ಮಲಯಾಳಂನ ಮಹತ್ವದ ಕವಿ ಕೆ.ಜಿ ಶಂಕರ ಪಿಳ್ಳೆಯವರ ಒಂದುಕವಿತೆಯ ವಿಶ್ಲೇಷಣೆ ಇಲ್ಲಿದೆ. ಮಲಯಾಳಂ ಹಾಗು ಕನ್ನಡ ಸಾಹಿತ್ಯವನ್ನು ಬೆಸೆವ ಕೊಂಡಿಯಂತಹ ಕಾರ್ಯ ನಿರ್ವಹಿಸುವ ಕವಿ, ಬರಹಗಾರ ಹಾಗು ಅನುವಾದಕರಾದ ತೇರಳಿ ಎನ್ ಶೇಖರ್ ಅವರ ಅನುವಾದದ ಕವಿತೆ ಇದು.

ಒಂದು ಹಾವಿನ ಹಾದಿ ಇಡಿಯಾಗಿ ಚರಿತ್ರೆಯನ್ನು ಹಾಗು ಸ್ವತಃ ತನ್ನ ವೈಭವವನ್ನು ಇಲ್ಲಿ ಧ್ವನಿಸುತ್ತ ಸಾಮಾಜಿಕ ಸ್ತರಗಳಲ್ಲಾದ ಹಲವು ಬದಲಾವಣೆ ಗೆ ಮೈಗೂಡಿಸಿಕೊಳ್ಳುತ್ತಾ ಸಾಗುವ ಅನಿವಾರ್ಯ ತೆಯ ಕುರಿತು ಈ ಕವಿತೆ ತುಂಬ ಮಾರ್ಮಿಕವಾಗಿ ಅಭಿವ್ಯಕ್ತಿಸುತ್ತದೆ.ರಾಜಕೀಯ ವ್ಯವಸ್ಥೆಯ ಬಗೆಗೆ ವಿಡಂಬನೆ,ಸಾಂಸ್ಕೃತಿಕ,ಸಾಂಪ್ರದಾಯಿಕ ಪರಂಪ ರೆಯೊಂದರ ಬದಲಾವಣೆ, ಪರಿಸ್ಥಿತಿ ಬದಲಾವಣೆ ಯ ಕಾಲಘಟ್ಟದ ಹಲವು ಹಂತಗಳನ್ನು ಜೀವ ಸಂಕುಲದೊಂದಿಗೆ ಸಮೀಕರಿಸಿ ಮುಖಗಳನ್ನು ರೂಪಕಗಳೊಂದಿಗೆ ಪರಿಚಯಿಸುತ್ತದೆ ಈ ಕವಿತೆ. ಮಾನವನ ಪಾಶವೀ ಕೃತ್ಯವನ್ನು ವಿಡಂಬಿಸುತ್ತಾ, ಜೀವತಲ್ಲಣಗಳನ್ನ ದಾಖಲಿಸುತ್ತಾ,ಎಲ್ಲ ಅಸುಂದ ರತೆಯನ್ನು ಅನಾವರಣಗೊಳಿಸುವ ಕವಿತೆ ಇದಾ ಗಿದೆ.

ಉರಗ ತೆವಳಲು ಅದರ ಹಾದಿಯಿಲ್ಲ‌ .ಮನುಷ್ಯ ನಡೆಯಲು ಅವನದೇ ಹಾದಿ ಇಲ್ಲ..! ಸಾಂಸ್ಕೃತಿಕ ವೈಭವ ಕಣ್ಮರೆಯಾಗುತ್ತಲೇ ಕೇವಲ ನಾಟಕೀಯ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುತ್ತಾ, ಪೌರು ಷತೆ ನೆಲಕಚ್ಚುವುದನ್ನು ಹಾಗು ತಪ್ಪಿಸಿಕೊಳ್ಳುವ ಪ್ರಕ್ಷೇಪಣಾ ತಂತ್ರವನ್ನೂ…. ಬದುಕಲು ಅನಿವಾರ್ಯ ಮಾರ್ಗ ಅನುಸರಿಸುವುದನ್ನು ಹೇಳುವ ಮತ್ತು ಜಗದ ಎಲ್ಲ ವಿಘಟನೆಗಳನ್ನು ವಿಡಂಬಿಸಿ ಹೇಳುವ ಅತ್ತ್ಯುತ್ತಮಕವಿತೆ ಇದಾಗಿದೆ

