ಸಾವಿರದ ಒಂಬೈನೂರ ಇಪ್ಪತ್ತು ಆಗಸ್ಟ್ ಇಪ್ಪತ್ತಾ ರು: ಅಮೆರಿಕಾದ ಇತಿಹಾಸದಲ್ಲಿ ಸುವರ್ಣಾಕ್ಷರ ದಲ್ಲಿ ಬರೆದಿಡುವಂತಹ ದಿನ. ಆ ದಿನ ಮಹಿಳೆಯ ರಿಗೂ ಮತದಾನ ಮಾಡುವ ಹಕ್ಕು ಲಭಿಸಿತು. ಹಾಗಾಗಿಯೇ ಅಂದಿನ ಸಂಭ್ರಮವನ್ನು ಮಹಿಳಾ ಸಮಾನತೆಯ ದಿನ ಎಂದು ಗುರುತಿಸಿ ಆಚರಿಸಿ ಕೊಂಡು ಬರಲಾಗುತ್ತಿದೆ. ಈ ಸಂದರ್ಭದ ಹಿನ್ನೆಲೆ ಯಲ್ಲಿ ಸ್ವಾತಂತ್ರೋತ್ತರ ಭಾರತದಲ್ಲಿಮಹಿಳೆಯರ ಸಮಾನತೆಯ ಬಗ್ಗೆ ದೃಷ್ಟಿ ಹರಿಸೋಣ ಬನ್ನಿ.

ಪರಂಪರಾನುಗತವಾಗಿ ಭಾರತದಲ್ಲಿ ಮಹಿಳೆಯ ರ ಸ್ಥಾನ ಉಚ್ಚ ಮಟ್ಟದಲ್ಲಿಯೇ ಇತ್ತು. “ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ:” ಎಂಬುದು ವೇದಕಾಲದ ಪರಿಸ್ಥಿತಿ. ವಿದ್ಯೆಯಲ್ಲಿ ಪುರುಷರಷ್ಟೇ ಸಮಾನತೆ ಹೊಂದಿ ಪಾಂಡಿತ್ಯವಿದ್ದ ಗಾರ್ಗಿ, ಮೈತ್ರೇಯಿ, ಲೋಪಾಮುದ್ರೆಯರ, ವಾದದಲ್ಲಿ ಶಂಕರಾಚಾ ರ್ಯರ ಸಮಾನ ಚರ್ಚಿಸಿದ ಉಭಯಭಾರತಿ ಇವರ ಉದಾಹರಣೆಗಳು ಅಂದಿನ ಕಾಲದಲ್ಲಿದ್ದ ಸ್ತ್ರೀ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತವೆ. ನಂತರದ ಪರಕೀಯರ ಆಳ್ವಿಕೆಯ ಆಕ್ರಮಣಗಳಲ್ಲಿ ಹೆಣ್ಣನ್ನು 4 ಗೋಡೆಗಳ ಮಧ್ಯೆ ರಕ್ಷಿಸುವ ನೆಪದ ಲ್ಲಿ ಹಾಗೂ ಅನ್ಯ ಸಂಸ್ಕೃತಿಗಳ ಪ್ರಭಾವದಲ್ಲಿ ಸ್ತ್ರೀಯರಿಗಿದ್ದ ಪ್ರಾಮುಖ್ಯತೆ ಕಡಮೆಯಾಗುತ್ತಾ ಪುರುಷರಿಗಿಂತ ಕೀಳು ಎಂದು ಬಿಂಬಿಸಲ್ಪಟ್ಟಿತು. ಇದಿಷ್ಟು ಬ್ರಿಟಿಷರ ಕಾಲದಲ್ಲಿದ್ದ ಮಹಿಳೆಯರ ಪರಿಸ್ಥಿತಿ. ಸಮಾನತೆಯಿರದ, ವಿದ್ಯಾಭ್ಯಾಸ ದೊರಕದ, ಸತೀಪದ್ಧತಿ, ಜೋಹರ್, ವರದಕ್ಷಿಣೆ, ಬಾಲ್ಯವಿವಾಹ ವಿಧವೆಯರ ಕೇಶಮುಂಡನ, ಬಹುಪತ್ನಿತ್ವ, ಮುಂತಾದ ಸಾಮಾಜಿಕ ಅನಿಷ್ಟಗಳ ಕಪಿಮುಷ್ಟಿಯಲ್ಲಿ ವನಿತೆ ಸಿಕ್ಕು ನಲುಗುತ್ತಿದ್ದಳು. ಈ ಎಲ್ಲ ಪಡಿಪಾಟಲುಗಳಿಗೆ ಸಿಕ್ಕಿ ನರಳುವುದ ಕ್ಕಿಂತ ಹೆಣ್ಣುಸಂತಾನವೇ ಬೇಡ ಎಂಬ ಭಾವನೆ ಯೂ ಉದ್ಭವವಾಗಿತ್ತು.

