ಎದೆ ಹಚ್ಚಿ ತೆವಳಲು ಹವಣಿಸುವ ಜೀವಿಗಳಿಗೆಲ್ಲ ಹೊಟ್ಟೆಭಾಗ ಗಟ್ಟಿಯಿರಲೇಬೇಕು. ಮೇಲೆರಗುವ ತಾಪಕೆ ಒಲೆಯ ಮೇಲೆ ಹಂಚಿಟ್ಟಂತೆ ಬೆವರಿ‌ನ ಹನಿಗಳು. ಎದೆ ಸೀಳುವ ಮೊನಚುಗಳಿಗೆ ಯಾರ ದುಃಖ ದುಮ್ಮಾನಗಳೂ ಅರ್ಥವಾಗದು. ನಡೆ ಯುವ ದಿಕ್ಕನ್ನು ಬದಲಿಸದೆ ಸಾಗುವ ಮನಸ್ಸಿಗೆ ಇರಬೇಕಾದದ್ದು ತಾಳ್ಮೆ. ಮನುಷ್ಯ ಸಂಘಜೀವಿ. ಅವನ ಒಡನಾಟ ಎಲ್ಲರೊಂದಿಗೆ ಇದ್ದರೂ,ಅವನ ಒಳತುಡಿತ ಮಾತ್ರ ಅವನ ಅಭಿವ್ಯಕ್ತಿ ಮೇಲೆ ನಿರ್ಭರ. ಬೀಸುವ ಗಾಳಿಯು ಎಲ್ಲ ದಿಕ್ಕನ್ನು ಸ್ಪರ್ಶಿಸಿ ಅದರ ತೀವ್ರತೆಯನ್ನು ಹೆಚ್ಚಿಸಿದಾಗ ಆಗುವ ಏರಿಳಿತಗಳು ಉಹಿಸಲು ಅಸಾಧ್ಯ.

ಯಾವ ಜೀವಿಯು ಹುಟ್ಟುತ್ತ ಕೆಟ್ಟದ್ದಲ್ಲ, ಪರಿಸ್ಥಿತಿ ಗಳು ಅವರನ್ನು ಆ ಕಾಲಘಟ್ಟಕ್ಕೆ ನಿಲ್ಲಿಸಿದಾಗ ಅದರ ಪರಿಣಾಮವನ್ನ ಸಮಾಜ ಅನುಭವಿಸಲೇ ಬೇಕು. ಸರ್ವಜ್ಞನು ತನ್ನ ವಚನದಲ್ಲಿ ಬೆರೆತರೆ ಎಂಥವರೊಡನೆ ಬೆರೆಯಬೇಕೆಂದಿದ್ದಾನೆಂದರೆ:

ಬಲ್ಲವರ ಒಡನಾಟ |ಬೆಲ್ಲವನು ಮೆದ್ದಂತೆ | ಅಲ್ಲದಹುದೆಂಬ ಅಜ್ಞಾನಿಯೊಡನಾಟ| ಕಲ್ಲು ಹಾದಂತೆ ಸರ್ವಜ್ಞ||