ಕಳೆದ ಶತಮಾನದ ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಇಡೀ ದೇಶದಲ್ಲಿ ನಡೆಯುತ್ತಿದ್ದ ಜನ ಪರ ಚಳುವಳಿಗಳು ಹೋರಾಟಗಳು ಕಾಲಾನಂತ ರದ ಹಂತಗಳಲ್ಲಿ ಸ್ವತಃ ಪತನಗೊಳ್ಳುವುದೋ ಅಥವಾ ಪತನಕ್ಕೊಳಪಡುವುದೋ ಆಗಿದ್ದನ್ನು ಈ ಕವಿತೆ ಧ್ವನಿಸುತ್ತದೆ. ಹಾಗೆಯೇ ಜಗತ್ತಿನಲ್ಲಿಯ ಸಂಘಟನೆಗಳು ವಿಘಟಗೊಳ್ಳುವುದೂ, ಬಹು ಆಶಯದ ಆದರ್ಶ ಸಿದ್ಧಾಂತಗಳು ಛಿದ್ರಗೊಳ್ಳು ವುದು ಹಾಗು ಊರ್ಜಿತಗೊಳ್ಳದೇ ಉಪಾರ್ಜಿತ ಗೊಳ್ಳದೇ ತಟಸ್ಥೀಕರಣಗೊಳ್ಳುವುದು. ಕಪ್ಪು ಯುಗವೊಂದುಪುನರ್ ಗಮನವಾದಂತೆ ಅಥವಾ ಅಂಧಕಾರ ಯುಗವೊಂದು ಮರುಕಳಿಸಿದಂತೆ ಅನ್ನುವುದನ್ನು ಸೂಕ್ಷ್ಮವಾಗಿ ಅವಲೋಕನ ಮಾದರಿಯಾಗಿ ಹಲವು ರೂಪಕಗಳ ಮೂಲಕ ಅಂತರಾವಲೋಕನವಾಗಿಯೂ ಈ ಕವಿತೆ ಕಟ್ಟಿ ಕೊಡುತ್ತದೆ.

ಮೂಲ ಉಪಮೆ ಹಾವಿನ ನಡೆಯ ಚಿತ್ರಣ ಕೊಡುತ್ತ ಕವಿ ಇಲ್ಲಿ ವಿಡಂಬಿಸುತ್ತಾರೆ…ಕಾವ್ಯದ ಸಾಲುಗಳ ಮೂಲಕ… ಲಾಲಿತ್ಯದ ಮೂಲಕ ಎಚ್ಚರಿಕೆಯ ಕಿವಿಮಾತು ಹೇಳುವ ಕವಿತೆ ಇದು.

ಮೂಲ  ಉಪಮೆ  ಹಾವಿನ  ನಡೆಯ  ಚಿತ್ರಣ ಕೊಡುತ್ತ ಕವಿ ಇಲ್ಲಿ ವಿಡಂಬಿಸುತ್ತಾರೆ…ಕಾವ್ಯದ ಸಾಲುಗಳ   ಮೂಲಕ… ಲಾಲಿತ್ಯದ   ಮೂಲಕ ಎಚ್ಚರಿಕೆಯ ಕಿವಿಮಾತು ಹೇಳುವ  ಕವಿತೆ ಇದು. ನಾಟಕೀಯ ಬೆಳವಣಿಗೆಗಳು ಅಥವಾ ಮುಖ ವಾಡಗಳ ಹೋರಾಟಗಳ ಮೆರವಣಿಗೆ ಕೂಡ..! ತತ್ವವನ್ನು ಸತ್ವವನ್ನಾಗಿಸಿಕೊಳ್ಳದೇ ಮಿಥ್ಯದ ಸ್ವಾರ್ಥದ ಶಸ್ತ್ರವನ್ನಾಗಿಸಿಕೊಂಡಲ್ಲಿ.. ನೆಲಕಚ್ಚುವ ಸಾಧ್ಯಾಸಾಧ್ಯತೆಗಳಿಗೆ ಅನೇಕ ಕಾರಣಗಳ ತೆರೆದು ಕೊಳ್ಳುತ್ತವೆ. ಎಲ್ಲವೂ ವ್ಯಾಪಾರ ದೃಷ್ಟಿಕೋನ ಮತ್ತು ಅಪ್ರಮಾಣಿಕತೆಯ ಈ ಘಟ್ಟದಲ್ಲಿ ಎಡವಿದ್ದು ಎಲ್ಲಿ ಮತ್ತು ಯಾರು ಅಂಬುದನ್ನು ಒರೆಗೆ ಹಚ್ಚಿ ನೋಡಬಹುದಾದಂತಹ‌ ಆತ್ಮಾವ ಲೋಕನ ಮತ್ತು ಅಷ್ಟೇ ಸಂದಿಗ್ಧತೆಯ ಕಾಲವೂ ಹೌದು ಅನ್ನುವುದು ಈ ಕವಿತೆಯಲ್ಲಿ ಧ್ವನಿತ..!ಹೋರಾಟಗಳಲ್ಲಿ ಸಮಾಜಮುಖಿ ಕಾಳಜಿ ಇಲ್ಲ ದೇ ಅಂತಹ ಹೋರಾಟ ಅತಿಸ್ವಾರ್ಥ ಪರವಾದಲ್ಲಿ ಭ್ರಷ್ಟವಾದಲ್ಲಿ ಸ್ವತಃ ಪತನಕ್ಕೊಳಗಾಗುತ್ತವೆ, ಅರ್ಥ ಹೀನವಾಗುತ್ತವೆ.

