ನನಗೂ ಆಶ್ಚರ್ಯ ಕಲಿಕೆಯೆನ್ನುವಂತಹುದು ಸ್ವತಃ ಕಲಿವವನು ಅನ್ವಯ ಮಾಡಿಕೊಳ್ಳದಿದ್ದರೆ,ಅದು ಕೇವಲ ಅಂಕಗಳಿಗೆ ಸೀಮಿತ ವಾಗುತ್ತದೆ.ರಸ್ತೆಯಲ್ಲಿ ಅಥವಾ ರಸ್ತೆಯ ಪಕ್ಕದಲ್ಲಿ,ಹಾದಿಗುಂಟ ಬಿದ್ದಿರುವ ಬೇಜಾನ್ ಕಸಗಳು ಸ್ವಚ್ಚತೆಯ ಅಣಕಿಸಿದಾಗ ರೋಗ ಬರದೇ ಇನ್ನೇನು? ಎಂದು ಚಿಂತಿಸಿ ಸ್ವಚ್ಛಮಾಡಲು ಮುಂದಾದೆ. ಕೆಲವರು ನಕ್ಕರು,ಇನ್ನುಕೆಲವರು ತಮಾಷೆ ಮಾಡಿದರು, ಇನ್ನು ಕೆಲವರು ಇನ್ನೇನನ್ನೋ ಮಾತಾಡಿದರೇ ಹೊರತು ಕೈ ಜೋಡಿಸಲಿಲ್ಲ. ಹಾಗಂತ ಅವರೆಂದ ಮಾತ್ರಕ್ಕೆ ನನ್ನ ಉತ್ಸಾಹ ಕುಗ್ಗಲಿಲ್ಲ. ಕೈಲಾದಷ್ಟು ಮಾಡುವ ಧಾವಂತ.

5ತರಗತಿಯಲ್ಲಿ ಬೋಧಿಸುವಾಗ ಮಗು ಎದ್ದು ನಿಂತು ಅಕ್ಕೋರೆ, ತಾವು ರಸ್ತೆಯಂಚಲಿ ಬಿದ್ದ ಪ್ಲಾಸ್ಟಿಕ್ ಬಾಟಲ್ ಗಳನ್ನು,ಗುಟುಕಾ ಚೀಟಿಗಳನ್ನು, ಆಯ್ದಕೊಂಡು ಒಂದೆಡೆ ಹಾಕುದನ್ನು ನೋಡಿದೆ. ಯಾಕಂತ ಗೊತ್ತಾಗಲಿಲ್ಲ. ಬೇರೆಯವರು ಮಾಡುವ ಕೆಲಸ ನೀವು ಮಾಡಿದ್ದು ಯಾಕೆ? ಎಂದು ಮಹತ್ವದ, ಗಂಭೀರ ಪ್ರಶ್ನೆಯನ್ನು ಕೇಳಿದ ಮಗುವನ್ನು ಖುಷಿಯಿಂದ ಹಾಗೂ ಆಶ್ಚರ್ಯದಿಂದ ಒಮ್ಮೆ ನೋಡಿದೆ.ಬಾಲಕ ಚಿಕ್ಕವನಾದರೂ ಅವನ ಪ್ರಶ್ನೆ ಅಷ್ಟೇ ಸವಾಲ್ ಜವಾಬ್ಗೆ ತೆರೆದುಕೊಂಡಿದ್ದು ಮಕ್ಕಳ ಮನಸ್ಸು ಏನೆಲ್ಲಾ ಗ್ರಹಿಸುತ್ತದೆ ಎಂಬುದನ್ನು ಅರ್ಥೈಸಲು. ಉದಾ: ಪ್ಲಾಸ್ಟಿಕ್‌ನಿಂದ ವಾರ್ಷಿಕ ಸರಾಸರಿ 10 ಲಕ್ಷ ಸಮುದ್ರ ಪಕ್ಷಿ ಗಳು, ಲಕ್ಷಕ್ಕೂ ಮೀರಿ ಸಸ್ತನಿಗಳು ಜೀವ ಬಿಡುತ್ತಿವೆ. ಇದೊಂದು ವಿಷ ವರ್ತುಲ ಮನುಷ್ಯನೂ ಸಾವಿನ ಕಡೆ ನಿಧಾನಕ್ಕೆ ಸಾಗುವ ಸವಾರಿ. ಜಗದಲ್ಲಿ ಸೂರ್ಯ ಮುಳುಗದ ಸಾಮ್ರಾಜ್ಯದೊಡೆಯರು ಥೇಮ್ಸ್ ನದಿಯನ್ನು ಕುಡಿಯಲಾರದ ಕಲ್ಮಶ ಮಾಡಿಕೊಂಡಿದ್ದರು.

