ಹೊಸ ಸಂಖ್ಯೆ -೧

ಹಲಸೊಳಗೆ ಕಸ ತುಂಬಲಾಗದು,
ವಿಷ ಸ್ರವಿಸಿ ಸಾವಿನ ರಸ ಅದು ಹರಿಸದು.
ಹೊರ ಮೈ ಮುಳ್ಳು ನೋಡಿ,
ಒಳ ಗರ್ಭವ ಪಾಪಸುಕಳ್ಳಿ ಅಂದರೆ,
ಕಣ್ಣಿನ ನರಗಳಿಗೆಲ್ಲಾ ಕನ್ನಡಕ ತೊಡಿಸಬೇಕು
ಮನೆಯೆಂದರೆ ಹಲಸಿನಂತಲ್ಲ,
ಹೊಲಸು ಕಾಣದ ಏರ್ಪಾಟುಸೌಧ
ಮನೆ ಹಲಸಿನಂತಾದರೆ
ಮುಳ್ಳೂ ಅಂಟೂ ಒಂದಾದ ರುಚಿಯು ಅಲ್ಲವೇ?
ಶ್ವೇತಪ್ರಿಯ ಗುರುವೆ.

ಹೊಸ ಸಂಖ್ಯೆ -೨

ಚರಿತೆಗಳು ಚಿರತೆಗಳಂತೆ,
ಭಯ ಪಡಿಸಿದ್ದೇ ಪಡಿಸಿದ್ದು.
ತೀರದ ದಾಹ ಇಂಗದ ಹಸಿವು
ಹೇಳಿದ್ದನ್ನೇ ಕೇಳಬೇಕೆಂಬ ಮೋಹ ಅವಕೆ
ನೆನ್ನೆ ಹೇಳಿದ್ದನ್ನೇ ಇಂದು ಕೇಳುತಿದ್ದರೆ
ಹೊಸ ಹೊಸ ಮೆದುಳೂ ಮನಸೂ
ಮುಸುರೆಯಲಿ ತೇಲುತ್ತಿದ್ದಂತೆ
ಹಳೇ ಎಂಜಲಿಗಿಂತ ನಿತ್ಯ ಬರುವ ಗಂಜಲವೇ
ಲೇಸು ತಾನೇ ಶ್ವೇತಪ್ರಿಯಗುರುವೆ

ಹೊಸ ಸಂಖ್ಯೆ -೩

ಭಾಷೆ ಅಂದರೆ ಹೀಗೆ ಕಂಡಷ್ಟೂ ಕಡಲು
ಬೆಸೆದರೆ ಬೆಸುಗೆ ಇಲ್ಲವೇ ಕಲಾಯಿ ಬಿಟ್ಟ ವಿಷ
ಜೀವ ಹುಟ್ಟಿದರೊಂದು ಭಾಷೆ
ಸತ್ತಾಗ ಹಲವು ಹಲವು ಭಾಷೆ.
ಗಾಳಿ ಬೀಸಿದರೊಂದು ನೀರು ಹರಿದರೊಂದು
ಹಸುರುಗೊಂದು ಭಾಷೆ ಉಸಿರಿಗೊಂದು ಭಾಷೆ
ಅತ್ತಾಗ ನಕ್ಕಾಗ ಬೈದು ಹೊಗಳಿ ಉಬ್ಬಿಸಿ ಇಳಿಸಿದಾಗ
ಲೆಕ್ಕಕ್ಕೆ ಬಾರದಷ್ಟು ಹಲವು ಭಾಷೆ.
ಭಾಷೆಯ ಬ್ರಂಹ್ಮಾಂಡವು ಎಳೆ ಕಂದನ ಕಣ್ಣಲ್ಲಿ ಹೊಳೆವಂತೆ
ಈ ಜಗಕ್ಕೆ ನೀನೇ ತೋರಯ್ಯ ಶ್ವೇತಪ್ರಿಯ ಗುರುವೆ.

ಹೊಸ ಸಂಖ್ಯೆ -೪

ಯೋಜನೆ ಕೊಟ್ಟರೂ ಕತ್ತಲ ಸೂಚನೆ ಇತ್ತರೂ
ಲಿಂಗಾನುಪಾತಕ್ಕೆ ಭಂಗ ಬಂದಿದೆ ಗುರುವೆ
ಒಡಲು ಕೊಟ್ಟು ಮಡಿಲ ಕೊಟ್ಟು ಮಯ್ಯಿ ಕೊಡುವ
ಕರುಳಿಗೆ ಕಾಣದ ಕತ್ತರಿಯಾಟ
ಹೆಣ್ಣೆಂದರೆ ಮೊಳಕೆ ಕಟ್ಟುವ ಜೀವಚೀಲ
ಹೆಣ್ಣೆಂದರೆ ಉಸಿರು ತುಂಬುವ ಬಸಿರು
ಹೆಣ್ಣಿಲ್ಲದ ಜೀವ ಜಾತ್ರೆ ಸಂತೆಯೊಳಗೆ
ಸೊನ್ನೆಯೊಳಗೆ ಸೊನ್ನೆಯೇ ಹೊರತು ಸಂಕಲನದ
ಮಾತೇ ಇಲ್ಲ ಅಲ್ಲವೇ ಶ್ವೇತಪ್ರಿಯ ಗುರುವೆ