ಪ್ರಾಮಾಣಿಕತೆ ಇಲ್ಲದೆ ಮುಖವಾಡಯುಕ್ತವಾ ದಲ್ಲಿ ಮತ್ತು ಹಿಪೋಕ್ರಸಿಗೆ ಒಳಪಟ್ಟಲ್ಲಿದೌರ್ಬಲ್ಯ ಪ್ರಲೋಭನೆಗೆ ಒಳಗಾದಲ್ಲಿ, ಹಾಗು ಜವಾಬ್ದಾರಿ ಯುತ ಟೀಕೆ ಪ್ರಹಾರಗಳಾಗದೆ ಒಣ ಪ್ರತಿಷ್ಠೆ, ಗುಂಪುಗಾರಿಕೆ ಭೇದಾಭೇದ ಅಥವಾ ಪಕ್ಷಪಾತ ಧೋರಣೆಗೆ ಒಳಪಟ್ಟಲ್ಲಿ ಪತನಕ್ಕೊಳಪಡುತ್ತವೆ..!
ಈಗ ಆಗುತ್ತಿರುವುದು ಹಿಂದೆ ಆದದ್ದು..ಮತ್ತು ಮುಂದೂ ಆಗಬಹುದಾದ ಸತ್ಯವಿದು.. ದಮಿತ ದಮನಗಳ ಮುಖಾ ಮುಖಿ ಇದು..! ಈ ಮುಖಾ ಮುಖಿ ಅರ್ಥಕಳೆದು ವ್ಯರ್ಥವಾದಾಗ ಅದೊಂದು ಹಿಮ್ಮುಖ ಚಲನೆ.

ಸಿದ್ಧಾಂತಗಳೇ ಆಗಲಿ ಪ್ರಗತಿಪರ ಧೋರಣೆಗಳೇ ಆಗಲಿ ಬಣ್ಣ ಬಳಿದುಕೊಂಡಲ್ಲಿ ಆ ಎಲ್ಲ ಬಣ್ಣ ಗಳು ಸ್ವತಃ ಮಾಸುತ್ತವೆ.

ಫ್ರಾನ್ಸಕ್ರಾಂತಿಯ ಸಮಯದಲ್ಲಿ ಹುಟ್ಟಿಕೊಂಡ ವೈಚಾರಿಕವಾದ,ರಷಿಯಾ ಕ್ರಾಂತಿಯಲ್ಲಿ ಸಿಡಿದೆದ್ದ ಸಮಾನತಾವಾದ ಇಡೀ ಜಗತ್ತಿನಲ್ಲಿ ಹಬ್ಬಿದ ಸ್ವಾತಂತ್ರ್ಯ ಹಂಬಲ ಹಾಗು ವೈಚಾರಿಕ ಚಿಂತನೆಯ ಎಲ್ಲ ವಾದಗಳೂ ಒಂದು ದೀರ್ಘ ಸಮಯದ ನಂತರ ಪತನಕ್ಕೊಳಪಡುವ ಪ್ರಕ್ರಿಯೆಗೆ ಒಳಗಾ ಗುವ ಸಾದ್ಯಾಸಾಧ್ಯತೆಗಳ ಬಗ್ಗೆ ಈ ಕವಿತೆ ಬೆಳಕು ಚೆಲ್ಲುತ್ತದೆ. ವಿಚಾರಗಳು ಜಗತ್ತನ್ನು ಆಳುತ್ತವೆ ಅನ್ನುವಂತೆ ಕ್ರಾಂತಿಯ ಸಮಯ ಸಂದರ್ಭದಲ್ಲಿ ವಿಚಾರವಾದಿಗಳ ಲೇಖನಿ ಮತ್ತು ಅದರ ಪಾತ್ರ ಬಹು ಮಹತ್ವದ್ದಾಗಿದ್ದು ಅದನ್ನು ಹಾಗೇ ಉಳಿಸಿ ಕೊಳ್ಳುವುದು ಬದಲಾವಣೆಯ ಕಾಲಘಟ್ಟದಲ್ಲಿ ಸವಾಲೇ ಸರಿ….!

