿ ಹಬ್ಬ
ನಾಗಪ್ಪನ ಹುತ್ತಕೆ ಮಜ್ಜನ ಹಬ್ಬ
ಕೊಬ್ರಿ ಬಟ್ಲು ಹಾಲಿನಲಿ ಹೊಯ್ಯುವ ಹಬ್ಬ
ಗಿರ್ ಗಿಟ್ಲಿ ಗಿರ ಗಿರ ತಿರುಗಿಸೋ ಹಬ್ಬ
ನಾಗ ಸಂಭ್ರಮ ಇದು ನಾಗ ಸಂಭ್ರಮ
ಪಿಂ ಪಿಂ ಪಿಂ ಪಿಂ…..ಪಿಂ ಪಿಂ ಪಿಂ ಪಿಂ

ಹುತ್ತಬಿಟ್ಟ ಹಾವುಗಳು ಹೊರಬಂದವೋ ಸಂಭ್ರಮದ ಓಲಗಕೆ ಊರಹೊಕ್ಕವೋ
ಮನೆಮಂದಿ ನಿದ್ದೆಗೆಡಿಸಿ ದಾಳಿಯಿಟ್ಟವೋ
ತಮ್ಮ ಪೂಜೆ ನೋಡಲೆಂದು ಒಳಹೊಕ್ಕವೋ
ಹಾಡಿ ಹೊಗಳುವ ಪರಿಗೆ ದಂಗಾದವೋ
ಪಿಂ ಪಿಂ ಪಿಂ ಪಿಂ…..ಪಿಂ ಪಿಂ ಪಿಂ ಪಿಂ

ಬುಸ್ಸೆಂಬ ನಾದಸ್ವರಕೆ ಬೆಚ್ಚಿಬಿದ್ದ ಹೆಂಗಸರು
ಚಟಾರ್ ಚಟಾರ್ ಚೀರಾಡಿ ಓಡಲೆದ್ದರೋ
ಹೂ ಹಣ್ಣು ಕಾಯಿ ಕಡಬು ಉಂಡಿ ಗಿಂಡಿ ಜಿಗಿದಾಡಿ
ಭಂಡಾರ ಗಿಂಡಾರ ಕಾಲಲ್ಲಿ ತೂರಾಡಿ
ಬಡಿಗೆ ಪೂಜೆಗಾಗಿ ಓಡಾಡಿ ತಡಕಾಡಿ
ಸಂಭ್ರಮದ ಹೋಮಕುಂಡ ತುಪ್ಪಾದವೋ ಧಗಧಗನೆ ಊರಿಯುವ ಕೆಂಡಾದವೋ
ಪಿಂ ಪಿಂ ಪಿಂ ಪಿಂ…..ಪಿಂ ಪಿಂ ಪಿಂ ಪಿಂ

ಕಲ್ಲು ನಾಗರಕೆ ಪೂಜೆ ನಡೆವ ಸಮಯವೋ
ದಿಟ ನಾಗರ ಬಂದೊಡೆ ಬಲಿಯ ಪೂಜೆಯೋ
ವಿಷಸರ್ಪದ ಕಳ್ಳಬಳ್ಳಿ ಧರಿಸಿ ಮೆರೆದರೋ
ಕರುಳ ಸೀಳಿ ಮಾಲೆ ಮಾಡಿ ಸುಟ್ಟಾಕಿದರೋ
ಮೂಗ ನಾಗನ ಮೇಲೆ ಮೌಢ್ಯ ಮೆರೆದರೋ
ಮನುಜ ನಿನ್ನ ನಿಜ ಬಣ್ಣ ಬಯಲಾಯಿತೋ
ನಾಗ ಡಿಂಡಿಮ ಇದು ನಾಗ ಡಿಂಡಿಮ
ಪಿಂ ಪಿಂ ಪಿಂ ಪಿಂ……ಪಿಂ ಪಿಂ ಪಿಂ ಪಿಂ.

  ಶ್ರೀಧರ ಗಸ್ತಿ
ಶಿಕ್ಷಕರು, ಧಾರವಾಡ