ಸ್ವಾತಂತ್ರಾನಂತರ ಭಾರತದಲ್ಲಿ ಮಹಿಳೆಯರ ಸ್ಥಿತಿ ಗತಿಯಲ್ಲಿ ಗಣನೀಯ ಪ್ರಗತಿ ಸುಧಾರಣೆ ಕಂಡು ಬಂದಿದೆ ಎಂಬುದಂತೂ ನಿರ್ವಿವಾದ. ಸಂವಿಧಾನ ದಲ್ಲಿ ಲಿಂಗ ಸಮಾನತೆಯು ಮೂಲಭೂತ ಹಕ್ಕಾ ಗಿರುವುದರಿಂದ ಉಳಿದೆಲ್ಲ ವಿಷಯಗಳಲ್ಲಿ ಸಮಾ ನತೆ ಹಾಗೂ ಮೀಸಲಾತಿಗಳು ಸ್ತ್ರೀ ಸ್ವಾತಂತ್ರ್ಯದ ಹಾದಿಯಲ್ಲಿ ಹೊಸ ಹೊಳಹುಗಳನ್ನು ಝಳಪಿ ಸಿದೆ. ಹತ್ತೊಂಬತ್ತನೆಯ ಶತಮಾನದ ಸಂಪೂರ್ಣ ಅಧೀನತೆ ಹಾಗೂ ಅಧೋಗತಿಯ ಸ್ಥಾನದಿಂದಈ ಇಪ್ಪತ್ತೊಂದನೆಯ ಶತಮಾನದ ಸಮಾನತೆಯ ಸ್ಥಾನಕ್ಕೇರಿರುವುದು ಖಂಡಿತವಾಗಿಯೂ ಪ್ರಗತಿ ಪಥದ ಗಮನಾರ್ಹ ಬದಲಾವಣೆ. ಹಾಗೂ ಇದು ಕಡಿಮೆ ಮಟ್ಟದ ಸಾಧನೆ ಏನಲ್ಲ. ಈ ಹಿನ್ನೆಲೆಯ ಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಬೇರೆ ಬೇರೆ ಆಯಾಮ ಗಳಲ್ಲಿ ನೋಡಬಹುದು.
ಶೈಕ್ಷಣಿಕ ಸ್ವಾತಂತ್ರ್ಯ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಮಾನ ಹಕ್ಕು ಗಳ ಫಲಾನುಭವಿಗಳಾದ ಮಹಿಳೆಯರಲ್ಲಿ ವಿದ್ಯಾ ಭ್ಯಾಸದ ಮಟ್ಟ ಹೆಚ್ಚಿತು. ಇದರಿಂದಾಗಿ ಅವಳ ಜ್ಞಾನದ ಪರಿಧಿ ವಿಸ್ತಾರವಾದುದಲ್ಲದೆ ಹೆಚ್ಚಿದ ಉದ್ಯೋಗಾವಕಾಶ ಆತ್ಮವಿಶ್ವಾಸವನ್ನು ಬೆಳೆಸುವ ದಾರಿಯಾಯಿತು. ಸ್ತ್ರೀಯೊಬ್ಬಳು ಕಲಿತರೆ ಶಾಲೆ ಯೊಂದು ತೆರೆದಂತೆ ಎಂಬಂತೆ ಹೆಚ್ಚಿನ ವಿದ್ಯಾ ಭ್ಯಾಸ ಹಕ್ಕು ಅಧಿಕಾರಗಳ ಅರಿವು ಮೂಡಿಸಿತು. ೧೯೬೧ರಿಂದ ಈಚೆಗೆ ಮೂಲಭೂತ ವಿದ್ಯಾಭ್ಯಾಸ ವಷ್ಟೇ ಅಲ್ಲದೆ ಉನ್ನತ ವಿದ್ಯಾಭ್ಯಾಸ, ವಿದೇಶಿ ವಿದ್ಯಾಭ್ಯಾಸ ಎಲ್ಲದರಲ್ಲೂ ಮಹಿಳೆಯರ ಶೇಕಡ ವಾರು ಸಂಖ್ಯೆ ಗಣನೀಯವಾಗಿ ಏರಿವೆ.