ನಿಸರ್ಗ ಕೊಡುಗೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಪ್ರಥಮ ಕರ್ತವ್ಯ. ‘ಟನ್‌ಗಟ್ಟಳೆ ಬೋಧನೆಗಿಂತ ಔನ್ಸ್ ಆಚರಣೆಯೇ ಅಮೂಲ್ಯ’ ಎಂಬುದು ಗಾಂಧೀಜಿ ಹೇಳಿಕೊಟ್ಟ ಪಾಠ. ಮೊನ್ನೆ ಪತ್ರಿಕೆ ಯೊಂದರಲ್ಲಿ ಬೆಂಗಳೂರಿನ ಎಚ್.ಎಸ್.ಆರ್. ಬಡಾವಣೆ ಯ ನಾಗರಿಕರ ಸಂಘವೊಂದು ಪ್ಲಾಸ್ಟಿಕ್‌ ಮುಕ್ತ ಲೇಔಟ್ ಮಾಡಿಕೊಳ್ಳಲು ಪಣತೊಟ್ಟ ಸುದ್ದಿಯಿತ್ತು. ಜನರು ಬೋಧನೆ ಬಿಟ್ಟು ಹೀಗೆ ಆಚರಣೆ ಪ್ರಾರಂಭಿಸಿರಬೇಕು. ನಮ್ಮ ಅಜ್ಜ–ಅಮ್ಮದಿರು ಸಂತೆಯನ್ನು ಕುಕ್ಕೆವೊಳಗೆ ಅರಿಬೆ ಗಂಟೂಡಿ ಸಂತೆ ಸಾಮಾನು ತರುತ್ತಿದ್ದರು. ಕಣಿಕಣಿ ಎನ್ನುವ ಸೀಸೆಗಳಲ್ಲಿ ಸೀಮೆ ಎಣ್ಣೆ, ಒಳ್ಳೆಣ್ಣೆ, ಹರಣೆಳ್ಳೆ, ಸಾಸಿವೆ ಎಣ್ಣೆ ಇರುತ್ತಿದ್ದವು. ಈಗ ನೋಡಿದರೆ ಕುಡಿಯುವ ನೀರಿನಿಂದ ಹಿಡಿದು ಉಗಿಯುವ ಬಟ್ಟಲವರೆಗೂ ಪ್ಲಾಸ್ಟಿಕ್.

ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದರೂ, ಅಂಗಡಿ ಮುಂಗಟ್ಟುಗಳಲ್ಲಿ ಮಾರುವುದನ್ನು ತಡೆಗಟ್ಟಿ, ಕಾಗದ ಅಥವಾ ಕೈಚೀಲಗಳನ್ನು ಬಳಸಲು ಸೂಚಿಸಿರುವುದು ಎಲ್ಲರಿಗೂ ಗೊತ್ತು. ಮನೆಯಿಂದ ಸ್ವಯಂ ಪ್ರೇರಿತರಾಗಿ ಕೈಚೀಲಗಳನ್ನು ಬಳಸಿದರೆ ಒಳಿತೆಂಬ ಭಾವ, ಕಲ್ಪನೆ ಮಗು ವಲ್ಲಿ ಬಿತ್ತುದರಿಂದ ಮನೆಮನೆಯಲ್ಲಿ ಜಾಗೃತಿ ಮೂಡಿಸಿ ದಂತಾಗುತ್ತದೆ. ಪ್ಲಾಸ್ಟಿಕ್ ಬಳಕೆಯಿಂದ ಭೂಮಿಯ ಫಲ ವತ್ತತೆ ನಶಿಸುತ್ತಿದೆ‌ಯೆಂದು ದಿನಂಪ್ರತಿ ಅದರದೇ ಸುದ್ದಿ, ಜಾಹೀರಾತು.

ಆಹಾರ ಸಂಗ್ರಹಿಸಿಡುವುದರಿಂದ ಆರೋಗ್ಯ ಹಾನಿ ತಪ್ಪಿದ್ದ ಲ್ಲ. ತಿಳಿದು ತಿಳಿದು ಅಸ್ವಸ್ಥತೆ ಹಾದಿಮಾಡಿ ಕೊಡುತ್ತಿರು ವುದು ದುರಂತಕ್ಕೆ ನಾವೆ ಕಾರಣಿಕರ್ತರಾಗುತ್ತಿರುವುದು ವಿಪರ್ಯಾಸ. ಮನೆಯಲ್ಲಿ ಒಮ್ಮೆ ಕಣ್ಣಾಡಿಸಿದರೆ ಸಾಕು, ಪ್ಲಾಸ್ಟಿಕ್ ನ ಬಳಕೆಯ ಮಟ್ಟ. ಅರಿವಾಗುತ್ತದೆ. ಮಕ್ಕಳ ಕೈ ಗಿಲಿಕೆಯಿಂದ ಹಿಡಿದು ನಭೋಮಂಡಲದಲ್ಲಿ ತೇಲುವ ನೌಕೆಯವರೆಗೆ ಈ ಮಹಾಮಾರಿಯ ಮುಖವಾಡವಿದೆ. ಹೀಗಾಗಿ ಆದಷ್ಟು ಅವುಗಳ ಬಳಕೆಯನ್ನು ಕಡಿತಗೊಳಿಸಿ ದಷ್ಟು ಆರೋಗ್ಯ ಸುಧಾರಿಸಲು ಸಾಧ್ಯ.ಬಳಕೆಯ ನಿರ್ಬಂಧ ಸ್ವಯಂ ಹೇರುವತ್ತ ಗಮನ ಹರಿಸಬೇಕಿದಷ್ಟು ಒಳಿತು.