ಯಾವುದಕ್ಕೂ ಒಂದು ಸ್ಯಾಟ್ಯೂರೇಟೆಡ್ ಪಾಯಿಂಟ್ ಒಂದಿರುತ್ತದೆ. ಅದಲ್ಲಿಗೆ ನಿಲ್ಲುತ್ತದೆ. ಮತ್ತೇ ಬೇರೆ ಚಿಗುರಬಹುದು. ರೂಪಾಂತರ ಹೊಂದಬಹುದು..ಮತ್ತು ಅದಕ್ಕೊಂದು ಸಮಯ ಬೇಕಾಗಬಹುದು.ಇಲ್ಲವೆ ನಿರ್ನಾಮವಾಗಿ ಆಗಾಗ ಪಳೆಯುಳಿಕೆಗಳ ನೆನಪಿಸುವ ನೆನಪಾಗಿ ಉಳಿಯ ಬಹುದು.

ಅಲಕ್ಷಿತ ಅಥವಾ ಅಸುಂದರವಾಗಿ ಕಂಡು ಬರುತ್ತ ಬಣ್ಣಗೆಟ್ಟ ವಿಷಯಗಳನ್ನು ಕವಿತೆಯಾಗಿಸಿ ಮತ್ತೊಂದು ಚಾಟಿ ಬೀಸುತ್ತ ಚಾಡಿಯ ಮೂಲಕ ಹೇಳುವ ಹಾಗು ಕಾರಣ ಸಹಿತ ಪರಾಭವವನ್ನು ಸಾಕ್ಷೀಕರಿಸುವ ಚಿತ್ರಣವನ್ನು ಪಿಳ್ಳೆ ಅವರ ಈ ಕವಿತೆಯಲ್ಲಿ ಕಾಣುತ್ತೇವೆ.

ಕೆ.ಜಿ.ಶಂಕರ ಪಿಳ್ಳೆ ಅವರ ಕವಿತೆಗಳು ಸಮಾಜ, ಸಮುದಾಯ, ಹೋರಾಟದ ಚಾರಿತ್ರಿಕ, ಹಾಗು ಬದುಕಿನ ಅಂಶಗಳನ್ನು ಅನಾವರಣಗೊಳಿಸುತ್ತ ಹಾಗೆಯೇ ಜೀವನದ ಮತ್ತೊಂದು ಮಗ್ಗುಲಿನಿಂದ ನೋಡುವ ಒರೆಗೆ ಹಚ್ಚುವ ತಂತ್ರಗಾರಿಕೆಯನ್ನು ಹೆಣೆದುಕೊಳ್ಳುತ್ತವೆ. ನೇರ ದಿಟ್ಟ ಎದೆಗಾರಿಕೆಯ‌‌., ನಿರ್ಭಿಡೆಯಿಂದ ನಿರ್ಭಯವಾಗಿ ಹಾಗು ಕಲಾತ್ಮಕ ವಾಗಿ ಕವಿತೆಯಲ್ಲಿ ಅಭಿವ್ಯಕ್ತಿಸುವ ಪರಿ ನಿಜಕ್ಕೂ ಸಹೃದಯ ಓದುಗರಿಗೆ ಅಚ್ಚರಿಯನ್ನುಂಟುಮಾ ಡುತ್ತದೆ.

ಕವಿತೆ: ಅಸುಂದರ

ಕದಂಬನಾಡು,
ವೈಶಾಖದ ಕ್ರೂರ ಸೆಖೆ.