ಆರ್ಥಿಕ ಸ್ವಾತಂತ್ರ್ಯ:
೧೯೭೬ರ ಸಮಾನ ಸಂಭಾವನೆ ಕಾಯಿದೆ ಮೊದ ಲಾದುವು, ವೈಟ್ ಕಾಲರ್ ಉದ್ಯೋಗಗಳ ವಿಷ ಯದಲ್ಲಿ ಮಾತ್ರವಲ್ಲದೆ ಕೃಷಿ ಹಾಗೂ ಇನ್ನಿತರ ಕನಿಷ್ಠ ಅಸಂಘಟಿತ ವರ್ಗದಲ್ಲಿನ ಮಹಿಳೆಯರ ಕೂಲಿಯ ಅಸಮಾನತೆಯನ್ನೂ ನಿವಾರಿಸಿದೆ.ಸ್ತ್ರೀ ಯರಿಗೆ ಅವರಿಗೆ ಸಲ್ಲಬೇಕಾದ ಸಂಭಾವನೆ ಪುರುಷರಿಗೆ ಸಮಾನವಾಗಿ ಸಿಗುವಂತೆ ಮಾಡಿದೆ.

ಸ್ವಾತಂತ್ರ್ಯದ ಬಳಿಕದ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಏರಿದೆ. ಎಲ್ಲಾ ವರ್ಗಗಳ ಲ್ಲೂ ಮಹಿಳೆಯರು ಸಮರ್ಥವಾಗಿ ಕಾರ್ಯ ನಿರ್ವಹಿಸಿ ಯಶಸ್ಸು ಹೊಂದುತ್ತಿದ್ದಾರೆ. ಉದಾ ಹರಣೆಯಾಗಿ ಕಂಪನಿಗಳ ಸಿಇಒ ಆಗಿ ಯಶಸ್ವಿ ಯಾಗಿರುವ ಈ ಮಹಿಳೆಯರೇ ಸಾಕ್ಷಿ. ಇಂದ್ರಾ ನೂಯಿ (ಪೆಪ್ಸಿಕೋ) ಕಿರಣ್ ಮಜುಮ್ದಾರ್ (ಬಯೋಕಾನ್) ಚಿತ್ರಾ ರಾಮಕೃಷ್ಣ (NSE) ಶಿಖಾ ಶರ್ಮಾ, ವಿನಿತಾ ಬಾಲಿ, ರೋಶನಿ ನಾಡಾರ್ ಸುಧಾಮೂರ್ತಿ ಮುಂತಾದವರು. ಇತ್ತೀಚೆಗೆ ರಾಷ್ಟ್ರದ ರಕ್ಷಣಾಪಡೆಯ 3 ವಿಭಾಗಗಳಲ್ಲಿಯೂ ಸ್ತ್ರೀಯರನ್ನು ಸಮಾನವಾಗಿ ಉದ್ಯೋಗಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ವಿದ್ಯೆ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಮಹಿಳಾಜೀವನದಲ್ಲಿ ಹುಟ್ಟಿಸುವ ಭರವಸೆ ಆತ್ಮವಿಶ್ವಾಸಗಳ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ.
ಸಾಮಾಜಿಕ ಸ್ವಾತಂತ್ರ್ಯ

ಕೆಲವೊಂದು ಕಾನೂನಾತ್ಮಕ ಕಾಯಿದೆಗಳು ಸ್ತ್ರೀಗೆ ಅವಶ್ಯಕವಿದ್ದ ಅನೇಕಾನೇಕ ಅಗತ್ಯತೆಗಳನ್ನು ಪೂರ್ಣಗೊಳಿಸಿ ಅವಳಿಗೆ ಸ್ವಾಯತ್ತತೆ ಕೊಡಿಸಿದೆ. ೧೯೫೫ ರ ಹಿಂದೂ ವಿವಾಹ ಕಾಯಿದೆ,೧೯೫೬ರ ಹಿಂದೂ ಉತ್ತರಾಧಿಕಾರ ಕಾಯಿದೆ, ೧೯೭೩ರ ಹಿಂದೂ ಮಹಿಳಾ ಆಸ್ತಿ ಹಕ್ಕು ಕಾಯಿದೆ ಇವೆಲ್ಲ ವುಗಳು ಹೆಚ್ಚಿನ ಸೌಲಭ್ಯಗಳನ್ನು ನೀಡಿ ಒಟ್ಟಾರೆ ಮಹಿಳೆಯರ, ವಿಶೇಷವಾಗಿ ವಿಧವೆಯರ ಹಕ್ಕು ಗಳನ್ನು ಬಲಪಡಿಸಿವೆ.ಅನಿಷ್ಠ ಸಂಪ್ರದಾಯಗಳಿಗೆ ಮುಕ್ತಾಯ ಹಾಡಿದೆ.ಈಶ್ವರಚಂದ್ರ ವಿದ್ಯಾಸಾಗರ್ ಮೊದಲಾದ ಸಮಾಜ ಸುಧಾರಕರ ಕೊಡುಗೆಯು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದೆ.೧೯೬೧ರ ವರದಕ್ಷಿಣೆ ನಿಷೇಧ ಕಾಯಿದೆ ಈ ಸಂಧರ್ಭದಲ್ಲಿ ಉಲ್ಲೇಖಾರ್ಹ. ಆರ್ಥಿಕ ಭಾಗವಹಿಸುವಿಕೆ ವಿದ್ಯಾ ವಂತ ಮಹಿಳೆಯನ್ನು ಸಮಾಜದ ಮುಖ್ಯವಾಹಿನಿ ಯಲ್ಲಿ ಗುರುತಿಸಿಕೊಳ್ಳಲು ಸಹಾಯಕವಾಗಿ ಕೌಟುಂಬಿಕ ನೆಲೆಯಲ್ಲೂ ತನ್ನಅಭಿಪ್ರಾಯಗಳನ್ನ ಧ್ವನಿಸುವಂತೆ ಮಾಡಿತ್ತು. ಸಮಾನತೆಯ ಹಾದಿಗೆ ಇವು ಪೂರಕ ತಾನೇ?