ಕೃತಕ, ನೈಸರ್ಗಿಕ ಒಳಿತನ್ನು ತಿಳಿಸಿಕೊಡುವುದರಿಂದ ಮಕ್ಕಳಿಗೆ ಇದರಿಂದಾಗುವ ಲಾಭ ನಷ್ಟಗಳ ಕುರಿತು ಸ್ವಯಂ ಚರ್ಚೆಗೆ ಮುಕ್ತ ಅವಕಾಶ ಕಲ್ಪಿಸುವುದರಿಂದ ಅನ್ವಯದ ಮಹತ್ವ ಸ್ಪಷ್ಟವಾಗುತ್ತದೆ. ಹೇಳುವುದು ಸುಲಭ. ಅದನ್ನು ಬಳಕೆಗೆ ತರುವುದು ಸುಲಭವಲ್ಲ. ಜೀವ ಹಾನಿ, ಭೂಮಿಯ ಫಲವತ್ತತೆ ತಿನ್ನುವ ಅನ್ನವು ಪ್ಲಾಸ್ಟಿಕ್ ಅಕ್ಕಿಯಾಗಿ ಬದಲಾ ಗಿದ್ದು ಹೊಸದೇನಲ್ಲ. ಹೀಗೆ ಆದ್ರೆ ಮುಂದೆ ಗತಿಯೇನು?

ಜಗತ್ತು ವಿಶಾಲವಾಗಿದೆ. ಗುರುಗಳು ವರ್ಗಕೋಣೆಯಿಂದ ಡಿಜಿಟಲ್‌ ಜಗತ್ತಿನ ಸ್ಮಾರ್ಟ್ ಕ್ಲಾಸ್ ಗಳತ್ತ ತೆರೆದುಕೊಳ್ಳು ತ್ತಿರುವಾಗ ಮಕ್ಕಳ ಮನೋಬಲ ಸುಭದ್ರಗೊಳಿಸುವುದು ಬಹುಮುಖ್ಯ. ಜೀವ ಪ್ರಪಂಚಕ್ಕೆ ಮಾದರಿ ತೋರಿಸುವುದು ಕೇವಲ ಗೂಗಲ್ ಸರ್ಚಗೆ ಬಂದು ನಿಲ್ಲಬಾರದು. ನೈಜವಾಗಿ ಮಗು ಪ್ರಕೃತಿಯ ಆಸ್ವಾಧಿಸುವ ಭಾಗ್ಯ ಜೀವಂತವಾಗಿಡು ವುದು ಅನಿವಾರ್ಯ. ಮುಂದಿನ ಪೀಳಿಗೆಯರಿಗೆ ಬಿಟ್ಟು ಹೋಗುವ ಅಮೂಲ್ಯ ಕೊಡುಗೆ ನಿಸರ್ಗವಾಗಿರಬೇಕೇ ವಿನಾ: ಪ್ಲಾಸ್ಟಿಕ್ ಅಲ್ಲ. ಅದೇ ಹೆಚ್ಚಾದರೆ ನಮ್ಮ ಶಪಿಸುತ್ತ ಮುಂದಿನ ಭವಿಷ್ಯ ಕತ್ತಲಾದೀತು.

ಮಳೆ ಬಂದು ಜಲನೂಕಿ ಹೊಳೆಬಂದು ಸಮುದ್ರಸೇರಿ ನೆಲ– ಜಲದ ಮೇಲೆ ಸವಾರಿಯಾಗಿ ಇದು ಬ್ರಹ್ಮ ರಾಕ್ಷಸನಾಗಿ ಮೆರೆಯಲಾರಂಭಿಸಿದೆ. ಪ್ಲಾಸ್ಟಿಕ್ ಇಲ್ಲದ ಬದುಕು ಉಂಟೇ ಎನ್ನುವ ಸ್ಥಿತಿ.ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಥೇಮ್ಸ್‌ ನದಿಯನ್ನು ಶುದ್ಧೀಕರಿಸಿದ ಮಾದರಿಯಾಗಿ, ಗಂಗೆ ಪಾವನವಾಗಿ ಹರಿವಂತೆ,ಸಿಕ್ಕಿಂ ಜಲ–ನೆಲವನ್ನು ಶುದ್ಧಿ ಮಾಡಿದ ಬಗೆಯಾಗಿ ಹರಡಿದಷ್ಟು ಒಳಿತಲ್ಲವೇ?

ಶ್ರೀಮತಿ.ಶಿವಲೀಲಾ‌ ಹುಣಸಗಿ
ಶಿಕ್ಷಕಿ, ಯಲ್ಲಾಪೂರ