ಇತಿಹಾಸದುದ್ದಕ್ಕೂ ಆಗಿರುವುದು ಅಮರ 
ಸ್ವಾಭಿಮಾನ ದೇಶಭಕ್ತಿಗಾಗಿ ನಡೆದು ಸಮರ 
ಅಂದಿಗೂ ಇಂದಿಗೂ ಎಂದಿಗೂ ಅಜರಾಮರ 
ಅಸ್ಮಿತೆ ಉಳಿಸಿಕೊಳ್ಳುವ ನಮ್ಮಯ ಹುನ್ನಾರ 

ಪರಕೀಯರ ಆಕ್ರಮಣದೆದುರಲಿ ವೀರತೆ 
ನಮ್ಮತನದ ಗೆಲುವಿಗಾಗಿ ಮೆರೆವ ಘನತೆ  
ಉರಿಸುತ್ತಲೇ ಇದ್ದೇವೆ ಅಭಿಮಾನದ ಹಣತೆ 
ಸ್ವಾತಂತ್ರ್ಯದ ಉಳಿವಿಗಾಗಿ ಸತತ ಕ್ಷಮತೆ 

ಸ್ವರಾಜ್ಯ ಪಡೆದಾಗಿನ ನಮ್ಮ ನಿಜ ಗೆಲುವು 
ಪ್ರಜಾಪ್ರಭುತ್ವದ ದಾರಿಯಲ್ಲಿನ ಪಯಣವು
ಸುಗಮವೆನಿಸಿರೆ ಕಾರಣ ನಮ್ಮ ಸ್ವಾಭಿಮಾನ 
ಪ್ರಜ್ವಲಿಸಿ ಬೆಳಗುತ್ತಲಿರುವೀ ದೇಶಾಭಿಮಾನ 

ಭವ್ಯ  ಸಂಸ್ಕೃತಿ ಪರಂಪರೆಗಳ ನಮ್ಮ ನಾಡು 
ಶೌರ್ಯ ಸಾಕಾರವಾದ ರಾಷ್ಟ್ರಪ್ರೇಮದ ಬೀಡು 
ಜಾತಿಧರ್ಮ ಪಂಥಗಳು ಭಿನ್ನವಿದ್ದರೂ ಪರಸ್ಪರ 
ತಾಯಿ ಭಾರತಿಯ ಆರಾಧನೆಯಿದು  ನಿರಂತರ 

ಸುಜಾತಾ ರವೀಶ್ ,ಮೈಸೂರು