ಮೊಲಗಳು ಒಂದಾನೊಂದು ಕಾಲದಲ್ಲಿ
ಹಗಲ ನಿದ್ದೆಗಾಗಿ ಧಾವಿಸಿ ಬರುತ್ತಿದ್ದ
ದಟ್ಟ ಗೇರುಮರದ ನೆರಳಿನಲ್ಲಿ,
ಮಣ್ಣವಾಸನೆಯ ಒಣಪರ್ಣದ ಶಯನದಲ್ಲಿ
ಐಸ್ ಕ್ರೀಮ್ ಬಣ್ಣದ ಇಲಿಯೊಂದನ್ನು ಚಪ್ಪರಿಸಿ,
ಕಣ್ಣುಮುಚ್ಚದೆ ಹಾಗೇ ಪವಡಿಸಿ,
ಯಾವುದೋ ನಾಟಕೀಯ ಸ್ವಗತಾಖ್ಯಾನದ
ಮೌನ ವಿಸ್ತೃತದಲ್ಲೆಂಬ ಹಾಗೆ
ಕೇರೆ
ಚಿಂತನೆಯಲ್ಲಿ ಮುಳುಗಿತು ಹೀಗೆ :

ಮಾವು ಹಲಸು ಗಜನಿಂಬೆ ಗೇರು
ಎಲ್ಲ ಮರಗಳಲ್ಲೂ ಮಧುರ ಭಾರ.
ಕಾಗೆ ಕೋಗಿಲೆ ಜೇಡ ಬಾವಲಿ
ನೊಣ ಚಿಟ್ಟೆ ದುಂಬಿ ಅಳಿಲು
ಕೈದಾಳ ಕೊಂಬು ಕೊಳಲು
ಹಸಿರು ಹಳದಿ ಕೆಂಪು ಸಿಂದಧೂರ
ಒಂದೊಂದು ಮರ ಒಂದೊಮಂದು  ಜಾತ್ರೆ ಥರ
ಹೊಟ್ಟೆಯಿಂದ ಹಾದಿ ಹಾಯುವ ನನಗಾಗಲೀ
ಜಲ್ಲಿ ರಸ್ತೆ ಕೆಂಡ ರಸ್ತೆಯಾಗುವ ಕಾಲ
ಕಾವಲಿರುವೆಗಳು
ಒಂದೊಮಂದು ಮರವನು ಮುತ್ತಿರುವಾಗ
ಎನಗೆ ಎತ್ತರ ಗುರಿಯಲ್ಲದಾಯಿತು
ಮಧುರ ಪ್ರಿಯವಲ್ಲದಾಯಿತು
ಉಸಿರ ರಂಗಿನ ಮೇಳ
ಉತ್ಸವವಲ್ಲದಾಯಿತು

ಎರಡು

ಎಲ್ಲಿ ಹೂತು ಹೋದವು
ನನ್ನ ಫಣಗಳು?
ಎತ್ತೆತ್ತರಕ್ಕೇರಿ
ಚಂದ್ರಕಲೆಯ ಮುಟ್ಟಿ ಆಳಿದಂಥವು?
ಅವತಾರಗಳ ಮೇಲೆ
ಛತ್ರಿಯಾಗಿ ಅರಳಿದಂಥವು?
ವಂಶದ ಅನಂತಮುಖತ್ವ?

ತುಳಿವ ಕಾಲನು ಕುಟುಕಲಾಗದೆ
ಎಲ್ಲಿ ಹೂತು ಹೋದವು
ನನ್ನ ಕ್ರೋಧ?
ವಿಷದ ದಂತ?
ನನ್ನ ಸಂಹಾರ ಪ್ರತಿಭೆ?
ಮರಗಳೂ ಮಹಾಜನ್ಮಗಳೂ
ಸಹಸ್ರಶೀರ್ಷದಿಂದ ತೋರಿಸುವ
ತಾಂಡವವಾಡುವ ಬಿರುಗಾಳಿಯನ್ನು
ಒಂಟಿಗೆರೆಯ ಒಡಲಿನಿಂದ ತೋರಿಸುತ್ತಿದ್ದಂಥ
ನನ್ನ ಮಂತ್ರಸಿದ್ಧಿ?
ಅಮೃತವರಿತ ನಾಲಿಗೆ?
ಎಲ್ಲಿ ಹಾಳಾಯಿತು
ಯಾವುದೇ ಲಿಪಿ ನನ್ನ ನರ್ತನದ
ಯಾವುದಾದರೊಂದು ಕಾರಣವೆಂದರಿತಂಥ
ಸ್ವತ್ವಜ್ಞಾನ?
ಎಲ್ಲಿ ಮರೆಯಾದರು
ಯಾವುದೇ ದಾರಿ, ನದಿ, ಶರ, ಶೂಲ
ನನ್ನ ಪರ್ಯಾಯಗಳೆಂದರಿತಂಥ
ಪುಳ್ಳುವರು?*