ನಮ್ಮ ನಮ್ಮ ಗುಣಗಳು,ನಮಗರಿವಿಲ್ಲದಂತೆಯೇ ಜ್ಞಾನಿಗಳ, ಸಜ್ಜನರ ಸಹವಾಸ ಮಾಡುವಂತೆ ಪ್ರೇರೇಪಿಸುತ್ತದೆ, ಕರಡಿ ಜೇನರಸುವಂತೆ.ಅಂಥಹ ಸಜ್ಜನರ ಒಡನಾಡವು ಬೆಲ್ಲವನ್ನು ತಿಂದಷ್ಟು ಸಿಹಿ. ಆದರೆ ಬೇಡವಾದ, ಮಿಥ್ಯ ನುಡಿ, ಸದಾ ಬೇರೊ ಬ್ಬರ ಅಹಿತವನ್ನು ಬಯಸುವವರ ಗೆಳೆತನವು ಅಜ್ಞಾನಿಯ ಸಂಗವ ಮಾಡಿದಂತೆ.”ಇರುಳು ಕಂಡ ಬಾವಿಗೆ ಹಗಲಲ್ಲೇ ಬಿದ್ದ ಹಾಗೆ”. ಗೆಳೆತನವು ಕೆಟ್ಟ ಹಾದಿ ಹಿಡಿದರೆ, ಮುಳ್ಳುಗಳಂತೆ ಕಷ್ಟಗಳು. ಬಾಳಲ್ಲಿ ವೇದನೆ ಅನುಭವಿಸಿಕೊಂಡು ಸಂಕಟದ ಮೂಟೆ ಹೊತ್ತಂತೆ.ಕಠೋರತೆ,ದುಷ್ಟಗುಣಗಳನ್ನು ಹೊಂದಿದವರ ಸಹವಾಸ ಮಾಡಿದಷ್ಟು ಕೇಡು ತಪ್ಪಿದ್ದಲ್ಲ. ಸರ್ವಜ್ಞನ ವಚನ ಸಾರ್ವತ್ರಿಕ ಸಾರ ಸಾರುವ ನೈಜ ಚಿತ್ರಣ.

ಸಜ್ಜನರ ಸಹಯೋಗದಿಂದ ಬದಲಾದವರನ್ನು ಸನ್ಮಾರ್ಗದಿಂದ ನಡೆಸುವುದು ನಮ್ಮ ಆದ್ಯ ಕರ್ತವ್ಯ. ವಾಲ್ಮೀಕಿ ರಾಮಾಯಣ ಬರೆಯಲು ಅವನ ಜೀವನವೇ ಕಟುಕನಾಗಿ, ದರೋಡೆಕೋರ ನಾಗಿ ಬೆಳೆದವನು, ಮಹಾ ಕಾವ್ಯರಚಿಸಬಲ್ಲ ಮಹಾನ್ ವ್ಯಕ್ತಿಯಾಗಿ ಹೊರಹೊಮ್ಮುವನೆಂಬು ವದು ಯಾರೂ ಊಹಿಸದ ಸಂದರ್ಭ. ಹಿಂದಿನ ಪ್ರೇರಣೆಯ ಕಥೆ ನೆನೆದರೆ ಜೀವನದ ದುಃಖ ಮರೆತು ಬದುಕಿದ್ದನ್ನು ಸಾರ್ಥಕ ಮಾಡಿಕೊಳ್ಳಲು ನಾರದರು ತೋರಿದ ಮಾರ್ಗದರ್ಶನ ಮರೆಯು ವಂತಿಲ್ಲ. ಮಕ್ಕಳು ಮಾಡುವ ತಪ್ಪುಗಳು ಅವರ ಭವಿಷ್ಯವನ್ನು ಉಜ್ವಲಗೊಳಿಸಲು ಉಳಿಯೇಟು ಗಳೆಂಬುದನ್ನು ಮರೆಯಬಾರದು.

ಧ್ರುವ ನಕ್ಷತ್ರ”ವನ್ನು ಕಂಡಾಗೊಮ್ಮೆ ಅದರ ಹಿಂದಿನ ಯಶೋಗಾಥೆ ಯುಗಗಳಿಂದಲೂ ಪ್ರೇರಣೆ.ಬಾಲಕ “ಧ್ರುವ”ನ ಬಾಲ್ಯದಲ್ಲಿ ತಂದೆಯ ಪ್ರೀತಿ,ಅವನ ತೊಡೆಯ ಮೇಲೆ ಕುಳಿತುಕೊಳ್ಳಲು ಹಂಬಲಿಸುವ ಮುಗ್ಧ ಮನಸ್ಸಿನಲ್ಲಿ ಅದಕ್ಕಿಂತ ಹೆಚ್ಚಿನದೇನು ಇಲ್ಲವೆನಿಸಿತ್ತು. ಆ ಪುಟ್ಟಬಾಲಕ ದೇವರ ಸಾಕ್ಷಾತ್ಕಾರಕ್ಕಾಗಿ ಪಟ್ಟ ಪರಿಶ್ರಮ, ಏಕಾಗ್ರತೆಯಿಂದ ಧ್ಯಾನಿಸುವಪರಿ, ಕೊನೆಗೆ ಅವನು ಯಶಸ್ಸು ಗಳಿಸಿ ಶಾಶ್ವತ ಸ್ಥಾನವನ್ನು ಪಡೆದಿದ್ದು ಚರಿತ್ರೆಯಲ್ಲಿ ದಾಖಲಾಗಿ ಇಂದಿನ ಮಕ್ಕಳಿಗೆ ಮಾದರಿಯಾಗಿದೆ. ಇವೆಲ್ಲ ಊಹಿಸಿ ದಷ್ಟು ಸುಲಭವಲ್ಲ.

