ಹೇಗೆ ಬಣ್ಣಿಸಲಿ ಹೇಳಿ.?
ಹೇಗೆ ಮರೆಯಲಿ ಹೇಳಿ.??

ಕಪ್ಪು ಬೋರ್ಡಿನ ಮುಂದೆ
ಅಚ್ಚ ಬಿಳಿಬಣ್ಣದ ಧಿರಿಸು.!
ಕಂಗಳಲ್ಲಿ ಹೊಳೆವ ತೇಜಸ್ಸು
ನುಡಿಯಲ್ಲಿ ಪುಟಿವ ಹುಮ್ಮಸ್ಸು

ನಡೆಗಳಲ್ಲಿ ಶಿಸ್ತು-ಘನತೆ
ನಗೆಯಲ್ಲಿ ಪ್ರೀತಿ-ಮಮತೆ
ಸುಜ್ಞಾನದ ಮಹಾ ಹಣತೆ.!
ಬಾಳುಗಳ ಬೆಳಗಿದ ಪ್ರಣತೆ.!

ಹಿಡಿದು ಕರದಿ ಚಿಕ್ಕದೊಂದು
ಮಾಂತ್ರಿಕತೆಯ ಸೀಮೆಸುಣ್ಣ
ಬದಲಿಸಿದೆ ನಿತ್ಯವೂ ಅದೆಷ್ಟು
ಜೀವ-ಜೀವನಗಳ ಬಣ್ಣ.!!

ಮಣ್ಣುಮುದ್ದೆಯಂತ ಮನಗಳ
ಮೂರ್ತಿಯಾಗಿಸಿದ ಕಾಯಕಲ್ಪಿ.!
ಕಡುಶಿಲೆಗಳಂತ ಬದುಕುಗಳ
ಭವ್ಯಶಿಲ್ಪವಾಗಿಸಿದ ದಿವ್ಯಶಿಲ್ಪಿ.!

ಸಂವೇದನೆಗಳಿಗೂ ನೀ ಕಾರಣ.!
ಸಂಶೋಧನೆಗಳಿಗೂ ನೀ ಪ್ರೇರಣ.!
ಭಾವಗಳಿಗೆ ಭಾಷ್ಯ ನೀಡುವವನು.!
ಹೆಸರುಗಳ ಹಸಿರಾಗಿಸುವವನು.!

ಗುರುವೇ ನಿನ್ನಿಂದಲೆ ಈ ಬದುಕು
ನೀನೇ ತನುಮನಕೆ ಹೊಂಬೆಳಕು.!
ದಿವ್ಯಚೇತನವೇ ನಿನಗಿದೋ ನಮನ.!
ಶಿಕ್ಷಕರ ದಿನಾಚರಣೆಯ ಶುಭಕಾಮನ.!

(“ಶಿಕ್ಷಕರ ದಿನಾಚರಣೆಯ ಶುಭಾಶಯಗಳು – ಸಮಸ್ತ ಶಿಕ್ಷಕವೃಂದಕ್ಕೆ ಅರ್ಪಿತ ಈ ಕವಿತ”)

✍️ಎ.ಎನ್.ರಮೇಶ್. ಗುಬ್ಬಿ.