ರಾಜಕೀಯ ಸ್ವಾತಂತ್ರ್ಯ

ಮತ ಹಾಕುವುದಕ್ಕೆ ಅಷ್ಟೇ ಅಲ್ಲದೆ ಚುನಾವಣೆ ಯಲ್ಲಿ ಭಾಗವಹಿಸಲು ಅಧಿಕಾರ ಮೀಸಲಾತಿ ಸೌಲಭ್ಯಗಳು ಮಹಿಳೆಯರು ಅಧಿಕಾರಕ್ಕೆ ಬಂದು ಚುಕ್ಕಾಣಿ ಹಿಡಿಯಲು ಎಡೆಮಾಡಿಕೊಟ್ಟಿದೆ. ಇದೇನೂ ಅಂತಿಂತಹ ಸಾಧನೆಯಲ್ಲ. ಪ್ರಧಾನ ಮಂತ್ರಿ, ರಾಷ್ಟ್ರಪತಿ, ಸ್ಪೀಕರ್ ನಂತಹ ಉತ್ತಮ ಉನ್ನತ ಹುದ್ದೆಗಳಲ್ಲಿಯೂ ಭಾರತೀಯ ಮಹಿಳೆ ನಿರ್ವಹಣೆ ಮಾಡಿ ಸೈ ಎನಿಸಿಕೊಂಡಿದ್ದಾಳೆ.
ಸ್ತ್ರೀ ಸಮಾನತೆಯ ಮಹಿಳಾ ಹಕ್ಕುಗಳ ರಕ್ಷಣೆ ಹೋರಾಟ / ಸಂಘಟನೆಗಳು ಹುಟ್ಟಿ ಬೆಳೆದು ತಮ್ಮ ಪ್ರಾಬಲ್ಯ ಮೆರೆಯುತ್ತಿವೆ. ಶೋಷಿತರಿಗೆ ನ್ಯಾಯ ದೊರಕಿಸಿಕೊಡಲು ಹೋರಾಡುತ್ತಿವೆ. ಇಷ್ಟೆಲ್ಲ ಆದರೂ ನಿರೀಕ್ಷಿತ ಸ್ವಾತಂತ್ರದ ಫಲಾನು ಭವಿಯಾಗಿದ್ದಾಳೆಯೇ ಹೆಣ್ಣು? ಅಂದರೆ ಉತ್ತರ ನಕಾರಾತ್ಮಕವೇ.