ಭಾನು ಭೂವಿಯ ಅಂತರಿಕ್ಷದಲ್ಲಿ
ನಕ್ಷತ್ರಗಳ ನಸುನಗೆಯ ಹೂ ಚೆಲ್ಲಿ
ಸಂಬಂಧಗಳು ಬೆಸೆದ ಎಣ್ಣೆಯಲ್ಲಿ
ಬೆಳಗಲಿ‌ ಹಣತೆಯ ಕಂದಮ್ಮಗಳಲ್ಲಿ.

ಇವತ್ತು ಸಂಬಂಧಗಳಿಗೆ ಬೆಲೆಕೊಟ್ಟು ಬಾಳುವ ಜನಾಂಗ ಕ್ಷೀಣಿಸುತ್ತಿರುವುದು ಅಪಾಯಕಾರಿ ಸಂಗತಿ.ಎಲ್ಲೊ ಒಂದಷ್ಟು ಕಾಳಜಿ ಮಾಡುವವರು ಇಲ್ಲದಿಲ್ಲ. ಒಟ್ಟು ಕುಟುಂಬ ಒಗ್ಗಟ್ಟಿನ ಪ್ರತೀಕ ವಾಗಿತ್ತು, ಇಂದು ಅನಿವಾರ್ಯತೆಗಳ‌ಲ್ಲಿ ನರಳು ತ್ತಿರುವುದು ಕಟುಸತ್ಯ. ಪಾಲಕರ, ಗುರುಗಳ, ಸಮಾಜದ ಜವಾಬ್ದಾರಿ ಮೇಲ್ನೋಟಕ್ಕೆ ಗಂಭೀರ ವಾದರೂ, ಅದರ ಫಲಶೃತಿ ಸಿಹಿ ಜೇನಿನಂತೆ. ಶಾಶ್ವತ ಬೆಳಕಿನ ಕಿರಣಗಳಾಗಿ ಬೆಳಗಲು ಪರೋಕ್ಷ ವಾಗಿ ಕೈ ಜೋಡಿ ಸಿದಂತಾಗುತ್ತದೆ.

ಮನೆಯಂಗಳದ ಮಲ್ಲಿಗೆ‌ ಸದಾ ನಗುನಗುತಾ ಪರಿಶುಭ್ರವಾಗಿ,ಪರಿಮಳ‌ ಸೂಸುತ್ತಾಚಿತ್ತಾಕರ್ಷಕ ಗೊಳಿಸುತ್ತಿರುವುದನ್ನು ಮರೆಯಲು ಸಾಧ್ಯವೇ? ಹೀಗೆ ಪ್ರತಿ ಮಕ್ಕಳ ಭವಿಷ್ಯವನ್ನು, ಪ್ರತಿಭೆಯನ್ನು ಅನಾವರಣಗೊಳ್ಳಲು ಮಲ್ಲಿಗೆ ಹೂ ಪ್ರೇರಣೆಯಾ ದಂತೆಯೇ ನಾವುಗಳು ನಮ್ಮ ಕುಡಿಗಳನ್ನು ಸಂಸ್ಕೃತಿಯ ನೆಲೆಗಟ್ಟಲ್ಲಿ‌ ಬೆಳೆಸೋದು ಇಂದಿನ ದಿನಗಳಲ್ಲಿ ಬಹುಮುಖ್ಯ.

 ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ,ಯಲ್ಲಾಪೂರ