ಇಂದು ಶ್ರಾವಣ ಶುದ್ಧಪಂಚಮಿ 
ಮಿಂದು ಮಡಿಯಲ್ಲಿ ತನಿ ಎರೆಯುವ ಬನ್ನಿ 
ನಾಗಪ್ಪನಿಗೆ ಹಸಿ ಹಾಲು ಕೊಟ್ಟು 
ಅರ್ಪಿಸಿ ಭಕ್ತಿಯಲ್ಲಿ ಚಿಗಳಿ ತಂಬಿಟ್ಟು 

ಪಂಚಮಿ ಎಂದರೆ ಭಾತೃ ಪ್ರೇಮ 
ತಾಯ ಹಾಲ ಋಣವದು ಅನುಪಮ 
ಕಿಂಚಿತ್ತಾದರೂ ಅದ ತೀರಿಸಲು ಈ ಕೃತ್ಯ 
ನೆರವೇರಿಸಿ ಆಗೋಣ ಬನ್ನಿ ಕೃತ ಕೃತ್ಯ 

ಹಾಲುಂಡ ತವರು ಸೊಂಪಾಗಿರಲೆಂದು 
ಅಣ್ಣ ತಮ್ಮಂದಿರ ಬೆನ್ನು ತಂಪಾಗಿರಲೆಂದು 
ಸೋದರರ ಬೆನ್ನು ಹಾಲಲ್ಲಿ ತೊಳೆದು 
ಪ್ರೀತಿ ವಾತ್ಸಲ್ಯದ ಹೊಳೆಯಲ್ಲಿ ನೆನೆದು

ಮಾಡಿ ಅವರಿಗಿಷ್ಟದ ಹಬ್ಬದಡಿಗೆ 
ಎಲೆ ಕೊನೆ ಪಾಯಸ ಕೋಸಂಬರಿ ಬದಿಗೆ
ಮೇಲೋಗರ ತೊವ್ವೆ ಪಲ್ಯ ಎರಡು ಬಗೆ
ಸವಿಯಲು ಸಿದ್ದವಾಗಿದೆ ಕಲಸನ್ನ ಹೀಗೆ

ಇಂದು ಕರಿದ ತಿಂಡಿ ಒಗ್ಗರಣೆ ವರ್ಜ್ಯ 
ಅದಕ್ಕಾಗಿ ಕುಚ್ಚಲ ಹಬೆ ಕಡುಬು ವಿಶೇಷ 
ಕಾಯಿ ಹೂರಣ ಹಾಕಿದ ಸಿಹಿ ಕಡುಬು 
ಬೇಳೆ ಹೂರಣ ತುಂಬಿದ ಖಾರ ಕಡುಬು

ಹೊಟ್ಟೆ ತುಂಬಾ ಬಡಿಸಿ ಮೃಷ್ಟಾನ್ನ 
ಆಮೇಲೆ ತೊಳೆದು ಹಾಲಲ್ಲಿ ಬೆನ್ನ 
ಶಕ್ತ್ಯಾನುಸಾರ ಉಡುಗೊರೆ ಕೊಟ್ಟು 
ಹರಸಿ  ಹಾರೈಸೋಣ ತವರ ಕುಡಿಗಳ

ಸುಜಾತ ರವೀಶ್, ಮೈಸೂರು