16.12.2012ರ ದೆಹಲಿಯ ನಿರ್ಭಯಾ ಪ್ರಕರಣ, 27.12.2019ರ ಡಾಕ್ಟರ್ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ. ಇವೆಲ್ಲವೂ ಪ್ರಗತಿಯ ಹಾದಿಯಲ್ಲಿನ ಕಪ್ಪು ಚುಕ್ಕೆಗಳಾಗಿ ಉಳಿದುಬಿಟ್ಟಿವೆ. ಎಷ್ಟೇ ಮುಂದುವರೆದರೂ ಕೂಡ ಗಾಂಧೀಜಿಯವರು ಕನಸು ಕಂಡ ಹಾಗೆ ಮಧ್ಯ ರಾತ್ರಿಯಲ್ಲಿರಲಿ ನಡು ಮಧ್ಯಾಹ್ನದಲ್ಲೂ ನಿರ್ಭೀತರಾಗಿ ಮಹಿಳೆಯರು ಓಡಾಡಲಾಗುತ್ತಿಲ್ಲ. ಉತ್ಪಾದನಾ ಕ್ಷೇತ್ರದಲ್ಲೂ ಅಷ್ಟೇ, ಮಹಿಳೆಯರು ಹೆಚ್ಚಿನ ಲಾಭಾಂಶ ಫಲಾನುಭೋಕ್ತರೇ ಹೊರತು ಉತ್ಪಾದಕರಲ್ಲ . ಅಷ್ಟೇ ಅಲ್ಲದೆ ಇನ್ನೂ ಗಂಡು ಸಂತಾನದ ಆಸೆಯಲ್ಲಿ ಹೆಣ್ಣು ಭ್ರೂಣಹತ್ಯೆ ನಿಂತಿಲ್ಲ. ಮಹಿಳೆ ಮತ್ತು ಪುರುಷರ ಲಿಂಗಾನುಪಾ ತದ ಪ್ರಮಾಣವು ಮಹಿಳೆಯರ ಸಂಖ್ಯೆ ಕಡಿಮೆ ಯಾಗುತ್ತಿರುವುದರ ಬಗ್ಗೆ ಆತಂಕ ಹುಟ್ಟಿಸುತ್ತದೆ.

ಎಷ್ಟೋ ಮಹಿಳಾಪರ ಕಾಯಿದೆಗಳು ಅವಶ್ಯಕತೆ ಇರುವವರಿಗೆ ತಲುಪುತ್ತಿಲ್ಲ, ದುರುಪಯೋಗ ಮಾಡಿಕೊಳ್ಳುವವರಿಗೆ ಮತ್ತೊಂದು ಶಸ್ತ್ರವಾಗಿ ಪರಿಣಮಿಸಿವೆ.ಸಮಾಜದ ದ್ವಿಮುಖನೀತಿ ಮಹಿಳೆ ಯರ ಸ್ವಾತಂತ್ರ್ಯದ ಪ್ರವಾಹಕ್ಕೆ ತಡೆಯಾಗಿದೆ. ಸ್ವಾತಂತ್ರ್ಯಕ್ಕೂ ಸ್ವೇಚ್ಛಾಚಾರಕ್ಕೂ ಮಧ್ಯದ ಗೆರೆ ಅಳಿಸಿ ಕೆಲವೊಮ್ಮೆದುರ್ಬಳಕೆಯ ಸಾಧನಗಳಾಗಿ ಸ್ತ್ರೀಕುಲಕ್ಕೆ ಕಳಂಕವಾಗಿರುವ ನಿದರ್ಶನಗಳೂ ಉಂಟು. ಕೇವಲ ಕಾನೂನಾತ್ಮಕವಾಗಿ ಏನನ್ನೂ ಸಾಧಿಸಲು ಆಗುವುದಿಲ್ಲ. ಕಾಯಿದೆಗಳು ಗರಗಸ ಇದ್ದಂತೆ, ಎರಡೂ ಕಡೆ ಸೀಳುವ ಅಪಾಯವಿದ್ದೇ ಇರುತ್ತದೆ. ಹೆಚ್ಚಿನಂಶ ಒಳ್ಳೆಯದಿರುವುದರಿಂದ ವಿಚಕ್ಷಣೆಯಲ್ಲಿ ಉಪಯೋಗಿಸಬೇಕು, ಸಿಕ್ಕಿರುವ ಸೌಲಭ್ಯಗಳ ಸದುಪಯೋಗವಾಗಬೇಕು. ಹಾಗಾ ದಾಗ ಮಾತ್ರ ಮಹಿಳೆಯರಿಗೆ ನೈಜ ಸ್ವಾತಂತ್ರ್ಯ ಸಿಕ್ಕ ಹಾಗೆ.

ಮಹಿಳೆಯರಿಗೆ ಅವರ ಸಂಸಾರಗಳಲ್ಲಿ, ವೃತ್ತಿಕ್ಷೇತ್ರ ಗಳಲ್ಲಿ ಹಾಗೂ ಸಮಾಜದ ಇನ್ನಿತರ ನೆಲೆಗಟ್ಟಿ ನಲ್ಲಿ ಸಮಾನತೆ ಸಿಕ್ಕು ನೆಮ್ಮದಿ, ಸ್ವಾತಂತ್ರ, ಶಾಂತಿಯನ್ನು ಪಡೆಯುವಂತಾಗಲಿ ಎಂಬ ಹರಕೆ ಹಾರೈಕೆ.
ಸುಜಾತಾ ರವೀಶ್, ಮೈಸೂರು