ಹೊಸ ಸಂಖ್ಯೆ -೫

ಅನ್ನವನ್ನು ದೇವರೆಂದು ಅನ್ನ ದಾನಕ್ಕೆ
ಹುಳಬಿದ್ದ ಬಲೆ ಕಟ್ಟಿದ ಅಕ್ಕಿ ಬಳಸುವರು
ಒಂದೊತ್ತು ಬಲಿಯನ್ನ ಕೊಟ್ಟು ದೇವರ ಮಕ್ಕಳೆಂದು
ಹಸಿವೆಂಬ ಮೆರೆವ ಮೂರ್ತಿಗೆ ದಿನದ ಜಾತ್ರೆ ಮಾಡುವರು
ಮೂರೊತ್ತು ತಳಿಗೆ ಪ್ರಸಾದವ ಕೇಳುವ ಹೊಟ್ಟೆ ದೈವಕ್ಕೆ
ಉತ್ಸವ ಮಾಡಿ ಒಪ್ಪೊತ್ತು ಅನ್ನವನಿಕ್ಕಿ ಸುಮ್ಮನಾಗುವರು
ಅನ್ನ ಕೇಳುವ ಹಸಿದ ದೇವರಿಗೆ ದಿಕ್ಕು ದಾರಿ ತಪ್ಪಿಸಿ
ದೇವದಾರಿಯಲಿ ಹೋಗಿ ಸದಾ ಮೃಷ್ಟಾನ್ನ ತಿನ್ನುವಾಗ
ಹಸಿಹಸಿದ ದೇವ ನಿಮ್ಮನು ಸುಮ್ಮನೇ ಬಿಡನು
ಅಲ್ಲವೇ ಶ್ವೇತಪ್ರಿಯ ಗುರುವೆ.

ಹೊಸ ಸಂಖ್ಯೆ -೬

ಗಂಡನಮ್ಮನಿಗೆ ಗುಣವಿಲ್ಲ ಎಂದು
ಸೊಸೆ ಸಂಗಾತಿಯಮ್ಮನ ಸೀದರೆ
ಘಾಟು ಹತ್ತುವುದು ತನ್ನ ಪ್ರೀತಿಗೆ
ಹೆಣ್ಣು ಕೊಟ್ಟವಳ ಕಣ್ಣಿಗೆ ಮಾತ್ರ
ಒಲವ ಕನ್ನಡಕ ಇರುವುದೆಂದರೆ
ಮಗಳ ಬದುಕ ಬಲೂನು ಟುಸ್ಸು
ಹೆಂಡತಿಯ ಅಮ್ಮ ಅನ್ಯಗ್ರಹಜೀವಿ
ಗುಂಡಿಗೆ ಇರುವ ಗಂಡಿಗೆ ಯಾವ ಗಾಳಿಯೂ
ಬೀಸುವುದಿಲ್ಲವೆಂದರೆ ಬಾಳು ಬೀಸುಗತ್ತಿ ನಿತ್ಯ
ಪ್ರೀತಿಯ ಕುಡಿ ಹುಟ್ಟಲು ಎರಡು ಗಡಿಯ ನಡುವೆ
ಕಿವಿ ಕಣ್ಣು ಬಾಯಿರದ ವ್ಯವಧಾನವಿದ್ದರೆ
ಬದುಕು ಸೊಗಸು ಇಲ್ಲವೇ ಬಿಡದ ಹುಸುಗು
ಶ್ವೇತಪ್ರಿಯ ಗುರುವೆ.

ಹೊಸ ಸಂಖ್ಯೆ -೭

ಅನ್ನವಿಲ್ಲದ ಮನೆಗೆ ಪ್ರಾಯೋಜಕರು ಯಾರಿಲ್ಲ
ಕಣ್ಣ ನೀರು ನಿತ್ಯ ಚಿಮ್ಮಿ ಚೆಲ್ಲುವಾಗ
ಪುಕ್ಕಟೆಯ ಒಣ ಬಟ್ಟೆಯ ಬಾವುಟದ ಹಾರಾಟ
ಅಕ್ಷಿ ಕೊಳವ ಕೊಂಡು ಈಜುಕೊಳ ಮಾಡಿಕೊಳ್ಳೋ
ಏಳಂಸ್ತಿನ ಮೇಲೆ ಹಾಳಾಗಿ ಬೆಳೆದರೆ ಯಾವ ಲಾಭವೂ ಇಲ್ಲ
ಅಲ್ಲವೇ ಶ್ವೇತಪ್ರಿಯ ಗುರುವೆ?

✍️ಡಾ.ಬೇಲೂರು ರಘುನಂದನ್ 
ಕನ್ನಡ ಸಹಾಯಕ ಪ್ರಾಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ ಬೆಂಗಳೂರು