ಶತ ಶತಮಾನಗಳ ಶಾಪ ಕಳೆದು
ದಾಸ್ಯದಾ ಸಂಕೋಲೆ ಒಡೆದು
ಪರತಂತ್ರ್ಯದಾ ಕತ್ತಲೆ ತೊಳೆದು
ಸ್ವಾತಂತ್ರ್ಯದಾ ಹಣತೆ ಹೊಳೆದು
ಬೆಳಗಿ ಬೆಳಕಾದ ಮಹಾ ಸುದಿನ.!

ಎದೆಎದೆಗಳಲೂ ಕಹಳೆ ಮೊಳಗಿ
ಪರಕೀಯರ ದಬ್ಬಾಳಿಕೆ ತೊಲಗಿ
ರಾಷ್ಟ್ರಭಕ್ತಿಯಾ ಭವ್ಯಶಕ್ತಿ ಗುಡುಗಿ
ದಿಗ್ದಿಗಂತಗಳಲಿ ಬಾವುಟ ತೂಗಿ
ದೇಶ ದೇದೀಪ್ಯವಾದ ದಿವ್ಯದಿನ.!

ತ್ಯಾಗ ಬಲಿದಾನ ಸಾರ್ಥಕವಾಗಿ
ಶೌರ್ಯ ಪರಾಕ್ರಮ ಸಾಫಲ್ಯವಾಗಿ
ನಿರೀಕ್ಷೆ ಹೋರಾಟ ದಿಗ್ವಿಜಯವಾಗಿ
ತಪನೆ ಕನಸುಗಳೆಲ್ಲ ಸಾಕಾರವಾಗಿ
ಭಾರತಾಂಬೆ ಬಂಧಮುಕ್ತಳಾದ ದಿನ.!

ಭಾಷೆ ಹಲವಿದ್ದರೇನು ಭಾವವೊಂದೆ
ರಾಜ್ಯ ಹಲವಿದ್ದರೇನು ರಾಷ್ಟ್ರವೊಂದೆ
ಧರ್ಮ ಹಲವಿದ್ದರೇನು ದೇಶವೊಂದೆ
ವಿವಿಧತೆಯಲೂ ಏಕತೆ ಮೆರೆವೆವೆಂದ
ಭರತಖಂಡ ಉದಯಿಸಿದ ಪವಿತ್ರದಿನ.!

ಊರೂರಿನಲೂ ರಾಷ್ಟ್ರಧ್ವಜ ಹಾರುವ
ಮನೆಮನೆಯಲು ರಾಷ್ಟ್ರಗೀತೆ ಧ್ವನಿಸುವ
ಮನಮನಗಳಲೂ ರಾಷ್ಟ್ರಭಕ್ತಿ ಮೊರೆವ
ಭಾರತೀಯತೆಯ ವಿಶ್ವರೂಪ ತೋರುವ
ನಿತ್ಯ ಸತ್ಯ ಚಿರ ಸಂಭ್ರಮಗಳ ಪುಣ್ಯದಿನ.!

ಎ.ಎನ್.ರಮೇಶ್. ಗುಬ್ಬಿ.