ಮೂರು

ಪ್ರಾಚೀನತೆಯ ಪಾತಾಳ ತಮಸ್ಸಿಗೆ ತೆರೆದ
ಒಂದು ಪೊಟರೆ ಇಂದು ನನ್ನ ಮನೆ.
ಮಿಕದ ರುಚಿಯೋ ಸಂಗಾತಿಯ ಒಲವೋ
ಒಂದು ಕಿರುಮುಳ್ಳಿನ ಸುಖದ ನೋವೋ ಸಾಕು,
ಇದರಲ್ಲಿ ಬಾಳ್ವೆ ಸಂತುಷ್ಟ.

ಸೂರ್ಯರಶ್ಮಿಗಳಿಗೆ
ಕಣ್ಣೀರಿನಂತೆ ಅಂಕುಡೊಂಕಾಗಿ ಹರಿಯಲು
ಶಕ್ತತೆಯಿದ್ದ ಪುರಾವೃತ್ತ ಕಾಲದಲ್ಲಿ
ಕೆಲವು ಕಿರಣಗಳು
ಈ ವಿಕಟ ಪೊಟರೆಯ ಆತ್ಮಹೊಕ್ಕವು
ಅವು ಮಾಣಿಕ್ಯವಾದವು.
ಅದು ಪೂರ್ವಪುಣ್ಯ.

ಪೂರ್ವಪುಣ್ಯದ ಆ ನೆನಪು
ಇಂದು ನನ್ನ ಕಿರೀಟ.
ತಪ್ಪಿಸಿಕೊಳ್ಳುವಿಕೆ
ಇಂದು ನನ್ನ ಚರ್ಯೆ.

ಪತಂಗಗಳ ವರ್ಣಪತಾಕೆಗಳ ಹಿಂದೆ
ನನಗಿನ್ನು ಏರಿಳಿತಗಳಾಗದು.
ಪಾಲ್ಗಡಲ ಕಡೆಯಲು ಬರೀ
ಹಗ್ಗವಾಗಿರಲು ಇನ್ನಾಗದು.
ಕಾರಣ,
ನಾನೇ ಭಯಸತ್ಯ.
ಅಸುಂದರ,
ಚರಿತ್ರೆಯ
ಕೋಡಂಗಿಯಾದ ಪುನರಾವರ್ತನೆ.**
ಶಬ್ದಾರ್ಥಗಳು ಕವಲೊಡೆದ
ಸೀಳುನಾಲಿಗೆ
ಎಂದೂ ಚಿಲುಮೆಗೆ
ಮರಳಿ ಬರುವ ಹೊಳೆ.

ಅಡಿ ಟಿಪ್ಪಣಿ :-
ಪುಳ್ಳವರ್=’ಸರ್ಪಪ್ಪಾಟ್’ ಎಂಬ ನಾಗಪದವನ್ನು ಕುಲಕಸುಬಾಗಿ ಸ್ವೀಕರಿಸಿವ ಕೇರಳದ ಒಂದು ಹಿಂದುಳಿದ ಜನಾಂಗ. ವಿಶಿಷ್ಟ ಉಪಸಂಸ್ಕೃತಿಯ ಹಿನ್ನಲೆ ಹೊಂದಿರುವ ಇವರು ಮೂಲತಃ ನಾಗಾರಾಧನೆಯ ವೃತ್ತಿಗಾಯಕರು.

**As Marx said of Napoleon III, sometimes the same events occur twice in history – the first time they have a real historical impact where as the second time they are no more than it’s farcical evocation and it’s grotesque avatar.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ
‘ಕೆ.ಜಿ.ಶಂಕರಪಿಳ್ಳೆಯವರ ಕವಿತೆಗಳು’
ಕೃತಿಯಿಂದ ಆಯ್ದ ಕವಿತೆ.

ಮಲಯಾಳಂ ಮೂಲ :- ಕೆ.ಜಿ.ಶಂಕರ ಪಿಳ್ಳೆ ಕನ್ನಡ ಅನುವಾದ:- ತೇರಳಿ ಎನ್ ಶೇಖರ್

ವಿಶ್ಲೇಷಣೆ:ಅನಸೂಯ ಜಹಗೀರದಾರ ಶಿಕ್ಷಕಿ,ಕೊಪ್ಪಳ